ಬದುಕು ಹಳಿ ತಪ್ಪಿದಾಗ...
ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತ ವೀಣಾ ಹೊರಗಡೆ ನೋಡುತ್ತಿದ್ದಾಳೆ. ಆಕೆಯ ಕಣ್ಣುಗಳು ತೇವಗೊಂಡಿವೆ. ದುಃಖ ಉಮ್ಮಳಿಸಿ ಬರುತ್ತಿದೆ. ಹೃದಯವನ್ನು ಪದೇ ಪದೇ ತಲ್ಲಣಗೊಳಿಸುತ್ತಿರುವ ನೂರಾರು ನೋವುಗಳು ಆಕೆಯ ಕಣ್ಣ ಮುಂದೆ ಹಾದು ಹೋಗುತ್ತಿವೆ. ಮನಸ್ಸಿನ ನೆಮ್ಮದಿಯನ್ನು ಪ್ರತಿದಿನ ಸಮಾಧಿ ಮಾಡುತ್ತಿರುವ ಕಹಿ ನೆನಪುಗಳು ಆಕೆಯ ಹೃದಯವನ್ನು ಭಾರಗೊಳಿಸುತ್ತಿದೆ. ಸ್ನೇಹಾ ಆಕೆಯ ಪ್ರಾಣ ಸ್ನೇಹಿತೆ. ನಾಳೆ ಸ್ನೇಹಾಳ ಮದುವೆ. ವೀಣಾ ಮದುವೆಗೆ ಒಂದು ದಿನ ಮುಂಚಿತವಾಗಿ ಹೊರಟಿದ್ದಳು.
ವೀಣಾಳಿಗೆ ಇಪ್ಪತ್ತೇಳರ ಹರೆಯ. ಸ್ಥಿತಿವಂತಿಕೆ ಕಡಿಮೆ ಇದ್ದರೂ ಬುದ್ಧಿವಂತಿಕೆಗೇನೂ ಕೊರತೆಯಿರಲಿಲ್ಲ. ಸ್ನೇಹಿತೆರೆಲ್ಲಾ ಈಗಾಗಲೇ ಮದುವೆಯಾಗಿ ಗಂಡನ ಮನೆ ಸೇರಿದ್ದರು. ನೀನ್ಯಾವಾಗ ಮದುವೆಯಾಗುತ್ತಿಯಾ? ಎಂದು ಸ್ನೇಹಿತೆಯರು ಪ್ರಶ್ನಿಸಿದಾಗ, "ನನಗೆ ಈಗ ಮದುವೆ ಇಷ್ಟವಿಲ್ಲ" ಎಂದು ಹೇಳಿ ಸುಮ್ಮನಾಗುತ್ತಿದ್ದಳು.
ವೀಣಾಳಿಗೆ ಎಲ್ಲರಂತೆ ತಾನೂ ಮದುವೆಯಾಗುವ ಕನಸಿದೆ. ಹೃದಯದಲ್ಲಿ ಬೆಟ್ಟದಷ್ಟು ಆಸೆಗಳಿವೆ. ಭವಿಷ್ಯದ ನೂರಾರು ಕನಸುಗಳಿವೆ. ಆದರೆ ಅದು ಹೇಗೆ?... ಎಂಬುವುದು ಉತ್ತರವಿಲ್ಲದ ಪ್ರಶ್ನೆ. ವೀಣಾ ಆಧುನಿಕ ಜೀವನ ಪದ್ಧತಿಗೆ ಒಗ್ಗಿಕೊಂಡವಳಲ್ಲ. ಯಾರದೋ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡಿದವಳಲ್ಲ. ಸಭ್ಯತೆಯ ಎಲ್ಲೆಯನ್ನೂ ಮೀರಿ ನಡೆದವಳಲ್ಲ. ತನ್ನಿಂದ ಯಾರೊಬ್ಬರಿಗೂ ನೋವನ್ನು ಕೊಟ್ಟವಳಲ್ಲ. ಆಕೆಯ ಮದುವೆಯಾಗುವ ಮನಸ್ಸಿಗೆ ಸ್ಪಂದಿಸುವವರು ಯಾರು?...
ಬಸ್ಸು ಚಲಿಸುತ್ತಿದ್ದರೂ ಆಕೆಗೆ ವಾಸ್ತವದ ಅರಿವಿಲ್ಲ. ಕಣ್ಣ ಹನಿಗಳು ಕರವಸ್ತ್ರವನ್ನು ಒದ್ದೆಯಾಗಿಸಿದೆ. ನೆನಪು ಬಾಲ್ಯದತ್ತ ಹೊರಳಿದೆ. ಅಂದು ಆಕೆ ಪುಟ್ಟ ಹುಡುಗಿ. ಒಬ್ಬ ಅಣ್ಣ ಹಾಗೂ ಒಬ್ಬಳು ತಂಗಿ. ಪ್ರೀತಿಸುವ ಅಪ್ಪ ಅಮ್ಮನೊಂದಿಗೆ ಮನೆ ನೆಮ್ಮದಿಯಿಂದ ಕೂಡಿತ್ತು. ಅಪ್ಪನಿಗೆ ಸ್ವಂತ ಉದ್ಯಮವಿತ್ತು. ಅದರಲ್ಲಿ ಸಂಸಾರ ಸರಾಗವಾಗಿ ನಡೆಯುತ್ತಿತ್ತು. ಅಪ್ಪ ಬೆಳಿಗ್ಗೆ ಮನೆಬಿಟ್ಟರೆ ಸೂರ್ಯಾಸ್ತದೊಳಗೆ ಮನೆ ಸೇರುತ್ತಿದ್ದರು. ಮನೆ ಕೆಲಸ ಅಮ್ಮ ನಿಭಾಯಿಸುತ್ತಿದ್ದರು.
ಅದೊಂದು ದಿನ. ಮನೆಗೆ ಬಂದ ಅಪ್ಪ ಅಂದು ವಿಚಿತ್ರವಾಗಿದ್ದರು. ಅವರಿಗೆ ದೇಹದ ಹಿಡಿತ ತಪ್ಪುತ್ತಿದೆ. ಏನೇನೋ ಬಡಬಡಿಸುತ್ತಿದ್ದಾರೆ. ವೀಣಾ ನಾಲ್ಕನೇ ತರಗತಿ. ಏನೊಂದೂ ಅರ್ಥವಾಗದು. ಅಮ್ಮ ವಿಚಾರಿಸಿದಾಗ ಥಟ್ಟನೆ ಕೆನ್ನೆ ಮೇಲೆ ಎರಡೇಟು ಬಿಗಿದಾಯಿತು. ಅಳುತ್ತಾ ಹತ್ತಿರ ಬಂದ ಅಣ್ಣನಿಗೂ ಏಟು ತಪ್ಪಲಿಲ್ಲ. ವೀಣಾ ಮೂಲೆಯಲ್ಲಿ ಮುದುಡಿ ಕುಳಿತಿದ್ದಾಳೆ. ಆಕೆ ಅಪ್ಪನ ಅವತಾರ ಕಂಡು ಹೆದರಿದ್ದಾಳೆ. ತಂಗಿ ದೂರದಲ್ಲಿ ಅಳುತ್ತಿದ್ದಾಳೆ. ಹೌದು ಅವರು ಅಂದು ಮೊದಲ ಬಾರಿ ಕುಡಿದಿದ್ದರು.
ದಿನಕಳೆದಂತೆ ಕುಡಿತದ ಪ್ರಮಾಣ ಹೆಚ್ಚ ತೊಡಗಿತು. ಮನೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸತೊಡಗಿತು. ಅಪ್ಪನ ಉದ್ಯಮದಲ್ಲಿ ಅದ್ಯಾವುದೋ ಮೋಸವೊಂದು ನಡೆಯಿತಂತೆ. ಅದರಲ್ಲಿ ಬಹಳಷ್ಟು ಕಳೆದುಕೊಂಡರಂತೆ. ಹಿಡಿತ ಕೈ ತಪ್ಪಿ ಅಂದು ಕುಡಿದಿದ್ದರಂತೆ. ಆದರೆ ಆ ಕುಡಿತ ನಿಲ್ಲಲಿಲ್ಲ. ಅಮ್ಮನಂತೂ ಏಟು, ಒದೆ ತಿನ್ನದ ದಿನಗಳೇ ಇಲ್ಲವಾಗಿತ್ತು. ಅಮ್ಮನ ದೇಹ ಕೃಶವಾತೊಡಗಿತು. ಮೂವರು ಮಕ್ಕಳು ಅಪ್ಪನ ಕುಡಿತದ ನೇರ ಹೊಡೆತ ಅನುಭವಿಸತೊಡಗಿದರು. ಮನೆಯಲ್ಲಿ ಪ್ರೀತಿಯ ಹರಿವು ದಿಕ್ಕು ತಪ್ಪಿತ್ತು. ಅಪ್ಪ ಮನೆಗೆ ಬಂದರೆಂದರೆ ಭಯ ಆವರಿಸುತ್ತಿತ್ತು.
ವೀಣಾ ಬೆಳೆಯುತ್ತಿದ್ದಂತೆ, ಅಪ್ಪನ ಕುಡಿತದಿಂದ ಆಗುತಿದ್ದ ಅನಾಹುತಗಳು ಅರಿವಾಗತೊಡಗಿತು. ಆಕೆ ಅಸಹಾಯಕಳಾಗಿದ್ದಳು. ಆಕೆಯ ಪಿಯುಸಿ ವಿದ್ಯಾಭ್ಯಾಸವೂ ಪೂರ್ಣಗೊಂಡಿತು. ಆಕೆಯನ್ನು ಅದೆಷ್ಟೋ ಮಂದಿ "ಕುಡುಕನ ಮಗಳು" ಎಂದು ಹೀಯಾಳಿಸುತ್ತಿದ್ದರು. "ಅವರಪ್ಪ ಮಾರ್ಗದಲ್ಲಿ ಕುಡಿದು ಬಿದ್ದಿದ್ದನಂತೆ" ಎಂದು ಚುಚ್ಚಿ ಮಾತಾಡುತ್ತಿದ್ದರು. ಇವೆಲ್ಲಾ ಕೇಳಿಸುತ್ತಿದ್ದ ವೀಣಾ ಮಾನಸಿಕವಾಗಿ ಕುಗ್ಗಿಹೋಗಿದ್ದಳು.
ಆಕೆ ಶಿಕ್ಷಕಿಯಾಗುವ ಕನಸು ಕಂಡಿದ್ದಳು. ಆದರೆ ಅಪ್ಪನ ಸ್ಥಿತಿ ಅವಳ ಸ್ಥಿಮಿತಕ್ಕೆ ಹೊಡೆತ ಕೊಟ್ಟಿತ್ತು. ಅಪ್ಪ ಕೆಲಸ ಮಾಡುತ್ತಿದ್ದ ಸ್ಥಳಗಳಿಂದ ಮನೆಗೆ ಕರೆಗಳು ಬರುತ್ತಿದ್ದವು. ಅಲ್ಲಿ ಅವರು ಕುಡಿದು ಬೀಳುತ್ತಿದ್ದರು. ಮನೆಗೆ ಬರುವಾಗ ಕೆಲವೊಮ್ಮೆ ಅರ್ಧರಾತ್ರಿ. ಆವಾಗಲೆಲ್ಲಾ ಮನೆಮಂದಿ ನಿದ್ರೆಯಿಲ್ಲದೆ ಹುಡುಕಾಟ ನಡೆಸುತ್ತಿದ್ದರು. ಅದಕ್ಕೆ ಕಾರಣ ಅವರು ನದಿದಾಟಿ ಬರಬೇಕಿತ್ತು. ಕುಡಿತ ಮತ್ತಿನಲ್ಲಿ ನದಿ ನೀರಿನಲ್ಲಿ ಅನಾಹುತವಾಗುವ ಭಯ ಮನೆಯವರಿಗಿತ್ತು. ಅಪ್ಪನ ಸ್ವಯಂಕೃತ ಅಪರಾಧದ ಫಲದಿಂದ ವೀಣಾ ಶಿಕ್ಷಕಿಯಾಗುವ ಕನಸು ಕೈಬಿಟ್ಟಳು. ಡಿಪ್ಲೋಮಾ ಮಾಡಿದರೆ ಬೇಗನೆ ಕೆಲಸ ಪಡೆದು ಅಮ್ಮನನ್ನು ಜೊತೆಗೆ ಕರೆದು ಕೊಂಡು ಹೋಗಬಹುದೆಂದು ಮನದಲ್ಲೇ ಯೋಚಿಸಿದಳು.
ಇಲೆಕ್ಟ್ರಿಕಲ್ ಡಿಪ್ಲೋಮಾ ಕಲಿಯುತ್ತಿದ್ದ ವೀಣಾ, ಅಂತಿಮ ವರ್ಷದಲ್ಲಿರುವಾಗಲೇ ದೂರ ಶಿಕ್ಷಣ ಮೂಲಕ ಬಿ.ಎ. ಪದವಿಗೆ ಸೇರ್ಪಡೆಗೊಂಡಳು. ಮನೆಯ ಸಮಸ್ಯೆ ಅಂತ್ಯ ಕಾಣುವ ಲಕ್ಷಣವಂತೂ ಇರಲಿಲ್ಲ. ವೀಣಾಳ ಮುಂದೆ ಮೂರು ಆಯ್ಕೆಗಳಿತ್ತು. ಸಮಸ್ಯೆಯ ಸುಳಿಯೊಳಗೆ ಬಿದ್ದು ನರಳಾಡುವುದು ಆಕೆಯ ಮೊದಲನೇ ಆಯ್ಕೆ. ಅವಮಾನ ಸಹಿಸಲಾಗದೆ ಜೀವನಕ್ಕೆ ಕೊನೆಹಾಡುವುದು ಎರಡನೇ ಆಯ್ಕೆಯಾದರೆ ಎಲ್ಲವನ್ನೂ ಸಹಿಸಿ ಜೀವನದಲ್ಲೆ ಸೆಟೆದು ನಿಲ್ಲುವುದು ಆಕೆಯ ಮೂರನೇ ಆಯ್ಕೆಯಾಗಿತ್ತು.
ವೀಣಾ ಅಪ್ಪಿಕೊಂಡದ್ದು ಮೂರನೇ ಆಯ್ಕೆ. ಆಕೆ ಇಲೆಕ್ಟ್ರಿಕಲ್ ಡಿಪ್ಲೋಮಾ ಮಾಡಿ ಮನೆ ಬಿಟ್ಟು ಬೆಂಗಳೂರಿಗೆ ಹೊರಟೇ ಬಿಟ್ಟಳು. ಅಲ್ಲಿ ಮನೆಯ ಚಿಂತೆ ಬಿಟ್ಟು ದುಡಿಯ ತೊಡಗಿದಳು. ಆದರೂ ಅಮ್ಮ ಕಣ್ಣ ಮುಂದೆ ಹಾದು ಹೋಗುತ್ತಿದ್ದಳು. ಮಕ್ಕಳು ಅದೇನೋ ಕಾರಣಕ್ಕೆ ಅಪ್ಪನಿಂದ ದೂರವಾಗಬಹುದು. ಆದರೆ ಅಮ್ಮನಿಗೆ ಅದು ಸಾಧ್ಯವಿರಲಿಲ್ಲ. ಆಕೆ ಅನಿವಾರ್ಯವಾಗಿ ಗಂಡನ ಹಿಂಸೆ ಸಹಿಸುತ್ತಾ ಬದುಕಲೇಬೇಕಿತ್ತು. ಅಪ್ಪ ಸ್ಕೂಟಿ ಖರೀದಿಸಿದ ಸುದ್ದಿ ವೀಣಾಳಿಗೆ ಬೇಸರ ಮೂಡಿಸಿತು. ಕುಡಿದು ಚಲಾಯಿಸಿ ಇನ್ನಷ್ಟು ಅನಾಹುತವಾದರೆ? ಎಂಬುವುದೇ ಅದಕ್ಕೆ ಕಾರಣ. ಆಕೆಯ ಊಹೆ ನಿಜವಾಗಿತ್ತು. ಅಪ್ಪ ಆಗಾಗ ಸ್ಕೂಟಿಯಿಂದ ಬೀಳತೊಡಗಿದ. ಒಮ್ಮೆಯಂತೂ ಬಿದ್ದು ಆಸ್ಪತ್ರೆ ಸೇರಿಯೂ ಆಗಿತ್ತು.
ವೀಣಾ ಬೆಂಗಳೂರು ತೊರೆದು ಮೈಸೂರಿನಲ್ಲೂ ದುಡಿದಳು. ನಂತರ ಮಂಗಳೂರು ಹೀಗೆ ಅವಕಾಶ ದೊರೆತಲ್ಲಿ ದುಡಿಯತೊಡಗಿದಳು. ದುಡಿಯುತ್ತಾನೆ ತನ್ನ ಪದವಿಯನ್ನೂ ಪೂರ್ಣಗೊಳಿಸಿದಳು. ಈ ಮಧ್ಯೆ ಅಮ್ಮನ ಕೂಗು ದೇವರಿಗೆ ಕೇಳಿಸಿರಬೇಕು. ಮಕ್ಕಳ ಅಸಹಾಯಕತೆ ಆತನಿಗೆ ಕರುಣೆ ಮೂಡಿಸಿರಬೇಕು. ಅಪ್ಪ ಕುಡಿಯುವುದನ್ನು ಬಿಟ್ಟಿದ್ದ. ಅದೂ ಶಾಶ್ವತವಾಗಿ. ಮನೆಯ ಪರಿಸ್ಥಿತಿ ಸುಧಾರಿಸತೊಡಗಿತು. ವೀಣಾ ಕಳೆದು ಹೋದದ್ದನ್ನು ಪಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಪ್ಪ ಕುಡಿತ ಬಿಟ್ಟು ಸಹಜ ಸ್ಥಿತಿಗೆ ಮರಳಿದ್ದರು. ಆದರೆ ಸಂಬಂಧಿಕರಿಗೆ ಅದು ಬೇಡವಾಗಿತ್ತು. ಅವರು ಕಳೆದ ದಿನಗಳ ಘಟನೆಗಳನ್ನೇ ಹೇಳಿ ವೀಣಾಳ ಕುಟುಂಬವನ್ನು ತಿವಿಯತೊಡಗಿದರು. ಅವರೆಲ್ಲಾ ಮನೆಯ ಕಡೆ ಸುಳಿಯುವುದನ್ನೇ ನಿಲ್ಲಿಸಿದ್ದರು. ಅವರ ಕುಹಕ ನುಡಿಗಳು ವೀಣಾಳ ಮನಸ್ಸನ್ನು ಛಿದ್ರಗೊಳಿಸುತ್ತಿತ್ತು. ಅವಳ ಪದವಿ ಪೂರ್ಣಗೊಂಡಾಗ, ಕಳೆದು ಹೋದ ಕನಸ್ಸಿಗೆ ಜೀವಕೊಟ್ಟಳು. ಶಿಕ್ಷಕಿಯಾಗಬೇಕೆಂಬ ಅವಳ ಅದಮ್ಯ ಆಸೆ ಮತ್ತೆ ಚಿಗುರಿತು. ಬಿ.ಎಡ್. ಕೋರ್ಸಿಗೆ ಸೇರಿಯೇ ಬಿಟ್ಟಳು ಅದೇ ಸಮಯದಲ್ಲೇ ಅವಳಿಗೆ ಸಮಸ್ಯೆಯಾಗಿದ್ದು ಆಕೆಯ ಮಾವ. ಕೆಲಸ ತೊರೆದಿದ್ದ ಮಾವ, ಹೆಂಡತಿಯನ್ನೂ ಕಳೆದುಕೊಂಡಿದ್ದರು. ಎಲ್ಲವನ್ನು ಕಳೆದು ಕೊಂಡು ಅವರು ಆಶ್ರಯ ಪಡೆದದ್ದು ವೀಣಾಳ ಮನೆಯಲ್ಲೇ. ಆಗಲೇ ವೀಣಾಳಿಗೆ ಮತ್ತೊಂದು ಸಂಕಟ ಆರಂಭವಾದದ್ದು. ವೀಣಾಳಿಗೆ ಪ್ರತಿದಿನ ಮಾವನ ಮಂಗಳಾರತಿ ನಡೆಯುತಿತ್ತು. ಅವಳು ಓದು ಮುಂದುವರಿಸಿದ್ದು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ವೀಣಾಳಿಗೆ ಮಾವನ ಹಿಂಸೆಯಿಂದ ಓದಲಾಗುತ್ತಿಲ್ಲ. ಅವರು ನಿದ್ರೆ ಮಾಡುವ ತನಕ ಕಾದು ಪುಸ್ತಕ ತೆರೆಯ ತೊಡಗಿದಳು. ಮಧ್ಯರಾತ್ರಿ ತನಕ ಓದುವಿಕೆ ಮುಂದುವರೆಯುತ್ತಿತ್ತು. ಹರೆಯದ ಅದೆಷ್ಟೋ ಕನಸುಗಳಿವೆ. ಅಪ್ಪನಿಗೆ ಅಣ್ಣನಲ್ಲಿ ಬಹಳನೇ ಪ್ರೀತಿ. ಅಮ್ಮನಿಗೆ ತಂಗಿಯಲ್ಲಿ ತುಂಬಾ ಪ್ರೀತಿ. ಅವೆರಡರ ಮಧ್ಯೆ ವೀಣಾ.
ಡ್ರೈವರ್ ಒಮ್ಮೆಲೇ ಬ್ರೇಕ್ ಹಾಕಿದಾಗ, ಮುಗ್ಗರಿಸಿದ ವೀಣಾ ವಾಸ್ತವಲೋಕಕ್ಕೆ ಮರಳಿದ್ದಳು. ಎದುರುಗಡೆ ವ್ಯಕ್ತಿಯೊಬ್ಬ ಬಸ್ಸಿಗೆ ಢಿಕ್ಕಿ ಹೊಡೆದಿದ್ದ. ಅವನು ವಿಪರೀತ ಕುಡಿದಿದ್ದ. ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದ. ನೋಡಲು ಸಭ್ಯನಂತೆ ತೋರುತ್ತಿದ್ದ. ವೀಣಾಳಿಗೆ ತನ್ನ ಸಮಸ್ಯೆ ಮರೆಯಾಗಿ ಆತನ ಮನೆಯನ್ನು ಊಹಿಸಿತೊಡಗಿದಳು. ಅಲ್ಲೂ ನಮ್ಮಂತೆ ವ್ಯಥೆ ಇರಬಹುದಲ್ಲವೇ?... ಎಂದು ತನ್ನೊಳಗೆ ಯೋಚಿಸತೊಡಗಿದಳು.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ