ಬನ್ನಿ ಮಕ್ಕಳೇ... ಪಾಠ ಬದಿಗಿಟ್ಟು ಸ್ವಲ್ಪ ಆಟವಾಡೋಣ!

ಬನ್ನಿ ಮಕ್ಕಳೇ... ಪಾಠ ಬದಿಗಿಟ್ಟು ಸ್ವಲ್ಪ ಆಟವಾಡೋಣ!

ಹಿಂದೊಮ್ಮೆ ನಾನು ‘ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್’ ಎಂಬ ಲೇಖನ ಬರೆದಿದ್ದೆ. ಓದಿದ ಹಲವಾರು ಮಂದಿ ಈ ಲೇಖನವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಆ ಲೇಖನದಲ್ಲಿ ಬಿಟ್ಟು ಹೋದ ಕೆಲವಷ್ಟು ಅಂಶಗಳನ್ನು ನಾನಿಲ್ಲಿ ಸೇರಿಸಬಯಸಿದ್ದೇನೆ. ೨೦೨೦ ರ ವರ್ಷ ಕೊರೋನಾ ಮಹಾಮಾರಿಯ ಕಾರಣದಿಂದ ಮಕ್ಕಳು ಎಲ್ಲರೂ ಮನೆಯಲ್ಲೇ ಉಳಿದು ಬಿಟ್ಟರು. ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕಡೇ ಪಕ್ಷ ಅವರೆಲ್ಲಾ ಶಾಲೆಯಲ್ಲಿ ಆಟವಾಡುವ ಸಮಯದಲ್ಲಾದರೂ ಮೈದಾನಕ್ಕೆ ಇಳಿಯುತ್ತಿದ್ದರು. ಆದರೆ ಕೆಲವು ಶಾಲೆಗಳಲ್ಲಂತೂ ಆಟದ ಮೈದಾನವೇ ಇಲ್ಲ. ಇದ್ದ ಎಲ್ಲಾ ಜಾಗದಲ್ಲಿ ಶಾಲಾ ಕಟ್ಟಡವೇ ಕಟ್ಟಿಸಿದ್ದಾರೆ. ನಮ್ಮ ಶಾಲಾ ವ್ಯವಸ್ಥಾಪನಾ ಮಂಡಳಿ ಮತ್ತು ಮಾಲಕರಿಗೆ ಎಷ್ಟು ಜಾಸ್ತಿ ಶಾಲಾ ಕೊಠಡಿಗಳನ್ನು ಕಟ್ಟುತ್ತೇವೋ ಅಷ್ಟು ತಮ್ಮ ಸಂಪಾದನೆಗೆ ದಾರಿಯಾಗುತ್ತದೆ ಎಂದೇ ಅವರು ನಂಬಿದ್ದಾರೆ.

ಸಣ್ಣ ಸಣ್ಣ ಮಕ್ಕಳಾದರೆ ಒಳಾಂಗಣ ಕ್ರೀಡೆಗಳನ್ನು ಆಡಬಹುದು. ಆದರೆ ಸ್ವಲ್ಪ ದೊಡ್ಡ ಮಕ್ಕಳು (೮ ರಿಂದ ೧೪ ವರ್ಷ) ಏನು ಒಳಾಂಗಣ ಆಟವಾಡುವುದು? ಹೊರಾಂಗಣ ಆಟವಾಡುವುದರಿಂದ ಅವರ ದೈಹಿಕ ಬೆಳವಣಿಗೆ ಸರಿಯಾಗಿ ಆಗುತ್ತದೆ. ಮಕ್ಕಳು ಮಣ್ಣಲ್ಲಿ ಆಡ ಬೇಕು, ಬೆವರು ಹರಿಸಬೇಕು, ಆಗಲೇ ಅವರ ದೇಹದ ಎಲ್ಲಾ ಅಂಗಾಂಗಗಳಿಗೆ ವ್ಯಾಯಾಮ ದೊರೆತು ಅವುಗಳು ಸ್ವಸ್ಥವಾಗಿರುತ್ತವೆ. ರೋಗರುಜಿನಗಳ ವಿರುದ್ಧ ಹೋರಾಡುವ ಶಕ್ತಿ ದೇಹದಲ್ಲಿ ಬೆಳೆಯುತ್ತದೆ. ಮೊದಲು ನಾವೆಲ್ಲಾ ಸಣ್ಣವರಿರುವಾಗ ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನವಿತ್ತು, ದೈಹಿಕ ಶಿಕ್ಷಕರಿದ್ದರು. ಅವರು ವ್ಯಾಯಾಮ ಮಾಡಿಸುತ್ತಿದ್ದರು, ಆಟ ಆಡಿಸುತ್ತಿದ್ದರು. ಅದಕೋಸ್ಕರವೇ ಪಿಟಿ (Physical Training) ಪೀರಿಯಡ್ ಇತ್ತು. ಆಗ ಆಟ ಆಡಿ ಸಾಕಾಗದೇ, ಶಾಲೆ ಮುಗಿದ ಬಳಿಕವೂ ಅದೇ ಮೈದಾನದಲ್ಲಿ ನಾವು ಆಟವಾಡುತ್ತಿದ್ದೆವು. ಈಗ ಶಾಲೆಯ ಅವಧಿ ಮುಗಿದ ಕೂಡಲೇ ಟ್ಯೂಷನ್ ಪ್ರಾರಂಭವಾಗುತ್ತದೆ. ಟ್ಯೂಷನ್ ಮುಗಿಯುವಾಗ ರಾತ್ರಿಯಾಗುತ್ತದೆ. ಮತ್ತೆ ಯಾವಾಗ ಮಕ್ಕಳು ಆಟವಾಡೋದು? ನಮ್ಮಲ್ಲಿ ಕ್ರೀಡೆ ಎಂಬ ವಿಷಯದಲ್ಲಿ ಪರೀಕ್ಷೆಗಳು ಇರುವುದೇ ಇಲ್ಲ. ಅವು ನಮ್ಮ ಪಠ್ಯ ಚಟುವಟಿಕೆಗಳ ಭಾಗವಾಗಿಯೇ ಇಲ್ಲ. ವಾರ್ಷಿಕವಾಗಿ ಒಂದು ದಿನ ಕಾಟಾಚಾರಕ್ಕೆ ಕ್ರೀಡಾ ದಿನ ಮಾಡುವುದು ಮತ್ತು ಗೆದ್ದವರಿಗೆ ಬಹುಮಾನ ನೀಡುವುದು ಬಹಳ ವರ್ಷಗಳಿಂದ ನಡೆದು ಬಂದ ಸಂಪ್ರದಾಯ.

ಬಹುತೇಕ ಶಾಲೆಗಳು ಆಟೋಟ ಸ್ಪರ್ಧೆಗಳಲ್ಲಿ ಗೆದ್ದು ಬಂದ ವಿದ್ಯಾರ್ಥಿಯನ್ನು ಗಮನಿಸುವುದೇ ಇಲ್ಲ. ಅವರದ್ದೇನಿದ್ದರೂ ಕಲಿಕೆಯಲ್ಲಿ ಹುಷಾರಿರಬೇಕು. ವರ್ಷದ ಕೊನೆಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ಅಂಕ ಗಳಿಸಿ ತಮ್ಮ ಶಾಲೆಯ ಹೆಸರನ್ನು ಮೇಲಕ್ಕೆತ್ತಬೇಕು ಎನ್ನುವುದಷ್ಟೇ ಶಾಲಾ ಮಂಡಳಿಯ ಆಸಕ್ತಿಯಾಗಿರುತ್ತದೆ. ಬಹಳ ಅಪರೂಪದಲ್ಲಿ ಕೆಲವು ಶಾಲೆಗಳು ಕ್ರೀಡೆಗೆ ಬಹಳಷ್ಟು ಬೆಂಬಲ ನೀಡುತ್ತವೆ. ಉತ್ತಮ ಕ್ರೀಡಾ ವಿದ್ಯಾರ್ಥಿಯನ್ನು ಗುರುತಿಸಿ ಅವನಿಗೆ ತರಭೇತಿ ನೀಡಿ, ಉತ್ತಮ ಕ್ರೀಡಾಳುವಾಗುವಂತೆ ಪ್ರೋತ್ಸಾಹಿಸುತ್ತದೆ. ಇದು ಅತ್ಯಗತ್ಯ. ಏಕೆಂದರೆ ಎಲ್ಲರೂ ಶೈಕ್ಷಣಿಕವಾಗಿ ಚುರುಕಾಗಿರಲು ಸಾಧ್ಯವಿಲ್ಲವಷ್ಟೇ, ಶಿಕ್ಷಣ ಎಷ್ಟು ಅಗತ್ಯವೋ ಉಳಿದ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಅಗತ್ಯ ಎಂಬ ಅರಿವು ನಮ್ಮ ಪಾಲಕರಲ್ಲಿ ಮತ್ತು ಶಿಕ್ಷಕರಲ್ಲಿ ಮೂಡಿ ಬರಬೇಕು. ಸರಕಾರವೂ ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಅಥವಾ ಬೇರೆ ಯಾವುದೋ ಕಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಗುರುತಿಸಬೇಕು ಮತ್ತು ಅವನ/ಅವಳ ಭವಿಷ್ಯದ ದಾರಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು. ಸರಕಾರಿ ಕೆಲಸಗಳಲ್ಲಿ ಉತ್ತಮ ಆಟಗಾರನಿಗೆ, ಕಲಾವಿದನಿಗೆ, ಸಂಗೀತಗಾರನಿಗೆ, ಹಾಡುಗಾರನಿಗೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿಗೆ ಮೀಸಲಾತಿ ಕಲ್ಪಿಸಬೇಕು. ಇದರಿಂದ ಉಳಿದ ಕಲೆ, ಆಟಗಳಿಗೂ ಬೆಲೆ ಬರುತ್ತದೆ. ಆಗಲಾದರೂ ಪೋಷಕರೂ ತಮ್ಮ ಮಗ ಅಥವಾ ಮಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ, ಅದನ್ನು ಬದಿಗೆ ಸರಿಸಿ ಕೇವಲ ಪಾಠ ಕಲಿತರೆ ಸಾಕು ಎಂದು ಹೇಳುವುದು ತಪ್ಪುತ್ತದೆ.

ಇತ್ತೀಚೆಗೆ ನಾನು ನನ್ನ ಗೆಳೆಯನೋರ್ವನ ಮನೆಗೆ ಹೋಗಿದ್ದೆ. ಅಲ್ಲಿ ಅವನ ೭ ನೇ ತರಗತಿಯಲ್ಲಿ ಕಲಿಯುವ ಮಗ ಇದ್ದ. ಈಗಂತೂ ಶಾಲೆಗೆ ಹೋಗಲು ಇಲ್ಲದ ಕಾರಣ ಆನ್ ಲೈನ್ ತರಗತಿ ಎಂದೆಲ್ಲಾ ಆಗುತ್ತಿರುವುದರಿಂದ ಅವನ ಕೈಗೆ ಮೊಬೈಲ್ ಸಿಕ್ಕಿದೆ. ಇದರಿಂದ ೨-೩ ಗಂಟೆ ಆನ್ ಲೈನ್ ತರಗತಿ ಇದ್ದರೆ, ಉಳಿದ ಸಮಯ ಅವನು ಮೊಬೈಲ್ ನೋಡುವುದರಲ್ಲೇ ತಲ್ಲೀನ. ಏನಾದರೂ ಆಟವಾಡಬಾರದೇ? ಎಂದು ನಾನು ಹೇಳಿದರೆ ಅವನು ಮೊಬೈಲ್ ನಿಂದ ಮುಖ ಮೇಲೆತ್ತದೇ, ಕ್ರಿಕೆಟ್, ಫುಟ್ ಬಾಲ್ ಆಡುತ್ತೇನೆ ಅಂಕಲ್ ಎಂದು ಹೇಳಿದ. ನನಗೆ ಖುಷಿ ಆಯಿತು. ಕಡೇ ಪಕ್ಷ ಸ್ವಲ್ಪ ಸಮಯವಾದರೂ ಆಟವಾಡುವುದಕ್ಕೆ ಮೀಸಲಾಗಿಟ್ಟಿದ್ದಾನಲ್ಲ ಎಂದು. ಅವನ ಮನೆಯಿಂದ ಸ್ವಲ್ಪ ದೂರದಲ್ಲಿ ಮೈದಾನವಿದೆ. 'ಅಲ್ಲಿ ಹೋಗಿ ಆಡುವುದಾ? ಯಾರೆಲ್ಲಾ ಬರುತ್ತಾರೆ? ತುಂಬಾ ಮಕ್ಕಳು ಬರುತ್ತಾರಾ?' ಎಂದು ಕುತೂಹಲದಿಂದ ಕೇಳಿದರೆ, ಅವನು ಹೇಳುತ್ತಾನೆ 'ಮೈದಾನಕ್ಕೆಲ್ಲಾ ಯಾರು ಹೋಗ್ತಾರೆ ಅಂಕಲ್, ಈಗ ಏನಿದ್ದರೂ ಮೊಬೈಲ್ ನಲ್ಲಿ ಐಪಿಎಲ್ ಕ್ರಿಕೆಟ್ ಗೇಮ್ ಮತ್ತು ಫುಟ್ ಬಾಲ್ ಗೇಮ್ ಆಡುವುದು. ಇದೇ ಈಗಿನ ಟ್ರೆಂಡ್' ಅಂದ. ನನ್ನ ಕಪಾಳಕ್ಕೆ ಹೊಡೆದ ಹಾಗೆ ಆಯಿತು. ಈ ರೀತಿ ನಮ್ಮ ಮಕ್ಕಳು ಆಟ ಆಡುವುದಾದರೆ ಆದರೆ ಅವರಿಗೆ ದೈಹಿಕ ವ್ಯಾಯಾಮ ದೊರೆಯುವುದು ಯಾವಾಗ? 

ಸದ್ಯಕ್ಕೆ ಕೊರೋನಾ ಸಂಕಟ ಇದೆ. ಹಾಗೆಂದು ನಿಮ್ಮ ಮಕ್ಕಳನ್ನು ನಿಮ್ಮ ಮನೆಯ ಅಥವಾ ನೆರೆಹೊರೆಯ ನಮಗೆ ಪರಿಚಿತ ಮಕ್ಕಳ ಜೊತೆ ಸ್ವಲ್ಪವಾದರೂ ಮೈದಾನದಲ್ಲಿ ಆಟವಾಡಿಸಬಹುದಲ್ಲವೇ? ಈಗಂತೂ ಸಮಯವೇ ಸಮಯವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದಲ್ಲವೇ? ಮಕ್ಕಳ ಪಾಲಕರೂ ಈ ಬಗ್ಗೆ ಯೋಚಿಸಬೇಕು. ನೀವೇ ನಿಮ್ಮ ಮಕ್ಕಳನ್ನು ಹತ್ತಿರದ ಸಣ್ಣ ಪಾರ್ಕ್ ಅಥವಾ ಮೈದಾನಕ್ಕೆ ಕರೆದುಕೊಂಡು ಹೋಗಿ. ಅಧಿಕ ಜನ ಇಲ್ಲದ ಪ್ರದೇಶವನ್ನು ಆಯ್ದುಕೊಂಡು, ಅಲ್ಲಿ ಕನಿಷ್ಟ ಒಂದು ಗಂಟೆ ಆಟವಾಡಿಸಿ. ಕ್ರಿಕೆಟ್, ಫುಟ್ ಬಾಲ್, ಶಟಲ್, ಚೆಂಡಾಟ ಯಾವುದೂ ಆದೀತು ಒಟ್ಟಿನಲ್ಲಿ ಮಕ್ಕಳು ಓಡಾಟ ಮಾಡಬೇಕು. ಸಣ್ಣ ಪುಟ್ಟ ವ್ಯಾಯಾಮ ಮಾಡಿಸಬಹುದು. ಹಳೆಯ ಆಟಗಳಾದ ಚಿನ್ನಿ ದಾಂಡು, ಲಗೋರಿ, ಕಣ್ಣಮುಚ್ಚಾಲೆ ಹೀಗೆ ಆಟಗಳು ಎಷ್ಟು ಬೇಕಾದರೂ ಇವೆ. ನೀವು ಮನಸ್ಸು ಮಾಡಬೇಕಷ್ಟೇ. ಆಟವಾಡಿ ಮನೆಗೆ ಬಂದ ಬಳಿಕ ಮಕ್ಕಳನ್ನು ಚೆನ್ನಾಗಿ ಸಾಬೂನು ಹಾಕಿ ಸ್ನಾನ ಮಾಡಿಸಿ, ಬೇರೆ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಆಟಗಳನ್ನಾಡಿದ ಚಟುವಟಿಕೆಯಿಂದ ನಿಮ್ಮ ಮಕ್ಕಳಿಗೆ ದೈಹಿಕ ಶ್ರಮವೂ, ಮಾನಸಿಕ ನೆಮ್ಮದಿಯೂ ಉಂಟಾಗಿ ರಾತ್ರಿ ಸೊಗಸಾದ ನಿದ್ರೆ ಬರುತ್ತದೆ.

ಚಿತ್ರದಲ್ಲಿ: ಚಾಹಲ್, ಆರ್ಯನ್, ಆಚಲ್, ತಸ್ವಿ, ಶನ್ವಿಕ್, ಶಿವಪ್ರಸಾದ್, ರಿಯಾಲ್ ಮತ್ತು ರಿಶಾಲ್ (ಕುಂಪಲ, ಮಂಗಳೂರು)