ಬನ್ನಿ, ಹೊರಡೋಣ ಲಕ್ಷದ್ವೀಪಕ್ಕೆ…

ಬನ್ನಿ, ಹೊರಡೋಣ ಲಕ್ಷದ್ವೀಪಕ್ಕೆ…

ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದಾಗ, ಅಲ್ಲಿಯ ಕಡಲ ತೀರದ ಸೌಂದರ್ಯಕ್ಕೆ ಮಾರು ಹೋಗಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಅಲ್ಲಿಯ ಚಿತ್ರಗಳನ್ನು ಮತ್ತು ವಿಶೇಷತೆಗಳನ್ನು ಹಂಚಿಕೊಂಡಿದ್ದರು. ಅದರ ಜೊತೆಗೇ ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ಬನ್ನಿ ಎಂದು ಕರೆಕೊಟ್ಟಿದ್ದರು. ಇದರಿಂದ ಹೊಟ್ಟೆ ಉರಿ ಬಂದು ತನ್ನ ಪ್ರವಾಸೋದ್ಯಮಕ್ಕೆ ತಾನೇ ಕಲ್ಲು ಹಾಕಿದ್ದು ನೆರೆಯ ದೇಶವಾದ ಮಾಲ್ಡೀವ್ಸ್. ಬಹಳಷ್ಟು ಭಾರತೀಯರು ವಿದೇಶ ಪ್ರವಾಸ ಎಂದು ಆಯ್ಕೆ ಮಾಡುವಾಗ ಮಾಲ್ಡೀವ್ಸ್ ಅನ್ನು ಪರಿಗಣನೆಗೆ ತೆಗೆದುಕೊಂಡೇ ಇರುತ್ತಾರೆ. ಯಾವುದೇ ದೇಶವನ್ನು ಉಲ್ಲೇಖಿಸದೇ ಇದ್ದರೂ ಮೋದಿಯವರ ಲಕ್ಷದ್ವೀಪಕ್ಕೆ ಬನ್ನಿ ಎನ್ನುವ ಆಹ್ವಾನ ಮಾಲ್ಡೀವ್ಸ್ ಗೆ ಬಹಳ ಸಂಕಷ್ಟಗಳನ್ನು ತಂದೊಡ್ಡಿತು ಎನ್ನುವುದರಲ್ಲಿ ಅನುಮಾನವಿಲ್ಲ. 

ರಾಜಕೀಯಗಳನ್ನು ಬದಿಗಿಟ್ಟು ಲಕ್ಷದ್ವೀಪದ ಬಗ್ಗೆ ಗಮನಿಸಲು ಹೊರಟರೆ ಇಲ್ಲಿ ಹೆಸರಿಗೆ ತಕ್ಕಂತೆ ಲಕ್ಷ ಸಂಖ್ಯೆಯ ದ್ವೀಪಗಳಿಲ್ಲ. ಬಹಳ ಶತಮಾನಗಳ ಹಿಂದೆ ಇತ್ತೇನೋ? ಆದರೆ ಇಂದು ಇರುವುದು ೩೫ ದ್ವೀಪಗಳು ಮಾತ್ರ. ಕೆಲ ವರ್ಷಗಳ ಹಿಂದೆ ಈ ದ್ವೀಪಗಳ ಸಂಖ್ಯೆ ೩೬ ಆಗಿತ್ತು. ಆದರೆ ಜಾಗತಿಕ ಹವಾಮಾನ ವೈಪರಿತ್ಯದ ಕಾರಣದಿಂದ ‘ಪರಾಲಿ ೧’ ಎನ್ನುವ ದ್ವೀಪವು ಸಮುದ್ರದಲ್ಲಿ ಮುಳುಗಡೆಯಾದುದರಿಂದ ಈಗ ೩೫ ದ್ವೀಪಗಳು ಮಾತ್ರ ಉಳಿದುಕೊಂಡಿದೆ. ಜಾಗತಿಕ ಹವಾಮಾನ ವೈಪರೀತ್ಯದಿಂದ ಪ್ರತೀ ವರ್ಷ ಸಮುದ್ರ ಮಟ್ಟ ಏರುತ್ತಿದ್ದು, ಕೆಲವೇ ವರ್ಷಗಳಲ್ಲಿ ೦-೪ ಸೆಂ ಮೀ ನಿಂದ ೦-೯ ಸೆಂ ಮೀ ತನಕ ಏರುವ ಸಾಧ್ಯತೆ ಇದೆ ಎನ್ನುವುದು ಐಐಟಿ ಖರಗ್ಪುರ ಇದರ ಸಂಶೋಧಕರ ಮಾತು. ಪರಿಸರ ಸಂಬಂಧಿ ವಿಜ್ಞಾನಿಗಳೂ ಈ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರಿಂದ ಲಕ್ಷದ್ವೀಪದ ಇನ್ನಷ್ಟು ದ್ವೀಪಗಳು ಮುಳುಗಡೆಯಾಗುವ ಸಾಧ್ಯತೆಗಳು ಇಲ್ಲದಿಲ್ಲ. ಚಿಟ್ಲಾಟ್, ಮಿನಿಕಾಯ್ ಮತ್ತು ಕರವತ್ತಿ ದ್ವೀಪಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಅವುಗಳನ್ನು ಮುಳುಗಡೆಯಿಂದ ರಕ್ಷಣೆ ಮಾಡುವ ವಿಚಾರದಲ್ಲಿ ಬಹಳಷ್ಟು ಸಂಶೋಧನೆಗಳು ಆಗುತ್ತಿವೆ.

ಈಗ ಲಕ್ಷದ್ವೀಪ ಸಮೂಹದಲ್ಲಿರುವ ೩೫ ದ್ವೀಪಗಳಲ್ಲಿ ಜನವಸತಿ ಇರುವ ದ್ವೀಪಗಳು ಕೇವಲ ೧೦ ಮಾತ್ರ. ಭಾರತೀಯರಿಗೆ ಈ ಎಲ್ಲಾ ದ್ವೀಪಗಳಿಗೆ ತೆರಳಲು ಅನುಮತಿ ಇದ್ದರೆ, ವಿದೇಶಿಯರಿಗೆ ಮೂರು ದ್ವೀಪಗಳಿಗೆ ಮಾತ್ರ ತೆರಳಲು ಅನುಮತಿ ನೀಡಲಾಗಿದೆ. ಲಕ್ಷದ್ವೀಪಕ್ಕೆ ಹೋಗುವುದು ಬೇರೆ ರಾಜ್ಯಗಳಿಗೆ ಹೋದಷ್ಟು ಸುಲಭವಲ್ಲ. ಈ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲೇ ಬಂದರೂ ಅಲ್ಲಿರುವ ಮೂಲ ನಿವಾಸಿಗಳ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಪರೀತ ಪ್ರಮಾಣದ ಪ್ರವಾಸಿಗರನ್ನು ಇಲ್ಲಿ ನಿಯಂತ್ರಿಸಲಾಗುತ್ತದೆ. ಪ್ರವಾಸಿಗರು ಇಲ್ಲಿಗೆ ಬರಬೇಕಾದರೆ ಇ-ಪರ್ಮಿಟ್ ಅತ್ಯಂತ ಅಗತ್ಯ. ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧ ಪಟ್ಟ ಸರಕಾರಿ ಅಧಿಕಾರಿಗಳು, ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಮಾತ್ರ ಮುಕ್ತ ಪ್ರಯಾಣದ ಅನುಮತಿ ಇದೆ. 

ಅನುಮತಿ ಪಡೆಯುವುದು ಹೇಗೆ?: ಸರಕಾರ ನಿಗದಿ ಪಡಿಸಿದ ಶುಲ್ಕವಾದ ರೂ ೫೦.೦೦ ತೆತ್ತು ಅರ್ಜಿಯನ್ನು ಪಡೆದು ಅದನ್ನು ಭರ್ತಿ ಮಾಡಿ, ನಿಮ್ಮ ಸ್ವಯಂ ಧೃಢೀಕರಿಸಿದ ದಾಖಲೆ ಮತ್ತು ನೀವು ವಾಸವಿರುವ ಪೊಲೀಸ್ ಠಾಣೆಯಿಂದ ನಿರಪೇಕ್ಷಣಾ ಪತ್ರ ಲಗತ್ತಿಕರಿಸಿ ನೀಡಬೇಕು. ಅಧಿಕೃತ ಪ್ರವಾಸಿ ಏಜೆಂಟ್ ಸಂಸ್ಥೆಗಳು ಈ ಕೆಲಸವನ್ನು ಮಾಡಿಕೊಡುತ್ತದೆ. ನೀವು ಅವರಿಂದ ಟಿಕೇಟ್ ಪಡೆದುಕೊಂಡು ಅದಕ್ಕೆ ಹಣ ಕೊಟ್ಟರೆ ಆಯಿತು. 

ಲಕ್ಷದ್ವೀಪಕ್ಕೆ ತೆರಳಲು ವಿಮಾನ ಹಾಗೂ ಹಡಗಿನ ಸೌಲಭ್ಯ ಲಭ್ಯವಿದೆ. ಕೇರಳದ ಕೊಚ್ಚಿನ್ ಬಂದರಿನಿಂದ ಪ್ರಯಾಣಿಕರ ಹಡಗಿನ ಸೌಲಭ್ಯ ಇದೆ. (ಹಿಂದೆ ಮಂಗಳೂರಿನಿಂದಲೂ ಪ್ರಯಾಣಿಕರ ಹಡಗಿನ ಸೌಲಭ್ಯ ಇತ್ತು, ಆದರೆ ಈಗ ಅದು ಸ್ಥಗಿತಗೊಂಡಿದೆ. ಸರಕು ಸಾಗಾಣಿಕೆಯ ಹಡಗು ಈಗಲೂ ಇದೆ. ಪ್ರಯಾಣಿಕರ ಹಡಗು ಮರು ಸ್ಥಾಪಿಸಲು ಹಕ್ಕೊತ್ತಾಯ ನಡೆಯುತ್ತಿದೆ). ಕೊಚ್ಚಿನ್ ಬಂದರಿನಿಂದ ೭ ಪ್ರಯಾಣಿಕರ ಹಡಗುಗಳಿವೆ. ಹಡಗು ಲಕ್ಷದ್ವೀಪ ತಲುಪಲು ಸುಮಾರು ೧೪ ರಿಂದ ೧೮ ಗಂಟೆಗಳನ್ನು ತೆಗೆದುಕೊಳ್ಳುತ್ತವೆ.  ಕೊಚ್ಚಿನ್ ವಿಮಾನ ನಿಲ್ದಾಣದಿಂದ ವಾರಕ್ಕೆ ಆರು ದಿನ ಏರ್ ಇಂಡಿಯಾ ವಿಮಾನ ಸೌಲಭ್ಯ ಇದೆ. ಸುಮಾರು ಒಂದೂ ಕಾಲು ಗಂಟೆಯ ಪ್ರಯಾಣ. ನೀವು ಲಕ್ಷದ್ವೀಪಕ್ಕೆ ಪ್ರವಾಸ ಹೋಗಲು ಅಕ್ಟೋಬರ್ -ಮೇ ತಿಂಗಳು ತುಂಬಾ ಪ್ರಶಸ್ತ ಕಾಲವಾಗಿದೆ.

ನೀರಿನ ವ್ಯವಸ್ಥೆ: ಲಕ್ಷದ್ವೀಪಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಬಹಳ ಕಷ್ಟಕರ. ಏಕೆಂದರೆ ಲಕ್ಷದ್ವೀಪವು ಪುಟ್ಟ ಪುಟ್ಟ ದ್ವೀಪಗಳ ಸಮೂಹವಾದುದರಿಂದ ಸುತ್ತಲೂ ಉಪ್ಪುನೀರಿನಿಂದ ಕೂಡಿದ ಸಮುದ್ರ. ಇರುವ ಭೂಭಾಗದಲ್ಲೂ ಉಪ್ಪು ಮಿಶ್ರಿತ ನೀರು. ಉತ್ತಮ ಕುಡಿಯುವ ನೀರಿನ ಸೌಲಭ್ಯ ಇಲ್ಲವಾದಲ್ಲಿ ಪ್ರವಾಸಿಗರು ಲಕ್ಷದ್ವೀಪಕ್ಕೆ ಬರುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮನಗಂಡ ಸರಕಾರ ಇಸ್ರೇಲ್ ನ ನೀರಾವರಿ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಅತ್ಯಂತ ಕಡಿಮೆ ಮಳೆ ಬೀಳುವ ದೇಶವಾದ ಇಸ್ರೇಲ್ ನಲ್ಲಿ ಅತ್ಯಂತ ಶುದ್ಧವಾದ ನೀರು ಸಿಗುತ್ತದೆ. ಕೃಷಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಇಸ್ರೇಲ್ ಬಳಕೆ ಮಾಡುವುದು ಸಮುದ್ರದಿಂದ ಶುದ್ಧೀಕರಿಸಿದ ನೀರು. ೨೦೧೭ರಲ್ಲಿ ನರೇಂದ್ರ ಮೋದಿಯವರು ಇಸ್ರೇಲ್ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ನೀರಿನ ವ್ಯವಸ್ಥೆಯನ್ನು ಕಂಡು ಬೆರಗಾದರು. ಸಮುದ್ರದ ನೀರನ್ನು ಬಳಸಿ ಕುಡಿಯುವ ಶುದ್ಧ ನೀರನ್ನು ನೀಡುವ ತಂತ್ರಜ್ಞಾನವನ್ನು ಲಕ್ಷದ್ವೀಪ ಹಾಗೂ ಅಂಡಮಾನ್ ದ್ವೀಪಗಳಲ್ಲಿ ಅಳವಡಿಸಲು ಒಪ್ಪಂದಗಳಾದವು. ಈಗಾಗಲೇ ಲಕ್ಷದ್ವೀಪದಲ್ಲಿ ಇಸ್ರೇಲ್ ತಂತ್ರಜ್ಞಾನದಿಂದ ನೀರು ಶುದ್ಧೀಕರಣಗೊಂಡು ಜನರಿಗೆ ತಲುಪಲು ಸಾಧ್ಯವಾಗಿದೆ. ೨೦೨೫ರ ಅಂತ್ಯದೊಳಗೆ ಲಕ್ಷದ್ವೀಪದಾದ್ಯಂತ ಶುದ್ದ ಕುಡಿಯುವ ನೀರು ಸಿಗುತ್ತದೆ. ಮಾಲ್ಡೀವ್ಸ್, ದುಬಾಯಿ ಸಹಾ ಇದೇ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ. ಈ ಕಾರಣದಿಂದ ಅಲ್ಲಿ ಕುಡಿಯುವ ನೀರು ತುಂಬಾ ದುಬಾರಿ. 

(ಮುಂದಿನ ಲೇಖನ - ಲಕ್ಷದ್ವೀಪ ಭಾರತದ ವಶವಾದ ಕಥೆ)

ಚಿತ್ರ ಕೃಪೆ: ಅಂತರ್ಜಾಲ ತಾಣ