ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!

ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!

ಬರಹ

"The mother earth has everything for man's aid; but not for his greed!"
-Mahatma Gandhiji.

ಸಂಪೂರ್ಣ ಮಲೀನವಾಗಿ ನಿಂತ ಧಾರವಾಡದ ಕೆಲಗೇರಿ ಕೆರೆಯ ಶೋಚನೀಯ ಸ್ಥಿತಿ ನಮ್ಮ ದುರಾಸೆಯ ಮುಖವಾಡ ಕಳಚಿ, ವಸ್ತುಸ್ಥಿತಿಯತ್ತ ಗಮನಹರಿಸಲು ಒತ್ತಾಯಿಸುತ್ತದೆ.

ಇದು ಇತಿಹಾಸ: ರಾಷ್ಟ್ರ ಕಂಡ ಪ್ರತಿಭಾಶಾಲಿ ಇಂಜಿನೀಯರ್ ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕನಸಿನ ಕೂಸು ಈ ಕೆಲಗೇರಿ ಕೆರೆ! ಆಶ್ಚರ್ಯವಾಯಿತೇ? ಕೆರೆಗಾಗಿ ಸೂಕ್ತ ಜಾಗೆ, ಮೇಲು ಸೇತುವೆ ಹಾಗು ಬಳಸುವ ವಿಧಾನ ಕುರಿತು ನೀಲನಕ್ಷೆ ತಯಾರಿಸಿದವರು ಅಂದಿನ ಮೈಸೂರು ಸಂಸ್ಥಾನದ ದಿವಾನರು, ಮೈಸೂರು ಸಂಸ್ಥಾನದ ‘ಸ್ಯಾನಿಟರಿ ಇಂಜಿನೀಯರ್’ ಸರ್ ಎಂ.ವಿ. ಅವರು.

ಅವರ ಕನಸನ್ನು ನನಸುಗೊಳಿಸಿದವರು ಬಹುತೇಕ ಬ್ರಿಟೀಷ ಇಂಜಿನೀಯರ್ಗಳೇ ಇದ್ದ ಸಮಿತಿ. ಕಾರ್ಯನಿರ್ವಾಹಕ ಅಭಿಯಂತರುಗಳಾದ ಜೆ.ಜಿ.ಛಾಪಮನ್, ಸಿ.ಡಿ.ಮ್ಯಾಕ್ಲೆವರ್, ಡಿ.ಆರ್.ಸತಾರ್ ವಾಲಾ, ಸೇರಿದಂತೆ ಸಹಾಯಕ ಅಭಿಯಂತರುಗಳಾದ ಎಚ್.ಜೆ.ಎಂ.ಕೌಸೆನ್ಸ್ ಹಾಗು ಬಾಲಾಜಿ ಬಾಬಜಿ.

ಮಾರ್ಚ್ ೪, ೧೯೧೧. ಅಂದಿನ ಹಿರಿಯ ಶ್ರೇಣಿ ಐ.ಸಿ.ಎಸ್. ಅಧಿಕಾರಿ ಹಾಗು ಆಯುಕ್ತ ಎಂ.ಸಿ.ಗಿಬ್ಸ್. ಅಂದಿನ ಕಲೆಕ್ಟರ್ ಆಗಿದ್ದ ಐ.ಸಿ.ಎಸ್.ಅಧಿಕಾರಿ ಸಿ.ಡಬ್ಲೂ.ಏಂ.ಹಡ್ಸನ್ ಜೊತೆಗೆ ಕೆರೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶಿಕ್ಷಣ ತಜ್ನ ರಾವ್ ಬಹಾದ್ದೂರು ಎಸ್.ಕೆ.ರೊದ್ದ ವಿಧಿವತ್ ಆಗಿ ಕೆಲಗೇರಿ ಕೆರೆ ಉದ್ಘಾಟಿಸಿ ಲೋಕಾರ್ಪಣೆಗೈಯ್ದಿದ್ದರು.

೧.೩.೧೯೬೨ರ ವರೆಗೆ ಮುನ್ಚಿಪಲ್ ಬರೋ ಕಾರ್ಯನಿರ್ವಹಿಸುತ್ತಿತ್ತು. ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಅಲ್ಲಿಯ ವರೆಗೆ ಧಾರವಾಡಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದುದು ಕೆಲಗೇರಿ ಕೆರೆಯಿಂದ. ೧೯೬೩ರ ಸುಮಾರಿಗೆ ಸವದತ್ತಿಯ ಮಲಪ್ರಭಾ ನದಿಯ ನೀರು ಅವಳಿ ನಗರಕ್ಕೆ ಕುಡಿಯಲು ಸರಬರಾಜಾಗತೊಡಗಿತು. ನಂತರ ಕೆಲವೇ ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ಸುಪರ್ದಿಗೆ ಈ ಕೆರೆಯನ್ನು ವಹಿಸಿಕೊಡಲಾಯಿತು. ಇಂದಿಗೂ ಇದೇ ಚಾಲ್ತಿಯಲ್ಲಿದೆ. ಕೆರೆಯ ಒಳ ಹರಿವಿನ ನಾಲ್ಕೂ ದಿಕ್ಕುಗಳಲ್ಲಿ ರಾಜಾರೋಷವಾಗಿ ಕೆರೆಯ ಅತಿಕ್ರಮಣ ನಡೆಯುತ್ತಿದೆ, ಮನೆಗಳನ್ನು ಕಟ್ಟಲಾಗುತ್ತಿದೆ, ‘ಕ್ಯಾಚ್ ಮೆಂಟ್’ ಪ್ರದೇಶ ಇನ್ನಿಲ್ಲವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರೂ ‘ಸಂಬಂಧಪಟ್ಟವರು’ ತಲೆ ಕಡಿಸಿಕೊಂಡಿಲ್ಲ!

ಇದು ವರ್ತಮಾನ: ಸಧ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಸುತ್ತೂಕಡೆಯಿಂದ ಕೆರೆ ಒತ್ತುವರಿ ಕ್ರಮೇಣ ಮಾಡುತ್ತ ವಸತಿ ನಿವೇಶನಗಳನ್ನು ನಿರ್ಮಿಸಬೇಕೆನ್ನುವ ಹುನ್ನಾರ ಸ್ಪಷ್ಠವಾಗಿ ಗೋಚರಿಸುತ್ತದೆ. ಭೂತಕಾಲದ ಗತ ವೈಭವದ ಸಾಕ್ಷಿಯಾಗಿ ಮೇಲು ಸೇತುವೆ ನಿರಾಡಂಬರವಾಗಿ ಇಂದಿಗೂ ನಿಂತಿದೆ. ಎರಡೂ ಬದಿಗಳಲ್ಲಿ ಕೆರೆಯ ನಿರ್ಮಾಣಕ್ಕೆ ಕಾರಣಕರ್ತರಾದ ಮಹನೀಯರ ಹೆಸರುಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಕೆರೆಗೆ ಕಾವಲಿಲ್ಲ. ನೈಜಾರ್ಥದಲ್ಲಿ ಅನಾಥ ಸ್ಥಿತಿಯಲ್ಲಿದೆ. ನಾಲ್ಕೂ ಬದಿಗಳಲ್ಲಿ ನಿತ್ಯ ಬಟ್ಟೆಗಳನ್ನು ಒಗೆಯಲಾಗುತ್ತದೆ. ಜನ-ದನ ಜೊತೆಯಾಗಿ ಮೈ ತೊಳೆದುಕೊಳ್ಳುತ್ತಾರೆ. ಕೆರೆಗೆ ಮುಖ್ಯ ಒಳ ಹರಿವು ಇರುವ ಬದಿಯಲ್ಲಿ ಗಟಾರುಗಳು ತರಹೇವಾರಿ ತ್ಯಾಜ್ಯಗಳನ್ನು ತುಂಬಿ ತಂದು ಕೆರೆಯ ಉದರದಲ್ಲಿ ಭರಿಸುತ್ತಿವೆ. ಗಬ್ಬುನಾತದ ಕಲುಷಿತ ನೀರು ಈ ಬೆಳವಣಿಗೆಗಳನ್ನು ಪುಷ್ಠೀಕರಿಸುತ್ತದೆ. ಅಸಹನೀಯ ಹಾಗು ಅನಾರೋಗ್ಯಪೂರ್ಣ ವಾತಾವರಣ ನಮ್ಮನ್ನು ಸ್ವಾಗತಿಸುತ್ತದೆ.

ಕೆಲ ಆಸ್ಪತ್ರೆಗಳ ‘ಬಯೋ ಮೆಡಿಕಲ್ ತ್ಯಾಜ್ಯ’ -ಉದಾಹರಣೆಗೆ ಬಳಕೆ ದಿನಾಂಕ ಮೀರಿದ ಔಷಧದ ಬಾಟಲಿ, ಗುಳಿಗೆಗಳು, ಬಳಸಿ ಬಿಸಾಡಲಾದ ಸಿರಿಂಜ್, ಪ್ಲಾಸ್ಟಿಕ್ ಪೈಪ್ ಗಳು, ಸಲೈನ್ ಬಾಟಲಿಗಳು, ಕುಟುಂಬ ನಿಯಂತ್ರಣಕ್ಕೆ ಬಳಸುವ ತರಹೇವಾರಿ ಕಿಟ್ ಗಳು ಇನ್ನೂ ಎನೇನೋ?

ಶ್ರೀನಗರ, ರಾಧಾಕೃಷ್ಣನಗರ, ಬಸವನಗರ, ಶಕ್ತಿ ಕಾಲೋನಿ, ‘ಜಲದರ್ಷಿನಿಪುರ’(ಹೆಸರು ನೋಡಿ ಹೇಗಿಟ್ಟಿದ್ದಾರೆ!), ಭಾವಿಕಟ್ಟಿ ಪ್ಲಾಟ್, ವಿನಾಯಕನಗರ, ಚೈತನ್ಯನಗರ ಮೊದಲಾದ ೪೦೦ಕ್ಕೂ ಹೆಚ್ಚು ಮನೆಗಳಿಂದ, ಕಾಂಕ್ರೀಟ್ ಕಾಡಿನಿಂದ ನೇರವಾಗಿ ಮಲಿನ ನೀರು ಗಟಾರುಗಳ ಮೂಲಕ ಕೆರೆಗೆ ಸಾಗಿ ಬಂದು ನಿತ್ಯವೂ ಕೆರೆ ಮೂಕವೇದನೆ ಅನುಭವಿಸುವಂತೆ ಮಾಡಿದೆ.

ಕೆಲಗೇರಿ ಕೆರೆಯ ಕಲುಷಿತ ನೀರಿನ ಸಂತಾನಗಳ ಬಗ್ಗೆ ಡಾ.ಸಿ.ಜಿ.ಪಾಟೀಲ ಅವರ ಅಭಿಮತ ಕೇಳಿ: ಕೆರೆಯನ್ನು ಮುಕ್ಕಾಲು ಭಾಗ ‘ವಾಟರ್ ಹೈಸಿಂಥ್’ (Water Hyacinth) ಎಂಬ ಸಸ್ಯ ಆವರಿಸಿದೆ. (Pontedriaceae) ಕುಟುಂಬಕ್ಕೆ ಸೇರಿದ ಈ ಸಸ್ಯವನ್ನು ಸಸ್ಯಶಾಸ್ತ್ರಜ್ನರು (Eichhornia Crassipes) ಎಂದು ವರ್ಗೀಕರಿಸುತ್ತಾರೆ. ಇದೇ ಜಾತಿಗೆ ಸೇರಿದ ‘ವಾಟರ್ ಲೆಟ್ಟುಸ್’ (Water Lettuce) ಎಂಬ ಮತ್ತೊಂದು ಸಸ್ಯವೂ ಸಹ ಕೆರೆಯನ್ನು ಆವರಿಸಿದೆ. (Araceae) ಕುಟುಂಬಕ್ಕೆ ಸೇರಿದ ಈ ಸಸ್ಯವನ್ನು (Pistia Stratiotes) ಎಂದು ವರ್ಗೀಕರಿಸಲಾಗುತ್ತದೆ.

ಈ ಸಸ್ಯಗಳ ಬೆಳವಣಿಗೆ ನೀರಿನಲ್ಲಿ ಕೊಳಚೆ ತುಂಬುತ್ತಿದೆ ಎನ್ನುವುದಕ್ಕೆ ಸಾಕ್ಷಿ. ನೀರು ಬಳಸಲು ಅಯೋಗ್ಯ ಸ್ಥಿತಿಗೆ ತಲುಪಿದೆ ಎಂಬುದರ ಸ್ಪಷ್ಠ ಸೂಚನೆ. ನೀರಿನ ಮೇಲೆ ತೇಲುತ್ತ ಇಡೀ ಕೆರೆಯನ್ನು ಈ ಸಸ್ಯ ಸಂಕುಲ ಆವರಿಸಿರುವುದರಿಂದ ಕೆರೆಯ ತಳಕ್ಕೆ ಸೂರ್ಯನ ಕಿರಣಗಳು ತಲುಪುವುದಿಲ್ಲ. ಇದರಿಂದ ಕೆರೆಯ ಜೀವಿವೈವಿಧ್ಯತೆಯಲ್ಲಿ ಭಾರಿ ಅಸಮತೋಲನ ಉಂಟಾಗುತ್ತದೆ. ನೀರಿನಲ್ಲಿ ಆಮ್ಲಜನಕ ನಿಗದಿತ ಪ್ರಮಾಣದಲ್ಲಿ ಕರಗಲು ಅಡಚಣೆ ಉಂಟಾಗುತ್ತದೆ. ದ್ಯುತಿಸಂಸ್ಲೇಷಣ ಕ್ರಿಯೆ ಕೆರೆಯ ಆಳದ ಸಸ್ಯಗಳಲ್ಲಿ ನಡೆಯದೇ ಹೋಗುವುದರಿಂದ ಜಲಚರಗಳು, ಮೀನುಗಳು ಕ್ರಮೇಣ ಮರಣಹೊಂದುತ್ತವೆ. ಇಡೀ ಕೆರೆ ಸತ್ತ ಜೀವಕೋಶಗಳ ಆಗರವಾಗಿ ಮಾರಣಾಂತಿಕ ರೋಗಗಳನ್ನು ಈ ನೀರನ್ನು ಬಳಸುವವರಿಗೆ ತಂದೊಡ್ಡಿ ಪ್ರಾಣಕ್ಕೂ ಎರವಾಗಬಹುದು. ಸಕಾಲದಲ್ಲಿ ಸಂಬಂಧಪಟ್ಟವರು ಎಚ್ಚೆತ್ತು ಸಸ್ಯಗಳನ್ನು ಮಾನವ ಶ್ರಮದಿಂದ ಕೆರೆಯ ಬದಿಗೆ ಎತ್ತಿ ಒಗೆದು ಒಣಗಿಸಲು ಬಿಡಬೇಕು. ಕೆರೆಯ ನೀರಿನ ಒಳ ಹರಿವಿನ ಪ್ರದೇಶಗಳಲ್ಲಿ ಎಲ್ಲಿಯೂ ಕೊಳಚೆ ನೀರು ಸೇರದಂತೆ ಸಮರ್ಪಕ ಹಾಗು ಶಾಶ್ವತ ಯೋಜನೆ ರೂಪಿಸಬೇಕು" ಎನ್ನುತ್ತಾರೆ.

ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯದವರು “ಸಾಲ್ವೇನಿಯಾ" ಹೆಸರಿನ ದುಂಬಿಯನ್ನು ಕೆರೆಯಲ್ಲಿ ಇಳಿಸಿ ಈ ಜಲ ಕಳೆಯ ವ್ಯಾಪಕ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಅವರು ಪ್ಲಾಸ್ಟಿಕ್ ಚೀಲಗಳಲ್ಲಿ ಕೆರೆಯಲ್ಲಿ ಇಳಿ ಬಿಟ್ಟ ಛಾಯಾಚಿತ್ರಗಳು ಪ್ರಕಟಗೊಂಡಿವೆ. ಆದರೆ ದುಂಬಿ ಚಿತ್ರ ಎಲ್ಲಿಯೂ ಪ್ರಕಟವಾಗಿಲ್ಲ! ಈ ಕ್ರಮದಿಂದ ತಕ್ಕ ಮಟ್ಟಿಗೆ ಕಳೆ ನಿಯಂತ್ರಣಕ್ಕೆ ಬಂದಿದೆ ಎಂದು ಸಹ ಅವರು ಹೇಳಿಕೊಂಡಿದ್ದಾರೆ.

ಪರಿಸರವಾದಿಗಳಾದ ಮುಕುಂದ ಮೈಗೂರ ಹಾಗು ಪ್ರೊ.ಜಿ.ಎಸ್.ಕಲ್ಲೂರ್ ಅಭಿಪ್ರಾಯ ಕೇಳಿ: ಕೆಲಗೇರಿ ಕೆರೆ ಅತ್ಯಂತ ಶೀಘ್ರವಾಗಿ ಮಲೀನಗೊಂಡಿತು. ಚೈತನ್ಯನಗರ ಬಡಾವಣೆ, ಶಕ್ತಿನಗರ, ಶ್ರೀನಗರ ಹಾಗು ವಿನಾಯಕನಗರ ಭಾಗಗಳಿಂದ ಬಂದು ಕೂಡುವ ಕೆರೆಯ ಒಳ ಹರಿವಿನ ನೀರನ್ನು ಸಂಗ್ರಹಿಸಿ ಪರೀಕ್ಶೆಗೆ ಒಳಪಡಿಸಲಾಗಿದೆ. ಈ ಪರೀಕ್ಶೆಯ ಫಲಿತಾಂಷ ಗಂಭೀರವಾಗಿದೆ.

ಈ ನೀರಿನ ಬಳಕೆಯಿಂದ ವಾಂತಿ, ಬೇಧಿ, ಕಾಲರಾ, ಕ್ಷಯ, ಚಳಿ-ಜ್ವರ, ಆಮಶಂಕೆ, ಕೆಮ್ಮು, ನಾಯಿಕೆಮ್ಮು, ಟೈಫಾಯಿಡ್, ನ್ಯುಮೋನಿಯಾ, ಇನಫ್ಲೂಎಂಜಾ, ಕಾಮಾಲೆ ರೋಗ, ಕೊಕ್ಕೆ ಹುಳು ರೋಗ, ಗಿನಿ ಹುಳು ರೋಗ, ಮೂಳೆ ಸಂಬಂಧಿ ರೋಗಗಳು, ಆನೆಕಾಲು ರೋಗ, ಗಳಗಂಡ ರೋಗ, ಸಂಧಿವಾತ, ಶ್ವಾಸನಾಳದ ಉರಿ, ಗಂಟಲು ಉರಿ, ಜಠರ ಮತ್ತು ಯಕೃತ್ತುಗಳ ಊತ, ಪೋಲಿಯೋ, ಮಯೋಲೈಟಿಸ್, ಮೆದುಳು ಮತ್ತು ಮೂತ್ರ ಜನಕಾಂಗದ ಮೇಲೆ ಪರಿಣಾಮ, ರಕ್ತ ಹೀನತೆ, ಕ್ಯಾನ್ಸರ್, ಫ್ಲೋರೋಸಿಸ್ ಮುಂತಾದ ಎಲ್ಲ ರೀತಿಯ ರೋಗಗಳು ನಮಗೆ ಅಂಟಿಕೊಳ್ಳಬಹುದಾಗಿದೆ.

ಅಷ್ಟೇ ಅಲ್ಲ. ಕೆರೆಯ ಸುತ್ತಲಿನ ಹಾಗು ಆಳದ ಮಣ್ಣಿನ ಗುಣ ಲಕ್ಷಣದಲ್ಲಿ ಭಾರಿ ಬದಲಾವಣೆಗಳಾಗಿವೆ. ಮಣ್ಣಿನ ಲವಣತ್ವ ಹಾಗು ಕ್ಷಾರೀಯತೆ ಹೆಚ್ಚಿದೆ. ಮಣ್ಣಿನ ಫಲವತ್ತತೆ ನಾಶವಾಗಿದೆ. ಸಸ್ಯಗಳ ಬೆಳವಣಿಗೆಗೆ ಹಾಗು ಪ್ರಾಣಿ ಪಕ್ಷಿಗಳ ಬದುಕಿಗೆ ತೀವ್ರ ತೊಂದರೆಯಾಗುತ್ತಿದೆ. ಕೆರೆಯ ನೀರಿನ ಭೌತಿಕ, ರಾಸಾಯನಿಕ ಅಥವಾ ಜೈವಿಕ ಗುಣಲಕ್ಷಣಗಳು ಬದಲಾಗಿವೆ ಎನ್ನಲು ಇದು ನಿದರ್ಶನ.

ಪರಿಹಾರ ಸೂತ್ರವೇನು? : ಕಲುಷಿತ ನೀರನ್ನು ಶುದ್ಧೀಕರಿಸಲು ಸಾಕಷ್ಟು ಪರಿಹಾರೋಪಾಯಗಳಿವೆ. ಲಭ್ಯವಿರುವ ಹಣಕಾಸಿನ ಬಲ ಲೆಕ್ಕಿಸಿ ಕೈಗೆತ್ತಿಕೊಳ್ಳಬಹುದು. ಜಲ ಶುಚಿ ತಜ್ನರ ಅಭಿಪ್ರಾಯ ಸಪ್ಷ್ಠವಾಗಿದೆ. ಅದು ಈ ಘಳಿಗೆಯ ಅನಿವಾರ್ಯತೆ ಕೂಡ.
*ಭೌತಿಕ ಪದ್ಧತಿ ಶುದ್ಧೀಕರಣ: (ಅಂದರೆ- ಜರಡಿಯಾಡಿಸುವುದು, ಮಿಷ್ರಣ ಮಾಡುವುದು, ಫೋಕೋಲೇಷನ್, ಸೆಡಿಮೆಂಟೇಷನ್, ಸೋಸುವುದು ಇತ್ಯಾದಿ)
*ರಾಸಾಯನಿಕ ಪದ್ಧತಿ ಜಲ ಶುದ್ಧೀಕರಣ: (ಆಂದರೆ- ರೋಗಾಣು ನಾಶ ಪಡಿಸುವುದು, ಹೀರಿಕೆ ವಿಧಾನ, ಘನವಸ್ತುಗಳ ಮೇಲೆ ಅನಿಲಗಳು ಮಂದಗಟ್ಟುವಂತೆ ಮಾಡುವುದು, ದ್ರವೀಭವಿಸುವ ವಿಧಾನ ಇತ್ಯಾದಿ)
*ಜೀವ ವೈಜ್ನಾನಿಕ ಪದ್ಧತಿ ಶುದ್ಧೀಕರಣ: (ಆಂದರೆ- ಆಮ್ಲಜನಕ ಸೇರಿಸುವ ಕೊಳವೆ, ವಾಯು ಸಂಯೋಜನಾ ಲಗೂನ್ ಬಳಕೆ, ಟ್ರಿಕ್ಲಿಂಗ್ ಫಿಲ್ಟರ್ ಬಳಕೆ, ಆಕ್ಟಿವೇಟೆಡ್ ಸ್ಲಡ್ಜ್ ಸಂಸ್ಕರಣೆ ವಿಧಾನ ಇತ್ಯಾದಿ) ಆಶ್ರಯಿಸಿ ಮರಣ ಶೆಯ್ಯೆಯಲ್ಲಿರುವ ಕೆಲಗೇರಿ ಕೆರೆಗೆ ಪುನರ್ಜೀವ ನೀಡಬಹುದು.

ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಶಿಕ್ಷಣ ತಜ್ನ ವಾಯ್.ಎಸ್. ಪಾಟೀಲರು ಅಭಿಪ್ರಾಯ ಪಡುವಂತೆ- "ನೀರು ಶುಚಿತ್ವದ ಕುರುಹು. ಅದು ನಮ್ಮ ಬದುಕಿಗೆ ಅವಶ್ಯಕವಾಗಿ ಬೇಕಾದ ವಸ್ತು. ನೀರು ನಮ್ಮ ದಿನ ನಿತ್ಯದ ಬಳಕೆಗೆ, ಕೃಷಿಗೆ, ಕೈಗಾರಿಕೆಗೆ ಅಗತ್ಯ. ನೀರಲ್ಲದಿದ್ದರೆ ನಮ್ಮ ಬದುಕೇ ಬರುಡು. ಆದ್ದರಿಂದ ಪರಿಶುದ್ಧವಾದ ನೀರನ್ನು ಸಂಗ್ರಹಿಸುವುದು, ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ ೧೯೭೪ (ತಿದ್ದುಪಡಿ ಕಾಯ್ದೆ ೧೯೮೮) ಎಲ್ಲರ್ರೂ ಓದಬೇಕು. ಜಲಾಧಿಕಾರ ಹಾಗು ಜಲದ ಪ್ರತಿ ಕರ್ತವ್ಯ ಜಾಗೃತವಾಗಬೇಕು"

ಇನ್ನಾದರೂ ನಾವು ಜಲಯೋಧರು/ ಜಲ ಸಾಕ್ಷರರು ಆಗಲು ಪ್ರಯತ್ನಿಸೋಣಲ್ಲ.