ಬನ್ನಿ ಬೇಗ ಬನ್ನಿ

ಬನ್ನಿ ಬೇಗ ಬನ್ನಿ

ಕವನ

 ಮಿಂಚಿನಂಚುಗಳ ಹಿಡಿದು ಕೆಂಡದುಂಡೆಗಳ ನುಂಗಿ ನೀರ್ಕುಡಿವ ಸಿಡಿಲ ಮರಿಗಳೇ ಬನ್ನಿ

 ಕರಿಬಂಡೆಗಳ ಬರಿಗೈಯಲೆ ಹುಡಿಗೈದು ದಶದಿಕ್ಕುಗಳ ಧೂಳೆಬ್ಬಿಸುವ ಪುಂಡ ಸಾಹಸಿಗಳೆ ಬನ್ನಿ

ಕಾಲಯಮನ ಕೊರಳ ಮುರಿದು ಮೃತ್ಯುವಿನ ಸಮಾಧಿಯ ನಿರ್ಮಿಸುವ ಮೃತ್ಯುಂಜಯರೆ ಬನ್ನಿ

ಕಾರಿರುಳ ಕಗ್ಗತ್ತಲೆಯ ಕೊರಳ ಹಿಸುಕುವ ಕಸುವಿನ ಕುಡಿಗಳೆ ಕೆಂಡದ ಚೆಂಡನಾಡುತ ಬನ್ನಿ

ಹಸಿವಿನಟ್ಟಹಾಸದ ಕಿಚ್ಚ ಕೊಚ್ಚಿ ಕೊಚ್ಚಿ ನೆಲಕಚ್ಚಿಸಿ ಹಸಿರ ಹೆಚ್ಚಿಸುವ ಬಲರಾಮರೇ ಬನ್ನಿ

ಕಷ್ಟಕೋಟಲೆಗಳ ದುಖಃದುಮ್ಮಾನಗಳ ಹಸಿ ಹಸಿಯಾಗಿ ತಿಂದು ತೇಗುವ ಅಗಸ್ತ್ಯರೇ ಬನ್ನಿ

ಮೋಸ ವಂಚನೆಗಳ ಕುಟಿಲ ಕೀಟಲೆಗಳ ನಿಟಿಲಿಗಾಹುತಿ ನೀಡುವ ವಿಶ್ವಾಮಿತ್ರರೇ ಬನ್ನಿ

ಕಳ್ಳ ಖದೀಮರ ದುಷ್ಠ ದುರಳರ  ಗರಳ ಗರಗಸದಿ ಕೊಯ್ಯುವ ತಾಂಡವ ಮೂರ್ತಿಗಳೇ ಬನ್ನಿ

ಭವ್ಯ ಭಾರತದ ಕನಸ ಕಾಣುವ ನನಸಿನ ಹರಿಕಾರರೆ ಗುರಿ ಮುಟ್ಟಬೇಕಿದೆ ಬನ್ನಿ ಬೇಗ ಬನ್ನಿ.