ಬದುಕು ಬದಲಿಸಬಹುದು

ಬದುಕು ಬದಲಿಸಬಹುದು

ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಪುಸ್ತಕದ ಬೆಲೆ
ರೂ.೧೧೦/-

ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.

“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ? ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೆ, “ಅಯ್ಯೋ ಟೈಮೇ ಇಲ್ಲ” ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ?”

"ಸೋಲಿಲ್ಲದ ಮನೆಯ ಸಾಸಿವೆ" ಎಂಬ ೪ನೇ ಅಧ್ಯಾಯದಲ್ಲಿ ಅವರ ಪ್ರಶ್ನೆಗಳಿವು: “…. ಗೆಲ್ಲುವುದು ಹೇಗೆ, ನಾಯಕನಾಗುವುದು ಹೇಗೆ, ಮುನ್ನುಗ್ಗುವುದು ಹೇಗೆ, ಮೇಲೇರುವುದು ಹೇಗೆ? - ಎದೆಹಾಲಿನೊಡನೆ ಅರೆದು ಕುಡಿಸುತ್ತಿದ್ದೇವೆ. ಒಂದು ಕ್ಷಣ ಯೋಚಿಸಿ, ಸೋಲುವ ಬಗ್ಗೆ ತಿಳಿಸಿದ್ದೇವೆಯೆ? ಸೋಲುವುದನ್ನು ಕಲಿಸಬೇಕಿಲ್ಲ, ಆದರೆ ಸೋಲನ್ನು ಎದುರಿಸುವುದನ್ನು? ಸೋಲನ್ನು ಸ್ವೀಕರಿಸುವ ಬಗೆಯನ್ನು ಹೇಳಿಕೊಟ್ಟಿದ್ದೇವೆಯೆ? ಸಾವಿಲ್ಲದ ಮನೆಯ ಸಾಸಿವೆಯಂತೆ, ಸೋಲಿಲ್ಲದ ಮನೆಯ ಸಾಸಿವೆ ಸಿಕ್ಕೀತೆ?”

“ಆಯ್ಕೆಯಿದೆ ನಮ್ಮ ಕೈಯಲ್ಲಿ" ಎಂಬ ಅಧ್ಯಾಯದ ಮುಕ್ತಾಯದ ಮಾತುಗಳಿವು: "ಬದುಕು ನಮ್ಮೆದುರು ನೂರು ದಾರಿಗಳನ್ನು ತೆರೆದಿದೆ. ನಮ್ಮಂಥ ಬಹುಪಾಲು ಮಧ್ಯಮ ವರ್ಗದವರ ಎದುರು ನೂರು ಸಾವಿರ ಆಯ್ಕೆಗಳಿವೆ. ಓದುವ ಆಯ್ಕೆ, ಜರ್ದಾ ಜಗಿಯದೆ ಇರುವ ಆಯ್ಕೆ, “ಪ್ಲೇವಿನ್" ಚಟಕ್ಕೆ ಬೀಳದ ಆಯ್ಕೆ, ವರದಕ್ಷಿಣೆ ಇಲ್ಲದೆ ಮದುವೆಯಾಗುವ ಆಯ್ಕೆ, ಅಂತಹ ಪುಣ್ಯಾತ್ಮ ಸಿಗದಿದ್ದರೆ ಮದುವೆ ಆಗದೆ ಇರುವ ಆಯ್ಕೆ … ಬದುಕು ನಮ್ಮೆದುರು ನೂರು ಅವಕಾಶಗಳನ್ನು ಇಟ್ಟಿದೆ, ಬಳಸಿಕೊಳ್ಳಬೇಕಷ್ಟೆ. ನೂರು ಹಾದಿಯನ್ನು ಹಾಸಿದೆ, ಎದ್ದು ನಡೆಯಬೇಕಷ್ಟೆ.”

"ಕಣ್ಣು ತೆರೆದಾಗಲೇ ಬೆಳಗು" ಎಂಬ ಅಧ್ಯಾಯದಲ್ಲಿ, ಲಾಲ್‌ಬಾಗಿನಲ್ಲಿ ಆ ವರೆಗೆ ಕಾಣಲಾಗದಿದ್ದ ಹಲವಾರು ಹಕ್ಕಿಗಳನ್ನು ಪಕ್ಷಿವೀಕ್ಷಕನೊಬ್ಬನ ಮಾರ್ಗದರ್ಶನದಲ್ಲಿ ಕಾಣಲು ಸಾಧ್ಯವಾದದ್ದನ್ನು ವಿವರಿಸುತ್ತಾರೆ. ಅಧ್ಯಾಯದ ಕೊನೆಯಲ್ಲಿ, ಈ ಅನುಭವದ ಎಳೆಯಿಂದ ನಮ್ಮನ್ನು ಮೇಲಕ್ಕೆತ್ತಿ, ನಮ್ಮ ಪ್ರಜ್ನೆಯನ್ನು ಬಡಿದೆಬ್ಬಿಸುತ್ತಾರೆ ಹೀಗೆ: “ಕಣ್ಣಿದ್ದೂ ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ, ಮತಿ ಇದ್ದೂ ಶತದಡ್ಡರಾಗಿ ದಿನಗಳು ಕಳೆದು ಹೋಗಿರುತ್ತವೆ. ನಾವು ಕಣ್ಣು ತೆರೆದಾಗ, ಹೊಸದೇ ಜಗತ್ತು ಕಾಣುತ್ತದೆ, ಇಲ್ಲೇ ಇದ್ದ ಜಗತ್ತು, ನಾವು "ಕಾಣದಿದ್ದ" ಜಗತ್ತು. ಪ್ರಕೃತಿಯ ಎಷ್ಟೆಲ್ಲ ಸೌಂದರ್ಯಕ್ಕೆ ಕುರುಡಾದಂತೆ, ನಮ್ಮ ಆಪ್ತರ, ಸ್ನೇಹಿತರ, ಅಪ್ಪಟ ಅಪರಿಚಿತರ ಹೃದಯ ಸೌಂದರ್ಯಕ್ಕೂ ಕುರುಡಾಗಿರುತ್ತೇವೆ …"

ಎಲ್ಲರನ್ನೂ ಎಲ್ಲವನ್ನೂ ದೂರುವವರ ಬಗ್ಗೆ “ಏನಾದರೂ ಮಾಡಿ, ದೂರಬೇಡಿ..." ಅಧ್ಯಾಯದಲ್ಲಿ ಅವರು ದಾಖಲಿಸಿದ ವಾಸ್ತವ: “ನಮ್ಮಲ್ಲಿ ಕೆಲವರಿಗೆ ದೂರುವುದು ಒಂದು ಹವ್ಯಾಸವಾಗಿರುತ್ತದೆ, ಮತ್ತೆ ಕೆಲವರಿಗೆ ದೂರುವುದೇ ಕಸುಬಾಗುತ್ತದೆ. “ಅದು ಸರಿ ಇಲ್ಲ, ಇದು ನೆಟ್ಟಗಿಲ್ಲ …" ದೂರಿನ ಪಟ್ಟಿ ಹನುಮನ ಬಾಲವಾಗುತ್ತದೆ. ಕ್ರಾಂತಿ ಆಗಬೇಕೆನ್ನುತ್ತೇವೆ, ಆದರೆ ಅದನ್ನು ಮತ್ಯಾರಾದರೂ ಮಾಡಬೇಕೆಂದು ಬಯಸುತ್ತೇವೆ …"

ನಮ್ಮ ದೇಶದ ಎಲ್ಲ ಸವಲತ್ತುಗಳನ್ನೂ ಬಳಸಿಕೊಂಡು, ಇಲ್ಲೇ ವಿದ್ಯಾಭ್ಯಾಸ ಪಡೆದು, ಅನಂತರ ವಿದೇಶಕ್ಕೆ ಹೋಗಿ, ಅಲ್ಲಿ ಒಂದೆರಡು ವರುಷ ದುಡಿದು, ಕೈತುಂಬ ಹಣ ಗಳಿಸಿ, ಬಳಿಕ ಭಾರತವನ್ನೇ ತೆಗಳಲು ಶುರು ಮಾಡುವ ಭಾರತೀಯ ಮೂಲದ ವ್ಯಕ್ತಿಗಳ ಬಗೆಗೆ ತಮ್ಮ ಆಕ್ರೋಶವನ್ನು “ಭಾರತೀಯರೆಂಬ ಅಭಿಮಾನವಿರಲಿ…" ಎಂಬ ಅಧ್ಯಾಯದಲ್ಲಿ ಮತ್ತು ಇನ್ನೂ ಕೆಲವು ಅಧ್ಯಾಯಗಳಲ್ಲಿ ವ್ಯಕ್ತಪಡಿಸಿದ ದಿಟ್ಟೆ ನೇಮಿಚಂದ್ರ ಅವರು. ಈ ಅಧ್ಯಾಯದ ಕೊನೆಯಲ್ಲಿ ಅವರು ಬರೆದಿರುವುದು ಹೀಗೆ: “ಇಲ್ಲಿ (ಅಮೆರಿಕದಲ್ಲಿ) ನೋಡಿ, ಎಲ್ಲ ಎಷ್ಟು ಸ್ವಚ್ಛವಾಗಿದೆ. ಎಂಥ ಒಳ್ಳೆಯ ವ್ಯವಸ್ಥೆ ಇದೆ. ಇದನ್ನೆಲ್ಲ ಬಿಟ್ಟು ಭಾರತಕ್ಕೆ ಯಾರು ಬರುತ್ತಾರೆ? ನಾವು ಬಲು ಸೋಮಾರಿಗಳು, ಇವರು ಬಲು ದಕ್ಷರು …" ಎಂದು ಆರಂಭಿಸಿದ ಭಾರತೀಯರೊಬ್ಬರೊಡನೆ ವಾದಕ್ಕಿಳಿದಿದ್ದೆ. "ನಮ್ಮ ಭಾರತದ ಜನಸಂಖ್ಯೆ ಅಮೆರಿಕದ ಆರರಷ್ಟಿದೆ. ಭಾರತದ ಅಳತೆ ಅಮೆರಿಕದ ಒಂದನೇ ಆರೂ ಇಲ್ಲ. ಅಲ್ಲಿನ ಸಮಸ್ಯೆಗಳನ್ನು ಇಲ್ಲಿಗೆ ಹೋಲಿಸುವುದೂ ಅಸಂಬದ್ಧ …." ಎಂದು ದಬಾಯಿಸಿದ್ದೆ. ಅದೇ ಮುಕ್ತಾಯ ಪಾರಾದಲ್ಲಿ ಮುಂದುವರಿದು ಅವರು ಬರೆಯುತ್ತಾರೆ, “... ನಮ್ಮ ನೆಲದ ಬಗ್ಗೆ ಒಂದಿಷ್ಟು ಅಭಿಮಾನವಿರಲಿ. ನಮ್ಮಲ್ಲಿಯ ಒಳ್ಳೆಯ ಗುಣಗಳನ್ನು ಗುರುತಿಸುವ ಕಣ್ಣಿರಲಿ. ನಮ್ಮಲ್ಲಿರುವ ಮಿತಿಗಳ ಬಗ್ಗೆ ಗಮನವಿರಲಿ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯರೆಂಬ ತುಂಬು ಅಭಿಮಾನವಿರಲಿ.”

ಇದು “ಉದಯವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾದ ನೇಮಿಚಂದ್ರ ಅವರ ಅಂಕಣ ಬರಹಗಳ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ, “ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವುನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸ ಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಯದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

ಈ ಅಪರೂಪದ ಪುಸ್ತಕದ ವಿವಿಧ ಅಧ್ಯಾಯಗಳಲ್ಲಿ ಅನೇಕ ಅಪರೂಪದ ಪುಸ್ತಕಗಳನ್ನು ನೇಮಿಚಂದ್ರ ಪ್ರಸ್ತಾಪಿಸಿದ್ದಾರೆ. ಅವು: ರಿಚರ್ಡ್ ಬ್ಯಾಕ್ ಬರೆದ ಜೋನಾಥನ್ ಲಿವಿಂಗ್‌ಸ್ಟೋನ್ ಸೀಗಲ್; ರೇಣುಕಾ ಖಾಂಡೇಕರ್ ಬರೆದ ಮ್ಯಾಕ್ಸಿಮೈಸ್ ಯುವರ್ ಲೈಫ್; ನಾರ್ಮನ್ ಕಸಿನ್ಸ್ ಬರೆದ್ ಅನಾಟಮಿ ಆಫ್ ಇಲ್ ನೆಸ್; ಹ್ಯಾನ್ಸ್ ಸೆಲ್ಯೆ ಬರೆದ ದ ಸ್ಟ್ರೆಸ್ ಆಫ್ ಲೈಫ್; ಡಾ. ಸ್ಪೆನ್ಸರ್ ಜಾನ್ಸನ್ ಬರೆದ ಹೂ ಮೂವುಡ್ ಮೈ ಚೀಸ್; ಅನುಪ್ ಕುಮಾರ್ ಬರೆದ ಸ್ಮೈಲ್ಸ್ ಆಂಡ್ ಟಿಯರ್ಸ್ ಮತ್ತು ಎ.ಸಿ. ಡೇನಿಯಲ್ಸ್ ಬರೆದ ಬ್ರಿಂಗಿಂಗ್ ಔಟ್ ದ ಬೆಸ್ಟ್ ಇನ್ ಪೀಪಲ್. ಈ ಪುಸ್ತಕಗಳ ಬಗ್ಗೆ ನೇಮಿಚಂದ್ರ ಅವರ ಮಾತುಗಳು ಅವನ್ನು ಓದುವಂತೆ ನಮ್ಮನ್ನು ಪ್ರೇರೇಪಿಸುತ್ತವೆ.

ಹಲವಾರು ಕತೆಗಳನ್ನು, ವ್ಯಕ್ತಿಚಿತ್ರಗಳನ್ನು, ಯೆಹೂದಿಗಳ ಜನಾಂಗೀಯ ಹತ್ಯೆ ಬಗ್ಗೆ “ಯಾದ್ ವಶೇಮ್" ಕಾದಂಬರಿಯನ್ನು, "ಪೆರುವಿನ ಪವಿತ್ರ ಕಣಿವೆಯಲ್ಲಿ" ಎಂಬ ವಿಶಿಷ್ಠ ಪ್ರವಾಸ ಕಥನವನ್ನು ಬರೆದ ಹೆಸರಾಂತ ಲೇಖಕಿ ನೇಮಿಚಂದ್ರ. ಅವರ ಜೀವನ್ಮುಖಿ ಅಂಕಣ ಬರಹಗಳ ಇತರ ಮೂರು ಸಂಕಲನಗಳು: “ಸೋಲೆಂಬುದು ಅಲ್ಪವಿರಾಮ”, "ಸಾವೇ ಬರುವುದಿದ್ದರೆ ನಾಳೆ ಬಾ” ಮತ್ತು “ಸಂತಸ: ನನ್ನೆದೆಯ ಹಾಡುಹಕ್ಕಿ". ತಮ್ಮೆಲ್ಲ ಬರಹಗಳ ಮೂಲಕ ನೇಮಿಚಂದ್ರ, ಈ ಪುಸ್ತಕದಲ್ಲಿ ತಮ್ಮ ಬಗ್ಗೆ ತಾವೇ ಬರೆದ ಮಾತೊಂದನ್ನು ಸಾಧಿಸಿ ತೋರಿಸಿದ್ದಾರೆ.

ಅದುವೇ "ಜಗತ್ತು ಬದಲಾಗಬಹುದು” ಎಂಬ ಐದನೆಯ ಅಧ್ಯಾಯದ ಕೊನೆಯಲ್ಲಿ ನೇಮಿಚಂದ್ರ ಅವರು ತನ್ನ ಬಗ್ಗೆಯೇ ಬರೆದ ಮಾತು: "ನನ್ನೊಬ್ಬಳಿಂದೇನಾಗುತ್ತದೆ?" ಪ್ರಶ್ನೆ ಕೇಳಿ ಬಂದಾಗೆಲ್ಲ ನಾನು ಉತ್ತರಿಸುತ್ತೇನೆ - “ನಿನ್ನೊಬ್ಬಳಿಂದ ಜಗತ್ತು ಬದಲಾಗಬಹುದು. ಅದು ನಿನ್ನ ಮನೆಯಷ್ಟು ಪುಟ್ಟ ಜಗತ್ತಿರಬಹುದು, ನಿನ್ನ ಸ್ನೇಹವೃಂದ ಹಿಗ್ಗಿ ಹಬ್ಬಿದ್ದಾಗಿರಬಹುದು. ಯಾರಿಗೆ ಗೊತ್ತು, ಅದರಾಚಿನ ಜಗತ್ತನ್ನೂ ಆವರಿಸಬಹುದು!” ಆದ್ದರಿಂದಲೇ, ತಾವು ಬರೆದದ್ದನ್ನು ಪಾಲಿಸದ ಹಲವಾರು ಜನರಿಂದ ನೇಮಿಚಂದ್ರ ಭಿನ್ನವಾಗಿ ನಿಲ್ಲುತ್ತಾರೆ.