ಬದುಕು ಕಟ್ಟಲು ಹೊರಟವಳು - ಭಾಗ 2

ಬದುಕು ಕಟ್ಟಲು ಹೊರಟವಳು - ಭಾಗ 2

ವರ್ಷಪೂರ್ತಿ ಅಪ್ಪ ದುಡಿದು, ಅಮ್ಮ ಬೇಯಿಸಿ ಹಾಕಿದ್ದನ್ನು ಹೊಟ್ಟೆ ತುಂಬಾ ತೇಗು ಬರುವಷ್ಟು ತಿಂದು, ಬಿಂದಾಸ್ ಆಗಿ ಸುತ್ತಾಡಿ, ಅಂತಿಮ ಪರೀಕ್ಷೆಯಲ್ಲಿ ಫೇಲಾಗಿ, ಪೋಷಕರ ನಿರೀಕ್ಷೆಗಳಿಗೆ ಎಳ್ಳು ನೀರು ಬಿಡುವ ಮಕ್ಕಳ ಮಧ್ಯೆ, ಹಲವು ವರ್ಷಗಳ ನಂತರ, ಹಟ ಹಿಡಿದು ಪರೀಕ್ಷೆ ಬರೆದ ಶಾಂತಾ ಅನನ್ಯವಾಗಿ ಕಾಣುತ್ತಾಳೆ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ಶಾಂತಾ ಉತ್ತೀರ್ಣಳಾಗಿದ್ದಳು. ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಅರೆಕ್ಷಣ ಅವಳ ನೋವುಗಳನ್ನು ಮೊದಲ ಬಾರಿ ಆಕೆ ಮರೆತು ಖುಷಿಪಟ್ಟಿದ್ದಳು. ಆಕೆ ವಿರಮಿಸಲಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲು ಮರು ಕ್ಷಣವೇ ಸಜ್ಜಾದಳು. ಆ ಪರೀಕ್ಷೆಯೂ ಮುಗಿದು ಫಲಿತಾಂಶ ಬಂದಾಗ ಆಕೆಯೇ ಆಶ್ಚರ್ಯಗೊಂಡಿದ್ದಳು. ಶಾಂತಾ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣಗೊಂಡಿದ್ದಳು.

ಬದುಕಿನ ಬವಣೆಗಳೇನೂ ಬದಲಾವಣೆಯಾಗದಿದ್ದರೂ, ಪಿಯುಸಿ ಯ ಉತ್ತೀರ್ಣತೆ ಆಕೆಯ ಬದುಕಿನಲ್ಲಿ ಒಂದು ಹೊಸ ಆಶಾಭಾವವನ್ನು ಮೂಡಿಸಿತು. ಮಳೆಗಾಲದ ಕಾರ್ಮೋಡಗಳ ಮಧ್ಯೆ ಬೆಳಕಿನ ಕಿರಣವೊಂದು ಇಣುಕಿಬಂದಂತೆ ಆಕೆಯ ಜೀವನದಲ್ಲಿ ಬೆಳಕೊಂದು ಮೂಡಿದ ಅನುಭವ. ಶಾಂತಾಳ ಕಲಿಯಬೇಕೆಂಬ ಅದಮ್ಯ ಬಯಕೆಯನ್ನು ಕಂಡ ಹಿತೈಸಿಗಳು ಪದವಿ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಒಂದೆಡೆ ಶಾಲೆಗೆ ಹೋಗುತ್ತಿರುವ ಪುಟ್ಟ ಮಕ್ಕಳು. ಮತ್ತೊಂದೆಡೆ ಮನೆಯಲ್ಲಿ ಖರ್ಚಿಗಾಗಿ ಪರದಾಟ. ಗಂಡನ ದುಡಿಮೆ ಮನೆ ನಿರ್ವಹಣೆಗೆ ಸಾಲದು. ಶಾಂತಾಳ ಬೀಡಿ ಲೇಬಲ್ ಹಾಗೂ ಬೀಡಿ ಕಟ್ಟುವಿಕೆಯ ಅಲ್ಪ ಸ್ವಲ್ಪ ಆದಾಯ ಹೇಗೋ ಮನೆಯ ಖರ್ಚನ್ನು ಸರದೂಗಿಸುತ್ತಿತ್ತು. ಕಷ್ಟವೋ ಸುಖವೋ ಜೀವನ ಸಾಗುತ್ತಿತ್ತು.‌ ಇದರ ಮಧ್ಯೆ ಶಾಂತಾಳಿಗೆ ಕಲಿಕೆಯ ಹುಚ್ಚು. 

ಅಂದು ಆಕೆ ಗಂಡನ ಮುಂದೆ ತಾನು ಪದವಿ ತರಗತಿಗೆ ಸೇರುವ ವಿಚಾರ ಪ್ರಸ್ತಾಪಿಸಿದಳು. ಗಂಡ ಸುತರಾಂ ಒಪ್ಪಲು ತಯಾರಿಲ್ಲ. ಆತನೇನೂ ವಿದ್ಯಾವಂತನಾಗಿರಲಿಲ್ಲ. ಶಾಲೆಗೆ ಹೋಗುತ್ತಿರುವ ಇಬ್ಬರು ಮಕ್ಕಳು ಮನೆಯಲ್ಲಿರುವಾಗ ಶಾಂತಾ ಕಾಲೇಜಿಗೆ ಹೋಗುವುದು ಆತನಿಗೆ ಇಷ್ಟವಿರಲಿಲ್ಲ. ಅಲ್ಲದೆ ಸಂಬಂಧಿಕರ ತೀವ್ರ ಆಕ್ಷೇಪ ಬೇರೆ. ಅವಳಿಗ್ಯಾಕೆ ಕಾಲೇಜು ಸೇರುವ ಹುಚ್ಚು? ... ಎಂದು ಹೀಯಾಳಿಸತೊಡಗಿದ್ದರು. ಬದುಕಿನಲ್ಲಿ ಕಷ್ಟಪಟ್ಟಾಗ, ಸಾಸಿವೆ ಕಾಳಿನಷ್ಟೂ ಸಹಾಯಕ್ಕಿಲ್ಲದ ಸಂಬಂಧಿಕರು ಪುಕ್ಕಟೆ ಸಲಹೆ ನೀಡಲು ಒಬ್ಬರಿಗಿಂತ ಒಬ್ಬರು ಮುಂದೆ ಬರುತ್ತಿದ್ದರು. ಸಂಸಾರದಲ್ಲಿ ಅದೆಷ್ಟೇ ತಾಪತ್ರಯಗಳಿದ್ದರೂ, ತನ್ನ ಬಗ್ಗೆ ಅದೇನೇ ಟೀಕೆ ಬಂದರೂ ಶಾಂತಾ ದೃತಿಗೆಡಲಿಲ್ಲ. ಆಕೆ ಈಗ ಬಹಳನೇ ಮಾಗಿದ್ದಳು. ಅವಳು ಇನ್ನು ಕಳಕೊಳ್ಳುವಂತಹದ್ದು ಏನೂ ಉಳಿದಿರಲಿಲ್ಲ. ಬದಲಾಗಿ ಕಳೆದು ಕೊಂಡದ್ದನ್ನು ಪಡೆಯುವ ಹಂಬಲ ಆಕೆಗಿತ್ತು. ಗಂಡನ ಸಮ್ಮತಿ ಸಿಗದಿದ್ದರೂ ಕಾಲೇಜು ಸೇರುವ ಆಕೆಯ ಇಚ್ಛೆ ದೃಢವಾಗಿತ್ತು. 

ಶಾಂತ ಕಡೆಗೂ ಕಾಲೇಜು ಸೇರಿಯೇ ಬಿಟ್ಟಳು. ಅದೊಂದು ಸರಕಾರಿ ಕಾಲೇಜು. ಸಹಪಾಠಿಗಳಿಗೆ ಈಕೆಯೊಂದು ವಿಚಿತ್ರವಾಗಿ ಕಾಣಿಸುತ್ತಿದ್ದಳು. ಆಕೆಗೀಗ ಮೂವತ್ತರ ಹರೆಯ. ಹದಿನೆಂಟರ ಹರೆಯದ ಸಹಪಾಠಿಗಳು. ಅದೊಂದು ವಿಚಿತ್ರ ಪಯಣವೇ ಆಗಿತ್ತು. ಆಕೆ ಇಬ್ಬರು ಮಕ್ಕಳನ್ನು ಸಲಹಬೇಕು. ಅವರ ಬೇಕು ಬೇಡಗಳನ್ನು ಪೂರೈಸಬೇಕು. ಮನೆಯಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ. ಬೆಳಿಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಬಿಟ್ಟು ತಾನು ಕಾಲೇಜಿಗೆ ಹೋಗಬೇಕಿತ್ತು. ಸಂಜೆ ಕಾಲೇಜು ಮುಗಿಸಿ ಬರುವಾಗ ಮಕ್ಕಳನ್ನು ಶಾಲೆಯಿಂದ ಜತೆಯಲ್ಲಿ ಕರೆದುಕೊಂಡು ಬರುತ್ತಿದ್ದಳು. ಅಕ್ಕ ಪಕ್ಕದವರಿಗೆ ಆಕೆಯ ಈ ನಿರ್ಧಾರ ಹಾಸ್ಯಾಸ್ಪದವಾಗಿತ್ತು. 

ಕಲಿಕೆ ಆಕೆಗೆ ಸುಲಭವಾಗಿರಲಿಲ್ಲ. ಆಕೆಯಲ್ಲದೆ ಇತರರಿಗೆ ಅದೂ ಸಾಧ್ಯವೂ ಆಗಿರಲಿಲ್ಲ. ಆಕೆಯ ದೃಢತೆ ಅದ್ಭುತವಾಗಿತ್ತು. ಬಡತನದ ನೋವುಗಳಿಗೆ ಆಕೆಯ ನಿರ್ಧಾರವನ್ನು ಬದಲಿಸುವ ಶಕ್ತಿ ಇರಲಿಲ್ಲ. ಛಲಬಿಡದ ವಿಕ್ರಮನಂತೆ ಅದೇನೇ ಬಂದರೂ, ಪದವಿಯನ್ನು ಮುಗಿಸಿಯೇ ಬಿಟ್ಟಲು. ಎಂಟನೇ ತರಗತಿಯಲ್ಲಿ ಶಾಲೆ ತೊರೆದ ಆಕೆ, ಹದಿನಾರರ ಹರೆಯದಲ್ಲೇ ಹಸೆಮಣೆ ತುಳಿದು, ಎರಡು ಮಕ್ಕಳ ಅಮ್ಮನಾಗಿ ಇಂದು ಮೂವತ್ತರ ಹರೆಯದಲ್ಲಿ ಪದವಿ ಪಡೆದ ಆಕೆಯ ನಡಿಗೆ ಬೆರಗು ಮೂಡಿಸುವಂತಿತ್ತು. 

ಪದವಿ ಪಡೆದ ಆಕೆ ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಳು. ಆಕೆಯ ಪ್ರಯತ್ನಗಳು ವಿಫಲವಾದವು. ಮಗ ಎಂಟರಲ್ಲಿ ಕಲಿಯುತ್ತಿದ್ದ. ಮಗಳು ಆರನೇ ತರಗತಿ. ಇಬ್ಬರ ಜವಾಬ್ದಾರಿಯೂ ಆಕೆಯ ಮೇಲಿತ್ತು. ಮುಂದೇನು? ಎಂದು ಯೋಚಿಸುತ್ತಿದ್ದಳು. ಶಾಂತಾಳಿಗೆ ಶಿಕ್ಷಕಿಯಾಗಬೇಕೆಂಬ ಆಸೆ ಚಿಗುರೊಡೆಯ ತೊಡಗಿತು. ಬಿ.ಎಡ್. ಕಲಿಯಬೇಕೆಂಬ ಬಯಕೆ ಮೂಡಿತು. ಅದಕ್ಕಾಗಿ ಹಣವನ್ನು ಹೊಂದಿಸಲು ಸಾಧ್ಯವಾಗದೆ ಬಿ.ಎಡ್. ಆಸೆಯನ್ನು ಕೈ ಚೆಲ್ಲಿದಳು. ಅದೊಂದು ದಿನ ಮಕ್ಕಳನ್ನು ಶಾಲೆಗೆ ಕಳುಹಿಸಿ, ಲೇಬಲ್ ಮಾಡಿದ ಬೀಡಿಯನ್ನು ಕಂಪೆನಿಗೆ ಒಪ್ಪಿಸಲು ಸಿದ್ಧಳಾಗುತ್ತಿದ್ದಂತೆ ಆಕೆಗೊಂದು ಕರೆ ಬಂತು. ಸುದ್ದಿ ಕೇಳಿ ಆಕೆ ಕುಸಿದು ಬಿದ್ದಿದ್ದಳು.

ಶಾಂತಾ ಬದುಕಿನಲ್ಲಿ ಬಹಳಷ್ಟು ನೊಂದಿದ್ದವಳು. ಸುಖ ಆಕೆಯ ಬದುಕಿನುದ್ದಕ್ಕೂ ಮರೀಚಿಕೆಯೇ ಆಗಿತ್ತು. ಅಮ್ಮನ ಸಾಂತ್ವಾನದ ನುಡಿಗಳು ಮಾತ್ರವೇ ಅವಳಿಗೆ ಸಮಾಧಾನ ಕೊಡುತ್ತಿತ್ತು. ಆಕೆ ಅಮ್ಮನನ್ನು ಬಹಳನೇ ಹಚ್ಚಿಕೊಂಡಿದ್ದಳು. ಇಂದು ಬಂದ ಸುದ್ದಿ ಆಕೆಯ ಜಂಘಾಬಲವನ್ನೇ ಹುದುಗಿಸಿತ್ತು. ಕುಸಿದು ಬಿದ್ದ ಆಕೆ ಸಾವರಿಸಿಕೊಂಡರೂ, ಮನಸ್ಸನ್ನು ಸಮಾಧಾನ ಪಡಿಸಲಾಗುತ್ತಿಲ್ಲ. ಅಟೋ ಹತ್ತಿ, ಶಾಲೆಯಿಂದ ಮಕ್ಕಳನ್ನು ಕರೆದು ಕೊಂಡು ತಾಯಿ ಮನೆಯತ್ತ ತೆರಳಿದಳು. ಈ ಮಧ್ಯೆ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.‌ ಮಕ್ಕಳಿಬ್ಬರಿಗೂ ವಿಷಯವೇನೆಂದು ತಿಳಿಯದು. ಅಮ್ಮನ ಅಳುವಿಗೆ ಅವರು ಮೂಕ ಪ್ರೇಕ್ಷಕರಾಗಿದ್ದರು. ಆಕೆ ಮಧ್ಯಾಹ್ನ ತವರು ಮನೆ ತಲುಪಿದಾಗ ಮನೆ ಮುಂದೆ ಒಂದಷ್ಟು ಜನ ನೆರೆದಿದ್ದರು.

ಎಂದಿನಂತೆ ಶಾಂತಾಳ ಅಮ್ಮ ಕೂಲಿ ಕೆಲಸಕ್ಕೆ ಹೊರಟಿದ್ದಳು. ಪ್ರತಿದಿನ ಆಕೆ ಕಾಲ್ನಡಿಗೆಯಲ್ಲಿಯೇ ಕೆಲಸಕ್ಕೆ ಹೋಗುತ್ತಿದ್ದಳು. ಸುಮಾರು ಒಂದು ಗಂಟೆಯ ಅವಧಿಯ ದಾರಿ.‌ ದಾರಿ ಮಧ್ಯೆ ಆಕೆಯ ಬಳಿ ಅಟೋ ರಿಕ್ಷಾವೊಂದು ಬಂದು ನಿಂತಿತ್ತು. ಆತ ಪರಿಚಯದ ಹುಡುಗ. "ತಾನೂ ಆ ಕಡೆಗೆ ಹೋಗುವವನು, ಬನ್ನಿ" ಅಂದ. ಇಷ್ಟವಿಲ್ಲದಿದ್ದರೂ ಆತನ ಒತ್ತಾಯಕ್ಕೆ ಅಟೋ ಹತ್ತಿದಳು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಯಮರಾಯ ಅಟೋದ ರೂಪದಲ್ಲಿ ಆಕೆಯನ್ನು ಕರೆದೊಯ್ಯಲು ಬಂದಿದ್ದ. ಕ್ಷಣ ಮಾತ್ರದಲ್ಲಿ ಅಪಘಾತಕ್ಕೀಡಾದ ಅಟೋದಲ್ಲಿ ಅವರಿಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಶಾಂತಾಳಿಗೆ ಸಂತೈಸುವ ಜೀವವೊಂದು ಕಾಲದೊಂದಿಗೆ ಲೀನವಾಗಿತ್ತು.

ಅಮ್ಮನ ಅಗಲುವಿಕೆ ಶಾಂತಾಳ ತಂಗಿಯ ವಿದ್ಯಾಭ್ಯಾಸಕ್ಕೆ ಹೊಡೆತ ಕೊಟ್ಟಿತ್ತು. ಅಣ್ಣಂದಿರು ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲ. ಆದರೆ ತಾನು ತೀರಾ ಕಷ್ಟದಲ್ಲಿದ್ದರೂ ಶಾಂತಾ ಆಕೆಯ ನೆರವಿಗೆ ಬಂದಳು. ಸಂಘದಿಂದ ಸಾಲ ಪಡೆದು ತಂಗಿಯನ್ನು ಡಿ.ಎಡ್. ಓದಿಸಿದಳು. ಸಾಲದ ಕಂತನ್ನು ತಾನೇ ಕಟ್ಟಿ ತಂಗಿಗೆ ಆಸರೆಯಾದಳು. ಡಿ.ಎಡ್.ಪೂರ್ಣಗೊಳಿಸಿದ ತಂಗಿಗೆ ಅದೃಷ್ಡ ಖುಲಾಯಿಸಿತು. ಆಕೆಗೆ ಸರಕಾರಿ ಶಾಲೆಯಲ್ಲಿ ಖಾಯಂ ಕೆಲಸವೂ ದೊರೆಯಿತು. ಅದನ್ನು ಕೇಳಿ ಎಲ್ಲರಿಗಿಂತ ಹೆಚ್ಚು ಖುಷಿ ಪಟ್ಟಿದ್ದಳು ಶಾಂತಾ. ಆದರೆ ಶಾಂತಾಳ ಸಂತೋಷ ಹೆಚ್ಚು ದಿನ ಉಳಿದಿರಲಿಲ್ಲ. ಆಕೆಯ ತಂಗಿ ಇವರ್ಯಾರಿಗೂ ತಿಳಿಯದಂತೆ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾದಳು. ಆತನೊಂದಿಗೆ ಎಲ್ಲರನ್ನೂ ಬಿಟ್ಟು ದೂರವಾದಳು. 

ಅಮ್ಮನ ಅಗಲುವಿಕೆ, ತಂಗಿಯ ಹೃದಯ ಶೂನ್ಯತೆ ಶಾಂತಾಳಲ್ಲಿ ತಲ್ಲಣ ಸೃಷ್ಟಿಸಿದ್ದರೂ, ಆಕೆಗೆ ಕಲಿಕೆ ಮುಂದುವರಿಸುವ ಆಸೆ ಜೀವಂತವಿರಿಸಿದ್ದಳು. ಕಾಲೇಜಿನ ಪ್ರಾಂಶಪಾಲರೊಬ್ಬರು ದೂರ ಶಿಕ್ಷಣದ ಮೂಲಕ ಎಂ.ಎ. ಮಾಡುವ ಸಲಹೆ ನೀಡಿದರು. ಅದಕ್ಕಾಗಿ ಆಕೆಗೆ ಹಣ ಬೇಕಿತ್ತು. ಬೇರೆ ದಾರಿ ಇಲ್ಲದೆ ತಂಗಿಯ ಮೊರೆ ಹೋದಳು. ತಂಗಿ ಆಕೆ ಕಲಿಯುವುದನ್ನು ವಿರೋಧಿಸಿದ್ದಳು. "ಮಕ್ಕಳು ಕಲಿಯುವ ಸಮಯದಲ್ಲಿ ನಿನಗೆ ಕಲಿಯುವ ಹುಚ್ಚೇಕೆ?" ಎಂದು ತಗಾದೆ ಮಾಡಿದಳು. ಆದರೆ ಪುಣ್ಯಾತ್ಮರೊಬ್ಬರು ಆಕೆಗೆ ಎಂ.ಎ. ಸೇರಲು ಸಹಾಯ ಮಾಡಿದರು. ದೂರ ಶಿಕ್ಷಣ ಮೂಲಕ ಸ್ನಾತಕೋತ್ತರ ಕೋರ್ಸ್ ಗೆ ಸೇರಿದಾಗ, ಮನೆಯಲ್ಲಿ ರಂಪಾಟವೇ ನಡೆದಿತ್ತು.‌ ಗಂಡ ಹಾಗೂ ಇಬ್ಬರು ಮಕ್ಕಳ ತೀವ್ರ ವಿರೋಧವಿದ್ದರೂ ಆಕೆ ಎದೆಗುಂದಲಿಲ್ಲ. ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಆಕೆ ತನ್ನ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದಳು. ತಾನು ಕಲಿತು ಏನಾದರೂ ಉದ್ಯೋಗ ಪಡೆದರೆ ಜೀವನಕ್ಕೊಂದು ದಾರಿಯಾಗಬಹುದೆಂದು ಆಕೆ ಭಾವಿಸಿದ್ದಳು. ಸಂಬಂಧಿಕರೆಲ್ಲಾ ಶಾಂತಾಳನ್ನು ಟೀಕಿಸುತ್ತಿದ್ದರು. ಆದರೆ ಅವುಗಳನ್ನು ಲೆಕ್ಕಿಸದ ಶಾಂತಾ ತನ್ನ ಎಂ.ಎ. ಪದವಿಯನ್ನೂ ಪೂರ್ಣಗೊಳಿಸಿದ್ದು ಒಂದು ವಿಸ್ಮಯವೇ ಆಗಿತ್ತು.

ಮಗ ದ್ವಿತೀಯ ಪಿಯುಸಿ ಮುಗಿಸಿ ಯಾವುದಾದರೂ ಕೋರ್ಸ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆಕೆಯಲ್ಲಿ ಹಣವಿರಲಿಲ್ಲ. ಈಗಾಗಲೇ ಪಡೆದ ಸಾಲವನ್ನು ತೀರಿಸುವುದರಲ್ಲೇ ಹೈರಾಣಾಗಿದ್ದಳು. ಮಧ್ಯರಾತ್ರಿ ತನಕ ಬೀಡಿ ಲೇಬಲ್ ಹಾಕಿದರೂ ದಿನದ ಖರ್ಚಿಗೆ ಸಾಲುತ್ತಿರಲಿಲ್ಲ. ಗಂಡನ ದುಡಿಮೆ ಅಷ್ಟಕಷ್ಟೆ ಇತ್ತು. ಬೇರೆ ದಾರಿ ಕಾಣದೆ ಮಗ ಕಾಲೇಜು ತೊರೆದು ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಮಗಳು ಬಿ.ಕಾಂ. ಓದುತ್ತಿದ್ದಳು. 

ಶಾಂತಾಳ ಮನದಾಳದಲ್ಲಿ ಹುದುಗಿದ್ದ ಆಸೆ ಶಿಕ್ಷಕಿಯಾಗುವುದು. ಇದೀಗ ಅವಳು ಸ್ನಾತಕೋತ್ತರ ಪದವೀಧರೆ. ಹಗಲು ಹೊತ್ತು ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದರೆ ರಾತ್ರಿ ಬೀಡಿ ಲೇಬಲ್ ಕೆಲಸ ಮಾಡಬಹುದೆಂದು ಯೋಚಿಸತೊಡಗಿದಳು. ಮನೆಯ ಸಮೀಪದ ಸರಕಾರಿ ಶಾಲೆಯೊಂದರಲ್ಲಿ ಗೌರವ ಶಿಕ್ಷಕಿಯಾಗಿ ಸೇರಿಕೊಂಡಳು. ಶಾಲೆಯಲ್ಲಿ ಸಿಗುತ್ತಿದ್ದ ಅಲ್ಪ ಮೊತ್ತ ಆಕೆಗೆ ಬಹಳನೇ ಉಪಯೋಗಕ್ಕೆ ಬಂದಿತ್ತು. ಶಿಕ್ಷಕಿಯಾಗಿ ಸೇರಿದ್ದರೂ ಮತ್ತೊಂದು ಸಮಸ್ಯೆ ಆಕೆಗಿತ್ತು. ಬಿ.ಎಡ್. ಮಾಡದೆ ಶಿಕ್ಷಕಿಯಾದ ಬಗ್ಗೆ ಇತರ ಶಿಕ್ಷಕಿಯರು ಗೇಲಿ ಮಾಡತೊಡಗಿದರು. ಇದರಿಂದ ಆಕೆ ತೀವ್ರ ನೊಂದಿದ್ದಳು.

ಆಕೆಯಲ್ಲಿ ಬಿ.ಎಡ್. ಮಾಡಲೇ ಬೇಕೆಂಬ ಹಟವಿತ್ತು. ಇಲ್ಲಿಯೇ ಆಕೆಗೆ ವಕ್ಕರಿಸಿದ್ದು ಮತ್ತೊಂದು ದೊಡ್ಡ ಅಘಾತ. ಇದಕ್ಕಿದ್ದಂತೆ ಗಂಡ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ತರಾತುರಿಯಲ್ಲಿ ಸೇರಿಸಿದಾಗ ತಿಳಿದದ್ದು ಆತನಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಸುಮಾರು ಹದಿನೈದು ದಿನಗಳ ಜೀವನ್ಮರಣ ಹೋರಾಟದಲ್ಲಿ ಆತ ಪ್ರಾಣ ಬಿಟ್ಟಿದ್ದ. ಶಾಂತಾ ಗಂಡನನ್ನು ಉಳಿಸುವಂತೆ ನಂಬಿದ ದೇವರಲ್ಲಿ ಅದೆಷ್ಟೋ ಹರಕೆ ಹೊತ್ತಿದ್ದಳು. ಸಾಯುವ ತನಕವೂ ಆತನ ಸೇವೆ ಮಾಡಿದ್ದಳು. ಅದಕ್ಕಾಗಿ ಮತ್ತಷ್ಟು ಸಾಲವನ್ನೂ ಮಾಡಿದ್ದಳು. ಆತನ ವಿಮೆ ಹಣವಿತ್ತು. ಆದರೆ ದುರಾದೃಷ್ಟವೆಂದರೆ ಗಂಡ ಶಾಂತಾಳ ಬದಲು ತನ್ನ ಸ್ವಂತ ತಮ್ಮನನ್ನು ವಿಮಾ ಹಣದ ವಾರೀಸುದಾರನನ್ನಾಗಿ ನಮೂದಿಸಿದ್ದ. ಅಣ್ಣನ ಅಂತ್ಯಕ್ರಿಯೆಗೂ ಬಾರದಿದ್ದ ತಮ್ಮ ಮೆತ್ತಗೆ ಬಂದು ವಿಮೆಯ ಹಣವನ್ನು ಪಡೆದು, ಶಾಂತಾಳಲ್ಲಿ ಒಂದೂ ಮಾತಾಡದೆ ಹೊರಟು ಹೋಗಿದ್ದ. 

ಎಲ್ಲವನ್ನು ಹಾಗೂ ಎಲ್ಲರನ್ನೂ ಕಳೆದುಕೊಂಡ ಶಾಂತಾಳ ನಿರೀಕ್ಷೆ ಆಕೆಯ ಇಬ್ಬರು ಮಕ್ಕಳಾಗಿದ್ದರು. ಮಗ ಅಂಗಡಿಯಲ್ಲಿ ದಿನಗೂಲಿಗೆ ದುಡಿಯುತ್ತಿದ್ದ. ದ್ವಿಚಕ್ರದ ಹುಚ್ಚಿಗೆ ಬಿದ್ದಿದ್ದ ಆತ ಸಾಲ ಮಾಡಿ ಅದನ್ನು ಖರೀದಿಸಿದ್ದ. ಆತನ ದುಡಿಮೆ ಅದರ ಸಾಲ ತೀರಿಸಲಷ್ಟೇ ಸಾಕಾಗುತ್ತಿತ್ತು. ಮಗಳ ಕಾಲೇಜು ಶುಲ್ಕ ಭರಿಸಲು ಶಾಂತಾ ಹೆಣಗಾಡುತ್ತಿದ್ದಳು. ಆಕೆ ಬಿ.ಎಡ್. ಮಾಡಲೇ ಬೇಕೆಂದು ಪಣ ತೊಟ್ಟಳು. ಮಗ ಹಾಗೂ ಮಗಳು ಇಬ್ಬರೂ ಆಕೆಯ ನಿರ್ಧಾರ ಒಪ್ಪಲಿಲ್ಲ. ಶಾಂತಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. ಬಿ.ಎಡ್. ಪ್ರವೇಶ ಪರೀಕ್ಷೆ ಬರೆದು ಸರಕಾರಿ ಕೋಟಾದಡಿ ಪ್ರವೇಶ ಗಿಟ್ಟಸಿ ಕೊಂಡಳು. ಆಕೆಯ ಛಲ ಗೆದ್ದಿತ್ತು. ಮೂವತ್ತೊಂಭತ್ತರ ಹರೆಯದಲ್ಲಿ ಆಕೆ ಬಿ.ಎಡ್.ವಿದ್ಯಾರ್ಥಿನಿಯಾಗಿ ಕಾಲೇಜು ಪ್ರವೇಶಿಸಿದ್ದಳು.

ಆಕೆ ಎಲ್ಲರಂತೆ ನಿರಾಳವಾಗಿ ಬಿ.ಎಡ್. ತರಬೇತಿ ಪಡೆಯಲು ಸಾಧ್ಯವಿರಲಿಲ್ಲ. ಮನೆಯ ಜವಾಬ್ದಾರಿ ಆಕೆಯ ಭುಜದ ಮೇಲಿತ್ತು. ಮನೆಯ ಖರ್ಚು ನಿಭಾಯಿಸಬೇಕಿತ್ತು. ಮಗಳ ವಿದ್ಯಾಭ್ಯಾಸದ ಹೊಣೆ ಆಕೆಯ ಮೇಲಿತ್ತು. ಆದಾಯದ ಯಾವುದೇ ನಿರ್ಧಿಷ್ಟ ಮೂಲಗಳಿಲ್ಲ. ಮನೆಯಲ್ಲಿ ಎರಡು ದನಗಳನ್ನು ಸಾಕಿದ್ದಳು. ಅದನ್ನು ಆರೈಕೆ ಮಾಡಿ ಹಾಲು ಮಾರಿ ಸ್ವಲ್ಪ ಆದಾಯ ಪಡೆಯುತ್ತಿದ್ದಳು. ಅಲ್ಲದೆ ಹಿಂದಿನಿಂದ ರೂಢಿಯಾಗಿದ್ದ ಬೀಡಿ ಲೇಬಲ್ ಆಕೆಗೆ ಮತ್ತೊಂದು ಆಸರೆಯಾಗಿತ್ತು.

ಸಂಜೆ ಮನೆಗೆ ಬಂದೊಡನೆ ಮನೆ ಕೆಲಸ ಮುಗಿಸಬೇಕು. ದನಗಳ ಆರೈಕೆ ಮಾಡಬೇಕು. ಹಾಲು ಕರೆಯಬೇಕು. ಅಡುಗೆ ಮುಗಿಸಿ ಮಕ್ಕಳಿಗೆ ಬಡಿಸಬೇಕು. ಎಲ್ಲಾ ಕೆಲಸ ಮುಗಿಸಿ ಬೀಡಿಗೆ ಲೇಬಲ್ ಹಾಕಬೇಕು. ಇಷ್ಟೆಲ್ಲಾ ಮುಗಿಯುವಾಗ ಪ್ರತಿದಿನ ರಾತ್ರಿ ಎರಡು ಗಂಟೆಯಾಗುತ್ತಿತ್ತು. ಚಾಪೆಗೆ ಒರಗಿ ನಿದ್ದೆ ಮಾಡಲು ಹೋದರೆ ನಾಳೆಯ ಬಗ್ಗೆ ನೂರಾರು ಯೋಚನೆಗಳು. ದಿನದ ನಿದ್ರೆ ಕೇವಲ ಎರಡು ಗಂಟೆಗೆ ಸೀಮಿತವಾಗಿರುತ್ತಿತ್ತು. ಇದರ ಮಧ್ಯೆ ಆಕೆ ಪಾಠ ಯೋಜನೆ ತಯಾರಿಸಬೇಕಿತ್ತು. ಪಾಠ ಟಿಪ್ಪಣಿ ಬರೆಯಬೇಕಿತ್ತು. ಚಾರ್ಟ್, ಮಾದರಿ ಸಿದ್ಧಗೊಳಿಸಬೇಕಿತ್ತು. ಸಾಮಾನ್ಯ ವ್ಯಕ್ತಿಯೊಬ್ಬರಿಂದ ಇದು ಅಸಾಧ್ಯದ ಮಾತೇ ಆಗಿತ್ತು. ಆದರೂ ಆಕೆ ಅಷ್ಟೋ ಇಷ್ಟೋ ಮಾಡಿಕೊಂಡು ತರಾತುರಿಯಿಂದ ಶಾಲೆಗೆ ಓಡಿಬರುತ್ತಿದ್ದಳು. ಅದೆಷ್ಟೇ ಬೇಗ ಹೊರಟರೂ ಶಾಲೆ ತಲುಪುವಾಗ ಹತ್ತು ನಿಮಿಷ ತಡವಾಗುವುದು ಸಹಜವಾಗಿತ್ತು.

ಶಾಂತಾಳು ತನ್ನ ಕಥೆಯನ್ನು ಹೇಳುತ್ತಾ ಹೋಗಿದ್ದಳು. ರವಿ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ. ಆಕೆಯಲ್ಲಿ ಕಣ್ಣೀರು ಬತ್ತಿ ಹೋಗಿದ್ದು ಆತ ಗಮನಿಸಿದ್ದ. ಜೀವನದಲ್ಲಿ ಸುಖವೆಂದರೇನು? ಎಂದೇ ತಿಳಿಯದ ಆಕೆ ಕಳೆದುಕೊಳ್ಳಲು ಏನೂ ಉಳಿದಿರಲಿಲ್ಲ. ನಾಳೆಯಿಂದ ಅವಳಲ್ಲಿ ದಿಢೀರ್ ಬದಲಾವಣೆ ಸಾಧ್ಯವೂ ಇರಲಿಲ್ಲ. ಆದರೆ ಬದುಕಬೇಕೆಂಬ ಆಕೆಯ ಹಟ ಆಕೆಯನ್ನು ಗೆಲ್ಲಿಸುತ್ತದೆ ಎಂದು ರವಿಗೆ ಮನದಟ್ಟಾಯಿತು. ಪ್ರತಿಯೊಬ್ಬರ ವರ್ತನೆಯ ಹಿಂದೆ ಕಥೆಯೊಂದು ಅಡಗಿರುತ್ತದೆ ಎಂದು ರವಿ ತಿಳಿದುಕೊಂಡ. ಶಾಂತಾಳನ್ನು ಸಂತೈಸಿದ. ಆಕೆಯ ಮೇಲೆ ಆತನಿಗೆ ಅತೀವ ಗೌರವ ಮೂಡಿತ್ತು.

(ಮುಗಿಯಿತು)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ