ಬದು ಕಲಿಸುವ ಬದುಕು (ರೈತರೇ ಬದುಕಲು ಕಲಿಯಿರಿ-೫)

ಬದು ಕಲಿಸುವ ಬದುಕು (ರೈತರೇ ಬದುಕಲು ಕಲಿಯಿರಿ-೫)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಭೂಮಿ ತಾಯಿ ನಿಜಕ್ಕೂ ಲಜ್ಜಾವತಿ. ಆಕೆ ಮೈಬಿಟ್ಟುಕೊಂಡು ಇರಲಾರಳು. ಮನುಷ್ಯನ ಹಸ್ತಕ್ಷೇಪ ಇಲ್ಲದ ಕಡೆ ಆಕೆ ತನ್ನ ಮೈಯನ್ನು ಮುಚ್ಚಿಕೊಂಡಿರುವ ದೃಶ್ಯ ನಿಮಗೆ ಕಾಣಸಿಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಬದು.

ಹೊಲದ ಸುತ್ತಲೂ ಇರುವ ಬದು ನಿಜಕ್ಕೂ ಸಮೃದ್ಧ ಬದುಕಿನ ಸಂಕೇತ. ನಿಮ್ಮ ಹೊಲ ಒಣಗಿ ಬರಡಾಗಿದ್ದರೆ ಅದಕ್ಕೆ ಕಾರಣ ನೀವು. ಆದರೆ ನಿಮ್ಮ ಹೊಲದ ಬದುಗಳು ಹಸಿರಿನಿಂದ, ಗಿಡ ಮರಗಳಿಂದ ನಳನಳಿಸುತ್ತಿದ್ದರೆ ಅದಕ್ಕೆ ಕಾರಣ ಭೂಮಿತಾಯಿಯ ಜೀವಂತಿಕೆ.

ರೈತರ ದೃಷ್ಟಿ ಸಾಮಾನ್ಯವಾಗಿ ಬದುವಿನ ಕಡೆ ಹರಿಯುವುದೇ ಇಲ್ಲ. ಅದು ಕಸ ಚೆಲ್ಲುವ ಜಾಗ. ಮಳೆಗಾಲದಲ್ಲಿ ದನಗಳನ್ನು ಮೇಯಿಸುವ ಸ್ಥಳ. ಅದರ ಮೇಲೆ ಕೂತು ಹೊಲದಲ್ಲಿ ಸಾಯುತ್ತಿರುವ ಬೆಳೆ ನೋಡಿ ಮರುಗುತ್ತಾರೆಯೇ ಹೊರತು, ಬದುವೇಕೆ ಹಸಿರಿನಿಂದ ಸಮೃದ್ಧವಾಗಿದೆ ಎಂದು ಯೋಚಿಸುವುದಿಲ್ಲ.

ಬದುವಿನಲ್ಲಿ ಏನೆಲ್ಲ ಇದೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ.
ಅಲ್ಲಿ ಇಲಿಗಳ ಬಿಲ ಇವೆ. ಗೆದ್ದಲಿನ ಹುತ್ತ ಇದೆ. ಹೀಗಾಗಿ ಹಾವುಗಳು ಅಲ್ಲಿ ಓಡಾಡುತ್ತವೆ. ಎಲ್ಲ ರೀತಿಯ ಇರುವೆಗಳ ಗೂಡುಗಳು, ವಿವಿಧ ಜಾತಿಯ ಕೀಟಗಳು, ಶತಪದಿಗಳು, ಸಹಸ್ರಪದಿಗಳು, ಚಿಟ್ಟೆಗಳು, ಮಿಡತೆಗಳು, ಪಾತರಗಿತ್ತಿಗಳು ಅಲ್ಲಿವೆ. ಜತೆಗೆ ವಿವಿಧ ಜಾತಿಯ ಹುಲ್ಲು, ನಾವು ಕಳೆ ಎಂದು ಭಾವಿಸಿರುವ ಗಿಡಗಳು, ಕಡಿಯದೇ ಬಿಟ್ಟಿದ್ದರೆ ಮರಗಳು, ಹೊಲದಿಂದ ಕಿತ್ತು ಸುರಿದಿರುವ ಹುಲ್ಲು, ದನಗಳು ಹಾಕಿದ ಸಗಣಿ ಇತ್ಯಾದಿ ವಸ್ತುಗಳೂ ಅಲ್ಲಿವೆ. ಇವೆಲ್ಲ ಸೇರಿ ಜೀವ ಸರಪಣಿಯನ್ನು ಬದುವಿನಲ್ಲಿ ನಿರ್ಮಿಸಿವೆ.

ಮುಂಗಾರು ಮಳೆ ಅಬ್ಬರದಿಂದ ಬರುತ್ತದೆ. ಹೊಲದಲ್ಲಿಯ ಮಣ್ಣನ್ನು ಕದಡಿ, ಕರಗಿಸಿ, ರಾಡಿ ನೀರಾಗಿಸಿ, ಹೊಲವನ್ನು ಕೊರೆದುಕೊಂಡು ಪಕ್ಕದ ಹೊಲಕ್ಕೆ, ಅಲ್ಲಿಂದ ಸಣ್ಣ ಹಳ್ಳಕ್ಕೆ ಹರಿದು ಹೋಗುತ್ತದೆ. ಒಂದು ಜೋರು ಮಳೆ ಬಿದ್ದರೆ ಬೆಲೆ ಬಾಳುವ ಅಮೂಲ್ಯ ಮೇಲ್ಮಣ್ಣು ನೀರಿನೊಂದಿಗೆ ಹೋಗಿ ಬಿಡುತ್ತದೆ. ಇನ್ನು ಬೆಳೆ ಎಲ್ಲಿಂದ ಬೆಳೆಯಬೇಕು?
ಒಂದು ವೇಳೆ ಹೊಲದಲ್ಲಿ ಮುಚ್ಚುಗೆ ಇದ್ದರೆ, ಅಲ್ಲಿ ನೈಸರ್ಗಿಕ ವಾತಾವರಣ ಸೃಷ್ಟಿಸಿದ್ದರೆ ಬಿದ್ದ ಮಳೆಯನ್ನು ಸ್ಪಂಜಿನಂಥ ಮಣ್ಣು, ಅದರಲ್ಲಿ ಇರುವ ಕೃಷಿತ್ಯಾಜ್ಯ ವಸ್ತುಗಳು ಹೀರಿಕೊಳ್ಳುತ್ತವೆ. ಮಣ್ಣಿನಲ್ಲಿ ಇರುವ ಕೋಟ್ಯಂತರ ಸೂಕ್ಷ್ಮಜೀವಿಗಳು ಏರ್ಪಡಿಸಿರುವ ಈ ಜಾಲವನ್ನು ಒಡೆದು ಹರಿದುಹೋಗುವುದು ನೀರಿಗೆ ಸಾಧ್ಯವಾಗುವುದಿಲ್ಲ. ಆಗ ಬಿದ್ದ ಮಳೆ ಹೀರಿಕೊಳ್ಳಲ್ಪಟ್ಟು ನಿಧಾನವಾಗಿ ಇಂಗತೊಡಗುತ್ತದೆ.

ಇಲ್ಲಿ ಪ್ರಕೃತಿಯ ಅಚ್ಚರಿಯನ್ನು ನೀವು ಗಮನಿಸಬೇಕು. ನಾವು ಶತ್ರುಗಳು ಎಂದು ಪರಿಗಣಿಸಿರುವ ಇಲಿ, ಇರುವೆ, ಗೆದ್ದಲು, ಕಪ್ಪೆ, ಹಕ್ಕಿಗಳು, ಹಾವುಗಳು- ಎಲ್ಲವೂ ನಿಜವಾಗಿ ನಮಗೆ ಮಿತ್ರರೇ.

ಎರೆಹುಳುವಿನ ಕೆಲಸವನ್ನೇ ನೋಡಿ. ಅದು ದಿನದ ೨೪ ಗಂಟೆಗಳ ಕಾಲವೂ ದುಡಿಯುತ್ತದೆ. ಭೂಮಿಯ ಉದ್ದಗಲ ಹಾಗೂ ಆಳಕ್ಕೂ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿದೆ. ಭೂಮಿಯಲ್ಲಿ ೧೫ರಿಂದ ೨೫ ಅಡಿ ಆಳದವರೆಗೂ ಅದು ಸಂಚರಿಸಬಲ್ಲುದು. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಒಮ್ಮೆ ಹೋದ ದಾರಿಯಲ್ಲಿ ಅದು ಮತ್ತೆ ಹಿಂತಿರುಗುವುದಿಲ್ಲ. ಅಂದರೆ ಪ್ರತಿ ಬಾರಿಯೂ ಅದು ಭೂಮಿಯನ್ನು ಹೊಸದಾಗಿಯೇ ಕೊರೆಯುತ್ತದೆ. ಅಪ್ಪಟ ನೈಸರ್ಗಿಕ ಪರಿಸರದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸಾಮಾನ್ಯವಾಗಿ ಎರಡು ಲಕ್ಷ ಎರೆಹುಳುಗಳು ಬದುಕುತ್ತವೆ. ಇವು ಭೂಮಿಯ ೨೫ ಅಡಿ ಆಳದಲ್ಲಿ ಮೇಲಕ್ಕೆ ಬಂದು ಹೋಗುವುದನ್ನು ಮಾಡುತ್ತಿರುತ್ತವೆ. ಹೀಗಾಗಿ ಭೂಮಿಗೆ ಉಳುಮೆಯೇ ಬೇಕಾಗಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಕೇವಲ ಎರೆಹುಳುವೊಂದೇ ವರ್ಷದ ಎಲ್ಲ ಕಾಲದಲ್ಲಿಯೂ ಭೂಮಿ ಕೊರೆಯುವ, ಆ ಮೂಲಕ ಭೂಮಿಗೆ ಉಸಿರಾಡುವ, ನೀರು ಇಳಿಸುವ ವ್ಯವಸ್ಥೆಯನ್ನು ಜೀವಜಾಲಕ್ಕೆ ಪೂರಕವಾಗಿ, ಉಚಿತವಾಗಿ ನಿರ್ಮಿಸುತ್ತಿರುವಾಗ, ಬೇರೆ ಯಾವ ತಂತ್ರಜ್ಞಾನದಿಂದ ಇಂತಹ ಅನುಕೂಲ ದಕ್ಕೀತು?

ಮುಚ್ಚುಗೆ ಏಕೆ ಬೇಕು?

ಕೃಷಿ ತ್ಯಾಜ್ಯಗಳಾದ ಎಲೆ, ದಂಟು, ಕಡ್ಡಿ, ಕಸ, ಸಗಣಿ ಇತ್ಯಾದಿ ವಸ್ತುಗಳೆಲ್ಲ ಎರೆಹುಳುಗಳಿಗೆ ಆಹಾರ. ಇವನ್ನೆಲ್ಲ ತಿನ್ನುತ್ತ ಹೋಗುವ ಅದು ವಿಸರ್ಜನೆಗೆ ಮಾತ್ರ ಮೇಲ್ಭಾಗಕ್ಕೆ ಬರುತ್ತದೆ. ಅಲ್ಲಿ ವಿಸರ್ಜಿಸಿ ಮತ್ತೆ ಇನ್ನೊಂದು ದಾರಿಯ ಮೂಲಕ ತಿನ್ನುತ್ತ ಹೋಗುತ್ತದೆ. ಸೂರ್ಯನ ಬೆಳಕು ಇದಕ್ಕೆ ಶತ್ರು. ಹೀಗಾಗಿ ಅದು ಬಿಸಿಲನ್ನು ತಪ್ಪಿಸಿಕೊಳ್ಳಲು ಮರೆ ಹುಡುಕುತ್ತಿರುತ್ತದೆ. ಇನ್ನು ರಾಸಾಯನಿಕಗಳಿದ್ದರಂತೂ ಅದು ಹತ್ತಿರ ಕೂಡ ಬರುವುದಿಲ್ಲ.

ಎರೆಹುಳುವೊಂದೇ ಅಲ್ಲ, ಭೂಮಿಯಲ್ಲಿರುವ ಕೋಟ್ಯಾನುಕೋಟಿ ಸೂಕ್ಷ್ಮಜೀವಿಗಳು ಬಿಸಿಲಿಗೆ ಸತ್ತುಹೋಗುತ್ತವೆ. ಅವಕ್ಕೆ ಭೂಮಿಯ ನಸು ಕತ್ತಲು, ತೇವ ಹಾಗೂ ಕೃಷಿತ್ಯಾಜ್ಯಗಳ ಪೊರೆ ಅಮ್ಮನ ಮಡಿಲಿನಂತಿರುತ್ತದೆ. ಹೇಗೆ ಮಗುವೊಂದು ಅಮ್ಮನ ಸೀರೆಯ ಸೆರಗಿನಡಿ ಕಣ್ಣು ಮುಚ್ಚಿಕೊಂಡು ಎದೆಹಾಲು ಕುಡಿಯುತ್ತ ನೆಮ್ಮದಿಯಾಗಿರುತ್ತದೋ ಹಾಗೇ ಎರೆಹುಳು ಮತ್ತು ಕೋಟ್ಯಂತರ ಸೂಕ್ಷ್ಮಜೀವಿಗಳು ಮುಚ್ಚುಗೆಯ ಮರೆಯಲ್ಲಿ ನೆಮ್ಮದಿಯಿಂದ ಬದುಕುತ್ತಿರುತ್ತವೆ. ಇಂತಹ ಎಲ್ಲ ಜೀವಿಗಳು ಕ್ರಿಯಾಶೀಲವಾಗಿರಬೇಕೆಂದರೆ ಒಂದು ನಿರ್ದಿಷ್ಟ ವಾತಾವರಣ ಬೇಕಾಗುತ್ತದೆ. ಇದನ್ನೇ ಸೂಕ್ಷ್ಮ ವಾತಾವರಣ ಎನ್ನುವುದು.

ಮುಚ್ಚುಗೆ ಅಥವಾ ಹೊದಿಕೆ (ಮಲ್ಚಿಂಗ್) ಅಂಥದೊಂದು ವಾತಾವರಣವನ್ನು ಒದಗಿಸುವ ಮೂಲಕ ಸೂಕ್ಷ್ಮಜೀವಿಗಳ ಸರಾಗ ಚಟುವಟಿಕೆಗೆ ಅವಕಾಶ ಕಲ್ಪಿಸಿಕೊಡುತ್ತವೆ.
ಬೆಳೆಗಳ ನಡುವೆ ಮುಚ್ಚುಗೆ ಇಲ್ಲದಿದ್ದರೆ ಬೆಳೆ ಬದುಕುವುದಿಲ್ಲ. ಏಕೆಂದರೆ ಸಸ್ಯಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಆಗ ಮೇಲ್ಪದರದಲ್ಲಿ ಇರುವುದಿಲ್ಲ. ಇದರಿಂದಾಗಿ ಭೂಮಿಯ ಮೇಲ್ಪದರದ ನೀರು ಬೇಗ ಆವಿಯಾಗುತ್ತದೆ. ಸೂರ್ಯನ ಬಿಸಿಲು ನೇರವಾಗಿ ಬೀಳುವುದರಿಂದ ಸೂಕ್ಷ್ಮಜೀವಿಗಳು ಸತ್ತು, ಮಣ್ಣಿನಲ್ಲಿರುವ ಸತ್ವ ಪೋಷಕಾಂಶವಾಗಿ ಪರಿವರ್ತನೆಯಾಗದೇ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ರೋಗನಿರೋಧಕ ಶಕ್ತಿ ಕುಂದಿ, ಕೀಟಗಳು ದಾಳಿ ಇಡಲು ಅವಕಾಶ ಸಿಗುತ್ತದೆ.

ಮುಚ್ಚುಗೆಯಲ್ಲಿ ಒಟ್ಟು ಮೂರು ವಿಧ. ಒಂದು ಸಹಜವಾಗಿ ಇರುವ ಮಣ್ಣಿನ ಹೊದಿಕೆ. ಎರಡನೆಯದು ತರಗೆಲೆಗಳು, ಕಡ್ಡಿ, ದಂಟು ಇತ್ಯಾದಿ ಕೃಷಿತ್ಯಾಜ್ಯದ ಹೊದಿಕೆ ಹಾಗೂ ಮೂರನೆಯದು ಸಜೀವ ಹೊದಿಕೆ. ಅಂದರೆ ವಿವಿಧ ರೀತಿಯ ಎತ್ತರ ಹಾಗೂ ಗಾತ್ರದ ಗಿಡಗಳನ್ನು ಬೆಳೆಯುವ ಮೂಲಕ ಹೊದಿಕೆ ಒದಗಿಸುವುದು. ಇವು ಭೂಮಿಯ ಸತ್ವವನ್ನು ಅಲ್ಲಿಯೇ ಉಳಿಸುವ, ಹೊಸ ಸತ್ವ ಸೇರಿಸುವ ಈ ಚಟುವಟಿಕೆ ನಿಜಕ್ಕೂ ಅದ್ಭುತ. ನೈಸರ್ಗಿಕ ಕೃಷಿಯ ಜೀವಾಳವೇ ಇದು.

(ಮುಂದುವರಿಯುವುದು)

 - ಚಾಮರಾಜ ಸವಡಿ