ಬನ್ನಿ ಬಂಗಾರ

ಬನ್ನಿ ಬಂಗಾರ

ಶಮೀ ಅಥವಾ ಬನ್ನಿ ನಮ್ಮ ಪಾಪಗಳನ್ನು ಮತ್ತು ಧನಸ್ಸುಗಳನ್ನು ಒಂದು ವರ್ಷ ಹಿಡಿದಿಟ್ಟುಕೊಂಡ ಶಮೀ ವೃಕ್ಷ, ರಾಮನಿಗೆ ಪ್ರಿಯವಾದ ಮರ. ಕೌರವರ ಮೋಸ ವಂಚನೆಗೊಳಗಾದ ಪಾಂಡವರು ಹನ್ನೆರಡು ವರ್ಷ ವನವಾಸ ಪೂರೈಸಿ ಇನ್ನೊಂದು ವರ್ಷ ಅಜ್ಞಾತ ವಾಸವನ್ನು ಕಳೆಯಬೇಕಾಗಿದ್ದ ಅವಧಿಯಲ್ಲಿ ತಮ್ಮ ಶಸ್ತ್ರಗಳನ್ನು ಶಮೀ ವೃಕ್ಷದಲ್ಲಿಟ್ಟು ವಿರಾಟನಗರಿಯಲ್ಲಿ ವೇಷ ಮರೆಸಿಕೊಂಡಿದ್ದರು. ಅಜ್ಞಾತ ವಾಸ ಮುಗಿದ ನಂತರ ವೃಕ್ಷವನ್ನು ಪೂಜಿಸಿ ಮಾತೆ ದುರ್ಗೆಗೆ ನಮಿಸಿ ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದರು. ಅದು ಅಶ್ವಯುಜ ದಶಮಿಯಾದ್ದರಿಂದ ವಿಜಯದಶಮಿ ಆಚರಣೆ.

ರಾಜರ ಕಾಲದಲ್ಲಿ ಯುದ್ಧಕ್ಕೆ ಹೊರಡುವಾಗ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಹೊರಡುತ್ತಿದ್ದರಂತೆ. ಶಮಿ ಅಥವಾ ಬನ್ನಿ ಎಲೆಗಳು ಬಲ ಹಾಗೂ ಜಯದ ಸಂಕೇತ. ವಿಜಯನಗರದರಸರ ಪ್ರೇರಣೆಯಿಂದ ಒಡೆಯರ ಕಾಲದಲ್ಲಿ ಮೈಸೂರು ದಸರಾ ಮೆರವಣಿಗೆ ವಿಶ್ವಖ್ಯಾತಿ ಪಡೆಯಿತು. ವಿಜಯದಶಮಿಯಂದು ಅರಮನೆ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ಬನ್ನಿ ಮಂಟಪದವರೆಗೆ ಬಂದು, ಮಹಾರಾಜರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ವಿಜಯದಶಮಿಯ ದಿನ ಬನ್ನಿ ಎಲೆಗಳನ್ನು ಬಂಗಾರವೆಂದು ವಿನಿಮಯಿಸಿಕೊಳ್ಳುವ ಪದ್ಧತಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿದೆ. 

ಇದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯಕರ ಕಥೆಯೂ ಇದೆ. ಪೈಠಣದ ದೇವದತ್ತನ ಮಗ ಕೌತ್ಸ್ಯ ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಗುರು ವರತಂತುವಿಗೆ ಗುರುದಕ್ಷಿಣೆ ಕೊಡಲು ಅಪೇಕ್ಷಿಸಿದ. ಗುರು ತನಗೆ 140 ಲಕ್ಷ ಬಂಗಾರದ ವರಹಗಳನ್ನು ಕೇಳಲಾಗಿ ಕೌತ್ಸ್ಯ ಉದಾರಿ ರಘುರಾಜನಲ್ಲಿಗೆ (ರಾಮನ ಪೂರ್ವಜ) ಹೋಗಲು, ರಾಜನು ಮೂರು ದಿನಗಳಲ್ಲಿ ಕೊಡುವೆನೆಂಬ ಆಶ್ವಾಸನೆಯಿತ್ತ. ರಘುರಾಜ ಬಂಗಾರದ ವರಹ ಕೇಳಲು ಇಂದ್ರನಲ್ಲಿಗೆ ಹೋದ; ಆತ ಕುಬೇರನ ಬಳಿ ಕಳುಹಿಸಲು, ಕುಬೇರನು ಅಯೋಧ್ಯೆಯ ಶಮೀ ವೃಕ್ಷದ ಮೇಲೆ ಬಂಗಾರದ ಮಳೆ ಸುರಿಸಿದನಂತೆ. ರಾಜ ಕೌತ್ಸ್ಯನಿಗೆ ಬೇಕಾದಷ್ಟು ವರಹಗಳನ್ನು ಕೊಟ್ಟನು. ಉಳಿದ ಬಂಗಾರವನ್ನು ಅಯೋಧ್ಯೆಯ ಜನತೆಗೆ ಹಂಚಿದನು. ಅದು ಅಶ್ವಯುಜ ದಶಮಿಯ ದಿನವಾಗಿದ್ದರಿಂದ, ಸಮೃದ್ಧಿಯ ಸಂಕೇತವಾಗಿ ಬನ್ನಿಯನ್ನು ಬಂಗಾರವ ವಿನಿಮಯಿಸಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ. ಗಣೇಶನಿಗೆ ಸಲ್ಲಿಸುವ 21 ಪತ್ರ ಪೂಜೆಯಲ್ಲಿ ಶಮೀ ಪತ್ರದ ಸಮರ್ಪಣೆಯಿದೆ.

ಬನ್ನಿಗೆ ಆಧ್ಯಾತ್ಮಿಕ ಮಹತ್ವವಿದ್ದಂತೆ ವೈಜ್ಞಾನಿಕ ಮಹತ್ವವೂ ಇದೆ. ಧನ್ವಂತರಿ ನಿಘಂಟುವಿನಲ್ಲಿ ಪಂಚಭಂಗ (ಐದು ಸಸ್ಯಗಳು ದೇವದಾಳಿ, ಶಮೀ, ಶೃಂಗ, ನಿರ್ಗುಂಡಿ, ಸನಕ) ಗಳಲ್ಲಿ ಒಂದೆಂದು ವರ್ಣಿಸಲಾಗಿದೆ. ಈ ಸಸ್ಯಗಳ ತೊಗಟೆಯ ಬಿಸಿನೀರಿನ ಸ್ನಾನ ಸೋಂಕು ನಿವಾರಕವಲ್ಲದೇ, ಬಲ ವೃದ್ಧಿಸಬಲ್ಲದೆಂದು ಹೇಳಲಾಗಿದೆ.

-ಪುಷ್ಪಾ ಮೋಹನ ಮುದಕವಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ