ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!

ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!

ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು ಸೇರಿಸಿದರು. ಶಬರಿಮಲೆಯಲ್ಲಿ ಬರೀ ಹದಿನೆಂಟೇ ಮೆಟ್ಟಿಲು, ನಮ್ಮ ಚಂದ್ರಗುತ್ತಿಯಲ್ಲಿ ೩೦೧!  ಇದನ್ನು ಗಮನಿಸಿದಾಗ, ಭಾಗವತಿಕೆಯಬಗ್ಗೆ ನನಗೆ ಅನ್ನಿಸಿದ್ದನ್ನು ಹೇಳಿಕೊಳ್ಳಬೇಕು ಎನಿಸಿ ಇಲ್ಲಿ ಬರೆಯುತ್ತಿದ್ದೇನೆ.
 
ಯಕ್ಷಗಾನ ಬಯಲಾಟ ಎಲ್ಲಾ ರೀತಿಯಲ್ಲಿ ಸರಳವಾಗಿದ್ದು ಜನರಿಗೆ ಹತ್ತಿರ ಇರಬೇಕು ಎನ್ನುವುದೇ ಅದರ ಉದ್ದೇಶವಿದ್ದಂತೆ ತೋರುತ್ತದೆ. ಬಯಲಾಟ ಸರಳವಲ್ಲ! ಆದರೆ ಬಯಲಾಟದ ಅಂಗಗಳು ಸರಳ ಇದರಲ್ಲಿ ಅನೇಕ ರೀತಿಯಲ್ಲಿ ಜನಸಾಮಾನ್ಯರೂ ಭಾಗವಹಿಸಬಹುದು. ಪರದೆ ಹಿಡಿಯಬಹುದು. ದೊಂದಿ ಹಿಡಿಯಬಹುದು, ಅಥವಾ ವೇಷಧಾರಿಯಾಗಬಹುದು. ಹಿಮ್ಮೇಳದಲ್ಲಿ ಭಾಗವಹಿಸುವುದು ಅಷ್ಟು ಸರಳವಲ್ಲದಿದ್ದರೂ ಕಷ್ಟವೇನಲ್ಲ. ಅಲ್ಲದೇ ವೇಷಕಟ್ಟುವುದು, ವೇಷತಯಾರಿಸುವುದು ಯಜಮಾನಿಕೆ ಹೀಗೆ ಬೇರೆ ರೀತಿಯಲ್ಲೂ ಭಾಗವಹಿಸಬಹುದು.  ಈ ಎಲ್ಲಾ ಸರಳ ಅಂಗಗಳನ್ನು ಸೇರಿಸಿ ಒಂದು ಸಂಕೀರ್ಣವಾದ ಕಲೆ ಯಕ್ಷಗಾನ ಬಯಲಾಟ ಸಿದ್ಧವಾಗುತ್ತದೆ. ಹಾಗೇ ಬಯಲಾಟದಲ್ಲಿ ಇರುವುದು ಬರಿ ಭಾಗವತಿಕೆಯೊಂದೇ ಅಲ್ಲ. ಅರ್ಥ, ಕುಣಿತ, ಅಭಿನಯ ಎಲ್ಲ ಇದೆ. ಇವೆಲ್ಲವೂ ಇರುವುದರಿಂದ ಕೇವಲ ಒಂದನ್ನೆ ದೊಡ್ಡದು ಮಾಡಿದರೆ ಅಭಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಯಲಾಟದ ಭಾಗವತಿಕೆಯನ್ನು ಗಮನಿಸಬೇಕು.
 
ಬಯಲಾಟದಲ್ಲಿ ಅತಿ ಮೇಲಿನ ಶ್ರುತಿಯಲ್ಲಿ ಹಾಡುವುದರಿಂದ ಮತ್ತು ತಾರ ಸ್ಥಾಯಿಯ ಬಳಕೆ ಹೆಚ್ಚಾದ್ದರಿಂದಲೂ ಹೆಚ್ಚಿನ ಭಾಗವತರಿಗೆ ಸ್ವರ ವಿಸ್ತಾರಮಾಡುವುದು ಅಸಾಧ್ಯವೇ ಅಗಿಬಿಡಬಹುದು. ನೆಬ್ಬೂರರು, ನಾವುಡರಂತ ಕಂಠವುಳ್ಳವರು ಸ್ವಲ್ಪ ಹೆಚ್ಚು ವಿಸ್ತಾರಮಾಡಲು ಸಾಧ್ಯ (ಅವರವರ ಪ್ರತಿಭೆಯ ಮಿತಿಯಲ್ಲಿ). ಭಾಗವತರಿಗೆ ಸ್ವರಾಭ್ಯಾಸ ಕಡಿಮೆ ಎಂಬುದನ್ನು ಒಪ್ಪಿಕೊಂಡಮೇಲೂ, ಮೇಲಿನ ಶ್ರುತಿಯಲ್ಲಿ ಹಾಡಲೇಬೇಕಾದ ಮಿತಿಯ ಕಾರಣದಿಂದಲೇ ಎನೋ ಒಂದು ಹೊಸಬಗೆಯ ಸೌಂದರ್ಯ ಸೃಷ್ಟಿಯಾಗುತ್ತದೆ ಎಂಬುದನ್ನು ಗಮನಿಸಬೇಕು.  ಇದರಿಂದ ಉಂಟಾಗುವ ಸರಳತೆಯೋ ಏನೋ ಜನರಿಗೆ ಇಷ್ಟವಾಗುವುದು. ಈ ಸ್ವರಸಂಚಲನೆ ಬುದ್ಧಿಪೂರ್ವಕವಾಗಿ ಮಾಡುವುದು ಕಷ್ಟ ಅನ್ನಿಸುತ್ತದೆ. ಇಲ್ಲದಿದ್ದಲ್ಲಿ ಯಕ್ಷಗಾನದ ಶೈಲಿಯ ಸ್ವರಸಂಚಲನೆ ಬೇರೆ ಸಂಗೀತದ ಪ್ರಕಾರಗಳಲ್ಲಿ ಬಹಳವಾಗಿ ಕಾಣಸಿಗಬೇಕಿತ್ತು. ಹಾಗಿಲ್ಲದ್ದರಿಂದ, ತಾರ ಶ್ರುತಿ ಹಾಡುಗರ ಮೇಲೆ ಹಾಕುವ ಮಿತಿ ಒಂದು ವಿಶಿಷ್ಟ ಸ್ವರಸಂಚಲನೆಗೆ ದಾರಿ ಮಾಡಿಕೊಡುತ್ತದೆ ಎಂದು ವಾದಿಸಬಹುದು. ಧಾಟಿ ಸರಳವಾಗಿ ಕಾಣುವುದರಿಂದ ತಾಂತ್ರಿಕವಾಗಿ ಇದರ ಬೆಲೆ ಕಡಿಮೆ ಎನ್ನುವವರಿಗೆ ಒಂದು ಸವಾಲು. ಕಡಿಮೆ ಸ್ವರವಿನ್ಯಾಸಮಾಡಿ ಬಯಲಾಟದ ಭಾಗವತರಷ್ಟು ಸುಂದರವಾಗಿ ಹಾಡಿತೋರಿಸಿ ನೋಡುವ? ಮಿತಿಯಲ್ಲೇ ತಮ್ಮದೇ ಆದ ಗಮಕಗಳು (ಸ್ವರಮಾಲೆ), ಧ್ವನಿ ವ್ಯತ್ಯಾಸ ಇತ್ಯಾದಿಗಳ ಬೆಳವಣಿಗೆ ಆಗಿದೆ. ಈ ತಾರ ಶ್ರುತಿಯಲ್ಲಿ ಹಾಡುವ ಮಿತಿ ಇಲ್ಲದ್ದರಿಂದಲೋ ಏನೋ ಬೇರೆ ಸಂಗೀತದ ಪ್ರಕಾರಗಳಲ್ಲಿ ಬಯಲಾಟದ ಕೆಲವು ಧಾಟಿಗಳು ಮತ್ತು ಸ್ವರಮಾಲೆಗಳ ಬಳಕೆ ಇಲ್ಲ. ಹಾಗಾಗಿ ಯಕ್ಷಗಾನ ಕಡಿಮೆ ಸಂಗೀತ ಹೆಚ್ಚು ಎನ್ನುವುದು ಸರಿಯಲ್ಲ (*ಬೇರೆ ಮಿತಿ ಬೇರೆ ಮತಿ ಕೊಂಕುತಿಮ್ಮ ಎನ್ನಬಹುದು!).
 
 ಇನ್ನು ಭಾಗವತಿಕೆಯಲ್ಲಿ ಇಲ್ಲದ್ದನ್ನು ಸಂಗೀತದಲ್ಲಿ ಇರುವುದನ್ನು ಎತ್ತಿ ತೋರಿಸುವುದು ಸಾಮಾನ್ಯವಾದ್ದರಿಂದ ಸಂಗೀತಗಳಲ್ಲಿ ಇಲ್ಲದನ್ನು ಒಮ್ಮೆ ಗಮನಿಸೋಣ. ಬಯಲಾಟದ ಪದ ಕುಣಿತಕ್ಕೆಂದೇ ಬರೆದಿದ್ದು. ಹಾಗಾಗಿ ಅದರಲ್ಲಿ ತಾಳದ ಲಯವಲ್ಲದೇ ಇನ್ನೂ ಸೂಕ್ಷ್ಮವಾದ ಛಂದೋಲಯಗಳಿವೆ. ಅಂದರೆ ಒಂದೇ ತಾಳದಲ್ಲಿರುವ ಬೇರೆಬೇರೆ ಪದ್ಯಗಳಲ್ಲಿ ಕುಣಿತ ಬೇರೆಬೇರೆ ರೀತಿಬರುವಂತೆ ಪದ ರಚನೆ ಇರುತ್ತದೆ. ಈ ವೈವಿಧ್ಯಕ್ಕೆ ತಾಳದ ಮಟ್ಟುಗಳು ಎನ್ನುವುದಾಗಿ ಹೆಸರು. ಈ ಮಟ್ಟುಗಳು ನಿರ್ಧಿಷ್ಟವಾಗಿರಬಹುದು (precomposed/definite) ಅಥವಾ ಪದ ಹೇಳುವಾಗ ಸೃಷ್ಟಿಯಾಗುವ ಛಂದೋಲಯಳಿಗೆ ಹೊಂದಿಕೊಂಡಿರಬಹುದು (improvised). ಛಂದೋಲಯ ತಾಳಕ್ಕಿಂತ ಸೂಕ್ಷ್ಮವಾದದ್ದು. ಹಿಮ್ಮೇಳದವರು ನಿರ್ಧಿಷ್ಟ ಮಟ್ಟುಗಳನ್ನು ಮೊದಲೇ ಆಭ್ಯಾಸಮಾಡಬಹುದಾದರೂ ಆಶುಮಟ್ಟುಗಳನ್ನು ಪ್ರತಿಭೆಯಿಂದಲೋ ಕೇಳಿಯೋ ರೂಢಿಸಿಕೊಳ್ಳಬೇಕಾಗುತ್ತದೆ. ಭಾಗವತಿಕೆಯ ವಿಶೇಷವೆಂದರೆ ಈ ಮಟ್ಟುಗಳು ಪದಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಪದ ಹೇಳುವಾಗ ಸ್ವರವಿನ್ಯಾಸ ಮಾಡಲುಹೋಗಿ ಛಂದೋಲಯ ಹಾಳುಮಾಡದೇ ಇರುವುದೇ ಇದಕ್ಕೆ ಮುಖ್ಯಕಾರಣ ಎನ್ನುವುದು ನನ್ನ ಅನಿಸಿಕೆ. ಹಿಂದೂಸ್ತಾನಿಯಲ್ಲಿ ಈ ಛಂದೋಲಯ ಅತಿ ಗೌಣ. ಕರ್ನಾಟಕಿಯಲ್ಲಿ ಛಂದೋಲಯ ಗೌಣವಲ್ಲ ಆದರೆ ಸ್ವರವಿನ್ಯಾಸಕ್ಕೆ ಪ್ರಾಶಸ್ತ್ಯ ಹೆಚ್ಚಾಗಿ ತಾಳವಾದ್ಯಗಳಲ್ಲಿ ಈ ಲಯ ಕಾಣಿಸಿದರೂ ಹಾಡಿನಲ್ಲಿ ಕಾಣಿಸುವುದು ಕಡಿಮೆ. ಆದ್ದರಿಂದಲೇ ಕರ್ನಾಟಕಿಯಲ್ಲಿ ತಾಳವಾದ್ಯಗಳು ಮತ್ತು ಹಾಡುಗಳಲ್ಲಿನ ಛಂದೋಲಯ ಸ್ವಲ್ಪ ಬೇರೆ ಬೇರೆಯಾಗಿ ಕಾಣುತ್ತವೆ.

ಯಕ್ಷಗಾನದಲ್ಲಿ ತಾಳ ಮತ್ತು ಛಂದೋಲಯಗಳ ಮಿಶ್ರಣವಿದ್ದರೆ, ಗಮಕವಾಚನದಲ್ಲಿ ಈ ಛಂದೋಲಯವೇ ಮುಖ್ಯ. ಅಲ್ಲಿ ತಾಳಕ್ಕೆ ಪ್ರಾಶಸ್ತ್ಯವೇ ಇಲ್ಲ. ಗಮಕಿ ಕೆರೆಕೊಪ್ಪದ ನರಹರಿ ಶರ್ಮರು ಹೇಳುವಂತೆ ಗಮಕವಾಚನ ಸಾಹಿತ್ಯ ಪ್ರಧಾನವಾದದ್ದು. ಕೆಲವು ಪದ್ಯಗಳನ್ನ ಅದರ ಭಾವಕ್ಕೆ ತಕ್ಕುದಾದ ಗತಿಯಲ್ಲಿ ಹಾಡಬೇಕು. ಇಲ್ಲಿ ಛಂದಸ್ಸು ಸಾಹಿತ್ಯದ ಭಾಗ ಎಂಬುದನ್ನ ಗಮನಿಸಿ. ಸ್ವರವಿನ್ಯಾಸಮಾಡಲು ಹೋಗಿ ಪದ್ಯದಭಾವಕ್ಕೋ ಅರ್ಥಕ್ಕೋ ಕುಂದಾಗಬಾರದೆಂಬುದೂ ಅವರ ಕಳಕಳಿ ಎಂಬುದು ನನ್ನ ಅಭಿಪ್ರಾಯ. ಕಾವ್ಯವಾಚನ ಬಿಟ್ಟರೆ ಬಯಲಾಟದಲ್ಲೆ ಸಾಹಿತ್ಯಕ್ಕೆ ಮತ್ತು ಛಂದೋಲಯಕ್ಕೆ ಪ್ರಾಧಾನ್ಯತೆ ಹೆಚ್ಚು. ಅದ್ದರಿಂದ ಗಮಕದ ಕೆಲವು ನಿಯಮಗಳು ಬಯಲಾಟದ ಭಾಗವತಿಕೆಗೂ ಅನ್ವಯಿಸುತ್ತದೆ. ಸ್ವರವಿನ್ಯಾಸ ಕಡಿಮೆಯಾದರೆ ಸಾಹಿತ್ಯಕ್ಕೆ, ಛಂದೋಲಯಕ್ಕೆ ಮತ್ತು ತನ್ಮೂಲಕ ಉಂಟಾಗುವ ಮಟ್ಟುಗಳಿಗೆ  ಒತ್ತು ದೊರೆಯುತ್ತದೆ. ಇವು ನಮಗೆ ಶಾಸ್ತ್ರೀಯ ಎನಿಸಿಕೊಂಡ ಸಂಗೀತಗಳಲ್ಲಿ ದೊರಕುವುದಿಲ್ಲ. 
 
ಒಂದನ್ನು ಬಿಟ್ಟು ಇನ್ನೊಂದನ್ನು ಆರಿಸಿಕೊಂಡು ಕಲೆಗಳು ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಳ್ಳುತ್ತವೆ. ಅದರ ಪರಿಣಾಮವೋ ಎಂಬಂತೆ ಕಲೆಯ ಸ್ವರೂಪ ಬದಲಾಗಿ ಬೆಳವಣಿಗೆಯ ದಾರಿ ಬೇರೆಯಾಗಿ ವೈವಿಧ್ಯತೆ ವಿಸ್ತಾರವಾಗುತ್ತದೆ. ಇವೆಲ್ಲವೂ ನಮಗೆ ಬೇಕು. ಕಲೆ ಹಿಡಿದ ದಾರಿ ಹೇಗಿದೆ ಅದರ ಸಾಮಾಜಿಕ ಸ್ಥಾನ ಹೇಗಿದೆ, ಬೆಂಬಲ ಹೇಗಿದೆ ಎನ್ನುವುದನ್ನು ಅವಲಂಬಿಸಿ ಬೆಳವಣಿಗೆಯ ಹಂತ ಬೇರೆ ಬೇರೆ ಆಗುತ್ತದೆ. ಆದರೆ ನಮಗೆ ಒಂದು ಕಲೆ ಹೆಚ್ಚಾಗಿ ಇನ್ನೊಂದು ಕಡಿಮೆಯಾಗಬೇಕಿಲ್ಲ. ಕಲೆಗಳ ಒಲವು, ಪ್ರಾಶಸ್ತ್ಯ ಮತ್ತು ಉದ್ಧೇಶ ಎಲ್ಲವೂ ಬೇರೆ ಬೇರೆ. ಕಲೆಗಳನ್ನು ತುಲನೆ ಮಾಡುವಾಗ ಇವೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ. 
 
(ವಿ ಸೂ: ಇಲ್ಲಿ ಸಂಗೀತವನ್ನು ಸಣ್ಣದುಮಾಡುವುದು ನನ್ನ ಉದ್ದೇಶವಲ್ಲ. ಸಂಗೀತವನ್ನು ದೊಡ್ಡದುಮಾಡಿ ಇತರೆ ಕಲೆಗಳನ್ನು ಅವಹೇಳನ ಮಾಡುವ ವಂದಿಮಾಗಧರ ಹಿಂಡೇ ಇರುವುದರಿಂದ ನನ್ನ ವಿವರಣೆಗಳನ್ನು ಯಕ್ಷಗಾನಕ್ಕೆ ಮಾತ್ರ ಸೀಮಿತಗೊಳಿಸಿದ್ದೇನೆ. ನನಗೆ ಸ್ವರ ಸರಿಯಾಗಿ ತಿಳಿಯುವುದಿಲ್ಲ ಆದರೆ ಕೆಲವು ಸಣ್ಣ ಸ್ವರವಿನ್ಯಾಸಗಳನ್ನು ಧಾಟಿಯ ಆದಾರದ ಮೇಲೆ ಸ್ವಲ್ಪ ಗುರುತಿಸಬಲ್ಲೆ. ಸಂಗೀತದಲ್ಲಿರುವಷ್ಟು ಶಿಸ್ತು ಅಥವಾ ಸಂಗೀತಗಾರರ ಪರಿಶ್ರಮ ಭಾಗವತಿಕೆಯಲ್ಲಿ ಇಲ್ಲ ಎನ್ನುವುದೂ ನಿಜವೆ. ಅದು ಕಲಿಯಬೇಕಾದ್ದೆ)

*ಬೇರೆ ಮತಿ ಬೇರೆ ಮತ ಮಂಕುತಿಮ್ಮ - ಗುಂಡಪ್ಪ

Pictures are a courtesy of : http://www.behance.net/gallery/Yakshaart/5748245. Please visit this creator and spread the artifacts. Thanks to him and his creations.