ಬದುಕು ಒಂದು ಗಾಜಿನ ಜಾಡಿ

ಜೀವನದಲ್ಲಿ ಪ್ರಾಕ್ಟಿಕಲ್ ಆಗಿರುವುದು ಹೇಗೆ ಎಂಬ ತರಗತಿ ನಡೆಯುತ್ತಿತ್ತು. ರಾಜ್ಯದ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಅದರಲ್ಲಿ ಆಸಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಉಪನ್ಯಾಸಕರು ಒಂದು ದೊಡ್ಡ ಗಾಜಿನ ಜಾಡಿಯನ್ನು ತರಿಸಿ, ಅದರಲ್ಲಿ ದುಂಡುಕಲ್ಲುಗಳನ್ನು ಒಂದೊಂದಾಗಿ ತುಂಬಿಸಿದರು. ಬಣ್ಣ ಬಣ್ಣದ ದುಂಡು ಕಲ್ಲುಗಳು ಆಕರ್ಷಕವಾಗಿ ಕಾಣಿಸುತ್ತಿದ್ದವು. ಗಾಜಿನ ಜಾಡಿಯ ಮುಚ್ಚಳದ ತನಕ ಕಲ್ಲುಗಳನ್ನು ತುಂಬಿಸಿ, ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ನೋಡಿ ‘ಈಗ ಏನಾಗಿದೆ ಹೇಳಿ?’ ಎಂದರು.
‘ಗಾಜಿನ ಜಾಡಿಯು ಪುಟ್ಟ ಪುಟ್ಟ ದುಂಡುಕಲ್ಲುಗಳಿಂದ ತುಂಬಿದೆ' ಎಂದರು ವಿದ್ಯಾರ್ಥಿಗಳು. ಉಪನ್ಯಾಸಕರು ನಸುನಕ್ಕು, ಗಾಜಿನ ಜಾಡಿಯನ್ನು ನಿಧಾನವಾಗಿ ಅಲುಗಾಡಿಸಿದರು. ದುಂಡುಕಲ್ಲುಗಳು ಸ್ವಲ್ಪ ಸ್ವಲ್ಪವೇ ಜರುಗಿ, ಹತ್ತಿರ ಹತ್ತಿರ ಸೇರಿಕೊಂಡವು. ಆ ಅಲುಗಾಟದಿಂದ ಗಾಜಿನ ಜಾಡಿದಲ್ಲಿ ಸ್ವಲ್ಪ ಜಾಗ ಸೃಷ್ಟಿಯಾಯಿತು.
‘ಈಗ ಜಾಡಿಯು ತುಂಬಿಕೊಂಡಿದೆಯೇ?’ ಎಂದು ಕೇಳಿದರು ಉಪನ್ಯಾಸಕರು. ‘ಇಲ್ಲ, ನೀವು ಅಲುಗಾಡಿಸಿದ್ದರಿಂದಾಗಿ, ಸ್ವಲ್ಪ ಜಾಗ ಸೃಷ್ಟಿಯಾಗಿ ಎಂದರು ವಿದ್ಯಾರ್ಥಿಗಳು
‘ನೋಡಿ, ನಾವು ಕೆಲವೇ ಕ್ಷಣಗಳಲ್ಲಿ ಖಚಿತ ಎಂದು ತಿಳಿದದ್ದು ಹೇಗೆ ಬದಲಾಗಿ ಹೋಯಿತು! ಜೀವನವೂ ಹೀಗೆಯೇ’ ಎನ್ನುತ್ತಾ ಇನ್ನಷ್ಟು ದುಂಡುಕಲ್ಲುಗಳನ್ನು ತುಂಬಿಸಿ, ಗಾಜಿನ ಜಾಡಿಯನ್ನು ಮುಚ್ಚಿದರು. ‘ಈಗ ಹೇಳಿ' ಎಂದು ಕೇಳಿದರು.
‘ಈಗ ಜಾಡಿ ಪೂರ್ತಿಯಾಗಿದೆ. ಇನ್ನು ಅದರಲ್ಲಿ ಜಾಗವಿಲ್ಲ' ಎಂದರು ವಿದ್ಯಾರ್ಥಿಗಳು. ಉಪನ್ಯಾಸಕರು ನಸುನಗುತ್ತಾ, ಒಂದಷ್ಟು ಮರಳನ್ನು ತರಿಸಿ, ಆ ಜಾಡಿಯೊಳಗೆ ನಿಧಾನವಾಗಿ ಸುರಿದರು. ಸಾಕಷ್ಟು ಮರಳು ಅದರೊಳಗೆ ಸೇರಿಕೊಂಡಿತು.
‘ಈಗ ಹೇಳಿ, ನಿಮ್ಮ ಪ್ರಕಾರ ಗಾಜಿನ ಜಾಡಿ ಕಲ್ಲುಗಳಿಂದ ತುಂಬಿ ಹೋಗಿತ್ತು. ಆದರೆ ಈಗ ಸಾಕಷ್ಟು ಮರಳನ್ನು ಅದರಲ್ಲಿ ತುಂಬಲು ಸಾಧ್ಯವಾಯಿತು? ಇದು ಹೇಗಾಯಿತು?’ ಎಂದು ಕೇಳಿದರು.
‘ಕಲ್ಲುಗಳು ಎಷ್ಟೇ ತುಂಬಿದರೂ, ಮರಳಿಗೆ ಜಾಗ ಇದ್ದೇ ಇರುತ್ತದೆ.’ ಎಂದರು ಒಬ್ಬ ವಿದ್ಯಾರ್ಥಿ.
‘ಒಳ್ಳೆಯ ಉತ್ತರ. ಇದನ್ನು ಸಹ ನಮ್ಮ ಜೀವನಕ್ಕೆ ಹೋಲಿಸಿ ವಿಶ್ಲೇಷಿಸಬಹುದು. ಈಗ ಈ ಗಾಜಿನ ಜಾಡಿಯು ಸಂಪೂರ್ಣ ತುಂಬಿದೆಯೇ?’ ಎಂದು ಮತ್ತೊಮ್ಮೆ ಕೇಳಿದರು ಉಪನ್ಯಾಸಕರು. “ಹೌದು' ಎಂದರು ಎಲ್ಲರೂ. ಉಪನ್ಯಾಸಕರು ಎರಡು ಲೋಟ ನೀರು ತರಿಸಿ, ಆ ಗಾಜಿನ ಜಾಡಿಯೊಳಗೆ ಸುರಿದರು. ನೀರು ನಿಧಾನವಾಗಿ ಒಳಸೇರಿ, ತಳದ ತನಕ ಸಂಚರಿಸಿ, ಸಲೀಸಾಗಿ ಆ ಗಾಜಿನ ಜಾಡಿಯೊಳಗೆ ತುಂಬಿಕೊಂಡಿತು.
‘ಈಗ ಹೇಳಿ, ಗಾಜಿನ ಜಾಡಿಯೊಳಗೆ ದುಂಡು ಕಲ್ಲು ಮತ್ತು ಮರಳು ಸೇರಿಕೊಂಡಾಗ, ಇನ್ನು ಜಾಗವೇ ಇಲ್ಲ ಎಂದುಕೊಂಡಿದ್ದೆವು. ಆದರೆ ನೀರು ಅಲ್ಲಿ ಜಾಗ ಮಾಡಿಕೊಂಡು, ಒಳ ಸೇರಿಕೊಂಡಿತು. ಇದರ ಅರ್ಥವೇನು? ಎಂದರು ಉಪನ್ಯಾಸಕರು. ವಿದ್ಯಾರ್ಥಿಗಳು ತಮ್ಮತಮ್ಮಲ್ಲೇ ವಿಶ್ಲೇಷಣೆ ಮಾಡತೊಡಗಿದರು.
ಉಪನ್ಯಾಸಕರು ನಸುನಗುತ್ತಾ ‘ಇಂತಹ ಉದಾಹರಣೆಯನ್ನು ಹಲವು ಸ್ತರಗಳಲ್ಲಿ ವಿಶ್ಲೇಷಿಸಬಹುದು. ಆಧ್ಯಾತ್ಮದ ಹಾದಿಯಲ್ಲಿ ವಿಶ್ಲೇಷಿಸಿದರೆ, ಸಮರ್ಥ ಪ್ರವಚನಕಾರರು ದಿನಗಟ್ಟಲೆ ಈ ಕುರಿತು ಮಾತನಾಡಬಲ್ಲರು. ಮ್ಯಾನೆಜ್ ಮೆಂಟ್ ಗುರುಗಳು ತಮ್ಮದೇ ರೀತಿಯಲ್ಲಿ ಅರ್ಥಪೂರ್ಣ ವಿಶ್ಲೇಷಣೆ ನೀಡಬಲ್ಲರು. ನಮ್ಮ ಜೀವನದಲ್ಲಿ ಈಗ ಕಂಡ ಉದಾಹರಣೆಗೆ ಹೋಲಿಸಿದರೆ ಬೇರೊಂದು ರೀತಿಯಲ್ಲಿ ಚರ್ಚಿಸಬಹುದು. ‘ದುಂಡುಕಲ್ಲುಗಳು ಮೊದಲು ತುಂಬಿಕೊಂಡಾಗ, ಇನ್ನು ಜಾಗವಿಲ್ಲ ಎಂದೇ ಅನಿಸತೊಡಗಿತು. ನಮಗೊಂದು ಉದ್ಯೋಗ ದೊರಕಿದಾಗ, ಇನ್ನು ಜೀವನ ಸೆಟಲ್ ಆಯಿತು ಎಂದು ಕೊಳ್ಳುತ್ತೇವೆ. ಆದರೆ ತುಸು ಅಲ್ಲಾಡಿದಾಗ, ಇನ್ನಷ್ಟು ಜಾಗವಿದೆ. ಇನ್ನಷ್ಟು ಸಾಧಿಸಬಲ್ಲೆವು ಎನಿಸತೊಡಗಿತು. ಗಾಜಿನ ಜಾಡಿಯಲ್ಲಿ ಮರಳು ಸೇರಿದಾಗ, ಆ ಜಾಡಿಗೆ ಹೊಸ ರೂಪ ಬಂತು. ನಾವು ನೀವೆಲ್ಲಾ ಒಂದು ಉದ್ಯೋಗಕ್ಕೆ ಸೇರಿಕೊಂಡ ನಂತರ, ಅಲ್ಲೇ ಪ್ರಗತಿ ದೊರೆತರೆ ಅಥವಾ ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಇತರ ಆದಾಯ ಮಾರ್ಗಗಳನ್ನು ನಿಭಾಯಿಸಿದರೆ, ದಿನಚರಿಯೇ ಬದಲಾಗುತ್ತದೆ. ಅಲ್ಲಿಗೆ ಒಂದು ಹಂತ ತಲುಪಿದೆವು ಎನಿಸಬಹುದು.
ಆದರೆ, ಸಂಪೂರ್ಣ ತುಂಬಿದ ಜಾಡಿಯಲ್ಲಿ ಇನ್ನಷ್ಟು ನೀರನ್ನು ಸೇರಿಸಿದ್ದನ್ನು ನೀವೇ ಕಂಡಿರಿ. ಇದನ್ನು ಹಲವು ಆಯಾಮಗಳಲ್ಲಿ ಚರ್ಚಿಸಬಹುದು. ನಮ್ಮ ನಿಮ್ಮ ಜೀವನಕ್ಕೆ ಹೋಲಿಸಿದರೆ, ನಮ್ಮ ಉದ್ಯೋಗ, ಆದಾಯ ಎಲ್ಲಾ ಆದ ನಂತರ, ಬದುಕಿಗೆ ಅರ್ಥ ತುಂಬಲು ನಮಗೊಂದು ಒಳ್ಳೆಯ ಹವ್ಯಾಸ ಬೇಕು. ಓದುವಿಕೆ, ಸಂಗೀತ, ಸಮಾಜಸೇವೆ, ಗಿಡ ನೆಡುವುದು-ಈ ರೀತಿ ನಮ್ಮ ಬದುಕಿನ ಸಾಧ್ಯತೆಗಳು ಅನಂತ ಎಂದು ಗಾಜಿನ ಜಾಡಿಯ ಉದಾಹರಣೆ ತೋರಿಸಿಕೊಟ್ಟಿದೆ' ಎಂದರು ಉಪನ್ಯಾಸಕರು.
-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)
***
ಇದೇ ರೀತಿಯ ಒಂದು ಪುಟ್ಟ ಮ್ಯಾನೇಜ್ ಮೆಂಟ್ ಕಥೆಯನ್ನು ನಾನು ಕಾಲೇಜಿನಲ್ಲಿದ್ದಾಗ ಎಸ್ ಎಸ್ ಎಸ್ (ರಾಷ್ಟ್ರೀಯ ಸೇವಾ ಯೋಜನೆ) ನ ಒಂದು ಶಿಬಿರದಲ್ಲಿ ಉಪನ್ಯಾಸಕರಿಂದ ಕೇಳಿದ ನೆನಪಾಯಿತು. ಅದೊಂದು ದಿನ ಮದ್ಯಾಹ್ನ ಊಟದ ಬಳಿಕ ಮ್ಯಾನೇಜ್ ಮೆಂಟ್ ಕುರಿತಾದ ಉಪನ್ಯಾಸವಿತ್ತು. ಆ ದಿನದ ಉಪನ್ಯಾಸಕರು ಒಂದು ಗಾಜಿನ ಗ್ಲಾಸನ್ನು ತರಿಸಿ ಅದರಲ್ಲಿ ಅರ್ಧ ಮಾತ್ರ ನೀರು ತುಂಬಿಸಿದರು. ಮತ್ತು ನಮ್ಮ ಬಳಿ ಕೇಳಿದರು ‘ಇದನ್ನು ನೋಡುವಾಗ ನಿಮಗೆ ಏನನ್ನಿಸುತ್ತದೆ?’ ನಾವೆಲ್ಲರೂ ಒಕ್ಕೊರಲಿನಿಂದ ಕೊಟ್ಟ ಉತ್ತರ ‘ಅರ್ಧ ಖಾಲಿ ಇದೆ’ ಎಂದು. ನಮಗೆ ಯಾರಿಗೂ ಇನ್ನರ್ಧ ತುಂಬಿದೆ ಎಂಬ ವಿಷಯದ ಬಗ್ಗೆ ಗಮನವೇ ಹೋಗಲಿಲ್ಲ.
ಉಪನ್ಯಾಸಕರು ವಿವರಿಸಿದರು. ನಮ್ಮ ಬದುಕೂ ಹಾಗೆಯೇ ನಾವು ಏನನ್ನಾದರೂ ಗಳಿಸಿದರೆ ಅಥವಾ ಸಾಧಿಸಿದರೆ ಅದರಲ್ಲಿ ನಾವು ತೃಪ್ತಿಯನ್ನು ಕಾಣುವುದೇ ಇಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎನ್ನುವ ಅತಿಯಾಸೆ ಪ್ರಾರಂಭವಾಗುತ್ತದೆ. ಕೆಲವೊಂದು ಬಗೆಯ ಸಾಧನೆಯಲ್ಲಿ ಈ ಮಾತು ಸರಿ, ಆದರೆ ಎಲ್ಲಾ ವಿಷಯದಲ್ಲೂ ನಾವು ‘ಇನ್ನಷ್ಟು' ಬಯಸುವುದು ತಪ್ಪು. ಹಾಗೇ ಈ ಅರ್ಧ ಗ್ಲಾಸ್ ನೀರು. ಇನ್ನರ್ಧ ಖಾಲಿ ಇದೆ ಎಂದು ನಿರಾಸೆ ಹೊಂದುವ ಬದಲು ನಮಗಿನ್ನೂ ಅವಕಾಶವಿದೆ ಎಂದು ಏಕೆ ಯೋಚನೆ ಮಾಡುವುದಿಲ್ಲ?’ ಎಂದು ಕೇಳಿದರು ಉಪನ್ಯಾಸಕರು.
‘ಹೌದಲ್ಲವೇ? ನಾವು ಏನಾದರೂ ಕೆಲಸ ಮಾಡಲು ಹೊರಟಾಗ ಅಸಫಲತೆ ನಮ್ಮನ್ನು ಕಾಡಿದಾಗ ನಾವಿನ್ನೂ ಗೆಲ್ಲಲು ಅವಕಾಶವಿದೆ ಎಂಬ ಸಂಗತಿಯನ್ನು ಮರೆತೇ ಬಿಡುತ್ತೇವೆ. ಸಿಕ್ಕ ಅವಕಾಶವನ್ನು ಬಳಸಿ ಗೆಲ್ಲುವ ಸಾಧ್ಯತೆ ನಮಗೆ ಇದ್ದೇ ಇರುತ್ತದೆ.’ ಮೇಲಿನ ಗಾಜಿನ ಜಾಡಿಯ ಕಥೆಯೂ ಅಷ್ಟೇ, ಈ ಅರ್ಧ ತುಂಬಿದ ಗ್ಲಾಸ್ ನೀರಿನ ಕಥೆಯೂ ಅಷ್ಟೇ. ಇವೆರಡರ ಸಾರವನ್ನು ತಿಳಿದುಕೊಂಡರೆ ನಾವು ಬದುಕಿನಲ್ಲಿ ಗೆಲುವು ಕಾಣುವುದು ಶತಃ ಸಿದ್ಧ.
ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ