ಬನ್ನಿ, ಬಾಲ್ಯಕ್ಕೆ ಮರಳೋಣ...

ಬನ್ನಿ, ಬಾಲ್ಯಕ್ಕೆ ಮರಳೋಣ...

ಬರಹ

ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ 'ಮಹತ್ವ'ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ ಆಸೆಗಳಲ್ಲಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ. ಅಲ್ಲವೇ? ಕೆಲಸದ ಒತ್ತಡದಲ್ಲಿ 'ನೆಮ್ಮದಿ' ಎಂಬುದು ಅಪರೂಪದ ಸಂಗತಿಯಾಗಿರುವಾಗ ಬಾಲ್ಯದ ಕೆಲವು ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿ, ಮುಖದಲ್ಲಿ ನಗು ಬೀರಲಿರುವ ಒಂದು ಪುಟ್ಟ ಪ್ರಯತ್ನವಿದು.

ಈ ಕೆಳಗಿನ ಘಟನೆಗಳನ್ನು ಓದುವಾಗ ಬಾಲ್ಯದ ಚಿತ್ರಣವನ್ನು ಮನಸ್ಸಿಗೆ ತಂದು ಕೊಳ್ಳಿ...ಕಳೆದು ಹೋದ ಆ ಬಾಲ್ಯದ ನೆನಪುಗಳು ಎಷ್ಟು ಚೆನ್ನಾಗಿವೆ ಅಲ್ಲವಾ?

1. ಹಬ್ಬಕ್ಕಾಗಿ ಹೊಸ ಉಡುಪು ತಂದಾಗ ಅದನ್ನು ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸಿದ್ದು. ಅಬ್ಬಾ ಅದರ ಪರಿಮಳ! ಹಬ್ಬಕ್ಕಾಗಿ ದಿನ ಎಣಿಸುತ್ತಾ ಕಾಲ ಕಳೆದದ್ದು.

2. ತರಗತಿಯಲ್ಲಿರುವ ಖಾಲಿ ಬೆಂಚಿನ ಒಂದು ತುದಿಯಲ್ಲಿ ನಾವೊಬ್ಬರೇ ಕುಳಿತು ಕೊಂಡಾಗ ಬೆಂಚು ಮೇಲಕ್ಕೇರಿದನ್ನು ನೆನೆಸಿದರೆ ಎದೆ' ಝಲ್' ಎನ್ನಲಿಲ್ಲವಾ?

3.ಮಾವಿನ ಮರಕ್ಕೇರೆ, ಬಾವಲಿಯಂತೆ ಹಣ್ಣನ್ನು ಕೊಯ್ಯದೆಯೇ ಕಚ್ಚಿ ತಿಂದದ್ದು.

4. ಗೇರು ಹಣ್ಣು ತಿಂದು ರಸ ಅಂಗಿಗೆ ಉಜ್ಜುತ್ತಿದ್ದದ್ದು. ಅಂಗಿಯಲ್ಲಿ ಗೇರು ಹಣ್ಣಿನ ಕಲೆ ಎಷ್ಟಿತ್ತು ಅಲ್ಲವಾ?

5.ಶಾಲೆಯಿಂದ ಸಿಕ್ಕಿದ ಬಣ್ಣದ ಕಾಗದವನ್ನು ತುಂಡು ತುಂಡು ಮಾಡಿ ಉಗುರಿಗೆ ಅಂಟಿಸಿ ಬಣ್ಣದ ಉಗುರು ಮಾಡಿದ್ದು. ಕೆಲವೊಮ್ಮೆ ಕಾಗದವನ್ನು ನೀರಲ್ಲಿ ಹಾಕಿ, ಬಾಟಲಿಯಲ್ಲಿ ತುಂಬಿಸಿ ಬಣ್ಣ ಬಣ್ಣದ ಶರಬತ್ತು ಅಂತಾ ಹೇಳಿ ಅಂಗಡಿ ಆಟವಾಡಿದ್ದು.

6.ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ್ದು. ಮರದ ತುದಿಯೇರುತ್ತಲೇ ಕೆಂಪಿರುವೆಗಳ ದಂಡನ್ನು ಕಂಡು ಸರ್ರನೆ ಜಾರಿದ್ದು.

7.ಆಟವಾಡುವಾಗ ಬಿದ್ದು ಕಾಲುಗಂಟಿಗೆ ಗಾಯ ಮಾಡಿಕೊಂಡ್ದು, ಗಾಯವನ್ನು ಆಗಾಗ ನೋಡುತ್ತಿದ್ದದ್ದು. ಅದು ಗುಣವಾಗುವ ವರೆಗೆ ಕಾಯದೆ, ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡಿಸಿಕೊಂಡಾಗ ಅಮ್ಮ ಬೈದದ್ದು.

8.ಹೊಸ ಆಟಿಕೆ ತಂದಾಗ ಅದರೊಳಗೇನಿದೆ ಎಂದು ಬಿಚ್ಚಿ ನೋಡುತ್ತಿದ್ದದ್ದು. ಬೊಂಬೆಯನ್ನು ಸ್ನಾನ ಮಾಡಿಸಿದ್ದು, ಅದಕ್ಕೆ ಚೆಂದದ ಅಂಗಿ ಹೊಲಿದು, ಕಣ್ಣಿಗೆ ಕಾಡಿಗೆ ಹಚ್ಚಿ, ಕೂದಲು ಹೆಣೆಯುತ್ತಿದ್ದದ್ದು.

9.ಶಾಲೆಗೆ ಹೋಗಲು ಉದಾಸೀನವಾದಾಗ ಹೊಟ್ಟೆ ನೋವೆಂದು ಅಮ್ಮನಲ್ಲಿ ಸುಳ್ಳು ಹೇಳಿದ್ದು. ಕಹಿ ಕಷಾಯ ಕುಡಿಸುತ್ತೇನೆ ಎಂದಾಗ ಹೊಟ್ಟೆ ನೋವು ಮಾಯವಾದ ದಿನಗಳು.

10.ಚಿಕ್ಕ ಹೊಳೆಯಲ್ಲಿ ಅಮ್ಮ ಬಟ್ಟೆ ಒಗೆಯುವಾಗ, ಅಮ್ಮನ ಸೀರೆಯಲ್ಲಿ ಮೀನು ಹಿಡಿದು,ಅದನ್ನು ಬಾಟಲಿಯಲ್ಲಿ ಹಾಕಿ ದಿನವಿಡೀ ಅದನ್ನು ನೋಡುತ್ತಾ ಕುಳಿತದ್ದು.

11.ಹೂತೋಟದಲ್ಲಿ ಹಾರುವ ಬಣ್ಣದ ಚಿಟ್ಟೆಗಳನ್ನು ಹಿಡಿದು ಬಿಟ್ಟದ್ದು. ಅತ್ತಿಂದಿತ್ತ ಹಾರುವ ದುಂಬಿಗಳನ್ನು ಹಿಡಿಯಲು ಮೆಲ್ಲನೆ ಹೆಜ್ಜೆಯಿಟ್ಟು, ಅದರ ಬಾಲವನ್ನು ಹಿಡಿಯಲು ಹೋಗುವಾಗ ಹಾರಿ ಹೋದ ದುಂಬಿಗೆ ಬಾಲದಲ್ಲಿಯೂ ಕಣ್ಣಿದೆಯಾ? ಅಂತಾ ಯೋಚಿಸಿದ್ದು. (ಯಾವ ದುಂಬಿಯೂ ಸಿಗದೇ ಇದ್ದಾಗ ನಾನು ಪೊರಕೆಯಿಂದ ಹೊಡೆದಾದರೂ ಹಿಡಿಯಲು ನೋಡುತ್ತಿದೆ. ನೀವು?)

12.ನಾಲ್ಕೈದು ಮಣೆ ಅಥವಾ ರಟ್ಟಿನ ಪೆಟ್ಟಿಗೆಯನ್ನು ಕೋಣೆಯಂತೆ ಮಾಡಿ ಬೆಕ್ಕಿನ ಮರಿಗೆ ಮನೆ ನಿರ್ಮಿಸಿ ಕೊಟ್ಟದ್ದು.

13.ನಾಲ್ಕೈದು ಕುರ್ಚಿಗಳನ್ನು ಸಾಲಾಗಿರಿಸಿ, ಮೇಲೆ ಅಮ್ಮನ ಸೀರೆ ಹೊದೆದು ಬಸ್ ಆಟವಾಡಿದ್ದು. ಡ್ರೈವರ್ ಸೀಟಿಗಾಗಿ ಅಣ್ಣನೊಂದಿಗೆ ಜಗಳವಾಡಿದ್ದು. ಹಳೆಯ ಟಿಕೆಟ್ ಸಂಗ್ರಹಿಸಿ ಕಂಡೆಕ್ಟರ್‌ನಂತೆ ಟಿಕೆಟ್ ಕೊಟ್ಟದ್ದು.

14.ಮಳೆ ನೀರಲ್ಲಿ ಮಜಾ ಮಾಡುತ್ತಾ ಆಟವಾಡಿದ್ದು. ಹವಾಯಿ ಚಪ್ಪಲಲ್ಲಿ ನೀರನ್ನು 'ಟಪ್ ಟಪ್' ಅಂತ ರಾಚಿಸುತ್ತಾ ಅಂಗಿ ಒದ್ದೆ ಮಾಡುತ್ತಿದ್ದದ್ದು. ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು.

15.ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದು. ಗೆಳೆಯರೊಂದಿಗೆ ಗೋಲಿಯಾಟವಾಡಿದ್ದು, ಕುಂಟ ಬಿಲ್ಲೆ, ಲಗೋರಿ ಆಟವಾಡಿ ದಣಿದದ್ದು.

16.ಮನೆ ಮುಂದಿನ ಮಾವಿನ ಮರದ ರೆಂಬೆಗೆ ಉಯ್ಯಾಲೆ ಕಟ್ಟಿ ತೂಗಿದ್ದು.

17. ಕೊತ್ತಳಿಗೆ ಬ್ಯಾಟ್‌ನಲ್ಲಿ ಕ್ರಿಕೆಟ್ ಆಡಿದ್ದು. ಔಟಾಗದೇ ಇದ್ದಾಗ 'ನಾ ಬ್ಯಾಟ್ ಕೊಡಲ್ಲ' ಅಂತಾ ಹೇಳಿ ಮನೆಯ ಸುತ್ತ ಓಡಿದ್ದು.

18.ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಹಾಕಿದ ಬಣ್ಣದ ವೇಷದಲ್ಲಿಯೇ ಬಂದು ಅಪ್ಪ ಅಮ್ಮನ ಮುಂದೆ ನಿಂತು ಸಂಭ್ರಮಿಸಿದ್ದು.

19. ಗಿಳಿ ಹಿಂಡುಗಳಿಗೆ ಕವಣೆಯಲ್ಲಿ ಕಲ್ಲು ಹೊಡೆಯುತ್ತಿದ್ದದ್ದು, ಮರದ ಪೊಟರೆಯಲ್ಲಿರುವ ಹಕ್ಕಿ ಗೂಡಿನೊಳಗೆ ಮೊಟ್ಟೆಯಿದೆಯಾ? ಅಂತ ಇಣುಕಿ ನೋಡುತ್ತಿದ್ದದ್ದು.

20.ಜಾತ್ರೆಗೆ ಹೋದಾಗ ಅಪ್ಪ ಕೊಡಿಸಿದ ಪುಗ್ಗೆ, ಅದು ದಿನ ಬೆಳಗಾದಾಗ ಒಡೆದು ಹೋದುದಕ್ಕಾಗಿ ಹೊಸ ಪುಗ್ಗೆ ಕೊಡಿಸೆಂದು ರಚ್ಚೆ ಹಿಡಿದದ್ದು. ಯಕ್ಷಗಾನ ನೋಡಿ ಅಲ್ಲಿರುವ ಪಾತ್ರಗಳನ್ನು ಅನುಕರಿಸುತ್ತಾ ಮನೆಯ ಜಗಲಿಯನ್ನೇ ರಂಗಭೂಮಿಯಾಗಿಸಿದ್ದು.

ಹೀಗೆ ಹಲವಾರು ಬಾಲ್ಯದ ನೆನಪುಗಳು ಮನಸ್ಸಿನ ಪುಟದಲ್ಲಿ ಹಾದು ಹೋಗುವಾಗ ಆ ಮುಗ್ದ ಸುಂದರ ಬಾಲ್ಯ ಮತ್ತೊಮ್ಮೆ ಮರಳಿ ಬರುವುದೇ ಎಂದು ಮನಸ್ಸು ಹಂಬಲಿಸುತ್ತದೆ. ಹೋದ ಕಾಲ ಮರಳುವುದಿಲ್ಲ ಅಂತ ಗೊತ್ತಿದ್ದರೂ, ಕಳೆದ ಮಧುರ ನೆನಪುಗಳನ್ನು ನೆನೆಯುವಾಗ ಮನಸ್ಸು ನಿರಾಳವಾಗುತ್ತದೆ. "ಬಾಲ್ಯದ ನೆನಪು ಮುಪ್ಪಾದರೂ ಮಾಸದು"ಅಲ್ಲವೇ?