ಬದುಕು ಸುಂದರವಾಗಲಿ…

ಬದುಕು ಸುಂದರವಾಗಲಿ…

ಕವನ

ಕರುಣೆಯದು ಬಾರದೆಯೆ ಗೆಳೆಯ ನೀ ಹೊರಟಿರಿವೆ

ವಿರಹದೊಳು ದಹಿಸಿ ಹೋಗಿದೆಯೊ ಮನವಿಂದು

ಬರಸೆಳೆದುಯೆನ್ನ ಸಂತೈಸೊ

 

ಜನಮನದಿ ಹೆಸರಿಹುದು ಗೆಳೆತನದ ಸವಿಯಿಹುದು

ಗುಣವಿಹುದು ತನುವ ಬನದೊಳಗೆ ಹೂವಾಗಿ

ಘನಮಹಿಮಯೆನ್ನ ಜೊತೆಯಾಗು

 

ಚೆಂದದಲಿ ಚೆಲುವಿಹುದು ಬಂಧನದಿ ಗೆಲುವಿಹುದು

ಗಂಧದಲಿ ಹೊಸತು ಪರಿಮಳವು ತುಂಬಿಹುದು

ಸುಂದರವು ನಮ್ಮ ಬದುಕಾಗಲಿ

***

ಗಝಲ್

ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ

ನಿನ್ನಯ ಹೃದಯದೊಳಗಿನ  ಬಡಿತಗಳ ಏರಿಳಿತಗಳಿಗೆ ಗುರುವಾದೆ ನಲ್ಲೆ

 

ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿಲ್ಲವೆ

ಬಂಜರು ನೆಲದೊಳಗೆ ವಾಸಿಸುವ ಜನರ ಪಾಲಿಗಿಂದು ವರವಾದೆ ನಲ್ಲೆ

 

ಸೂರ್ಯ ಸುಡುವಾಗ್ನಿ ಆದರೂ ಯೌವನಕ್ಕೂ ಅದಕ್ಕೂ ನಂಟಿದೆಯಲ್ಲವೆ

ಸಪ್ನಗಳ ಮಂದಿರಗಳನ್ನು ದಾಟಿದರೂ ಗುಲಾಬಿಯೊಳು ಚೆಲುವಾದೆ ನಲ್ಲೆ

 

ಕಡಲ ಅಲೆಗಳ ಹೊಡೆತಗಳಿಗೆ ಸಿಲುಕಿದ ದೋಣಿಯಂತಾದೆ ಏಕೆ

ಲಂಗರು ಹಾಕಿದ ಹಡಗಿನ ಒಡಲ ಸೌಂದರ್ಯಕ್ಕೆ ಒಲವಾದೆ ನಲ್ಲೆ

 

ಸಾಧನೆಯೇ ನನ್ನ ಗುರಿಯೆಂದು ಸಾಗಿದವನು ನೀನಲ್ಲವೇ ಈಶಾ

ಬದುಕಿನಾಳದ ಬಾಳಿನಲ್ಲಿ ಪ್ರತಿಮೆಗಳ ಕೈಹಿಡಿದು ಬಲವಾದೆ ನಲ್ಲೆ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್