ಬದುಕೊಂದು ಪಯಣ !!!

ಬದುಕೊಂದು ಪಯಣ !!!

 

ಈಚೆಗೆ ಹಲವು ದಿನಗಳಿಂದ ಕಾರಿನಲ್ಲಿ ಆಫೀಸಿಗೆ ಸಾಗುವ ಹಾದಿಯಲ್ಲಿ ಹತ್ತು ಹಲವು ಗಾತ್ರದ ಸಹವಾಹನಗಳು ಓಡುವ ಪರಿಯನ್ನು ಗಮನಿಸುತ್ತ ಬಂದಿದ್ದೇನೆ. ಆರಂಭದಿಂದ ಕೊನೆಯವೆರೆಗಿನ ಪಯಣವನ್ನು ಬದುಕಿನ ಹಲವು ಮಜಲಿಗೆ ಹೋಲಿಸುತ್ತಾ ಹೋದಂತೆ ಕಾರಿನ ಪಯಣಕ್ಕೂ ಜೀವನ ಪಯಣಕ್ಕೂ ಬಹಳ ಸಾಮ್ಯ ಇದೆ ಅನ್ನಿಸಿತು. 

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಎಂದು ಹಿರಿಯರು ಈಗಾಗಲೇ ನುಡಿದು ವಿಷಯ ಹಳತಾಗಿದೆ ಎನ್ನಿಸಿದರೂ ಇಂದಿನ ದಿನಕ್ಕೂ ಅದು ಸೂಕ್ತವಾಗೇ ಇದೆ ಆದರೆ ವೇಷಭೂಷಣ ಭಿನ್ನ ಅಷ್ಟೇ.

ಎಷ್ಟೋ ಬಾರಿ ನನ್ನ ಗರಾಜ್’ನಿಂದ ಕಾರನ್ನು ಹೊರ ತೆಗೆದು ಬೀದಿಗೆ ಬರುವ ಸಮಯಕ್ಕೇ ಇನ್ಯಾರೋ ಹೊರಟಿರುತ್ತಾರೆ. ಎಷ್ಟೋ ಸಾರಿ ಬುದ್ದಿ ಇಲ್ಲದ ಒಂದು ವಿಚಾರ ತಲೆಗೆ ಬರುತ್ತದೆ. ಹಾಗೆ ಹೋದವರನ್ನು "ಅಲ್ಲಾ, ಇಷ್ಟೂ ಹೊತ್ತು ನಾನು ಮನೆ ಒಳಗಿದ್ದೆ. ಆಗ ಯಾಕೆ ನೀವು ಹೋಗಲಿಲ್ಲ. ನಾನು ಗಾಡಿ ತೆಗೆದಾಗಲೇ ನೀವೂ ಬರಬೇಕೇ? ಥತ್!" ಅಂತ. ಏನಾದರೂ ಅರ್ಥವಿದೆಯೇ? ಜೀವನದಲ್ಲೂ ಹಾಗೇನೇ. ನಾ ಹುಟ್ಟಿದ ದಿನ, ಸಮಯ, ಘಳಿಗೆಯಲ್ಲೇ ಇನ್ನಾರೋ ಜನ್ಮ ತಾಳುವುದನ್ನು ತಡೆಯಲು ನಾನ್ಯಾರು? ನಾ ಹೊರಟ ಸಮಯಕ್ಕೇ ಮತ್ತೊಂದು ಗಾಡಿಯೂ ಹೊರಟಿತು ಅಂದ ಮಾತ್ರಕ್ಕೆ ನಾವು ಹೋಗುವ ಹಾದಿ, ಸೇರಬೇಕಾದ ಸ್ಥಳ ಎಲ್ಲ ಒಂದೇ ಆಗುವುದಿಲ್ಲ ಅಲ್ಲವೇ? ಇದೇ ಜೀವನ.

ಕಾರಿನಲ್ಲಿ ಸಾಗುವಾಗ ತಿರುವಿನಲ್ಲಿ ನಿಲ್ಲಬೇಕಾಗುತ್ತದೆ, ಕೆಲವೆಡೆ ನಿಧಾನವಾಗಿ ಚಲಿಸಬೇಕಾಗುತ್ತದೆ, ಹಲವೆಡೆ ವೇಗದಿಂದಲೂ ಸಾಗಬೇಕಾಗುತ್ತದೆ ಕೆಲವೊಮ್ಮೆ ರಸ್ತೆ ಹಾಳಾಗಿದ್ದಾಗ ಬೇರೆ ದಾರಿಯೇ ಹಿಡಿದೂ ಸಾಗಬೇಕಾಗುತ್ತದೆ. ಅಲ್ಲವೇ? ಜೀವನದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದಾಗ ಹಲವರ ಜೀವನ ತಿರುವಿನಲ್ಲಿ ನಿಲ್ಲುತ್ತದೆ. ಅಯಾಚಿತ ಅವಘಡಗಳಿಗೆ ಸಿಕ್ಕು ಮುಖ್ಯರಾದವರು ಹರಿಪಾದ ಸೇರಿದಾಗ ತಮ್ಮೆಲ್ಲ ಆಸೆ ಬದಿಗಿಟ್ಟು ತಾವು ನೆಡೆವ ಹಾದಿಯನ್ನು ಬಿಟ್ಟು ಸಂಸಾರದ ನೊಗ ಹೊರಬೇಕಾಗುತ್ತದೆ. ಕೆಲವರ ಓದು ನಿಂತರೆ, ಕೆಲವರು ಮದುವೆಯನ್ನೂ ತ್ಯಾಗ ಮಾಡುತ್ತಾರೆ. 

ಟ್ರ್ಯಾಫಿಕ್ ದೀಪ ಕೆಂಪು ನಿಶಾನೆ ತೋರಿದಾಗ ಗಾಡಿ ನಿಲ್ಲಿಸುತ್ತೇವೆ. ಹಳದಿ ಬಂದಾಗ ಸನ್ನದರಾಗಿ ಹಸಿರು ಬಂದಾಗ ಮುಂದೆ ಸಾಗುವುದು ರೂಲ್ಸ್ ಪ್ರಕಾರ ನೆಡೆಯುವ ಪರಿ. ಕೆಂಪು ನಿಶಾನೆ ಇದ್ದಾಗಲೇ ತಮಗೆಲ್ಲ ಅರಿವೂ ಇದೆ ಮನೆಯವರ ಮಾತೇನು ಕೇಳುವುದು ಎಂಬ ಅಹಂಭಾವದಿಂದಲೋ ಅಜ್ಞಾನದಿಂದಲೋ ಮುನ್ನುಗ್ಗಿದಾಗ ಅಪಘಾತವಾಗುವುದು ಖಂಡಿತವೇ ಸರಿ!

ಈಗ ವಾಹನ ಓಟಕ್ಕೂ ಜೀವನ ಓಟಕ್ಕೂ ಸ್ವಲ್ಪ ಸಾಮ್ಯತೆಗಳನ್ನು ಹತ್ತಿರದಿಂದ ನೋಡೋಣ.

ಹಿರಿಯರೊಬ್ಬರ ಮೇಲ್ವಿಚಾರಣೆಯ ಅಡಿಯಲ್ಲಿ ಸಾಗುವ ಕಿರಿಯ ಡ್ರೈವರ್’ಗಳನ್ನು ನೋಡುವಾಗ ಅಪ್ಪ-ಅಮ್ಮ’ನ ಕೈ ಹಿಡಿದು ನೆಡೆಯಲು ಕಲಿವ ಮಕ್ಕಳಂತೆ ಕಾಣುತ್ತೆ. ಕನಿಷ್ಟ ಹೊಸತರಲ್ಲಂತೂ ಶ್ರದ್ದೆಯಿಂದ ಹೇಳಿದಂತೆ ಕೇಳುತ್ತಿರುತ್ತಾರೆ. ಕೈಬಿಟ್ಟು ನೆಡೆವ ಎಳೆಯ ಕಂದನನ್ನು ಕಂಡಾಗ ಆತಂಕ ಮತ್ತು ಸಂತೋಷ ಹೇಗೆ ಒಟ್ಟಿಗೆ ಆಗುತ್ತೋ ಅದೇ ಅನುಭವ ಮಗನೋ ಮಗಳೋ ಮೊದಲ ಬಾರಿಗೆ ಗಾಡಿ ಓಡಿಸುವಾಗಲೂ ಆಗುತ್ತದೆ. 

ಸಾಮಾನ್ಯವಾಗಿ ಮೂರು ಲೇನ್’ಗಳಲ್ಲಿ ಸಾಗುವ ಗಾಡಿಗಳಲ್ಲಿ, ಈ ಲೇನ್’ನಲ್ಲಿ ಇರುವವರಿಗೆ ಆ ಲೇನ್’ಗೆ ಹೋಗುವಾಸೆ. ಆ ಲೇನ್’ನಲ್ಲಿ ಇರುವವರಿಗೆ ಮತ್ತೊಂದು ಲೇನ್ ಸೇರಿ ಧಾವಿಸುವಾಸೆ. ಯಾರಿಗೂ ಅವರವರ ಲೇನ್’ನಲ್ಲಿ ಹೆಚ್ಚಿನ ಅವಧಿ ಸಾಗುವಾಸೆಯೇ ಇಲ್ಲವೇನೋ ಅನ್ನಿಸುತ್ತೆ. ಈ ಪರಿಯ ರೇಸ್ ಕಂಡಾಗ ಅನ್ನಿಸುತ್ತೆ ಸರಿ ಸುಮಾರು ಜನರಿಗೆ ತಾವೇನಾಗಿದ್ದೇವೋ ಅದು ಬಿಟ್ಟು ಮತ್ತೊಂದೇ ಆಗುವಾಸೆ ಅಂತ. ನಿಜವೇ? 

ಉದಾಹರಣೆಯಾಗಿ ಹೇಳಬೇಕು ಅಂದರೆ, ನಮ್ಮ ಮನೆ ಬಳಿ ಒಂದು ದಿನಸಿ ಅಂಗಡಿ ಇತ್ತು. ಅದರ ಮಾಲೀಕ ನನಗೆ ಪರಿಚಿತ. ವ್ಯಾಪಾರ ಚೆನಾಗಿ ನೆಡೀತಿತ್ತು. ಆಗೆಲ್ಲ ನನಗೂ ’ವ್ಯಾಪಾರ’ ಮಾಡಬೇಕು ಅನ್ನಿಸುತ್ತಿತ್ತು. ಅವನೊಮ್ಮೆ ಹೀಗೆ ಮಾತನಾಡುವಾಗ ಹೇಳಿದ "ನಿಮ್ದೇ ಬೆಸ್ಟು ಬಿಡಿ ಸಾರ್. ಕೆಲಸ ಮುಗಿಸಿ ಸಂಜೆ ಮನೆಗೆ ಬಂದರೆ ಟೆನ್ಷನ್ ಫ್ರೀ. ನಮ್ದೋ ಒಂದು ದಿನ ವ್ಯಾಪಾರ ಬುಸ್ ಅಂತ ಎದ್ದರೆ ಇನ್ನೊಂದು ದಿನ ಟುಸ್ ಅಂತ ಮಲಗಿರುತ್ತೆ." ಅಂತ ! ನನಗೆ ಅವರ ಟೆನ್ಷನ್ ಕಾಣಲ್ಲ, ಆತನಿಗೆ ನನ್ನ ಟೆನ್ಷನ್ ಅರಿವಿಲ್ಲ. ಇದೇ ಜೀವನ.

ಹಲವರ ಅಭ್ಯಾಸ ಏನಪ್ಪಾ ಅಂದರೆ ಕಾರಿನಲ್ಲಿ ಸಾಗುವಾಗಲೇ ಲಿಪ್ಸ್ಟಿಕ್ ಬಳಿದುಕೊಳ್ಳುವಿಕೆ, ಮೆಸೇಜ್ ಕಳಿಸುವಿಕೆ, ಮಕ್ಕಳೊಂದಿಗೆ ಮಾತನಾಡುವುದು, ಆಫೀಸಿನ ಕಾನ್ಫೆರೆನ್ಸ್ ಕಾಲ್’ನಲ್ಲಿ ಮಾತನಾಡುವುದು, ಫೋನಿನಲ್ಲಿ ಹರಟುವುದು, ಏನೋ ತಿನ್ನುವುದು, ಮತ್ತೇನೋ ಕುಡಿಯುವುದು ಹೀಗೆ. ಕಾರಿನಲ್ಲಿ ಕೂತಾಗಲೂ ಬಿಜಿ ಜೀವನ. ಇದೆಲ್ಲ ನೋಡುವಾಗ ಇಂದಿನ ದಿನಗಳಲ್ಲಿ ನಾವು ನಮ್ಮ ಮಕ್ಕಳನ್ನು ಬೆಳೆಸುವ ರೀತಿಯ ಹೋಲಿಕೆ ಎದ್ದು ಕಾಣುತ್ತದೆ. 

ಮಕ್ಕಳು ಶಾಸ್ತ್ರೀಯ / ಪಾಶ್ಚಾತ್ಯ ಸಂಗೀತದ ಅಭ್ಯಾಸ, ವಾದ್ಯ ಸಂಗೀತದ ಕ್ಲಾಸು, ನೃತ್ಯದ ತರಬೇತಿ, ಶಾಲೆಯಲ್ಲಿ ಶಾಲೆಯ ಸಮಯದ ನಂತರದ ಚಟುವಟಿಕೆಗಳು, ಟ್ಯೂಷನ್ ಕ್ಲಾಸು, ಮತ್ತಿನ್ಯಾವುದೋ ಸ್ಪರ್ದೆಯಲ್ಲಿ ಪಾಲ್ಗೊಳ್ಳುವಿಕೆ ಎಂದೆಲ್ಲ ಇತರೆ ಚಟುವಟಿಕೆಗಳನ್ನು ಶಾಲೆಯ ಕೆಲಸದ ಜೊತೆಗೆ ಕಲೆಸಿಕೊಂಡಿರುತ್ತಾರೆ. ಅರ್ಥಾತ್, ತಂದೆ-ತಾಯಿ ಮಕ್ಕಳ ತಟ್ಟೆಯ ತುಂಬ ಚಟುವಟಿಕೆಗಳ ಖಾದ್ಯಗಳನ್ನು ತುಂಬಿರುತ್ತಾರೆ. ಇಂತಿಷ್ಟು ಅವಧಿಯಲ್ಲಿ ಎಲ್ಲವನ್ನೂ ಸಾಧಿಸಬೇಕು. ಇದು ಇಂದಿನ ತ್ವರಿತ ಜೀವನದ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಇಷ್ಟೆಲ್ಲ ಕೆಲಸಗಳ ನಡುವೆ ತಿನ್ನೋಕ್ಕೂ ಪುರುಸೊತ್ತಿಲ್ಲ ಎಂದಾಗ ಆಪದ್ಬಾಂಧವನಂತಿದ್ದ ’ಮ್ಯಾಗಿ’ಗೂ ಕಲ್ಲು ಹಾಕಿದ್ದಾರೆ ಸರಕಾರ !

ಈಗ ಮತ್ತೆ ಗಾಡಿ ಪಯಣಕ್ಕೆ ಹಿಂದಿರುಗೋಣ. ಒಂದು ಬೀದಿಯಲ್ಲಿ ಸಾಗುವಾಗ ಒಂದಷ್ಟು ಗಾಡಿಗಳು ನಮ್ಮೊಂದಿಗೆ ಇರುತ್ತದೆ. ನಾವು ಸಾಗುವಾಗ ಕೆಲವು ಗಾಡಿಗಳು ಬೇರೆ ದಾರಿ ಹಿಡಿಯುತ್ತೆ. ಹಲವು ಗಾಡಿಗಳು ನಮ್ಮೊಂದಿಗೆ ಸೇರಿಕೊಳ್ಳುತ್ತೆ. ನಾವೇ ಮತ್ತೊಂದು ಬೀದಿ ಹಿಡಿದು ಸಾಗುವಾಗ, ಆ ಹೊಸ ಹಾದಿಯಲ್ಲಿ ಆಗಲೇ ಓಡುತ್ತಿದ್ದ ಮತ್ತೊಂದಿಷ್ಟು ಗಾಡಿಗಳನ್ನು ನಾವು ಸೇರುತ್ತೇವೆ. ಈಗ ಸಾಗುವ ಬೀದಿಯಲ್ಲಿ ಇನ್ನೊಂದಿಷ್ಟು ಕಾರುಗಳು ಸೇರಿದಾಗ ನಮ್ಮೊಂದಿಗೇ ಬಂದ ವಾಹನಗಳು ನಮ್ಮೊಂದಿಗಿದ್ದೂ ಇಲ್ಲದಂತಿರಬಹುದು. ಒಟ್ಟಾರೆ ಹೇಳಿದರೆ ಹಳಬರೊಂದಿಗೆ ಹೊಸಬರು ಸೇರುತ್ತಾರೆ, ಹೊಸಬರೊಂದಿಗೆ ಹಳಬರು ಸೇರುತ್ತಾರೆ. ಇದೇ ದಿನ ನಿತ್ಯದ ಗಾಡಿ ಪಯಣ.

ಜೀವನವೂ ಹಾಗೆಯೇ. ಬಂಧು-ಮಿತ್ರರು ಬಂದು ಹೋಗುವುದು ಸಹಜ. ಕೆಲವೊಂದು ನಿಕಟ ಎನಿಸಿಕೊಂಡಿದ್ದೂ ಹಾದಿಗಳು ಬೇರೆಯಾದಾಗ ನಿಕಟತೆ ಕಡಿಮೆಯಾಗಬಹುದು, ಸಂಪರ್ಕವೇ ನಿಲ್ಲಲೂಬಹುದು. ಕಾಕತಾಳೀಯವಾಗಿ ಎಂದೋ ಮತ್ತೊಮ್ಮೆ ಸಿಗಲೂಬಹುದು ಅಥವಾ ಎಂದೂ ಸಿಗದ ಹಾಗೆ ಹೋಗಿಬಿಡಲೂಬಹುದು. ಕೆಲವೇ ಬಾರಿ ಚಿಕ್ಕಂದಿನಲ್ಲೇ  ಉಂಟಾದ ಸ್ನೇಹ ಕೊನೆ ಘಳಿಗೆಯವರೆಗೂ ಸಾಗುತ್ತವೆ. ಅದಕ್ಕೂ ಪುಣ್ಯ ಮಾಡಿರಬೇಕು ಬಿಡಿ. ನಿಮ್ಮೊಂದಿಗೇ ಹೊರಟ ನಿಮ್ಮ ಎದುರು ಮನೆಯಾತ ನಿಮ್ಮ ಕಛೇರಿಯವನೇ ಆಗಿರಬಹುದು ಅಲ್ಲವೇ?

ಎಷ್ಟೋ ಸಾರಿ ಕೆಲವು ಗಾಡಿಗಳು ಅತೀ ತರಾತುರಿಯಿಂದ ಆ ಲೇನು ಈ ಲೇನು ಅಂತ ವೇಗವಾಗಿ ಸಾಗುತ್ತ ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಸಾಗುತ್ತಿರುತ್ತದೆ. ಇದು ಬಿಸಿ ರಕ್ತದ ಯುವ ಪೀಳಿಗೆಯನ್ನು ನೆನಪಿಸುತ್ತದೆ. ಹಲವೊಮ್ಮೆ, ಯಾರಿಂದ ಎನಗೇನು ಎಂಬಂತೆ ತಮ್ಮದೇ ನಿಧಾನಗತಿಯಲ್ಲಿ ಯಾವುದಕ್ಕೂ ಕ್ಯಾರೆ ಎನ್ನದೇ ಸಾಗುವ ಕಾರುಗಳೂ ಇರುತ್ತವೆ. ಅಚ್ಚರಿ ಎಂದರೆ ಹಾಗೆ ಹೋಗುತ್ತಿರುವವರು ಕೊಂಚ ವಯಸ್ಸಾದವರೇ ಆಗಿರುತ್ತಾರೆ. ನನ್ನ ಜೀವನ ಆಯ್ತು, ನಾನು ಸಾಗೋದೇ ಹೀಗೆ ಎಂಬ ನಿರ್ಲಿಪ್ತತೆ ಗಾಡಿ ಓಡಿಸುವಲ್ಲಿಯೂ ಕಾಣಬಹುದು.

ಏನೋ ಕಾರಣ, ಏನೋ ತ್ವರಿತ ಎಂದಾಗಿ ಕೆಂಪು ನಿಶಾನೆಯನ್ನೂ ಗಮನಿಸದೆ ಅಥವಾ ಗಮನಿಸಿಯೂ ಧಾವಿಸಿದಾಗ ಪೋಲೀಸಿನವನ ಕೈಗೆ ಸಿಕ್ಕಿ ಹಾಕಿಕೊಳ್ಳುವುದೂ ಗಾಡಿ ಪಯಣದ ಒಂದು ಭಾಗ. ಇದನ್ನು, ಜೀವನದಲ್ಲಿ ಬಯಸದೇ ಬರುವ ಅನಿರೀಕ್ಷಿತ ಪ್ರಸಂಗಗಳಿಗೆ ಹೋಲಿಸಬಹುದು. ತಾತ್ಕಾಲಿಕ ತಡೆಗಳು ಎಲ್ಲರ ಜೀವನದ ಅವಿಭಾಜ್ಯ ಅಂಗ. ಏನೋ ಕೆಲಸವಾಗಬೇಕು ಆದರೆ ಸದ್ಯಕ್ಕೆ ಕೈಯಲ್ಲಿ ಕಾಸಿಲ್ಲ, ನಾಲ್ಕು ದಿನ ಕಾಯಬೇಕು. ಸಮಯಕ್ಕೆ ಸರಿಯಾಗಿ ಏನೋ ಒದಗಿಬಾರದೆ ಕೆಲಸ ನಿಧಾನವಾಗುತ್ತದೆ, ಹೀಗೆ. ಕೆಲಸ ಬೇಗ ಆಗಲಿ ಎಂದು ನಾವಂದುಕೊಳ್ಳುವಾಗ ಕೆಲಸ ಮಾಡಿಕೊಡುವಾತ ಯಾವುದೋ ಊರು-ಕೇರಿ ಅಂತ ಸುತ್ತಲು ರಜೆ ಹಾಕಿರುತ್ತಾನೆ.

ಕೆಲವೊಮ್ಮೆ ಯಾವ ಅಡಚಣೆ ಇಲ್ಲದೇ, ಗಾಡಿ ನಿಧಾನವಾಗಲೋ, ವೇಗವಾಗಲೋ ಸಾಗುತ್ತಾ ಇರುತ್ತೆ ... ಮುಂದೆ ಹೋಗುತ್ತಿರುವ ಗಾಡಿ ಇದ್ದಕ್ಕಿದ್ದಂತೆ ವೇಗ ಕಡಿಮೆ ಮಾಡಿದಾಗ ಗಕ್ಕನೆ ಬ್ರೇಕ್ ಒತ್ತುವಂತಾಗುತ್ತದೆ. ಟ್ರ್ಯಾಫಿಕ್ ಜ್ಯಾಮ್’ನಿಂದಾಗಿ ಗಾಡಿ ನಿಲ್ಲಲೂ ಬಹುದು. 

ಯಾರ ಹಂಗಿಲ್ಲದೇ ನೆಮ್ಮದಿಯಾಗಿ ಮುಂದೆ ಸಾಗುತ್ತಿದ್ದ ’ಡಾಟ್ ಕಾಮ್’ ಬಿಜಿನೆಸ್ಸು ಗಕ್ಕನೆ ನಿಂತಾಗ ಜನ ಜೀವನ ಇದ್ದಕ್ಕಿದ್ದಂತೆ ನಿಂತಿದ್ದು ಹೀಗೆ. ನಿಂತಿದ್ದೆರಡು ಕಂಬಕ್ಕೆ ಪಕ್ಷಿಯೊಂದು ಬಂದು ಬಡಿದು ಉರುಳಿಸಿದಾಗ, ಆರ್ಥಿಕ ವ್ಯವಸ್ಥೆಯ ನಿತಂಬವೇ ಅಲುಗಾಡಿ ಜಗತ್ತಿನಾದ್ಯಂತ ಜನ ಜೀವನ ಹತ್ತು ಹಲವು ರೀತಿ ಹೀಗೆ ಗಕ್ಕನೆ ನಿಧಾನಗೊಂಡಿದ್ದು ಅಥವಾ ನಿಂತೇ ಹೋಗಿತ್ತು. ನಿಂತ ಗಾಡಿ ಮುಂದೆ ಸಾಗಲು ಎಷ್ಟು ಅವಧಿ ಬೇಕಾಯ್ತು ಎನ್ನುವುದು ಇಲ್ಲಿ ಅಪ್ರಸ್ತುತ.

ಕೆಲವೊಮ್ಮೆ ರೋಡಿನಲ್ಲಿ ಯಾವುದೋ ಅಪಘಾತವಾಗಿರುತ್ತೆ. ಪೋಲೀಸರು ತಮ್ಮ ಕಾರ್ಯ ನಿರ್ವಹಿಸುತ್ತಿರುತ್ತಾರೆ ಎನ್ನುವುದು ಒಂದು ಕಡೆ ಆದರೆ, ಅಲ್ಲೇನಾಗಿದೆ? ನಮಗೆ ಪರಿಚಿತರಾದವರ ಗಾಡಿಯಾ? ಎಂದೆಲ್ಲ ಕುತೂಹಲ ಅಥವಾ ಆತಂಕ ಇತರೆ ಟ್ರ್ಯಾಫಿಕ್’ಗೆ. ಹಾಗಾಗಿ ಗಾಡಿಗಳು ಮಂದಗತಿಯಲ್ಲಿ ಸಾಗುತ್ತವೆ. ಒಮ್ಮೆ ಆ ದೃಶ್ಯ ಮರೆಯಾಗುತ್ತಿದ್ದಂತೆ ಮತ್ತೆ ಮಾಮೂಲಿ.

ದಿನ ನಿತ್ಯದ ಜೀವನದಲ್ಲಿ ಯಾವುದಾದರೂ ಸಾವು ಕಿವಿಗೆ ಬಿದ್ದಾಗ ಅರಿವಿಲ್ಲದಂತೆಯೇ ಮನಸ್ಸು ಮತ್ತು ಕೆಲಸಗಳು ಸ್ವಲ್ಪ ನಿಧಾನವಾಗುತ್ತದೆ. ಅರ್ಥವಿಲ್ಲದ ವೈರಾಗ್ಯ ಮನದಲ್ಲಿ ಮೂಡುತ್ತದೆ. ಸಾವಿನ ಚಿತ್ರಣವನ್ನು ನಿಮ್ಮ ಜೀವನದಲ್ಲಿ ಕಂಡಿರಬಹುದಾದ ನಷ್ಟಕ್ಕೆ ಹೋಲಿಸಿ ಇನ್ನೊಬ್ಬರ ದು:ಖದಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ಮನಸ್ಸು ತಮಣೆಗೆ ಬಂದ ಮೇಲೆ ಮತ್ತೆ ಜೀವನ ಮಾಮೂಲಿ.

ಗಾಡಿ ಪಯಣವೇ ಆಗಲಿ, ಜೀವನ ಪಯಣವೇ ಆಗಲಿ ಒಟ್ಟಾಗಿ ಸಾಗುವುದಕ್ಕಿಂತ ಒಂದಾಗಿ ಸಾಗಿದಲ್ಲಿ ಪಯಣವನ್ನು ಸೊಗಸಾಗಿಸಬಹುದು. ಹಾಗೆಂದರೇನು? ಗಾಡಿಯ ನಾಲ್ಕು ಸೀಟಿನಲ್ಲಿ ನಾಲ್ಕು ಜನ ಕೂತರೂ, ಮೂರೂ ಮಂದಿ ತಮ್ಮದೇ ಲೋಕದಲ್ಲಿ ಮುಳುಗಿದ್ದಾಗ ಆ ಪಯಣ ಒಟ್ಟಗಿದ್ದರೂ ಅನ್ಯರಾಗೇ ಮುಂದೆ ಸಾಗಿದಂತೆ. ಸುಖ:ದುಖಗಳನ್ನು ಹಂಚಿ, ಮಾತು ಕತೆಯಾಡಿಕೊಂಡು ಒಟ್ಟಾರೆ ಸಾಗಿದರೆ ಅದು ಒಂದಾಗಿ ಸಾಗಿದಂತೆ.

ಒಂದಂತೂ ನಿಜ ... ಒಟ್ಟಾಗಿ ಸಾಗಲಿ, ಒಂದಾಗಿ ಸಾಗಲಿ ಅವರವರ ನಿಲ್ದಾಣ ಬಂದಾಗ ಅವರು ಇಳಿಯಲೇಬೇಕು. ಅವರಿಳಿದಾಗ ನಾವು ಅಲ್ಲೇ ನಿಲ್ಲಲು ಆಗುವುದಿಲ್ಲ. ಮುಂದೆ ಸಾಗಲೇಬೇಕು. ನಿಮ್ಮನಿಳಿಸಿದ ಡ್ರೈವರ್ ಆಗಲಿ, ಟ್ಯಾಕ್ಸಿಯಾಗಿ, ಆಟೋರಿಕ್ಷವಾಗಲಿ ನೀವಿಳಿದ ಮೇಲೆ ಮುಂದೆ ಸಾಗುತ್ತದೆ. ನಿಮ್ಮ ಜಾಗ ಇನ್ನೊಬ್ಬರದಾಗುತ್ತದೆ. ಗಾಡಿ ನಿಮ್ಮದೇ ಆಗಿದ್ದರೂ ಒಮ್ಮೆ ಇಳಿಯಲೇಬೇಕು. ಇದೇ ಪಯಣ. ಇದೇ ಜೀವನ. ಯಾರೂ ಅನಿವಾರ್ಯವಲ್ಲ !!!

ಪಯಣ ಇಷ್ಟವಾಯಿತೇ?

 

Comments

Submitted by kavinagaraj Sat, 06/06/2015 - 08:37

ಚೆನ್ನಾಗಿ ಬರೆದಿರುವಿರಿ, ಖುಷಿಯಾಯಿತು, ಭಲ್ಲೆಯವರೇ.
ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ ||

ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||