ಬದುಕಿನ ‘ಇನ್ನಿಂಗ್ಸ್’ ಮುಗಿಸಿದ ಚೇತನ್ ಚೌಹಾಣ್

ಬದುಕಿನ ‘ಇನ್ನಿಂಗ್ಸ್’ ಮುಗಿಸಿದ ಚೇತನ್ ಚೌಹಾಣ್

ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅರ್ಥಾತ್ ಚೇತನ್ ಚೌಹಾಣ್ ತಮ್ಮ ಬದುಕಿನಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎಂಬ ಎರಡೂ ಇನ್ನಿಂಗ್ಸ್ ಮುಗಿಸಿ ಮರಳಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ ೧೬, ೨೦೨೦ ರಂದು ನಿಧನ ಹೊಂದಿದ ಈ ಮಾಜಿ ಕ್ರಿಕೆಟಿಗ ಒಂದು ಕಾಲದಲ್ಲಿ ಕ್ರಿಕೆಟ್ ದಂತ ಕತೆ ಸುನಿಲ್ ಗಾವಾಸ್ಕರ್ ಜೊತೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಆಟವಾಡಿದ್ದರು. ಸುನಿಲ್ ಗಾವಾಸ್ಕರ್ ಅವರ ಜೊತೆ ಹಲವಾರು ಶತಕಗಳ ಜೊತೆಯಾಟವಾಡಿದ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಪಡೆದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ಲೋಕಸಭಾ ಸದಸ್ಯ, ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಸಚಿವರಾಗಿದ್ದರು.

ಚೇತನ್ ಚೌಹಾಣ್ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸ್ವಲ್ಪ ಮೊದಲು ಅಂದರೆ ೧೯೪೭ರ ಜುಲೈ ೨೧ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ಸೇನೆಯಲ್ಲಿ ಆಫೀಸರ್ ಆಗಿದ್ದ ಕಾರಣ ೧೯೬೦ರಲ್ಲಿ ಅವರಿಗೆ ಮಹಾರಾಷ್ಟ್ರದ ಪೂನಾಗೆ ವರ್ಗವಾಗುತ್ತದೆ. ಚೇತನ್ ಅವರೂ ತಂದೆಯವರ ಜೊತೆ ಪೂನಾಗೆ ಬರುತ್ತಾರೆ. ಅವರು ಪೂನಾದ ವಾಡಿಯಾ ಕಾಲೇಜಿನಲ್ಲಿ ಪದವಿಯನ್ನು ಪಡೆಯುತ್ತಾರೆ. ಕ್ರಿಕೆಟ್ ಮೇಲೆ ಅಪಾರ ಪ್ರೀತಿ ಚೇತನ್ ಅವರಿಗೆ ಬಾಲ್ಯದಿಂದಲೂ ಇತ್ತು. ಕಾಲೇಜು ದಿನಗಳಲ್ಲಿ ಮಹಾರಾಷ್ಟ್ರದ ಮಾಜಿ ಕ್ರಿಕೆಟಿಗ ಕಮಲ್ ಭಂಡಾರ್ಕರ್ ಅವರಿಂದ ತರಭೇತಿ ಪಡೆಯುತ್ತಾರೆ. ಪೂನಾ ವಿಶ್ವ ವಿದ್ಯಾನಿಲಯವನ್ನು ೧೯೬೬-೬೭ರ ಸಾಲಿನಲ್ಲಿ ಪ್ರತಿನಿಧಿಸಿ ಭರವಸೆಯ ದಾಂಡಿಗನಾಗುವ ಆಶಾಭಾವನೆ ಮೂಡಿಸುತ್ತಾರೆ. ೧೯೬೭ರಲ್ಲಿ ಮಹಾರಾಷ್ಟ್ರ ಪರವಾಗಿ ರಣಜಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಮೊದಲ ವರ್ಷ ಅಷ್ಟೇನೂ ಸಾಧನೆ ಮಾಡದೇ ಹೋದರೂ ಮುಂದಿನ ವರ್ಷ ಬಾಂಬೆ ವಿರುದ್ಧದ ಮಳೆಯಿಂದ ಭಾದಿತವಾದ ಪಂದ್ಯದಲ್ಲಿ ಆರಂಭಿಕನಾಗಿ ಕ್ರೀಸ್ ಗೆ ಬಂದು ಕೊನೆಯ ದಾಂಡಿಗನಾಗಿ ಔಟ್ ಆಗುತ್ತಾರೆ. ಆದರೆ ಮುಂದೆ ನಡೆದ ದುಲೀಪ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯದ ವಿರುದ್ಧ ಶತಕವೊಂದನ್ನು ದಾಖಲಿಸುತ್ತಾರೆ. ಈ ಶತಕದ ಪರಿಣಾಮ ಚೇತನ್ ಚೌಹಾಣ್ ಗೆ ಭಾರತದ ಟೆಸ್ಟ್ ತಂಡದ ಬಾಗಿಲು ತೆರೆಯುತ್ತದೆ. ೧೯೬೯-೭೦ರ ನ್ಯೂಜಿಲ್ಯಾಂಡ್ ಎದುರಿನ ಪಂದ್ಯಗಳಿಗೆ ಆಯ್ಕೆಯಾಗುತ್ತಾರೆ. ಬಾಂಬೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಟೆಸ್ಟ್ ಬಾಳ್ವೆಯ ಮೊದಲ ರನ್ ಗಳಿಸಲು ೨೫ ನಿಮಿಷ ತೆಗೆದುಕೊಳ್ಳುತ್ತಾರೆ. ತಮ್ಮ ಮೊದಲ ರನ್ ಅನ್ನು ಬೌಂಡರಿ ಬಾರಿಸುವುದರ ಮೂಲಕ ಗಳಿಸುತ್ತಾರೆ. ನಂತರದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಧಿಕ ರನ್ ಗಳಿಸದ ಪರಿಣಾಮವಾಗಿ ಮುಂದಿನ ಮೂರು ವರ್ಷಗಳ ಕಾಲ ಇವರಿಗೆ ಭಾರತೀಯ ತಂಡದಲ್ಲಿ ಸ್ಥಾನ ಸಿಗುವುದಿಲ್ಲ.

೧೯೭೨-೭೩ರ ರಣಜಿ ಪಂದ್ಯಾವಳಿಗಳಲ್ಲಿ ೮೭೩ ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಆಯ್ಕೆಗಾರರಿಗೆ ಮನವರಿಕೆ ಮಾಡುತ್ತಾರೆ. ನಂತರ ನಡೆದ ಇಂಗ್ಲೆಂಡ್ ವಿರುದ್ದದ ಪಂದ್ಯಗಳಲ್ಲಿ ಆಟವಾಡಿದರೂ ಮಿಂಚಲು ವಿಫಲವಾಗಿ ಮತ್ತೆ ಐದು ವರ್ಷಗಳ ಕಾಲ ನೇಪಥ್ಯಕ್ಕೆ ಸರಿಯುತ್ತಾರೆ. ರಣಜಿ ಪಂದ್ಯಗಳಲ್ಲಿ ಮಹಾರಾಷ್ಟ್ರವನ್ನು ತ್ಯಜಿಸಿ ಡೆಲ್ಲಿ ಪರವಾಗಿ ಆಡುತ್ತಾರೆ. ದುಲೀಪ್ ಟ್ರೋಫಿಯಲ್ಲಿನ ಸಾಧನೆ ಅವರಿಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡುತ್ತದೆ. ಸುನಿಲ್ ಗಾವಾಸ್ಕರ್ ಜೊತೆ ಇನ್ನಿಂಗ್ಸ್ ಆರಂಭಿಸಲು ಪ್ರಾರಂಭಿಸಿದ ನಂತರ ಅವರ ಬ್ಯಾಟಿಂಗ್ ನಲ್ಲಿ ಸ್ಥಿರತೆ ಕಂಡು ಬರುತ್ತದೆ. ೧೯೮೦-೮೧ರ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ ಗೆ ಇವರು ಮತ್ತು ಗಾವಾಸ್ಕರ್ ಶತಕದ ಜೊತೆಯಾಟವಾಡುತ್ತಾರೆ. ಅಡಿಲೈಡ್ ನಲ್ಲಿ ನಡೆದ ಈ ಪಂದ್ಯದಲ್ಲಿ ಇವರು ಕೇವಲ ಮೂರು ರನ್ ಗಳಿಂದ ಶತಕ ವಂಚಿತರಾಗುತ್ತಾರೆ. ಚೇತನ್ ಚೌಹಾಣ್ ಅವರಿಗೆ ಮುಂದೆ ಎಂದೂ ಟೆಸ್ಟ್ ಶತಕ ಬಾರಿಸಲು ಸಾಧ್ಯವಾಗದೇ ಇರುವುದೇ ಈ ಪ್ರತಿಭಾವಂತ ಆಟಗಾರನ ಕ್ರೀಡಾ ಬದುಕಿನ ದುರಂತ. ಅಂದು ಅವರು ಗಳಿಸಿದ ೯೭ ರನ್ ಗಳೇ ಅವರ ಟೆಸ್ಟ್ ಜೀವನದ ಗರಿಷ್ಟ ಮೊತ್ತ. ಗಾವಾಸ್ಕರ್ ಜೊತೆ ೫೯ ಇನ್ನಿಂಗ್ಸ್ ಗಳಲ್ಲಿ ಆರಂಭಿಕರಾಗಿ ಆಟವಾಡಿದ ಇವರು ಜೊತೆಯಾಗಿ ೩೦೨೨ ರನ್ ಗಳಿಸಿದ್ದಾರೆ. ಹತ್ತು ಸಲ ಶತಕದ ಜೊತೆಯಾಟವಾಡಿದ್ದಾರೆ. ಭಾರತ ಉತ್ತಮ ಮೊತ್ತ ಗಳಿಸಲು ಇವರು ಹಲವಾರು ಬಾರಿ ಸಹಕಾರ ನೀಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಒಂದೇ ಒಂದು ಶತಕ ಬಾರಿಸದೆಯೂ ೨೦೦೦ ರನ್ ಮಾಡಿದ ಮೊದಲ ದಾಂಡಿಗ ಚೇತನ್ ಚೌಹಾಣ್.

೧೯೮೦-೮೧ರ ಸಾಲಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಉತ್ತಮವಾಗಿ ೮೫ ರನ್ ಗಳಿಸಿ ಆಟವಾಡುತ್ತಿದ್ದ ಚೇತನ್ ಚೌಹಾಣ್ ಅವರಿಗೆ ಡೆನಿಸ್ ಲಿಲ್ಲಿ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಎಂದು ಔಟ್ ನೀಡಲಾಗುತ್ತದೆ. ಆಗ ಇನ್ನೊಂದು ತುದಿಯಲ್ಲಿ ಆಟವಾಡುತ್ತಿದ್ದ ನಾಯಕ ಸುನಿಲ್ ಗಾವಾಸ್ಕರ್ ಅಂಪೈರ್ ತೀರ್ಪಿನ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿ ಮೈದಾನದಿಂದ ಹೊರನಡೆಯಲು ನಿರ್ಧರಿಸಿದ್ದು ಅತ್ಯಂತ ವಿವಾದಾತ್ಮಕ ನಡೆಯಾಗಿತ್ತು. ಗಾವಾಸ್ಕರ್ ಅವರಿಗೆ ಚೇತನ್ ಚೌಹಾಣ್ ಅವರ ಪ್ರತಿಭೆಯ ಮೇಲೆ ಅಪಾರ ವಿಶ್ವಾಸವಿತ್ತು. ೧೯೮೧ರ ಫೆಬ್ರವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವಾಗಿ ಆಡಿದ ಟೆಸ್ಟ್ ಪಂದ್ಯದ ನಂತರ ಚೌಹಾಣ್ ಗೆ ಮತ್ತೆ ಭಾರತದ ಪರ ಆಡಲು ಅವಕಾಶ ಸಿಗಲಿಲ್ಲ. ೪೦ ಟೆಸ್ಟ್ ಪಂದ್ಯಗಳಿಂದ ೩೧.೫೭ರ ಸರಾಸರಿಯಲ್ಲಿ ೨೦೮೪ ರನ್ ಗಳಿಸಿದ್ದಾರೆ. ೧೬ ಅರ್ಧ ಶತಕ ಗಳಿಸಿದ ಇವರು ಎರಡು ವಿಕೆಟ್ ಪಡೆದಿದ್ದಾರೆ. ಬಲಗೈ ದಾಂಡಿಗರಾಗಿದ್ದ ಇವರು ಅಪರೂಪಕ್ಕೆ ಆಫ್ ಸ್ಪಿನ್ನರ್ ಆಗಿಯೂ ಬೌಲಿಂಗ್ ಮಾಡಿದ್ದಾರೆ. ಭಾರತದ ಪರ ಕೇವಲ ೭ ಒಂದು ದಿನದ ಪಂದ್ಯವಾಡಿದ ಇವರು ೨೧.೮೫ರ ಸರಾಸರಿಯಲ್ಲಿ ೧೫೩ ರನ್ ಗಳಿಸಿದ್ದಾರೆ. ೪೬ ರನ್ ಇವರ ಅಧಿಕ ಸ್ಕೋರ್. ೪೦.೨೨ರ ಸರಾಸರಿಯಲ್ಲಿ ೧೭೯ ಪ್ರಥಮ ದರ್ಜೆಯ ಪಂದ್ಯಾವಳಿಗಳನ್ನು ಆಡಿ ೧೧,೧೪೩ ರನ್ ಗಳಿಸಿದ್ದಾರೆ.

ಕ್ರಿಕೆಟ್ ಆಟದಿಂದ ನಿವೃತ್ತರಾದ ಬಳಿಕ ಚೇತನ್ ಚೌಹಾಣ್ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ರಾಜಕಾರಣಿಯಾಗಿ ಪ್ರಾರಂಭಿಸುತ್ತಾರೆ. ಭಾರತೀಯ ಜನತಾ ಪಕ್ಷ ಸೇರಿದ ಚೌಹಾಣ್ ೧೯೯೧ರಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುತ್ತಾರೆ. ೧೯೯೮ರಲ್ಲೂ ವಿಜಯಿಯಾಗುವ ಇವರು ೧೯೯೬, ೧೯೯೯, ೨೦೦೪ರಲ್ಲಿ ಸೋಲನ್ನು ಅನುಭವಿಸುತ್ತಾರೆ. ಆದರೆ ೨೦೧೭ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಇವರಿಗೆ ಯೋಗಿ ಆದಿತ್ಯನಾಥ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ದೊರೆಯುತ್ತದೆ. ಮೊದಲು ಕ್ರೀಡಾ ಸಚಿವರಾಗಿದ್ದ ಇವರು ನಿಧನ ಹೊಂದುವ ಸಮಯದಲ್ಲಿ ಸೈನಿಕ ಕಲ್ಯಾಣ, ಸಾರ್ವಜನಿಕ ಸಂಪರ್ಕ ಹಾಗೂ ನಾಗರಿಕಾ ರಕ್ಷಣಾ ಸಚಿವರಾಗಿದ್ದರು. 

ಚೇತನ್ ಚೌಹಾಣ್ ಅವರಿಗೆ ೧೯೮೧ರಲ್ಲಿ ಭಾರತ ಸರಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡದ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ೨೦೧೬-೧೭ರಲ್ಲಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಯ ಮುಖ್ಯಸ್ಥರೂ ಆಗಿದ್ದರು. ಚೇತನ್ ಚೌಹಾಣ್ ಭಾರತೀಯ ಕ್ರಿಕೆಟ್ ನ ಆರಂಭಿಕ ಆಟಗಾರರಾಗಿ, ಉತ್ತರ ಪ್ರದೇಶ ಸರಕಾರದಲ್ಲಿ ಮಂತ್ರಿಯಾಗಿ ಇವರು ಸಲ್ಲಿಸಿದ ಸೇವೆ ಸದಾ ಕಾಲ ನೆನಪಿನಲ್ಲಿ ಉಳಿಯಲಿದೆ.    

ಚಿತ್ರ ಕೃಪೆ: ಅಂತರ್ಜಾಲ ತಾಣ