ಬದುಕ ದಾರಿಗೆ ಬೆಳಕಿತ್ತ ದೇವರು
ಬದುಕ ದಾರಿಗೆ ಬೆಳಕ ದೇವನು
ಪದವಿ ಗಳಿಸಲು ದಾರಿದಾತನು
ಕದಕವನಳಿಸುತಲೀ ಜ್ಞಾನದ ದೀಪ ಹಚ್ಚುವನು
ಕುಧರ ಹತ್ತುವ ಸಾಸ ಮಾಡುತ
ಗುದುಕಿ ನಿಂತಿಹ ದೇವ ಮಂದಿರ
ನದರು ಚೆಲ್ಲುತ ಬುದ್ಧಿ ಹೇಳುತ ಮಾರ್ಗ ತೋರುವನು||
ಬಾಳ ಬಂಡಿಗೆ ಹೂವ ಹಾಸದು
ನಾಳೆ ಚಂದಿರ ಬಾನ ಸೊಗಸದು
ತಾಳ ಮೇಳದ ಬೆಳೆಯ ಬೆಳೆಸುವ ಗಣ್ಯ ಪುರುಷನಿವ
ಪಾಳ ದೈವನು ತಮವ ತೊಲಗಿಸಿ
ಗಾಳಿ ಬೀಸಿಸಿ ಸುಗುಣ ಪಾಲಿಸಿ
ಮಾಳೆ ನಿಲ್ಲಿಸಿ ಮೌಲ್ಯ ಕಲಿಸಿದ ಶರಣು ದೇವನಿವ||
ಆಟದೊಂದಿಗೆ ಖುಷಿಯ ಬಿತ್ತುತ
ಪಾಠದಲ್ಲಿಯೆ ಸಹನೆ ಬೆಳೆಸುವ
ಬಾಟದೊಂದಿಗೆ ಬದುಕ ಕಟ್ಟಿಸಿ ಛಲದಿ ಮೆರೆಸುವನು
ಸಾಟಿಯಿಲ್ಲವೆ ಗುರುವ ಸಾಲಿಗೆ
ಹಾಟಕದೊಳಗೆ ಮಿಂಚೊ ಹೊಳಪಿದು
ಮಾಟಕೂಟದ ಕೆತ್ತಿ ಮೂರ್ತಿಯ ರೂಪ ನೀಡುವುದು||
ದೇವ ಗುರುವಿಗೆ ಪಾದಕೆರಗುತ
ಭಾವ ಪೂರ್ಣದಿ ನಮನ ಕೋರುತ
ಜೀವ ಬೆಳಗುವ ಬುದ್ದಿದಾತನ ನಮಿಸಿ ಬೇಡುವೆವು
ಹಾವದೊಂದಿಗೆ ಬೆರತು ಬೆಸೆಯುವ
ಮಾವು ಚಿಗುರಿನ ಹಸಿರ ಭಾತಿಯು
ಠೀವಿಯೊಂದಿಗೆ ಬೀರಿ ಮನದಲಿ ನೆಲೆಯನೂರಿಹನು||
ಕತ್ತಲಳಿಸುತ ಬೆಳಕ ತೋರುತ
ಜತ್ತುಗೂಡುತ ಬಂಧ ಬೆಸೆಯುತ
ಕಿತ್ತ ಮಕ್ಕಳ ಮನವ ಗಮನಿಸಿ ಪಾಠ ಮಾಡುತಲಿ
ಗತ್ತು ಘನತೆಲಿ ಹೆಸರು ಪಡೆದನು
ಸುತ್ತುವರಿಯುತ ಶಿಸ್ತು ಕಲಿಸುತ
ಬೆತ್ತ ಬೀಸುತ ಬುದ್ಧಿ ಕಲಿಸಿದ ಗುರುಗೆ ವಂದನೆಯು||
-ಅಭಿಜ್ಞಾ ಪಿ ಎಮ್ ಗೌಡ
(ಭಾಮಿನಿ ಷಟ್ಪದಿಯಲ್ಲಿ)
