ಬದುಕೊಂದು ದೂರದ ಪಯಣ...

ಬದುಕೊಂದು ದೂರದ ಪಯಣ...

ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ. Life is Short , Make it Sweet...

ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ.

ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ.

ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ? ಭಾರತದ ಈಗಿನ ಸರಾಸರಿ ಆಯಸ್ಸು ಅಧಿಕೃತವಾಗಿ ಸುಮಾರು 63/65 ರ ಆಸುಪಾಸಿನಲ್ಲಿ ಇದೆ. ಅದನ್ನು ಸುಮಾರು 75 ಎಂದು ಭಾವಿಸಿಕೊಳ್ಳೋಣ. 75 ವಯಸ್ಸು ಕೆಲವರಿಗೆ ದೀರ್ಘ ಮತ್ತೆ ಕೆಲವರಿಗೆ ಕಡಿಮೆ ಅದು ಅವರವರ ಜೀವನ ಶೈಲಿ ಮತ್ತು ಮನೋಭಾವ ಅವಲಂಬಿಸಿರುತ್ತದೆ ಎಂದು ಲೋಕಾಭಿರಾಮವಾಗಿ ಹೇಳಬಹುದು.ಆದರೆ ವಾಸ್ತವ ಏನು. ನಾವು ಬದುಕನ್ನು ದೀರ್ಘವೆಂದು ಪರಿಗಣಿಸಬೇಕೆ ಅಥವಾ ಸಣ್ಣ ಅವಧಿ ಎಂದು ಭಾವಿಸಬೇಕೆ ?

ನನ್ನ ದೃಷ್ಟಿಯಲ್ಲಿ ಬದುಕೊಂದು ದೀರ್ಘ ಪಯಣ. ಜೀವನದಲ್ಲಿ ನಮ್ಮ ಬಳಿ ತುಂಬಾ ತುಂಬಾ ಸಮಯವಿದೆ. ಹುಟ್ಟಿನಿಂದ ಸಾಯುವವರೆಗೆ ಸುಮಾರು ಮುಕ್ಕಾಲು ಶತಮಾನದಷ್ಟು ದೂರದ ಹಾದಿ ಇದೆ.  ನಮ್ಮ ಆಸೆ ಆಕಾಂಕ್ಷೆಗಳು, ಕನಸುಗಳು, ಸವಾಲುಗಳು, ಪ್ರಯೋಗಗಳು, ಸೋಲಿನ ಕುಸಿತ, ಗೆಲುವಿನ ಮೆಟ್ಟಿಲು.... ಎಲ್ಲವನ್ನೂ ನಿಭಾಯಿಸಲು ಸಾಕಷ್ಟು ಸಮಯವಿರುತ್ತದೆ. ಹಣದ ಕೊರತೆ, ಪ್ರೇಮ ವೈಫಲ್ಯ, ಕೌಟುಂಬಿಕ ವಿಭಜನೆ, ನೈಸರ್ಗಿಕ ವಿಕೋಪ, ವ್ಯವಸ್ಥೆಯ ಶೋಷಣೆ, ನಿರಂತರ ಸೋಲು ಎಲ್ಲವನ್ನು ಎದುರಿಸಲು,  ಅನುಭವಿಸಲು ಮತ್ತೆ ಕಟ್ಟಲು ನಮ್ಮ ಬಳಿ ಕಾಲವಿದೆ.

ಇದಕ್ಕೆ ಪ್ರತಿಯಾಗಿ, ಜೀವನದ ಕಾಲ ತುಂಬಾ ಕಡಿಮೆ ಇದೆ ಎಂದು ಭಾವಿಸಿದಲ್ಲಿ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇರುವ ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಮಾಡಲು ಹೋಗಿ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತೇವೆ. ಬೆಳಗಿನಿಂದ ರಾತ್ರಿಯವರೆಗೆ ವರ್ಷದ 365 ದಿನವೂ ಕೆಲಸದ ಒತ್ತಡಕ್ಕೆ ಸಿಲುಕಿ ನೆಮ್ಮದಿಗಾಗಿ ಹುಡುಕಾಡುವ ಸಾಧ್ಯತೆಯೇ ಹೆಚ್ಚು. ಮಧ್ಯಮ ವರ್ಗದವರಂತೂ ಸ್ವಂತ ಮನೆ, ಮಕ್ಕಳ ಶಿಕ್ಷಣ ಮತ್ತು ಮದುವೆ, ಕಾರು ಅದು ಇದು ಎಂದು ಇಡೀ ಜೀವನ ಅದಕ್ಕಾಗಿಯೇ ಮುಡುಪಿಡುತ್ತಾರೆ. ಭೌತಿಕ ವಸ್ತುಗಳ ಹುಡುಕಾಟವೇ ಜೀವನ ಎಂಬಂತಾಗಿದೆ.

ಅದರಲ್ಲೂ ಈ ಆಧುನಿಕ ವೇಗದ ಯುಗದಲ್ಲಿ ಸಮಯ ಸರಿಯುವುದೇ ತಿಳಿಯುವುದಿಲ್ಲ. ದಿನನಿತ್ಯದ ಒತ್ತಡದಲ್ಲಿ ತಿಂಗಳು - ವರ್ಷಗಳು ಬೇಗ ಬೇಗ ಸಾಗಿದಂತೆನಿಸುತ್ತದೆ. ಅವಶ್ಯಕತೆಗಳು ಹೆಚ್ಚಾದಂತೆ,

ಆ ಅವಶ್ಯಕತೆಗಳೇ ಅನಿವಾರ್ಯಗಳಾಗಿ,

ಆ ಅನಿವಾರ್ಯವಾಗಳೇ ಬದುಕಿನ ಭಾಗಗಳಾಗಿ,

ಆ ಭಾಗಗಳನ್ನು ಪೂರೈಸಿಕೊಳ್ಳುವುದೇ ಜೀವನದ ಉದ್ದೇಶಗಳಾಗಿ,

ಆ ಉದ್ದೇಶಗಳಿಗಾಗಿಯೇ ಸಮಯವನ್ನು ಮೀಸಲಿಡಬೇಕಾಗಿರುವುದರಿಂದ ಜೀವನದ ಸಮಯ ತುಂಬಾ ಕಡಿಮೆಯಾಗಿದೆ ಎಂದು ಭಾಸವಾಗುತ್ತದೆ. ನಾವುಗಳ ಅದರಲ್ಲಿಯೇ ಕಳೆದು ಹೋಗುತ್ತಿದ್ದೇವೆ.

ಬದುಕನ್ನು ಒಂದು ನದಿಗೆ ಹೋಲಿಸಬಹುದು. ನದಿ ಹುಟ್ಟಿ ಸಮುದ್ರ ಸೇರುವವರೆಗೆ ದೀರ್ಘವಾಗಿ ಮತ್ತು ನಿರಂತರವಾಗಿ ಚಲಿಸುತ್ತಿರುತ್ತದೆ. ಆ ಹಾದಿಯಲ್ಲಿ ಕೆಲವೊಮ್ಮೆ ವಿಶಾಲವಾಗಿ, ಮತ್ತೆ ಕೆಲವು ಸಲ ಇಕ್ಕಟ್ಟಾದ ಜಾಗದಲ್ಲಿ, ಹಲವೊಮ್ಮೆ ರಭಸದಿಂದ, ಮತ್ತೆ ಪ್ರಶಾಂತತೆಯಿಂದ ಅನೇಕ ಎಡರು ತೊಡರುಗಳನ್ನು ಎದುರಿಸಿ ಸಾಗುತ್ತದೆ.

ಕೆಲವೊಮ್ಮೆ ಮನುಷ್ಯ ಪ್ರಾಣಿ ತನ್ನ ಸ್ವಾರ್ಥಕ್ಕಾಗಿ ಅಣೆಕಟ್ಟು ಕಟ್ಟಿ ಅದನ್ನು ಬಂಧಿಸುತ್ತಾನೆ. ಆಗಲೂ ನದಿ ಸಮುದ್ರ ಸೇರುವ ತವಕದಿಂದ ತನ್ನ ಸಮಯಕ್ಕೆ ಕಾಯುತ್ತದೆ ಅದು ಎಷ್ಟೇ ದೀರ್ಘ ಸಮಯವಾದರೂ..

ಆದರೂ, ಬದುಕನ್ನು ಹೀಗೆ ಎಂದು ನಿರ್ಧರಿಸುವುದು ಕಷ್ಟ. ಆದರೆ ಜೀವನವನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸಿ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು. ಏಕೆಂದರೆ ಬದುಕೊಂದು ಸುದೀರ್ಘ ಪಯಣ ಅನಂತದೆಡೆಗೆ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 151 ನೆಯ ದಿನ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ವಾಸ್ತವ್ಯ

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಜೊತೆ ಸಂವಾದ