ಬದುಕೇ ಒಂದು ಆಕಸ್ಮಿಕ !

ಬದುಕೇ ಒಂದು ಆಕಸ್ಮಿಕ !

ಒಮ್ಮೆ ಯೋಚಿಸಿ, ನೀವು ಮನೆಯಲ್ಲೇ ಕುಳಿತು ಬೋರಾಯಿತೆಂದು ಸಂಜೆ ಹೊತ್ತು ಹೊರಗಡೆ ತಿರುಗಾಡಲು ಹೋಗುವ ಎಂದು ಅಂದು ಕೊಳ್ಳುತ್ತೀರಿ, ಅದೇ ಸಮಯಕ್ಕೆ ನಿಮ್ಮ ಮನೆಗೆ ಅಪರೂಪದ ಅತಿಥಿಗಳ ಆಗಮನವಾಗುತ್ತದೆ. ಅವರು ಆ ಸಮಯ ಬರುತ್ತಾರೆ ಎಂದು ನೀವು ಕನಸು ಮನಸ್ಸಿನಲ್ಲೂ ಎಣಿಸಿರುವುದಿಲ್ಲ. ಆದರೆ ಅವರ ಆಗಮನವಾಗುತ್ತದೆ. ಅದೇ ರೀತಿ ನೀವು ಯಾರದ್ದೋ ಮನೆಗೆ ಹೋಗುತ್ತೀರಿ. ಆದರೆ ಯಾವತ್ತೂ ಮನೆಯಲ್ಲ್ಲಿರುವ ಅವರು ಆ ಸಮಯದಲ್ಲಿ ಮನೆಯಲ್ಲಿ ಇರುವುದಿಲ್ಲ, ವಿದ್ಯಾರ್ಥಿಯೊಬ್ಬ ಮೆಡಿಕಲ್ ಕಲಿಯಬೇಕೆಂದು ಅಂದುಕೊಂಡಿರುತ್ತಾನೆ ಆದರೆ ಕೊನೇ ಕ್ಷಣದಲ್ಲಿ ಆಕಸ್ಮಿಕವಾಗಿ ಆತ ಮನಸ್ಸು ಬದಲಾಯಿಸಿ ಇಂಜಿನಿಯರಿಂಗ್ ಆಯ್ದುಕೊಳ್ಳುತ್ತಾನೆ, ಹುಡುಗಿ ನೋಡಲು ಹೋದ ಯುವಕನೊಬ್ಬ ತಿರಸ್ಕರಿಸಬೇಕೆಂದು ಅಂದುಕೊಂಡಿದ್ದ ಹುಡುಗಿಯನ್ನು ಒಪ್ಪಿ ಬರುತ್ತಾನೆ. ಒಂದು ಐದು ವರ್ಷ ಹೊಸ ಮನೆ ಕಟ್ಟಲು ಯೋಚನೆ ಮಾಡುವುದಿಲ್ಲ ಎಂದುಕೊಂಡಿದ್ದಾತ ಮರು ವರ್ಷವೇ ಭೂಮಿ ಪೂಜೆ ಮಾಡಿ ಮನೆ ಕಟ್ಟಲು ಪ್ರಾರಂಭ ಮಾಡುತ್ತಾನೆ. ಇವೆಲ್ಲಾ ನಾವು ಜೀವನದಲ್ಲಿ ಕಂಡು ಕೊಂಡ ಕೆಲವೇ ಕೆಲವು ಆಕಸ್ಮಿಕ ಸತ್ಯಗಳು.

ಹುಟ್ಟು ಆಕಸ್ಮಿಕ ಆದರೆ ಸಾವು ಖಚಿತ ಎಂದು ಗೊತ್ತಿದ್ದರೂ ಯಾವಾಗ ಸಾವು ಬರುತ್ತದೆ ಎಂದು ಗೊತ್ತಿರುವುದಿಲ್ಲ (ಮರಣದಂಡನೆಯಾದ ಕೈದಿಯನ್ನು ಹೊರತುಪಡಿಸಿ !). ಈ ಹುಟ್ಟು ಸಾವಿನ ನಡುವಿನ ಜೀವನದಲ್ಲಿ ಬಹಳಷ್ಟು ಆಕಸ್ಮಿಕಗಳು ನಡೆಯುತ್ತವೆ. ಕೆಲವು ನಮ್ಮ ಗಮನಕ್ಕೆ ಬರುತ್ತವೆ, ಕೆಲವು ಬಾರದೆಯೂ ಇರುತ್ತವೆ. ಕೆಲವು ಸಲ ಆಕಸ್ಮಿಕ ಸಂಗತಿಗಳು ಸುಖದಲ್ಲಿ ಅಥವಾ ಸಂತೋಷದಲ್ಲಿ ಪರ್ಯವಸನವಾದರೆ, ಕೆಲವು ದುಃಖದಲ್ಲಿ ಅಂತ್ಯಗೊಳ್ಳುತ್ತವೆ.  ಒಬ್ಬ ಮನುಷ್ಯನ ಬಾಲ್ಯದಿಂದ ಹಿಡಿದು ಯೌವನ, ಮುಪ್ಪು ಮುಂತಾದ ಘಟ್ಟದಲ್ಲಿ ನಮ್ಮ ಅರಿವಿಗೆ ಬಾರದ ಹಲವಾರು ಸಂಗತಿಗಳು ನಡೆಯುತ್ತವೆ. ಜೀವನದಲ್ಲಿ ಜೊತೆಯಾಗುವ ಗೆಳೆಯರು, ಹವ್ಯಾಸಗಳು, ಜೀವನ ಕ್ರಮ ಎಲ್ಲವೂ ಬಹುಬಾರಿ ನಮ್ಮ ಅರಿವಿಗೇ ಬರದಂತೆ ನಡೆಯುತ್ತವೆ.

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ. Man proposes God Disposes ಎಂದು. ನಮ್ಮ ನಿರ್ಣಯಗಳು ಎಷ್ಟೇ ಪೂರ್ವ ನಿರ್ಧಾರಿತವಾಗಿದ್ದರೂ, ದೇವರು ನಮಗಾಗಿ ಮತ್ತೇನನ್ನೋ ಯೋಚಿಸಿರುತ್ತಾನೆ. ಈ ಕಾರಣದಿಂದ ನಾವು ಯೋಚಿಸಿದ ಕಾರ್ಯಗಳು ಪೂರ್ಣಗೊಳ್ಳದೇ ಇರಬಹುದು. ಆಗ ನಾವು ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು ಯೋಚಿಸಿ ಮುಂದುವರೆಯಬೇಕಾಗುತ್ತದೆ. ಈ ಸಮಯದಲ್ಲಿ ನನಗೊಂದು ಪುಟ್ಟ ಕತೆ ನೆನಪಾಗುತ್ತದೆ…

ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸೂರಿ ಎಂಬ ಹುಡುಗ ತನ್ನೂರಿನಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಊರಿಗೆ ರೈಲು ಟಿಕೇಟ್ ಬುಕ್ ಮಾಡಿದ್ದ. ಆದರೆ ಆತ ಪ್ರಯಾಣಿಸಬೇಕಾದ ದಿನದಂದು ಜೋರಾದ ಮಳೆ, ಗಾಳಿ. ಅದಕ್ಕೆ ಸಿಲುಕಿಕೊಂಡ ಸೂರಿ ರೈಲು ತಪ್ಪಿಸಿಕೊಳ್ಳುತ್ತಾನೆ. ಜಾತ್ರೆಯ ಸಂಭ್ರಮದಲ್ಲಿ ಮೈಮರೆತು ಆನಂದಿಸಬೇಕಾಗಿದ್ದ ಸೂರಿ, ಮೈ ಒದ್ದೆ ಮಾಡಿಕೊಂಡು ಮರಳಿ ಹಾಸ್ಟೆಲ್ ತಲುಪುತ್ತಾನೆ. ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದು, ಬೆಳಿಗ್ಗೆ ಎದ್ದು ಮೊಬೈಲ್ ನಲ್ಲಿ ಸಮಾಚಾರ ನೋಡುವಾಗ ತಾನು ಹೋಗಬೇಕಾಗಿದ್ದ ರೈಲು ಅಪಘಾತಕ್ಕೆ ಒಳಗಾದ ಸಂಗತಿ ತಿಳಿಯುತ್ತದೆ. ಆ ದುರ್ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಾಳುಗಳಾದ ಸುದ್ದಿ ತುಳಿದು ಆತನಿಗೆ ಆಘಾತವಾಗುತ್ತದೆ. ಒಂದು ವೇಳೆ ತಾನು ಗಾಳಿ- ಮಳೆಗೆ ಸಿಲುಕದೇ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಿದ್ದರೆ... ಎಂದು ಯೋಚಿಸಿಯೇ ಸೂರಿಯ ಹೃದಯ ಕಂಪಿಸಿಬಿಡುತ್ತದೆ. ದೇವರು ದೊಡ್ಡವನು ಎಂದು ದೊಡ್ಡ ನಮಸ್ಕಾರ ಮಾಡುತ್ತಾನೆ.

ಇದೊಂದು ಕಥೆಯಷ್ಟೇ. ಆದರೆ ಇಂತಹ ಹಲವಾರು ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಸಮಯ ನಡೆದೇ ಇರುತ್ತದೆ. ಆಕಸ್ಮಿಕವಾಗಿ ಸಿಕ್ಕ ವ್ಯಕ್ತಿಯೊಬ್ಬ ತಮ್ಮ ಒಡಹುಟ್ಟಿದವರಿಗಿಂತಲೂ ಆತ್ಮೀಯರಾಗುತ್ತಾರೆ. ಹೀಗೇ ಆಕಸ್ಮಿಕವಾಗಿ ಸಿಕ್ಕ ಕೆಲ ಯುವಕ-ಯುವತಿಯರಿಬ್ಬರು ಪ್ರೇಮಪಾಶಕ್ಕೆ ಸಿಲುಕಿ, ಜೀವನ ಪರ್ಯಂತ ಜೊತೆಯಾಗಿ ಕಳೆದು ಬಿಡುತ್ತಾರೆ. ಆಕಸ್ಮಿಕ ಘಟನೆಯೊಂದರಿಂದ ನೊಂದು ಚಕ್ರವರ್ತಿಯಾಗಬೇಕಿದ್ದ ಸಿದ್ದಾರ್ಥ ವೈರಾಗ್ಯ ಮೂರ್ತಿಯಾಗಿ ಗೌತಮ ಬುದ್ಧನಾಗುತ್ತಾನೆ. ಕಳಿಂಗ ಯುದ್ಧದಲ್ಲಿ ವಿಜಯಿಯಾದರೂ ಸಾಮ್ರಾಟ್ ಅಶೋಕ, ಯುದ್ಧ ಭೂಮಿಯಲ್ಲಿ ಹೆಣಗಳ ರಾಶಿಯನ್ನು ನೋಡಿ ಮಮ್ಮಲ ಮರುಗಿ ತನ್ನ ರಾಜ ಪದವಿಯನ್ನೇ ತ್ಯಜಿಸುತ್ತಾನೆ. ಸಿರಿವಂತ ಬಂಗಾರದ ವ್ಯಾಪಾರಿ ಶ್ರೀನಿವಾಸ ನಾಯಕರು ಆಕಸ್ಮಿಕ ಸತ್ಯದರ್ಶನವಾಗಿ ಪುರಂದರದಾಸರಾಗುತ್ತಾರೆ. ಹೀಗೆಯೇ ನೋಡಹೋದರೆ ಆದಿ ಶಂಕರರು ಸನ್ಯಾಸ ಸ್ವೀಕರಿಸಿದ್ದು, ನರೇಂದ್ರನಾಥರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಸ್ವಾಮಿ ವಿವೇಕಾನಂದರಾದದ್ದು ಇವೆಲ್ಲಾ ಒಂದು ಕ್ಷಣದ ಆಕಸ್ಮಿಕ ಘಟನೆಗಳೇ ಅಲ್ಲವೇ?

ಅದೇ ರೀತಿ ಗಮನಿಸಿದರೆ ಹಲವಾರು ಸಮಯಗಳಿಂದ ತಲೆ ತಿನ್ನುತ್ತಿದ್ದ ಸಮಸ್ಯೆಯ ಪರಿಹಾರ ಸ್ನಾನಗೃಹದ ನೀರಿನ ತೊಟ್ಟಿಯಲ್ಲಿ ಕೂತಾಗ ಆರ್ಕಿಮಿಡೀಸ್ ಗೆ ಹೊಳೆದದ್ದು, ತಲೆ ಮೇಲೆ ಬಿದ್ದ ಸೇಬು ಗುರುತ್ವಾಕರ್ಷಣೆ ಎಂಬ ಶಕ್ತಿ ಇದೆಯೆಂದು ಐಸಾಕ್ ನ್ಯೂಟನ್ ಕಂಡು ಹಿಡಿದದ್ದು, ಎಕ್ಸ್ ರೇ ಕಂಡುಹಿಡಿದದ್ದು ಎಲ್ಲವೂ ಆಕಸ್ಮಿಕವಾಗಿಯೇ ಅಲ್ಲವೇ? ನಮ್ಮ ಬದುಕೇ ಒಂದು ಆಕಸ್ಮಿಕ. ನಾಳೆ ಏನಾಗಬಹುದು ಎಂದು ತಿಳಿಯದ ನಾವು ಅದಕ್ಕಾಗಿ ಚಿಂತಿಸದೇ ಇಂದಿನ ಕಾಲದಲ್ಲಿ ನೆಮ್ಮದಿಯಿಂದ ಬದುಕಲು ಕಲಿಯುವುದು ಉತ್ತಮ.

ಚಿತ್ರ ಕೃಪೆ: ಅಂತರ್ಜಾಲ ತಾಣ