ಬದ್ಧತೆಗೆ ಒಳಗಾಗಬೇಕಾಗಿದೆ – ಪ್ರಶಸ್ತಿ, ಸಂಮಾನಗಳ ಅರ್ಥವ್ಯಾಪ್ತಿ
ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ. ಪ್ರಶಸ್ತಿಗೂ ಪುರಸ್ಕಾರಕ್ಕೂ ವ್ಯತ್ಯಾಸ ಬೇಡವೇ? ಪದಕೋಶದಲ್ಲಿ ಈ ಪದಗಳೆಲ್ಲಾ ಮಸುಕಾಗಿವೆ. ಅರ್ಥ ಸ್ಫುರಿಸಲು ಒದ್ದಾಡುತ್ತಿವೆ.
ಯಕ್ಷಗಾನ ಕಾರ್ಯಕ್ರಮಗಳಲ್ಲಿ ಎಷ್ಟೊಂದು ಸಂಮಾನಗಳು, ಪುರಸ್ಕಾರಗಳು. ಶಾಲು ಹಾಕ್ಕೊಂಡರೆ ಆಯಿತು, ಅದು ಗೌರವಾರ್ಪಣೆ ಸಾಲಿಗೆ ಸೇರಿಕೊಳ್ಳುತ್ತದೆ. ಸ್ಮರಣಿಕೆ ಪಡೆದರೆ, ಅದು ಪುರಸ್ಕಾರವಾಗುತ್ತದೆ. ಒಂದು ಹಾರ, ಶಾಲು, ಹಣ್ಣುಹಂಪಲು ಪ್ರದಾನಿಸಿದರೆ ಸಂಮಾನ. ಇದರೊಂದಿಗೆ ಮೊತ್ತವೂ ಸೇರಿಕೊಂಡರೆ ಪ್ರಶಸ್ತಿ. ಮಾನ-ಸಂಮಾನಗಳು ಸಮಾನ. ಮರುದಿನ ಮಾಧ್ಯಮದಲ್ಲಿ ವರದಿ ಪ್ರಕಟವಾದಾಗ ಖುಷಿ.
ಈಚೆಗಿನ ವರುಷಗಳಲ್ಲಿ ಗಮನಿಸಿ. ಕೂಟವೋ, ಆಟವೋ ಆಯೋಜನೆಗೊಂಡಾಗ ಅಲ್ಲೊಂದು ಸಭಾ ಕಾರ್ಯಕ್ರಮ, ಅದರಲ್ಲೊಂದು ಸಂಮಾನ ಇರಲೇಬೇಕೆಂಬ ಹಟ. ಯಾರನ್ನು ಸಂಮಾನಿಸುತ್ತೇವೋ ಅವರ ಬಗ್ಗೆ ಆಯೋಜಕರಿಗೆ ಗೌರವ ಇದೆಯೋ ಇಲ್ಲವೋ ಮುಖ್ಯವಲ್ಲ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ಅಷ್ಟೇ. ಆದರೆ ಪ್ರಶಸ್ತಿ, ಸಂಮಾನ ಪ್ರದಾನಿಸುವಲ್ಲಿ ಕೆಲವೊಂದು ಸಂಸ್ಥೆಗಳಿಗೆ ಬದ್ಧತೆಯಿದೆ. ಯಾರಿಗೆ ಗೌರವ ನೀಡುತ್ತೇವೋ ಅಂತಹವರನ್ನು ಗೌರವಪೂರ್ವಕವಾಗಿ ಆದರಿಸುವ ಪರಿಪಾಠದ ಉದಾಹರಣೆಗಳು ಕಣ್ಣಮುಂದಿವೆ. ಇವರ ಮಾದರಿಗಳು ಅನುಸರಣಯೋಗ್ಯ.
ಸುಮಾರು 1987-88ರ ಆಜೂಬಾಜು. ನನಗೆ ಯಕ್ಷಗಾನದ ಗೀಳು ಅಂಟಿಗೊಂಡ ಕಾಲಘಟ್ಟ. ಮಂಗಳೂರಿನ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಿದ್ದೆ. ಬಹಳ ಅರ್ಥಪೂರ್ಣವಾಗಿ ಪ್ರಶಸ್ತಿ, ಸಂಮಾನ ಕಾರ್ಯಕ್ರಮಗಳು ನಡೆಯುತ್ತಿತ್ತು. ಅದನ್ನೆಲ್ಲ ಬೆರಗುಕಣ್ಣುಗಳಿಂದ ನೋಡುತ್ತಿದ್ದೆ. ಕಲಾಪಗಳ ವಿಧಿವಿಧಾನಗಳು ಮನದಲ್ಲಿ ಅಚ್ಚೊತ್ತಿದ್ದುವು. ಸಂಮಾನಿತರಿಗೆ ಸಿಗುವ ಗೌರವಗಳ ಗಾಢತೆಗಳು ಮನಸ್ಸನ್ನು ಕಾಡಿತ್ತು.
ಅದೇ ಹೊತ್ತಿಗೆ ನನ್ನೂರಿನಲ್ಲೂ ಯಕ್ಷಗಾನೀಯ ವಾತಾವರಣ ಚೆನ್ನಾಗಿತ್ತು. ಸ್ಥಳೀಯ ಶ್ರೀ ಶಾಸ್ತಾವೇಶ್ವರ ಯಕ್ಷಗಾನ ಕಲಾ ಸಂಘವು ಕೂಟಾಟಗಳನ್ನು ಏರ್ಪಡಿಸುತ್ತಿತ್ತು. ಕೀರ್ತಿಶೇಷ ಪ್ರಕಾಶ್ಚಂದ್ರ ಬಾಯಾರು ಅವರಿಂದ ತರಬೇತಿಯೂ ನಡೆಯುತ್ತಿತ್ತು. ತರಬೇತಿಯ ಆ ವರುಷದ ಸಮಾರೋಪಕ್ಕೆ ಯಕ್ಷಗಾನ ಪ್ರದರ್ಶನ ಎಂದು ಗೊತ್ತು ಮಾಡಲಾಗಿತ್ತು. ಸಂಘಕ್ಕೆ ಹಲವು ಕಾಲ ಭಾಗವತರಾಗಿದ್ದ ಹಿರಿಯರಾದ ದಾಸರಬೈಲು ಚನಿಯ ನಾಯ್ಕರನ್ನು ಸಂಮಾನಿಸುವ ಪ್ರಸ್ತಾಪಕ್ಕೆ ಸಂಘದ ಕಾರ್ಯದರ್ಶಿ ಕೆ.ಡಿ.ಕುಶಾಲಪ್ಪರು ಸಮ್ಮತಿಸಿದ್ದರು.
ಹಳ್ಳಿ ಸೊಗಸಿನ ಸಂಘ. ವಿವಿಧ ಮನಃಸ್ಥಿತಿಯ ಸಮ್ಮನಸ್ಸಿನ ಕಲಾವಿದರು. ‘ಸಂಮಾನ’ ಎನ್ನುವ ಪದ ತೀರಾ ಹೊಸತು. ಅದೂ ಯಕ್ಷಗಾನ ಕಲಾವಿದರಿಗೆ ಸಂಮಾನ ಎಂದಾಗ ಏನೋ ಒಂದು ರೀತಿಯ ಸಂಭ್ರಮ. ಮಂಗಳೂರಿನಲ್ಲಿ ನೋಡಿದ ಕೆಲವು ಸಮಾರಂಭಗಳ ಕಲಾಪದ ಮಾದರಿಯಲ್ಲಿ ಕಾರ್ಯಕ್ರಮದ ರೂಪುರೇಷೆ ಹೆಣೆದೆ. ಸಮಾರಂಭಕ್ಕೊಂದು ಅಧ್ಯಕ್ಷ, ಅತಿಥಿ, ಅಭಿನಂದನಾ ಭಾಷಣಗಳಿಗೆ ಗಣ್ಯರನ್ನು ಮಂಗಳೂರಿನಿಂದಲೇ ಗೊತ್ತು ಮಾಡಿದ್ದೆ.
‘ಸಂಮಾನ’ ಪದವು ಕಲಾವಿದರಿಗೆ ಎಷ್ಟು ಖುಷಿಯಾಗಿತ್ತೋ, ಅಷ್ಟೇ ಗೇಲಿಯ ವಿಷಯವೂ ಆಗಿತ್ತು! ಮನೆಗೆ ನೆಂಟರು ಬಂದಾಗ, ಮದುವೆ ಸಂದರ್ಭದ ಮಾಂಸಾಹಾರದ ಭೋಜನಕ್ಕೆ ‘ಸಂಮಾನ’ ಎನ್ನುವ ಪರಿಭಾಷೆಯನ್ನು ಊರಲ್ಲಿ ಬಳಸುತ್ತಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ‘ಸಂಮಾನ’ ಶಬ್ದ ಇದೆಯಲ್ಲ, ‘ಭಾಗವತರಿಗೆ ನಾಡಿದ್ದು ಗಡದ್ದು ಸಂಮಾನ’ ಎಂದು ಊರಲ್ಲೆಲ್ಲಾ ಗುಸುಗುಸು! ಚನಿಯ ನಾಯ್ಕರ ಕಿವಿಗೂ ಬಿದ್ದು ಇರಿಸುಮುರಿಸಾಗಿತ್ತು. ಒಬ್ಬ ಗೇಲಿಗೆ ತೊಡಗಿದರೆ, ಅದಕ್ಕೆ ಸಾಥ್ ಕೊಡುವವರು ಹತ್ತಾರು ಮಂದಿ ಸಿಕ್ಕೇ ಸಿಗುತ್ತಾರೆ.
ಸಂಘದ ಚರಿತ್ರೆಯಲ್ಲಿ ‘ಸಂಮಾನ ಪತ್ರ’ ಎನ್ನುವುದೂ ಹೊಸತೇ. ಆ ಹೊತ್ತಲ್ಲಿ ನನಗೆ ಮಿತ್ರ ಭಾಸ್ಕರ ರೈ ಕುಕ್ಕುವಳ್ಳಿಯವರ ನೆರವಿತ್ತು. ಬಹುಶಃ ಅವರೇ ಚನಿಯ ನಾಯ್ಕರ ಅಭಿನಂದನಾ ಭಾಷಣ ಮಾಡಿದ್ದರು. ಮಲ್ಲಿಗೆಯ ಹಾರ, ಹಣ್ಣುಹಂಪಲು, ಶಾಲು, ಸ್ಮರಣಿಕೆ, ಗುಣಕಥನ ಫಲಕದೊಂದಿಗೆ ಭಾಗವತರನ್ನು ಸಾರ್ವಜನಿಕರ ಮುಂದೆ ಸಂಮಾನಿಸಿದಾಗ ಸಾವಿರಾರು ಮಂದಿ ಕಣ್ಣು ತುಂಬಿಕೊಂಡರು. ಆಗ ಕೈಯಲ್ಲೊಂದು ರೀಲು ಕ್ಯಾಮರಾ ಇದ್ದುಬಿಟ್ಟರೆ ಮರ್ಯಾದೆ ಇಮ್ಮಡಿ! ಯಾರಿಂದಲೋ ಎರವಲು ಪಡೆದ ಕ್ಯಾಮರಾದೊಂದಿಗೆ ಮರ್ಯಾದಿ ಪಡೆಯುವ ‘ದುರ್ಯೋಗ’ ನನ್ನದಾಗಿತ್ತು.
ಇಲ್ಲಿ ಜರುಗಿದ ಸಂಮಾನಕ್ಕೆ ನಗದಿನ ಸ್ಪರ್ಶವಿಲ್ಲ. ಕೆಲವು ಅಭಿಮಾನಿಗಳು ಉಡುಗೊರೆಯನ್ನು ಭಾಗವತರಿಗೆ ನೀಡಿದ್ದರು. ಸಂಮಾನದ ಸುದ್ದಿಯು ಮಾಧ್ಯಮಗಳಲ್ಲಿ ಬಂದಾಗ “ಹೀಗೂ ಸಾಧ್ಯವಾ” ಎಂದು ಕಣ್ಣರಳಿಸಿದವರು ಅನೇಕ ಮಂದಿ. ಹಿರಿಯ ಭಾಗವತರನ್ನು ಸಂಮಾನಿಸಿದ ತೃಪ್ತಿ ಸಂಘಕ್ಕಿತ್ತು. ಆ ಕಾಲಘಟ್ಟದಲ್ಲಿ ಅದೊಂದು ದೊಡ್ಡ ಸುದ್ದಿ. ಭಾಗವತ ಚನಿಯರನ್ನು ಕಂಡಾಗಲೆಲ್ಲಾ ಬಹುತೇಕ ಅಭಿಮಾನಿಗಳು ಸಂಮಾನದ ಸುದ್ದಿಯನ್ನೇ ಮಾತನಾಡುತ್ತಿದ್ದರು. ಬಹುಶಃ ಅಲ್ಲಿ ನಡೆದ ಸಂಮಾನಕ್ಕಿಂತಲೂ, ಸಂಮಾನದ ಸುದ್ದಿ ಮಾತನಾಡುವುದಿದೆಯಲ್ಲಾ, ಅದೇ ಒಂದು ದೊಡ್ಡ ಸಂಮಾನ.
ಜೂನ್ ಮೊದಲ ವಾರ ಮಂಗಳೂರಿನಲ್ಲಿ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳು ಹಾರಾರ್ಪಣೆ ಮಾಡುತ್ತಿದ್ದಾಗ ಚನಿಯ ನಾಯ್ಕರ ಅಂದಿನ ಸಂಮಾನ ನೆನಪಾಯಿತು. ಚನಿಯರು ಪದ್ಯಾಣರಿಗೆ ಗುರುಸದೃಶ. ಅವರ ಭಾಗವತಿಕೆಗೆ ಪದ್ಯಾಣರು ಮದ್ದಳೆ, ಚೆಂಡೆ ಸಾಥ್ ಆಗಿದ್ದರು. ಬಳಿಕ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿದರು. ಖ್ಯಾತ ಕಲಾವಿದರಾದರು. ಪದ್ಯಾಣರ ‘ಪದಯಾನ’, ರಘುರಾಮಾಭಿವಂದನಮ್, ಪಟ್ಲ ಪೌಂಡೇಶನ್ನಿನ ಕಾರ್ಯಕ್ರಮಗಳು, ಉಡುಪಿ ಕಲಾರಂಗದ ಕಾರ್ಯಹೂರಣಗಳು, ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಗೌರವ.. ಹೀಗೆ ಬಹಳ ಅರ್ಥವತ್ತಾಗಿ ನಡೆದಿರುವುದು, ನಡೆಯುತ್ತಿರುವುದು ಇತಿಹಾಸ ಮತ್ತು ಸಂಭ್ರಮ.
ಹಿಂದಿನದಕ್ಕೆ ಹೋಲಿಸಿದಾಗ ಆಗಿನ ಸಂಮಾನಕ್ಕೂ, ಈಗಿನ (ಕೆಲವು) ಸಂಮಾನಕ್ಕೂ – ಕೊಡುವ ವಸ್ತುವಿನಲ್ಲಲ್ಲ - ವ್ಯತ್ಯಾಸಗಳಿವೆ. ಭಾವ, ಭಾವನೆಯಲ್ಲೂ ಬದಲಾವಣೆಗಳಾಗಿವೆ. ಕಲಾಪಗಳ ವಿನ್ಯಾಸದಲ್ಲೂ ಪರಿಷ್ಕಾರಗಳಾಗಿವೆ. ಆರಂಭದಲ್ಲಿ ನಿರೂಪಿಸಿದ ಪ್ರಶಸ್ತಿ, ಸಂಮಾನ, ಗೌರವಾರ್ಪಣೆ, ಪುರಸ್ಕಾರ.. ಈ ನಾಲ್ಕು ಪದಗಳು ಒಂದೇ ಅಲ್ಲ. ಅವು ಸ್ಫುರಿಸುವ ಅರ್ಥವ್ಯಾಪ್ತಿಯಲ್ಲೇ ಕಲಾಪಗಳು ನಡೆಯುವಂತಾಗಬೇಕು. ಬದ್ಧತೆಗೆ ಒಳಗಾಗಬೇಕು. ಹೀಗೆಂದಾಗ ‘ಅರ್ಥವ್ಯಾಪ್ತಿಯನ್ನು ನಿರ್ಧರಿಸುವವರಾರು?’ ಎನ್ನುವ ಚೋದ್ಯ ಕಾಡಿತು!
ಸಾಂದರ್ಭಿಕ ಚಿತ್ರ
(ಚಿತ್ರ : ಮಧುಸೂದನ ಅಲೆವೂರಾಯ)