ಬದುಕ ಬದಲಿಸುವ ಕತೆಗಳು (ಭಾಗ 2)
ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ.
ಹಿಂದಿನ ಪುಸ್ತಕದಲ್ಲಾಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಈ ಪುಸ್ತಕದಲ್ಲಿ ಸರಿಪಡಿಸಿಕೊಂಡಿದ್ದಾರೆ. ಪುಟವೊಂದಕ್ಕೆ ಒಂದು ಕತೆ ಬರುವಂತೆ ಮತ್ತು ಕತೆ ಮುಗಿದ ಬಳಿಕ, ಹೊಸ ಕತೆಯನ್ನು ಹೊಸ ಪುಟದಿಂದ ಆರಂಭ ಮಾಡಿದ್ದಾರೆ. ಈ ಬಾರಿ ಬಹಳ ಸೊಗಸಾದ ಅಚ್ಚುಕಟ್ಟಿನ ವಿನ್ಯಾಸ ಮಾಡಿಸಿದ್ದಾರೆ. ಅಕ್ಷರ ತಪ್ಪುಗಳೂ ಕಡಿಮೆಯಾಗಿವೆ. ಇದರಿಂದ ಕತೆಯನ್ನು ಓದುವಾಗ ಮನಸ್ಸಿಗೆ ಮುದವಾಗುತ್ತದೆ. ಈ ಎರಡನೇ ಭಾಗಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರೂ, ಧರ್ಮದರ್ಶಿಗಳೂ ಆದ ಶ್ರೀ ಹರಿಕೃಷ್ಣ ಪುನರೂರು ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ…
“ ಡಾ.ಶಶಿಕಿರಣ್ ಶೆಟ್ಟಿಯವರ ‘ಬದುಕ ಬದಲಿಸುವ ಕತೆಗಳು' ನಮ್ಮ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಲ್ಲಿರುವ ೧೦೪ ಕತೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವಂತ ನೈಜ ಘಟನೆಗಳನ್ನೇ ಆಧಾರವಾಗಿಸಿಕೊಂಡು ರಚಿಸಿರುವ ಉತ್ತಮ ಕಥೆಗಳು. ಪ್ರತಿಯೊಬ್ಬರ ಬದುಕನ್ನು ರೂಪಿಸುವುದು ತಂದೆ, ತಾಯಿ. ಈ ಇಬ್ಬರನ್ನು ನಮ್ಮಲ್ಲಿ ದೇವರಿಗೆ ಹೋಲಿಸುತ್ತಾರೆ ಅವರು ನಮ್ಮ ಬದುಕು ಸುಂದರವಾಗಿರಲಿ ಎಂದು ತಮ್ಮ ಜೀವ, ಜೀವನವನ್ನೇ ಮುಡಿಪಾಗಿಡುತ್ತಾರೆ. ಆದರೆ ಅವರ ತ್ಯಾಗದಿಂದ ನಾವು ಉನ್ನತ ಸ್ಥಾನಕ್ಕೇರುತ್ತೇವೆ. ಅದು ಅಕ್ಷರಷಃ ನಿಜ. ಆದರೆ ನಾವು ನಮ್ಮ ತಂದೆ ತಾಯಿಯವರನ್ನು ಅವರ ವೃದ್ಧಾಪ್ಯದಲ್ಲಿ ಸು.ಖವಾಗಿ ಸಂತೋಷವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಆ ಕರ್ತವ್ಯವನ್ನು ಅವನು ಪೂರೈಸಿದಾಗ ಈ ದೇಶದಲ್ಲಿ ‘ವೃದ್ಧಾಶ್ರಮ' ಎನ್ನುವುದೇ ಇರುವುದಿಲ್ಲ ಅದೂ ಬೇಕಾಗಿಲ್ಲ ಎಂದು ಹೇಳಬಹುದೇನೋ? ಇವೆಲ್ಲವೂ ಕೊನೆಗಾಣಬೇಕು ಎಂದು ನಾವು ಆಶಿಸುತ್ತೇವೆ. ಆದರೆ ಅದು ಕೊನೆಯಾಗುವುದಿಲ್ಲ. ಈ ‘ಬದುಕ ಬದಲಿಸುವ ಕತೆ’ಗಳನ್ನು ಓದಿದ ಪ್ರತಿಯೊಬ್ಬರು ತಮ್ಮ ಬದುಕನ್ನು ಬದಲಿಸಿಕೊಂಡರೆ... ಎಷ್ಟು ಸುಂದರ"
ಹರಿಕೃಷ್ಣ ಪುನರೂರು ಅವರ ಮುನ್ನುಡಿ ನಿಜಕ್ಕೂ ಅರ್ಥಗರ್ಭಿತ. ಈ ಕೃತಿಯಲ್ಲಿರುವ ಹಲವಾರು ಕತೆಗಳಲ್ಲಿ ಕಾಣುವ ವಯಸ್ಸಾದವರ ಬವಣೆಗಳು ಮನಸ್ಸಿಗೆ ನೋವು ತರುತ್ತವೆ. ವೃದ್ಧರಿಗೆ ಸಮಾಜದಲ್ಲಿ ಸಿಗುವ ತಿರಸ್ಕಾರ ಭಾವನೆಗಳನ್ನು ಕತೆಯ ರೂಪದಲ್ಲಿ ಓದುವಾಗ ಇವುಗಳು ನಮ್ಮ ಸುತ್ತಮುತ್ತಲೇ ನಡೆದಂತಿದೆಯಲ್ಲಾ ಅನಿಸುತ್ತಿದೆ. ಲೇಖಕರಾದ ಡಾ. ಶಶಿಕಿರಣ್ ಶೆಟ್ಟಿಯವರು ತಮ್ಮ ಮಾತಿನಲ್ಲಿ ಹೇಳಿರುವಂತೆ “ ನನ್ನ ಕಥೆಗಳ ಪುಸ್ತಕಕ್ಕೆ ನಾನು ಕೊಟ್ಟಿರುವ ಹೆಸರು ಬದುಕ ಬದಲಿಸುವ ಕತೆಗಳು... ಇಲ್ಲಿ ೯೦% ಕತೆಗಳು, ಸನ್ನಿವೇಶಗಳು ನಿಜ ಜೀವನದ ಕಥೆಗಳಿಂದಲೇ ತುಂಬಿದೆ ಅನ್ನುವುದು ಸತ್ಯ. ಇಷ್ಟರವರೆಗೆ ಈ ಕಥೆಗಳಿಂದ ಸುಮಾರು ೨೮ ಜನರ ಬದುಕು ಬದಲಾಗಿದೆ ಎಂಬುದಷ್ಟೇ ಲೇಖಕನಿಗೆ ಅವನ ಬರವಣಿಗೆಗೆ ಸಿಕ್ಕಿರುವ ಅತೀ ದೊಡ್ದ ಗೌರವ. ಪುರಸ್ಕಾರ.”
ಬರೆದ ಕಥೆಗಳನ್ನು ಸುಖಾಂತ್ಯಗೊಳಿಸುವುದು ಕಥೆಗಾರನಿಗೆ ಬಹಳ ಸುಲಭ. ಆದರೆ ನಿಜ ಜೀವನದ ಕಥೆಗಳಿಗೆಲ್ಲಾ ಆ ಸೌಲಭ್ಯ, ಭಾಗ್ಯ ಇರುವುದಿಲ್ಲ ಎಂಬ ನೋವೂ ಶಶಿಕಿರಣ್ ಅವರಿಗಿದೆ. ಆದರೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ, ಸಹಕಾರ ನೀಡುತ್ತಲೇ ಬಂದಿರುವ ಇವರು ನಿಜಕ್ಕೂ ಅಶಕ್ತರ ಆಪದ್ಭಾಂಧವ ಎನ್ನಬಹುದು. ಪ್ರತೀ ಊರಿನ ಬಸ್ ಸ್ಟ್ಯಾಂಡ್, ಅನಾಥಾಶ್ರಮಗಳಲ್ಲಿ ಕಾಣ ಸಿಗುವ ಭಿಕ್ಷುಕರು, ವೃದ್ಧರು, ಅಸಹಾಯಕರು, ರೋಗಿಗಳ ಬಳಿ ಅವರ ಕಥೆಯನ್ನು ಕೇಳುವ ತಾಳ್ಮೆಯನ್ನು ನಾವು ತೋರಿಸಿದರೆ ಪ್ರತಿಯೊಬ್ಬರ ಬಳಿ ಒಂದು ದೊಡ್ಡ ಕಾದಂಬರಿಗೆ ಆಗುವಷ್ಟು ಸರಕು ಇದೆ ಎನ್ನುತ್ತಾರೆ ಲೇಖಕರು.
ಪುಸ್ತಕದ ಬೆನ್ನುಡಿಯಲ್ಲಿ ಕಂಡ ನಾಲ್ಕು ಸಾಲುಗಳು ಮನಮುಟ್ಟುವಂತಿವೆ. ಒಮ್ಮೆ ಓದಿಕೊಳ್ಳಿ… “ಒಳಗಿನಿಂದ ತಾಯಿ ಬಯ್ಯುತ್ತಿದ್ದುದು ಕಿವಿಗೆ ಹಾಕಿಕೊಂಡಿರಲಿಲ್ಲ. ಸೀಮಾ ತಂದೆಗೆ ಆರೋಗ್ಯದಲ್ಲಿ ಸರಿ ಇಲ್ಲದೇ ೨ ದಿನವಾಗಿತ್ತು. ತಾಯಿ ಒಬ್ಬಳೇ ಮಗಳಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ತರಲು ಪದೇ ಪದೇ ಹೇಳಿ ಸಿಟ್ಟಲ್ಲಿ ಬಯ್ಯುತ್ತಿದ್ದಳು ಮಗಳಿಗೆ... ‘ಈಗಿನ ಮಕ್ಕಳಿಗೆ ಕೊಬ್ಬು ಜಾಸ್ತಿ ದುಡಿದು ಮನೆ ನೋಡುತ್ತಾರೆ ಅನ್ನೋ ಕೊಬ್ಬು ಅವಕ್ಕೆ, ದೇವಾ ಬೇಗ ಆ ಕೊಬ್ಬು ಕರಗಿಸು' ಎನ್ನುತ್ತಿದ್ದಳು ಬೇಸರದಿಂದ. ಸೀಮಾ ತನ್ನ ಪ್ಯಾಂಟ್ ನ ಬಟನ್ ಹಾಕಲು ಆಗದೆ ಪ್ಯಾಂಟನ್ನು ಎಳೆಯುತ್ತಿದ್ದಳು. ಮನಸ್ಸಲ್ಲೇ ಅಂದುಕೊಂಡಳು. ಹೌದು ಕೊಬ್ಬು ಜಾಸ್ತಿ ಆಗಿದೆ ಸ್ವಲ್ಪ ಕರಗಿಸಿಕೊಳ್ಳಬೇಕು ಎಂದು...ತಾಯಿಯೂ ಅದನ್ನೇ ಹೇಳುತ್ತಿದ್ದಳು ಅಡುಗೆ ಮನೆಯಿಂದ.”
ಲೇಖಕರೇ ಹೇಳುವಂತೆ ಇಲ್ಲಿನ ಬಹುತೇಕ ಕತೆಗಳು ಅವರ ಅನುಭವದ ಜೋಳಿಗೆಯಿಂದ ಹೆಕ್ಕಿ ಬರೆದದ್ದೇ ಆಗಿದೆ. ವಯಸ್ಸಾದ ಹೆತ್ತವರು ಮಕ್ಕಳಿಗೆ ಬೇಡ, ಸೊಸೆಯಂತೂ ಹತ್ತಿರಕ್ಕೇ ಸೇರಿಸಿಕೊಳ್ಳುವುದಿಲ್ಲ. ಬ್ಯಾಂಕಿಗೆ, ಅಂಚೆ ಕಚೇರಿಗೆ, ಸರಕಾರಿ ಕಚೇರಿಗೆ ಹೋದರೆ ತಿರಸ್ಕಾರದ ಭಾವನೆ. ಹೀಗಾದರೆ ವಯಸ್ಸಾದ ವ್ಯಕ್ತಿಗಳು ಎಲ್ಲಿಗೆ ಹೋಗಬೇಕು? ಈ ರೀತಿಯ ಕತೆಗಳನ್ನು ಹೊಂದಿರುವ ಬರಹಗಳನ್ನು ಓದುವಾಗ ಕಣ್ಣಂಚಿನಲ್ಲಿ ನೀರು ಜಿನುಗದೇ ಇರದು. ಬಹುತೇಕ ಕತೆಗಳು ನಮ್ಮನ್ನು ಅಳಿಸುವ ಕತೆಗಳೇ ಆಗಿವೆ. ಈ ಕತೆಗಳನ್ನು ಓದಿ ಕೆಲವರ ಮನಸ್ಸಾದರೂ ಬದಲಾದರೆ ಡಾ. ಶಶಿಕಿರಣ್ ಶೆಟ್ಟಿಯವರ ಶ್ರಮ ಸಾರ್ಥಕ ಎನ್ನಬಹುದು. ಸುಮಾರು ೧೮೦ ಪುಟಗಳ ಈ ಸಮೃದ್ಧ ಪುಸ್ತಕವನ್ನು ಕೊಳ್ಳಲು ಬಯಸುವಿರಾದರೆ ಡಾ. ಶಶಿಕಿರಣ್ ಶೆಟ್ಟಿಯವರನ್ನು (ಮೊ:9945130630) ಸಂಪರ್ಕಿಸಿರಿ.