ಬದುಕು ನಾಯಿಪಾಡು

ಬದುಕು ನಾಯಿಪಾಡು

ಕವನ

ಸುತ್ತಲಿನ ವರ್ತಮಾನದಲ್ಲೆಲ್ಲೋ 

ಕೆದಕುತ್ತಾ ಕೂರುತ್ತೇವೆ 

ನೀರಿಕ್ಷೆಗಳೆಂಬ ಎರೆಹುಳುಗಳನ್ನು 

ಬದುಕೆಂಬ ಹಳ್ಳದ ಬದಿಯಲ್ಲಿ..

 

ಸ್ವಾಭಿಮಾನದ ಬಿಸ್ಕತ್ತಿಗೂ 

ಅಂಗಲಾಚುವ ದಯನೀಯತೆಗೆ 

ಕಣ್ಣನ್ನೇ ಬೊಟ್ಟುಮಾಡಿ 

ಮತ್ತೆ ಮತ್ತೆ ಶಪಿಸುತ್ತೇವೆ ನಮ್ಮದೇ ಬದುಕಿಗೆ 

 

ಕನಸಿನ ಬಂಡಿಯ ಗಾಲಿಯ ಬಿಚ್ಚಿ 

ಒಲ್ಲದ ಮನದಲ್ಲಿಯೇ ನಗುತ್ತೇವೆ 

ಮಧ್ಯಮ ವರ್ಗವೆಂಬ ಆಕಾಂಕ್ಷೆಯ ಗಾಳಕ್ಕೆ 

ನಾವೇ ಬಲಿಯಾಗಿದ್ದೇವೆ..

 

ಚಿನ್ನದ ರಸ್ತೆಯಲಿ ನಡೆಯಲು ಬಯಸಿದವನಿಗೆ 

ಕೊಳ್ಳಲೂ ಅಸಾಧ್ಯವಾಗಿಸಿದ್ದು ನಮ್ಮದೇ ನಿರೀಕ್ಷೆ 

ನಕಲಿ ಪದವಿಯ ವರ್ತುಲದ ಮಧ್ಯೆ ನೌಕರಿ ಪಡೆಯುವ 

ಆಸೆ ಹುಟ್ಟಿಸಿದ್ದು ಇದೇ ಮೂರಕ್ಷರದ ನಿರೀಕ್ಷೆ..

 

ತಟ್ಟೆ ಕೊಟ್ಟು ತುತ್ತನಿಡದ ಭಗವಂತನ ಹೆಸರಿನಲ್ಲಿ 

ನಡೆದವೆಷ್ಟು ಕ್ರೌರ್ಯಭರಿತ ಮಾನವೀಯ ಕೊಲೆಗಳು?

ಜಗಲಿ ಹತ್ತಿ ಬೊಬ್ಬೆಯಿಟ್ಟ ಮುತ್ಸದ್ದಿ ಮುಖಗಳಲ್ಲಿ 

ಕಿಂಚಿತ್ತೂ ಭಾವವಿಲ್ಲ ಅವರು ಲಕ್ಷ್ಮೀ ಪುತ್ರರು..

 

ಸ್ವಂತಿಕೆಯಿಲ್ಲದ ಜೀವನಕ್ಕೆ ಶೀರ್ಷಿಕೆ ಯಾವುದು?

ಹಣೆಯಲ್ಲಿ ಗೀಚಿದ ಪದಗಳು ಯಾವುದು?

ಲಯದಲ್ಲಿ ಹಾಡಲು ರಾಗ ಯಾವುದು?

ಬೇಕಾದವರು ಬೇಕಾದ ಹಾಗೆ ಹಾಡಲಿ ಈ ಹಾಡು 

ಇದು ಬದುಕು ನಾಯಿಪಾಡು...

 

-“ಮೌನರಾಗ” ಸನಂ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್