ಬದುಕ ಬದಲಿಸುವ ಕತೆಗಳು…(ಭಾಗ 3)
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಉಡುಪಿಯ ನಿವಾಸಿ ಡಾ. ಶಶಿಕಿರಣ್ ಶೆಟ್ಟಿ ಇವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಗಳ ಸಂಗಮ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ, ಅನಾರೋಗ್ಯಕ್ಕೆ ತುತ್ತಾಗಿರುವವರ, ಆರ್ಥಿಕ ಪರಿಸ್ಥಿತಿ ಹದಗೆಟ್ಟು ದೀನ ಸ್ಥಿತಿಯಲ್ಲಿರುವವರನ್ನು ಪೊರೆಯುವ ಸಾಹಸಿ. ಹೋಮ್ ಡಾಕ್ಟರ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಶಶಿಕಿರಣ್ ಶೆಟ್ಟಿಯವರು ಬಹಳಷ್ಟು ಮಂದಿಗೆ ಹೊಸ ಬಾಳು ಕೊಡುವಲ್ಲಿ ನೆರವಾಗಿದ್ದಾರೆ. ನೂರಾರು ಮಂದಿ ಇವರ ಹೊಸ ಹೊಸ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಉಚಿತ ಆಂಬುಲೆನ್ಸ್ ಸೇವೆಯಾಗಿರಬಹುದು, ಕೃತಕ ಕಾಲುಗಳ ಜೋಡನೆಯಾಗಿರಬಹುದು, ಉಪ್ಪಿನಕಾಯಿ ಭಟ್ಟರ ಡಯಾಲಿಸಿಸ್ ನ ವೆಚ್ಚವಾಗಿರಬಹುದು ಎಲ್ಲವನ್ನೂ ಹೊಸ ಹೊಸ ಯೋಜನೆಗಳ ಮುಖಾಂತರ ಎಲ್ಲರನ್ನೂ ಒಗ್ಗೂಡಿಸಿ ಅವರಿಗೆ ದೊರಕುವ ಪುಣ್ಯದಲ್ಲಿ ನಮಗೆಲ್ಲರಿಗೂ ಪಾಲು ದೊರೆಯುವಂತೆ ಮಾಡಿದ್ದಾರೆ. ದಿನೇಶ್ ಎಂಬ ಹದಿನೈದು ವರ್ಷದ ಹುಡುಗನ ಚಿಕಿತ್ಸೆಗೆ (ಅಪ್ಲಾಸ್ಟಿಕ್ ಅನಿಮಿಯಾ) ಬೇಕಾದ ಸುಮಾರು ಇಪ್ಪತ್ತು ಲಕ್ಷ ಹಣವನ್ನು ಕೇವಲ ೨೨ ದಿನಗಳಲ್ಲಿ ಸಂಗ್ರಹಿಸಿ ನೀಡಿದ ಶ್ರೇಯಸ್ಸು ಇವರಿಗೇ ಸಲ್ಲಬೇಕು. ದಾನಿಗಳು ಯಾರೇ ಇರಲಿ ಸಂಗ್ರಹವಾದ ಹಣವನ್ನು ಸೂಕ್ತ ಲೆಕ್ಕಾಚಾರದೊಂದಿಗೆ ತಲುಪಿಸಬೇಕಾದ ಹೊಣೆ ಬಹಳ ಮಹತ್ವದ್ದು. ದಿನೇಶ್ ನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದು ಈಗ ಆತ ಚೇತರಿಕೊಳ್ಳುತ್ತಿದ್ದು ಶೀಘ್ರವಾಗಿ ನಮ್ಮೆಲ್ಲರ ಎದುರು ಬರಲಿದ್ದಾನೆ ಎನ್ನುವುದು ಎಲ್ಲರಿಗೂ ನೆಮ್ಮದಿ ತರುವ ಸಂಗತಿ.
ಡಾ ಶಶಿಕಿರಣ್ ಶೆಟ್ಟೆಯವರ ಮತ್ತೊಂದು ಪ್ರತಿಭೆಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇದೆ. ಅದು ಪುಟ್ಟ ಪುಟ್ಟ ಜೀವನೋಲ್ಲಾಸ ಹೆಚ್ಚಿಸುವ ಕಥೆ ಬರೆಯುವುದು. ಇವರು ಬರೆದ ಕಥೆ ಎಷ್ಟೇ ಸಣ್ಣದಾಗಿದ್ದರೂ ಅದು ಬದುಕಿನ ಮೌಲ್ಯವನ್ನು ಹೇಳುತ್ತದೆ. ಕಥೆ ಓದುವಾಗ ನಿಮ್ಮ ಕಣ್ಣು ತೇವವಾಗುತ್ತದೆ. ಅದೆಷ್ಟೋ ಕಥೆಗಳು ಇವರ ಅನುಭವದ ಮೂಸೆಯೊಳಗಿನಿಂದ ಜನ್ಮತಾಳಿವೆ. ಸಣ್ಣ ಕಥೆ ನೋಡಲು, ಓದಲು ಸಣ್ಣದಿರಬಹುದು ಆದರೆ ಅದನ್ನು ಬರೆಯಲು ಬಹಳ ಸಾಹಸವೇ ಬೇಕು. ಏಕೆಂದರೆ ಕೆಲವೇ ಸಾಲುಗಳಲ್ಲಿ ಓಡುವ ಕಥೆ ಒಂದು ತಾರ್ಕಿಕ ಅಂತ್ಯ ಕಾಣಬೇಕು, ಓದುಗನಿಗೂ ಅದು ಮನಸ್ಸಿಗೆ ನಾಟಬೇಕು. ಇದಕ್ಕಿಂತ ಮುಖ್ಯವಾಗಿ ಅದು ಸಮಾಜಕ್ಕೆ ಒಂದು ಸಂದೇಶ ಕೊಡಬೇಕು. ಈ ಮೂರು ಅಂಶಗಳನ್ನು ಬಹಳ ಚೆನ್ನಾಗಿ ಅರಿತಿರುವ ಡಾಕ್ಟರು ತಮ್ಮ ಕಥಾ ಸಂಕಲನಕ್ಕೆ ‘ಬದುಕ ಬದಲಿಸುವ ಕತೆಗಳು' ಎನ್ನುವ ಸೂಕ್ತವಾದ ಹೆಸರನ್ನೇ ಇರಿಸಿದ್ದಾರೆ. ಈಗಾಗಲೇ ಎರಡು ಸಂಕಲನಗಳು ಪ್ರಕಟವಾಗಿ ಜನ ಮೆಚ್ಚುಗೆ ಪಡೆದು ಮೂರನೇ ಸಂಕಲನ ಬಿಡುಗಡೆಯ ಹಾದಿಯಲ್ಲಿದೆ.
ಬದುಕ ಬದಲಿಸುವ ಕತೆಗಳು ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ವಿ ಮನೋಹರ್. ಅವರು ತಮ್ಮ ಮುನ್ನುಡಿಯಲ್ಲಿ “ಬದುಕು ಕೇವಲ ನೀರ ಮೇಲಿನ ಗುಳ್ಳೆ, ಉಸಿರು ಇರುವಷ್ಟು ದಿನವಷ್ಟೇ ನಿನ್ನ ಮೆರೆದಾಟ. ಉಸಿರು ನಿಂತ ಬಳಿಕ ಮಣ್ಣಿನ ಕೆಳಗೆ ನಿನ್ನ ಮೈ ಮೇಲೆ ಹರಿಯುವ ಹುಳವನ್ನು ಕೂಡಾ ದೂಡಲಾರೆ. ನೆನಪಿರಲಿ ಇದು ಡಾಕ್ಟರ್ ಬರೆದ ‘ಹಣವ ನೋಡಿದ ಹೆಣ ಹೇಳಿದ್ದೇನು?’ ಕಥೆಯ ನೀತಿ. ಇದು ಈ ಪುಸ್ತಕದಲ್ಲಿ ಡಾಕ್ಟರ್ ಬರೆದ ೬ ನೆಯ ಕಥೆ. ಹೀಗೆ ನಮ್ಮ ಸುತ್ತ ಮುತ್ತ ನಡೆದ, ನಡೆಯುವ ಸಾವಿರಾರು ಮನ ಮುಟ್ಟುವ ಘಟನೆ ಕಥೆಗಳನ್ನು ನೋಡಿ ಅದರಿಂದಲಾದರೂ ಮನುಷ್ಯ ನೀತಿ ಪಾಠ ಕಲಿಯಲಿ ಎಂಬ ಸದುದ್ದೇಶ ಡಾ. ಶಶಿಕಿರಣ್ ಶೆಟ್ಟಿಯವರದ್ದು.
ಪ್ರತಿ ಕಥೆ ಸರಾಗವಾಗಿ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ನಿಧಾನವಾಗಿ ಯೋಚಿಸುವಂತೆ ಮಾಡುತ್ತದೆ. ಪ್ರತಿ ಕಥೆಯು ಬಹಳ ಪರಿಣಾಮಕಾರಿಯಾಗಿರುವುದು ಯಾಕೆಂದರೆ ಇವೆಲ್ಲ ನೈಜ ಘಟನೆ ಆಧಾರಿತವೂ ಆಗಿದೆ.
ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಇವರ ಸೂಕ್ಷ್ಮಾವಲೋಕನ ಸ್ಪಂದನ ಬೆರಗು ಮೂಡಿಸುವಂಥದ್ದು. ಕಣ್ಣೆದುರೇ ಯಾರಾದರೂ ನರಳಾಡುತ್ತಿದ್ದರೂ ಸ್ಪಂದಿಸದ ಜನರಿರುವ ಸಮಾಜದಲ್ಲಿ ಡಾಕ್ಟರ್, ಅನ್ಯರ ನೋವಿಗೆ ಮಿಡಿಯುತ್ತಾರೆ ಮತ್ತು ನಮ್ಮ ಮನಸ್ಸನ್ನು ಪರಿವರ್ತನೆ ಮಾಡುವ ಪ್ರಯತ್ನವನ್ನೂ ಮಾಡುತ್ತಾರೆ. ಹೀಗೆ ಡಾಕ್ಟರ್ ಶಶಿಕಿರಣ್ ಶೆಟ್ಟಿಯವರ ‘ಬದುಕ ಬದಲಿಸುವ ಕತೆಗಳು' ಪ್ರತಿಯೊಬ್ಬರ ಮನಸ್ಸು ಹೃದಯವನ್ನು ಮುಟ್ಟಲಿ, ತಟ್ಟಲಿ ಎಂದು ಆಶಿಸುತ್ತೇನೆ'’ ಎಂದು ಶುಭ ಹಾರೈಸಿದ್ದಾರೆ.
ಪುಸ್ತಕದ ಬೆನ್ನುಡಿಯಲ್ಲಿ ಎರಡು ಪುಟ್ಟ ಕಥೆಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಒಂದು ‘ಮಾತೃ ಪ್ರೀತಿ'. "ನಿನ್ನೆ ಮದರ್ಸ್ ಡೇಗೆ ಅಮ್ಮನೊಂದಿಗೆ ಸೆಲ್ಫೀ ಕ್ಲಿಕ್ಕಿಸಿ, ಭರ್ಜರಿ ಊಟ ಮಾಡಿ ವಿಡಿಯೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಜಗ ಮೆಚ್ಚಿದ ಮಗ, ತಾಯಿಗೆ ತಕ್ಕ ಮಗ, ಅದ್ಭುತ ಮಾತೃ ವಾತ್ಸಲ್ಯ ಎಂದು ನೆಟ್ಟಿಗರಿಂದ ಅವಾರ್ಡ್ ಸ್ವೀಕರಿಸಿದ್ದ ಮಗ ಇಂದು ಅಮ್ಮನ ಆಶೀರ್ವಾದ ಪಡೆದು ತನ್ನ ಇನ್ನೋವಾ ಕಾರಿನಲ್ಲಿ ಆಕೆಯನ್ನು ವೃದ್ಧಾಶ್ರಮಕ್ಕೆ ಮರಳಿ ಬಿಟ್ಟು ಬಂದಿದ್ದ.” ಈ ನಾಲ್ಕು ಸಾಲಿನ ಕಥೆಯೇ ಇಂದಿನ ಸಮಾಜದಲ್ಲಿನ ದುರಂತದ ಬಗ್ಗೆ ಹೇಳುತ್ತಿದೆ. ಬದುಕಿಡೀ ಮಕ್ಕಳಿಗಾಗಿ ಜೀವ ತೇಯ್ದ ಅಪ್ಪ ಅಮ್ಮನವರಿಗೆ ವೃದ್ಧಾಪ್ಯದಲ್ಲಿ ಮಕ್ಕಳ ಮನೆಯಲ್ಲೊಂದು ಸ್ಥಾನವಿಲ್ಲದೇ ಇರುವುದೇ ಬಹಳ ಬೇಸರದ ಸಂಗತಿ.
ಪುಸ್ತಕದ ಪರಿವಿಡಿಯಲ್ಲಿ ಭರ್ತಿ ೧೦೧ ಕಥೆಗಳಿವೆ. ಇವೆಲ್ಲವೂ ಜೀವೋಲ್ಲಾಸವನ್ನು ತುಂಬುವ ನಿಜಕ್ಕೂ ಬದುಕ ಬದಲಿಸುವ ಕತೆಗಳೇ... ಈ ಕೃತಿಯಲ್ಲಿನ ಕತೆಗಳು ಒಂದಕ್ಕಿಂತ ಒಂದು ಸೊಗಸಾಗಿವೆ. ಪ್ರತಿಯೊಂದೂ ಬದುಕಿನ ಒಂದು ಪಾಠವನ್ನು ಹೇಳುತ್ತವೆ. ಅದರಲ್ಲೂ ‘ಮಾನವೀಯತೆ ಪ್ರಪಂಚದ ಅತ್ಯಂತ ಶ್ರೇಷ್ಟ ಧರ್ಮ', ಒಂದು ಹೆತ್ತವರು ಹಾಗೂ ಹತ್ತು ಹೆತ್ತವರು, ಕೃಷ್ಣಾರ್ಪಣಮ್, ರೂಮ್ ನಂಬರ್ ೨೦೬, ಖಡಕ್ ಡಿಸಿ Vs ಒಳ್ಳೆಯ ಡಿಸಿ, ನಿನ್ನೆಗಳ ನೆನಪು ಮಧುರ, ಮೇರಾ ಡ್ಯಾಡಿ ನಂಬರ್ ಒನ್, ರೋಕಿ… , ಎಚ್ಚರಿಸುವುದು ತಪ್ಪಲ್ಲ' ಮೊದಲಾದ ಕಥೆಗಳು ಓದಿದ ಬಳಿಕವೂ ಮನಸ್ಸಿನಿಂದ ಮಾಸುವುದೇ ಇಲ್ಲ. ಅಷ್ಟೊಂದು ಹಿಡಿದಿಡುತ್ತವೆ. ನನಗೆ ಬಹಳ ಬಹಳ ಇಷ್ಟವಾದ (ಎಲ್ಲವೂ ಇಷ್ಟವಾದ ಕತೆಗಳೇ) ಕಥೆ ಎಂದರೆ 'ಹುಳಿ ಮಾವಿಗಿಂತ ಸಿಹಿ ಮಾವನ್ನೇ ಹೆಚ್ಚು ಜನ ಬಯಸುತ್ತಾರೆ' ಎನ್ನುವ ಕಥೆ. ಈ ಶೀರ್ಷಿಕೆಯಲ್ಲೇನು ವಿಶೇಷ? ಎಲ್ಲರಿಗೂ ಸಿಹಿಯೇ ಅಲ್ಲವೇ ಬೇಕಾದದ್ದು ಎನ್ನುವ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಆದರೆ ಆ ಕಥೆಯನ್ನು ನಿರೂಪಿಸಿದ ರೀತಿ ಮಾತ್ರ ಅದ್ಭುತ. ೨೮ ವರ್ಷ ದಾಟಿದ ನಿರ್ಮಲಾ ಎಂಬ ಹುಡುಗಿ ತನ್ನ ಮದುವೆಯ ಬಗ್ಗೆ ಚಿಂತೆ ಮಾಡುತ್ತಿರುವಾಗ ಆಕೆಯ ಅಜ್ಜಿ ಹೇಳಿದ್ದು ಎರಡೇ ಮಾತು. ಹಿರಿಯರು ಸಿಕ್ಕಾಗ ಕಾಲಿಗೆ ನಮಸ್ಕಾರ ಮಾಡು ಮತ್ತು ಆಗಾಗ ದೇವಸ್ಥಾನಕ್ಕೆ ಹೋಗುತ್ತಿರು. ಅದನ್ನೇ ವೇದವಾಕ್ಯ ಎಂಬಂತೆ ಚಾಚೂ ತಪ್ಪದೇ ಪಾಲಿಸಿದಾಗ ಸೀಮಾಳಿಗೆ ದೊರೆತ ವರವಾದರೂ ಯಾವುದು? ನೀವು ಈ ಕಥಾ ಸಂಕಲನವನ್ನೊಮ್ಮೆ ಓದಲೇ ಬೇಕು. ನಂತರ ಅದೇ ನಿಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಈ ಕಥಾ ಸಂಕಲನವನ್ನು ಎಲ್ಲಿಂದ ಬೇಕಾದರೂ ಅಂದರೆ ಯಾವ ಕಥೆಯಿಂದ ಬೇಕಾದರೂ ಪ್ರಾರಂಭಿಸಬಹುದು. ಯಾವ ಕಥೆಯಲ್ಲೂ ನಿಲ್ಲಿಸಬಹುದು (ಬೆಟ್ ಹಾಕುವೆ, ನೀವು ಅರ್ಧಕ್ಕೇ ನಿಲ್ಲಿಸಲಾರಿರಿ). ಮತ್ತೆ ಸಮಯ ದೊರೆತಾಗ ಓದಲು ಪ್ರಾರಂಭಿಸಬಹುದು. ಒಂದು ಕಥೆ ಮುಗಿಸಲು ೨-೩ ನಿಮಿಷಗಳಷ್ಟೇ ಸಾಕು. ಈ ಕೃತಿಯನ್ನು ಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕು ಬದಲಾಗುವುದಷ್ಟೇ ಅಲ್ಲ, ಆತ ನೀಡುವ ಕಿಂಚಿತ್ತು ಹಣದಿಂದ ಸ್ವಲ್ಪ ಪಾಲು ಅಶಕ್ತರ ಸಹಾಯಕ್ಕೂ ಹೋಗುತ್ತದೆ ಎನ್ನುವುದು ಡಾಕ್ಟರ್ ನೀಡುವ ಗ್ಯಾರಂಟಿ. ಡಾ. ಶಶಿಕಿರಣ್ ಶೆಟ್ಟಿಯವರ ಈ ಸಾಹಿತ್ಯ ಚಟುವಟಿಕೆ ಸದಾ ಕಾಲ ಮುಂದುವರಿಯಲಿ. ಸುಮಾರು ೧೬೦ ಪುಟಗಳನ್ನು ಹೊಂದಿರುವ ಈ ಕೃತಿ ನಿಜಕ್ಕೂ ಓದಲು ಯೋಗ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಕಥಾ ಸಂಕಲನದ ಮುಖಪುಟದಲ್ಲಿ ಅಚ್ಚಾಗಿರುವ ಸುಂದರ ಚಿತ್ರವೇ ಇದರ ಹೂರಣವನ್ನು ನಮ್ಮೆದುರು ತೆರೆದಿಡುತ್ತದೆ. ಡಾ ಶಶಿಕಿರಣ್ ಶೆಟ್ಟಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ಕೈಜೋಡಿಸುವ ವ್ಯಕ್ತಿಗಳು ನಾವಾಗೋಣ ಎಂದೇ ನನ್ನ ಆಶಯ.