ಬದುಕು ಬರಹ ಬವಣೆ
ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಎಸ್. ನಿತ್ಯಾನಂದ ಪಡ್ರೆ. ಇವರು ತಮ್ಮ ಬರಹದಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು ಸಾಲುಗಳು…
ಪ. ರಾಮಕೃಷ್ಣ ಶಾಸ್ತ್ರಿಯವರ ಹೆಸರು ಕನ್ನಡ ಪತ್ರಿಕಾ ರಂಗದ ಓದುಗರಿಗೆಲ್ಲ ಚಿರಪರಿಚಿತ. ಕಳೆದ ಹಲವು ವರ್ಷಗಳಿಂದ ಕನ್ನಡದ ವಿವಿಧ ದೈನಿಕಗಳಿಗೆ, ವಾರಪತ್ರಿಕೆಗಳಿಗೆ, ಮಾಸ ಪತ್ರಿಕೆಗಳಿಗೆ, ಸಾಂದರ್ಭಿಕ ಪುರವಣಿಗಳಿಗೆ ಮತ್ತು ವಿಶೇಷಾಂಕಗಳಿಗೆ ನಿರಾಯಾಸವಾಗಿ ಲೇಖನಗಳನ್ನು ಬರೆಯುತ್ತಾ ಬಂದವರು ಅವರು. ವಿಷಯ ಯಾವುದೇ ಇರಲಿ ಅದನ್ನು ಬೇಕಾದ ಗಾತ್ರಕ್ಕೆ ಹೊಂದಿಸಿ ಬರೆಯುವ ವಿಶಿಷ್ಟ ಗುಣ ಅವರಿಗೆ ಸಿದ್ದಿಸಿದೆ. ಅವರ ಬರವಣಿಗೆಯ ಶೈಲಿ ಸರಳ -ಸುಲಲಿತ.
ನಾನು ನನ್ನ ವಿದ್ಯಾರ್ಥಿ ದೆಸೆಯಲ್ಲೇ, ಶಾಸ್ತ್ರಿಯವರು ವಿವಿಧ ಪತ್ರಿಕೆಗಳಲ್ಲಿ ಬರೆದ ವಿಭಿನ್ನ ಪ್ರಕಾರದ ಲೇಖನಗಳನ್ನು ಓದಿ ಸಂತಸ ಪಟ್ಟಿದ್ದೆ. ಒಬ್ಬ ಲೇಖಕ ನಿರಂತರವಾಗಿ ಇಷ್ಟೊಂದು ವೈವಿಧ್ಯಮಯ ಲೇಖನಗಳನ್ನು ದಣಿವರಿಯದೆ ಬರೆಯಲು ಸಾಧ್ಯವೇ ಎಂದೂ ಅಚ್ಚರಿಪಟ್ಟಿದ್ದೆ. ನಾನು ಉದಯವಾಣಿ ಸಂಪಾದಕೀಯ ವಿಭಾಗ ಸೇರಿದ ಆರಂಭದ ದಿನಗಳಲ್ಲಿ ಬನ್ನಂಜೆ ರಾಮಾಚಾರ್ಯರು ಸಂಪಾದಕೀಯ ಪುಟ ನೋಡಿಕೊಳ್ಳುತ್ತಿದ್ದರು. ಬನ್ನಂಜೆ ಗೋವಿಂದಾಚಾರ್ಯರು ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿದ್ದರು. ಆ ದಿನಗಳಲ್ಲಿ ಉದಯವಾಣಿಯ ಸುದ್ದಿ ಸಂಪಾದಕರಾಗಿದ್ದ ಎನ್. ಗುರುರಾಜರು ಇವರಿಬ್ಬರಿಗೂ ಸಹಾಯಕನಾಗಿ ನನ್ನನ್ನು ನಿಯೋಜಿಸಿದರು. ಆಗ ಪತ್ರಿಕೆಯಲ್ಲಿ ಪ್ರಕಟಣೆ ಬಯಸಿ ಬಂದ ಎಲ್ಲ ಲೇಖನಗಳನ್ನು ಓದುವ ಕೆಲಸ ನನ್ನದಾಯಿತು. ಆಗೀಗ ವಿಶೇಷ ಸಂಚಿಕೆಗಳನ್ನು, ಪುರವಣಿಗಳನ್ನು ಹೊರತರಬೇಕಾಗಿತ್ತು. ಅದರ ಜವಾಬ್ದಾರಿ ದೊರೆತಾಗ ಲೇಖಕರನ್ನು ಸಂಪರ್ಕಿಸಿ ಲೇಖನಗಳನ್ನು ಬರೆದು ಕೊಡಿರೆಂದು ವಿನಂತಿಸುವ ಸಂದರ್ಭವೂ ಬಂತು. ಹೀಗಾಗಿ ಅನೇಕ ಮಂದಿ ಹಿರಿ - ಕಿರಿಯ ಲೇಖಕರ ಮತ್ತು ಉದಯೋನ್ಮುಖರ ಪರಿಚಯವಾಯಿತು. ಬಲು ಬೇಗ ಲೇಖನ ಬರೆದು ಕೊಡಬಲ್ಲ ಅನೇಕ ಮಂದಿ ಲೇಖಕರ ಪಟ್ಟಿಯೇ ನಮ್ಮ ಬಳಿ ಇತ್ತು. ಅಂಥವರ ಪಂಕ್ತಿಯಲ್ಲಿ ಗಮನಾರ್ಹ ಹೆಸರು ಪ. ರಾಮಕೃಷ್ಣ ಶಾಸ್ತ್ರಿ ಅವರದ್ದು. ಉದಯವಾಣಿಯ ಅನೇಕ ಅಂಕಣಗಳಿಗೆ ಶಾಸ್ತ್ರಿಯವರು ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಅಗತ್ಯ ಬಿದ್ದಾಗ ಇಂಥ ವಿಷಯದ ಮೇಲೆ ಬರೆದು ಕೊಡಿ ಎಂದರೆ ಸಾಕು ಮರುದಿನವೇ ಲೇಖನ ನಮ್ಮ ಕಾರ್ಯಾಲಯದ ಸಂಪಾದಕರ ಮೇಜಿನ ಮೇಲಿರುತ್ತಿತ್ತು. ಕೆಲವೊಮ್ಮೆ ಲೇಖನವನ್ನು ಬರೆದು ಅವರೇ ತಮ್ಮ ಊರಿನಿಂದ ಮಣಿಪಾಲದ ಕಡೆ ಬರುವ ಬಸ್ ಚಾಲಕರ ಕೈಯಲ್ಲಿ ಕಳುಹಿಸಿಕೊಟ್ಟದ್ದೂ ಉಂಟು. ಒಮ್ಮೆ ನಾನು ಬನ್ನಂಜೆಯವರ ಬಳಿ ಮಾತನಾಡುತ್ತಾ ಶಾಸ್ತ್ರಿಯವರಂತೆ ಬರೆಯುವ ಇಬ್ಬರು ಬರೆಹಗಾರರಿದ್ದರೆ ಒಂದು ಪತ್ರಿಕೆ ಮಾಡಬಹುದು ಸರ್ ಎಂದಿದ್ದೆ. ಶಾಸ್ತ್ರಿಯವರ ಬರವಣಿಗೆಯನ್ನಷ್ಟೇ ಕಂಡಿದ್ದ ನಾನು ಅವರನ್ನು ಅನೇಕ ವರ್ಷಗಳವರೆಗೆ ನೋಡಿಯೇ ಇರಲಿಲ್ಲ. ಒಮ್ಮೆ ಸನ್ನಿತ್ರ ಪ್ರಶಾಂತ ಬಳಂಜರ ಬಳಿ ಈ ಬಗ್ಗೆ ಹೇಳಿಕೊಂಡಾಗ ಅವರು ಹೇಳಿದ್ದು ಇಷ್ಟೆ - ನಿಮಗೆ ಅವರಂಥ ನಿಗರ್ವಿ ಬರೆಹಗಾರ ಇವತ್ತಿನ ದಿನಗಳಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ ಎಂದು. ಅವರ ಸರಳತೆ ಮತ್ತು ಸಜ್ಜನಿಕೆಗೆ ಯಾರೂ ತಲೆ ಬಾಗಲೇ ಬೇಕು.
ಶಾಸ್ತ್ರಿಯವರಿಗೆ ಈಗ ಸಪ್ತತಿ, ಅವರ ಬರವಣಿಗೆಯ ಕೌಶಲಕ್ಕೆ ಷಷ್ಟ್ಯಬ್ದ. ಅಂದರೆ ತನ್ನ ಹನ್ನೊಂದನೆಯ ವಯಸ್ಸಿಗೆ ಶಾಲೆಗೆ ಬೆನ್ನು ಹಾಕಿ ಪೆನ್ನು ಕೈಗೆತ್ತಿಕೊಂಡು ಬರವಣಿಗೆ ಆರಂಭಿಸಿದವರು ಅವರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ನೆನಪಾದಾಗೆಲ್ಲ ನನಗೆ -ಶಾಸ್ತ್ರಿಯವರು ಬರೆಯದ ವಿಷಯವಿಲ್ಲ - ಎನ್ನುವುದು ಗಾದೆಯ ಉತ್ತರಾರ್ಧದಂತೆ ಭಾಸವಾಗುತ್ತದೆ. ಪ. ರಾಮಕೃಷ್ಣ ಶಾಸ್ತ್ರಿಯವರ ಬದುಕು ಬರೆಹ - ಬವಣೆ ಎನ್ನುವ ಹೊತ್ತಗೆಯಲ್ಲಿ ; ಶಾಸ್ತ್ರಿಯವರ ಮಗ ಲಕ್ಷ್ಮೀ ಮಚ್ಚಿನ ಅವರು ತನ್ನ ಅಪ್ಪ ಸಾಗಿ ಬಂದ ಹಾದಿಯ ಸಿಂಹಾವಲೋಕನ ಮಾಡಿದ್ದಾರೆ. ಒಂದರ್ಥದಲ್ಲಿ ಇದು ಶಾಸ್ತ್ರಿಯವರ ಆತ್ಮಕತೆ. ಸಾದರ ಪಡಿಸಿದ ರೀತಿ ಮಾತ್ರ ತುಸು ಭಿನ್ನ. ಈ ಕೃತಿಯಲ್ಲಿ ಶಾಸ್ತ್ರಿಯವರ ಬದುಕಿನ ವೈಯಕ್ತಿಕ ಮುಖ, ಕೌಟುಂಬಿಕ ಮುಖ, ಔದ್ಯೋಗಿಕ ಮುಖ ಮತ್ತು ಸಾಮಾಜಿಕ ಮುಖಗಳನ್ನು ಕಾಣಬಹುದು. ಮೊದಲ ಬಾರಿ ಶಾಸ್ತ್ರಿಯವರನ್ನು ನೋಡಿದವರಿಗೆ ಅವರೊಬ್ಬ ಯಾವುದೋ ಶಾಲೆಯ ನಿವೃತ್ತ ಅಧ್ಯಾಪಕರಿರಬೇಕು ಎಂದು ಅನುಮಾನ ಹುಟ್ಟಿದರೂ ಆಶ್ಚರ್ಯವಿಲ್ಲ.. ಇನ್ನೂ ಕೆಲವರಿಗೆ ಕೃಷಿರಂಗವನ್ನೇ ನೆಚ್ಚಿ ಬದುಕಿಗಾಗಿ ಹರಸಾಹಸ ಪಡುತ್ತಿರುವ ಅಸಹಾಯಕ ಕೃಷಿಕನಂತೆಯೂ ಕಾಣಬಹುದು. ಶಾಲೆಗೆ ಹೋಗಿ ಹೆಚ್ಚು ಕಲಿಯುವ ಅವಕಾಶ ಪ್ರಾಪ್ತವಾಗದಿದ್ದರೂ ಎಷ್ಟೋ ಮಂದಿ ಕಲಿತವರಿಗಿಂತ ಸಾಧನೆಯ ಹಾದಿಯಲ್ಲಿ ಬಹಳಷ್ಟು ಮುಂದೆ ಹೋದವರು ಶಾಸ್ತ್ರಿಗಳು ಖರ್ಚಿಗೆ ಬೇಕಾದಷ್ಟು ಹಣ ಗಳಿಸಬೇಕು ಎಂಬ ಒಂದೇ ಉದ್ದೇಶದಿಂದ ಬಾಲ್ಯದಲ್ಲಿ ಬರವಣಿಗೆ ಆರಂಭಿಸಿದ ಶಾಸ್ತ್ರಿಗಳು ಬಳಿಕ ಬರೆದೇ ಬದುಕಬಲ್ಲೆ ಎನ್ನುವ ಅಚಲ ನಿರ್ಧಾರ ತಾಳಿದವರು. ಈ ನಿರ್ಧಾರ ಎಂದೂ ಅವರ ಕೈ ಬಿಟ್ಟಿಲ್ಲ. ಇದಕ್ಕೆ ಅವರಲ್ಲಿರುವ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆ ಪೂರಕವಾಯಿತು ಪ್ರೇರಕವಾಯಿತು.
ಈ ಕೃತಿಯಲ್ಲಿ ಬಾಲ್ಯದಲ್ಲಿ ಪಟ್ಟ ಪಾಡು, ಬಡತನದ ಕಷ್ಟ, ಪರಿಸರದ ಪ್ರಭಾವ ಎಲ್ಲವನ್ನೂ ತನ್ನದೇ ಮಾತುಗಳಲ್ಲಿ ದಾಖಲಿಸಿದ್ದಾರೆ. ಮನೆ ಮಂದಿಯಲ್ಲಿದ್ದ ಸಾಹಿತ್ಯಪ್ರೀತಿ ಮತ್ತು ಸಾಂಸ್ಕೃತಿಕ ಪ್ರೀತಿಯ ಪರಂಪರೆ ಶಾಸ್ತ್ರಿಯವರ ಜೀವನದಲ್ಲೂ ಗುಳು ಗುಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೌಟುಂಬಿಕ ಮುಖದಲ್ಲಿ ವಿಶ್ಲೇಷಿಸುವುದಾದರೆ ಈ ಕೃತಿಯಲ್ಲಿ ಕೂಡು ಕುಟುಂಬದ ನೋವು ನಲಿವುಗಳ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಊಟಕ್ಕೆ ಪರದಾಡಿದ ದಿನಗಳಲ್ಲಿ ಹಸನ್ ಬ್ಯಾರಿ ಎರಡು ಸೇರು ಅಕ್ಕಿಯನ್ನು ಮನೆಗೆ ತಂದು ಕೊಟ್ಟು ಹೋದ ಪ್ರಸಂಗ ಜಾತಿಧರ್ಮಗಳ ಎಲ್ಲೆಯನ್ನೂ ಮೀರಿ ಮನುಷ್ಯತ್ವಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಔದ್ಯೋಗಿಕ ಮುಖದಿಂದ ನೋಡುವುದಾದರೆ ಶಾಸ್ತ್ರಿಯವರು ಪ್ರಸಿದ್ಧ ಬರೆಹಗಾರರಷ್ಟೇ ಅಲ್ಲ ಉತ್ತಮ ಕೃಷಿಕರೂ ಕೂಡ. ಅರವತ್ತು ವರ್ಷಗಳ ಸಾಹಿತ್ಯ ಕೃಷಿಯಲ್ಲಿ ಅವರಿಗೆ ಉತ್ತಮ ಬೆಳೆ ಸಿಕ್ಕಿದೆ. ನೂರು ಪ್ರಕಟಿತ ಪುಸ್ತಕಗಳು ಮತ್ತು ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಪ್ರಕಟಿತ ಲೇಖನಗಳನ್ನು ಅವರು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಬರೆಹಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆಗಳೇ ಇಲ್ಲ ಎನ್ನಬೇಕು. ಅವರ ಬರವಣಿಗೆಯ ಮೇಲೆ ಎಂಫಿಲ್ ಆಗಿದೆ. ಪಿಎಚ್.ಡಿ. ಕೂಡ ಮಾಡುವಷ್ಟರ ಮಟ್ಟಿಗೆ ಅದು ಬೆಳೆದು ನಿಂತಿದೆ. ಅನೇಕ ಸಲ ಒಂದೇ ಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಎರಡು ಮೂರು ಲೇಖನಗಳು ಪ್ರಕಟವಾದದ್ದೂ ಉಂಟು. ಪ್ರಕಟಿತ ಲೇಖನಗಳಿಂದಾದ ನೋವು ನಲಿವುಗಳ ಬಗ್ಗೆ, ಕೆಲವೊಂದು ಪತ್ರಿಕೆಗಳ ಸಂಪಾದಕರ ವ್ಯಾವಹಾರಿಕ ಶೈಲಿಯ ಬಗ್ಗೆ, ಕಾವ್ಯನಾಮದ ಬಗ್ಗೆ ತನಗೆ ಅನಿಸಿದ್ದನ್ನು ಶಾಸ್ತ್ರಿಯವರು ಮನದಾಳದಿಂದ ಕಡ್ಡಿ ಮುರಿದಂತೆ ಹೇಳಿದ್ದಾರೆ.
ತನಗೆ ಇಷ್ಟೆಲ್ಲ ಬರವಣಿಗೆ ಸಾಧ್ಯವಾದದ್ದು ಅನೇಕರ ಪ್ರೋತ್ಸಾಹದಿಂದ ಎನ್ನುವುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದಕ್ಕೂ ಅವರೆಂದೂ ಅನುಮಾನಿಸುವುದಿಲ್ಲ. ಒಬ್ಬ ಕೃಷಿಕನಾಗಿಯೂ ಅವರು ಅನೇಕ ಪ್ರಯೋಗಗಳನ್ನು ನಡೆಸಿದವರು. ಈ ಕಾರಣದಿಂದಲೇ ಪತ್ರಿಕೆಗಳ ಕೃಷಿ ಪುಟಗಳಿಗೆ ಬರೆಯುವುದು ಅವರಿಗೆ ಹೆಚ್ಚು ಸುಲಭವಾಯಿತೆನ್ನಬೇಕು. ಇದಲ್ಲದೆ ಬೇರೆ ಬೇರೆ ಕಡೆ ಕೃಷಿ ಪ್ರಯೋಗಗಳನ್ನು ನಡೆಸಿ ಯಶಸ್ಸು ಪಡೆದವರನ್ನು ಕೂಡ ಸಂದರ್ಶಿಸಿ ಲೇಖನಗಳನ್ನು ಬರೆದಿದ್ದಾರೆ. ಸಾಮಾಜಿಕ ಮುಖದಲ್ಲಿ ನೋಡುವುದಾದರೆ ಶಾಸ್ತ್ರಿಗಳು ಸಹಕಾರ ಕ್ಷೇತ್ರದ ಒಳ ಹೊರಗುಗಳನ್ನು ಅಂಗೈ ರೇಖೆಗಳಷ್ಟೇ ಸ್ಪಷ್ಟವಾಗಿ ತಿಳಿದುಕೊಂಡವರು.
ಸಾಹಿತ್ಯ ಪ್ರಪಂಚ ನನಗೆ ತುಂಬ ತೃಪ್ತಿ ನೀಡಿದೆ. ನೆಮ್ಮದಿಯ ಬದುಕು ಕೊಟ್ಟಿದೆ. ಸಣ್ಣ ಎಳೆಯನ್ನೂ ಕತೆಯಾಗಿಸುವ ಕೌಶಲ ಕರುಣಿಸಿದೆ. ದೇವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಶಾಲೆಯ ವಿದ್ಯಾಭ್ಯಾಸ ಕಡಿಮೆ ಇದ್ದರೂ ಬೇರೆಯವರು ನಿಬ್ಬೆರಗಾಗುವಷ್ಟು ಹೆಸರು ಗಳಿಸಿದ್ದೇನೆ ಎನ್ನುವ ಸಂತೋಷವೂ ಇದೆ ಎನ್ನುವ ಅಂತರಾಳದ ಮಾತುಗಳು ಅವರ ಒಟ್ಟು ಬದುಕನ್ನು ಬಿಂಬಿಸುತ್ತವೆ. ಅವರ ಮುಂದಿನ ದಿನಗಳ ಬದುಕು ಎನ್ನುವುದೇ ಹಾರೈಕೆ. ಬರವಣಿಗೆ ಇನ್ನಷ್ಟು ಸಮೃದ್ಧವಾಗಿ ಸಾಗುತ್ತಿರಲಿ ಎನ್ನುವುದೇ ಹಾರೈಕೆ.” ಸುಮಾರು ೧೭೬ ಪುಟಗಳ ಈ ಕೃತಿಯು ‘ಪರಾಶ' ಇವರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಒದಗಿಸಿ ನಮಗೂ ಸಾಹಿತ್ಯ ಕೃಷಿ ಮಾಡುವ ಪ್ರೇರಣೆ ಒದಗಿಸುತ್ತದೆ.