ಬದುಕಿಸಿದ ವಿದ್ಯೆ ಬದುಕೀತೇ?

ಬದುಕಿಸಿದ ವಿದ್ಯೆ ಬದುಕೀತೇ?

ಈ ವರ್ಷ ಇಲ್ಲಿಯವರೆಗೆ 69 ಜನರ ಬದುಕಿಸಿದೆ. ಕಳೆದ 50 ವರ್ಷಗಳಲ್ಲಿ ಸುಮಾರು ಎಷ್ಟು ಜನರಾಗಿರಬಹುದೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ನನಗೆ ಅಷ್ಟೆಲ್ಲ ಲೆಕ್ಕ ಬರುವುದಿಲ್ಲ.
 
ವರ್ಷಕ್ಕೆ 70ರ ಲೆಕ್ಕ ಹಿಡಿದರೂ 50 ವರ್ಷಗಳಲ್ಲಿ ಈ ವ್ಯಕ್ತಿ ಎಷ್ಟು ಜನರ ಬದುಕಿಸಿರಬಹುದೆಂದು ಲೆಕ್ಕ ಹಾಕತೊಡಗಿದೆ. ಮುದುಕನ 'ಅಹಂ' ಅರ್ಹವೂ, ಸಾತ್ವಿಕವೂ ಆದುದೆನಿಸಿತು!
 
ಬೆಳ್ತಂಗಡಿ ತಾಲ್ಲೂಕಿನಲ್ಲಿ ರಾಜಕೀಯ ನಾಯಕನೋ, ಧರ್ಮಾಧಿಕಾರಿಯೋ, ಅಗಾಧ ಶ್ರೀಮಂತನೋ ಏನೂ ಅ ಲ್ಲದಿದ್ದರೂ ಎಲ್ಲರೂ ಬಲ್ಲ ವ್ಯಕ್ತಿಯೊಬ್ಬರಿದ್ದರೆ ಈ ಸುಬ್ಬಯ್ಯ ಗೌಡರಿರಬೇಕು. ಯಾಕೆಂದರೆ ಮುದ್ದುಕೊಡುವ 'ಅಜ್ಜೇರು' ಎಂದೇ ಪ್ರಸಿದ್ಧರಾದ ಇವರ ಮನೆಬಾಗಿಲನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ತಟ್ಟಿರುತ್ತಾರೆ!
 
ಬೆಳ್ತಂಗಡಿ ತಾಲ್ಲೂಕಿನಲ್ಲಿ ಯಾರಿಗೆ ಹಾವು ಕಚ್ಚಿದರೂ ಜನ ಡಾಕ್ಟರರ ಬಳಿ ಹೋಗುವುದಿಲ್ಲ. ಸರ್ಪಸುತ್ತು, ಕೆಂದುಳಿ, ಗಂಟಲ ಬಾವು, ಕಾಮಾಲೆ, ಹೊಟ್ಟೆನೋವು, ಅಲರ್ಜಿ ಮುಂತಾದವುಗಳಿಗೆಲ್ಲ ಈ ಭಾಗದಲ್ಲಿ ಗೌಡರ ಪೇಟೆಂಟು! ಈ ತರದ ಕಾಯಿಲೆಗಳಿಗೆ ಡಾಕ್ಟರ ಬಳಿ ಹೋದರೆ ಅವರೇ ಸುಬ್ಬಯ್ಯ ಗೌಡರಿಗೆ 'ರೆಫರ್' ಮಾಡಿದ ಸಂದರ್ಭಗಳು ನೂರಾರಿವೆ!
 
ಉಜಿರೆಯ ಬಳಿ, ಅಂಕುಡೊಂಕಾದ ಗದ್ದೆ ಬದುಗಳ ಹಾದು, ತೆಂಗಿನ ತೋಟ ದಾಟಿ, ಬಂದು ನಿಂತ ಮನೆಯಲ್ಲಿ 'ಸುಬ್ಬಯ್ಯ ಗೌಡರ ಮನೆ ಇದೇನಾ' ಎಂದು ಕೇಳಿದಾಗ ಹೌದು ಎಂಬ ಉತ್ತರ ಬಂತು. ‘ಅಲ್ಲಿ ಬರುತ್ತಿದ್ದಾರೆ, ನೋಡಿ' ಎಂದು ಹೆಂಗಸೊಬ್ಬರು ಕೈ ತೋರಿಸಿದರು. ತಲೆ ಮೇಲೆ ಟವೆಲ್ಲು ಹೊದೆದು, ಆಕಳು ಕರುಗಳ ಮೇಯಿಸಿಕೊಂಡು ವೃದ್ಧರೊಬ್ಬರು ನಿಧಾನಕ್ಕೆ ಹೆಜ್ಜೆಯಿಡುತ್ತಿದ್ದರು. ಹಣೆ ಮೇಲೆ ಎಣಿಸಬಹುದಾದ ನೆರಿಗೆಗಳು , ಬುಸುಗುಡುತ್ತಿದ್ದ ಶರೀರ ಅವರು ಸೋತಿರುವುದನ್ನು ಸಾರುತ್ತಿತ್ತು.
 
ಅವರೇ ಸುಬ್ಬಯ್ಯ ಗೌಡರು. ಕಳೆದ ಐದು ದಶಕಗಳಿಂದ ಗೌಡರು ಹಳ್ಳಿಮದ್ದು ಕೊಡುತ್ತಾರೆ . ಇಂಗ್ಲಿಷ್ ಮೆಡಿಸಿನ್ನು ಸೋತಕಡೆಯಲಲ್ಲೆಲ್ಲ ಗೌಡರು ಗೆದ್ದಿದ್ದಾರೆ. ಕುಟುಂಬದಲ್ಲಿ ಪರಂಪರಾಗತವಾಗಿ ಬಂದ ವಿಷ ಚಿಕಿತ್ಸೆಗೆ ಗೌಡರು ಹೆಸರುವಾಸಿ. ಯಾವ ಹಾವೇ ಕಚ್ಚಿರಲಿ, ಎಚ್ಚರವೊಂದಿದ್ದರೆ ಬದುಕಿಸುತ್ತೇನೆ ಎನ್ನುವ ಸಾಹಸಿ.
 
ಸರ್ಪಸುತ್ತು , ಕಾಮಾಲೆ ಮುಂತಾದ ಕಾಯಿಲೆಗಳಿಗೆ ನೀವು ಅವರ ಬಳಿ ಹೋದಿರೆನ್ನಿ. ಅವರು ಮಾಡುವುದಿಷ್ಟು : ಜನಿವಾರಕ್ಕೆ ನೂರೆಂಟು ಗಂಟು ಹಾಕಿದಂತಿರುವ ನೂಲೊಂದನ್ನು ನಿಮ್ಮ ಕೊರಳಿಗೆ ಕಟ್ಟುತ್ತಾರೆ. ಅರೆದು ಕುಡಿಯಲು ಬೇರು-ನಾರು ಕೊಡುತ್ತಾರೆ. ಬೇಕಾದರೆ ಪಥ್ಯಮಾಡಲು ಹೇಳುತ್ತಾರೆ. ಹಾವು ಕಚ್ಚಿದರೆ ವಿಷವನ್ನು ಕಕ್ಕಿಸುವ ಔಷಧಿ, ಕಚ್ಚಿದ ಜಾಗದಲ್ಲಿ ಇಟ್ಟರೆ ವಿಷವನ್ನು ಹೀರುವ ಗರುಡಕಲ್ಲು ಅವರ ಬಳಿಯಿದೆ. ತುಂಬ ಜೋಪಾನ ಮಾಡಬೇಕಾದ ಕಲ್ಲು ಅದು. ಒಮ್ಮೆ ಉಪಯೋಗಿಸಿದ ಮೇಲೆ ಹಾಲಲ್ಲಿ ತೊಳೆದು ಅಕ್ಕಿಯಲ್ಲಿ ಹಾಕಿ ಇಡಬೇಕು.
 
ಈ ಕಲ್ಲಿನ ಮೂಲ್ಯವನ್ನಾಗಲೀ, ಬಳಸುವ ಗಿಡಮೂಲಿಕೆಗಳ ವಿವರವನ್ನಾಗಲೀ ಗೌಡರು ಬಿಟ್ಟುಕೊಡುವುದಿಲ್ಲ. ಅದು ಕುಟುಂಬದಲ್ಲೇ ಮುಂದುವರಿಯಬೇಕಾದ ಸಂಪ್ರದಾಯ. ಮನೆಯ ಹೆಣ್ಣುಮಕ್ಕಳಿಗೆ ಸಹಿತ ಈ ಗುಟ್ಟು ಬಿಟ್ಟುಕೊಡಲಾಗುವುದಿಲ್ಲವಂತೆ! ಹಾಗೇ ಕುಟುಂಬದಿಂದ ಹೊರ ಹೋದರೆ ಈ ಮದ್ದು - ಮಂತ್ರ ನಾಟುವುದಿಲ್ಲವೆಂಬ ನಂಬಿಕೆ.
 
ತನ್ನ ಇಪ್ಪತ್ತನೇ ವಯಸ್ಸಿನಿಂದ 70 ನೇ ವಯಸ್ಸಿನವರೆಗೂ ಮದ್ದು ಮಾಡುತ್ತಾ ಬಂದಿರುವ ಗೌಡರು ಈಗ ಅಧೀರರಾದಂತೆ ಕಾಣುತ್ತಾರೆ. ‘ಮೊದಲೆಲ್ಲ ನಮ್ಮ ಮನೆಸುತ್ತವೇ ಇ ರುತ್ತಿದ್ದ ಮೂಲಿಕೆ ಇಂದು ಎಷ್ಟು ದೂರ ಅಲೆದರೂ ಸಿಗುವುದಿಲ್ಲ. ಜಾಗವಿರುವೆಡೆಯಲ್ಲೆಲ್ಲ ಹಬ್ಬಿರುವ ಕಾಂಗ್ರೆಸ್ ಕಳೆ ನಮ್ಮ ಬಲವನ್ನೇ ನಾಶಮಾಡಿದೆ' ಎಂದು ವಿಷಾದಿಸುತ್ತಾರೆ.
 
ಇನ್ನೂ ಈ ದೇಶದಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಹಳ್ಳಿ ವೈದ್ಯರುಗಳನ್ನು ಕಾಡುತ್ತಿರುವ ಗಂಭೀರ ಪ್ರಶ್ನೆ ಇದು. ಅವರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿರುವುದರಿಂದ ಅವುಗಳ ನಿಜ ಹೆಸರು ಗೊತ್ತಿಲ್ಲ. ತೋರಿಸಲೂ ಇಲ್ಲದಂತೆ ಮೂಲಿಕೆಗಳೀಗ ಕಾಣೆಯಾಗಿವೆ. ಹೀಗಾಗಿ ಇದು ನಮ್ಮ ಹಳ್ಳಿ ವೈದ್ಯರ ಕೊನೆ ಆಟವೇನೊ!
 
ಸುಬ್ಬಯ್ಯ ಗೌಡರನ್ನು ನೋಡಿ. ಅವರಿಗೆ ಒಬ್ಬನೇ ಮಗ. ಒಂದು ಕಾಯಿ, ಬಿಡಿಕಾಸು ತರುವ ಈ ವೃತ್ತಿಯಲ್ಲಿ ಅವನಿಗೆ ಇಷ್ಟವಿರುವಂತೆ ತೋರುವುದಿಲ್ಲ. ಆದರೆ ಮನೆತನದ ಈ ಅಪೂರ್ವ ವಿದ್ಯೆಯನ್ನು ಬೇರೆಯವರಿಗೆ ಹಸ್ತಾಂತರಿಸಲು ಗೌಡರು ಸಿದ್ಧರಿಲ್ಲ. ಅಂತೂ ವೈದ್ಯ ವಿದ್ಯೆ ಮಗನಿಗೆ ಬರುವಾಗ ಅರ್ಧದಷ್ಟು ಅಪ್ಪನೊಟ್ಟಿಗೇ ಹೋಗಿರುತ್ತದೆ. ಸುಬ್ಬಯ್ಯ ಗೌಡರು ಕಲಿವಾಗಲೂ ಹೀಗೆ ಆಗಿದೆಯೋ ಯಾರಿಗೆ ಗೊತ್ತು?
 
ಅಂದರೆ ಈ ಹಳ್ಳಿ ವೈದ್ಯ ನಾಶವಾಗುತ್ತಿರುವುದಕ್ಕೆ ವೈದ್ಯರೇ ಕಾರಣ ಎನ್ನದೇ ವಿಧಿಯಿಲ್ಲ. ವಿದ್ಯಾದಾನ ಸರ್ವಶ್ರೇಷ್ಠವೆಂಬ ನಂಬಿಕೆಯ ನಾಡಲ್ಲಿ, ಹಳ್ಳಿಮದ್ದು ಕೊಡುವ ವಿದ್ಯೆ ವೈದ್ಯರುಗಳ ಸ್ವಾರ್ಥದಿಂದಾಗಿ ಚಟ್ಟ ಏರುತ್ತಿದೆ.
 
ಅದಕ್ಕೆ ಇಷ್ಟೆಲ್ಲ ಜನರ ಜೀವ ಬದುಕಿಸಿದ ಸುಬ್ಬಯ್ಯ ಗೌಡರು ತಮ್ಮ ವಿದ್ಯೆಯನ್ನು ಬದುಕಿಸಲಾರದೇ ಹೋಗುತ್ತಿರುವುದು ಬದುಕಿನ ವ್ಯಂಗ್ಯ. ಇದು ಗೌಡರೊಂದೇ ಅಲ್ಲ, ಈ ದೇಶದ ಎಲ್ಲ ಹಳ್ಳಿ ವೈದ್ಯರಿಗೂ ಕಾದಿರುವ ದುರಂತ.
 
(ಲೇಖನ ಬರೆದ ವರ್ಷ 1994)