ಬಯಲುಸೀಮೆಯಲ್ಲಿ ಅಡಿಕೆ ಕೃಷಿ ಜೂಜಿನಾಟವೇ?
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತ ರಾಜು ಸ್ವಾಮಿ ತನ್ನ ನಾಲ್ಕು ಹೆಕ್ಟೇರ್ ಅಡಿಕೆ ತೋಟದಲ್ಲಿ ೧೨ ಕೊಳವೆಬಾವಿ ಕೊರೆಸಿದ್ದಾರೆ. ಒಂದರಲ್ಲೂ ನೀರು ಸಿಕ್ಕಿಲ್ಲ!
ಈಗ, ತನ್ನ ಅಡಿಕೆ ಸಸಿಗಳನ್ನು ಉಳಿಸಲಿಕ್ಕಾಗಿ ಟ್ಯಾಂಕರಿನಲ್ಲಿ ನೀರು ತಂದು ಹಾಕುತ್ತಿದ್ದಾರೆ, ೧೭ ಕಿಮೀ ದೂರದ ಭದ್ರಾ ಕಾಲುವೆಯಿಂದ. ೨೪,೦೦೦ ಲೀಟರ್ ನೀರು ತರುವ ಟ್ಯಾಂಕರಿನ ಒಂದು ಟ್ರಿಪ್ಪಿಗೆ ಅವರು ಪಾವತಿಸುವ ಹಣ ರೂ.೨,೦೦೦. ಪ್ರತಿಯೊಂದು ಹೆಕ್ಟೇರ್ ಅಡಿಕೆ ತೋಟಕ್ಕೆ ವಾರಕ್ಕೆ ಹಾಕಬೇಕಾದ ನೀರು ಕನಿಷ್ಠ ಒಂದು ಲಕ್ಷ ಲೀಟರ್ ಎಂಬುದವರ ಲೆಕ್ಕಾಚಾರ. ೨೦೧೯ರ ಜನವರಿ ಮೂರನೇ ವಾರದಿಂದ ಮೇ ಮಧ್ಯದ ತನಕ ಟ್ಯಾಂಕರಿನಲ್ಲಿ ತೋಟಕ್ಕೆ ನೀರು ತರಿಸಲಿಕ್ಕಾಗಿ ಅವರು ಮಾಡಿರುವ ವೆಚ್ಚ ಬರೋಬ್ಬರಿ ೫.೫ ಲಕ್ಷ ರೂಪಾಯಿ!
ಹಲವು ರೈತರು ತಮ್ಮ ಅಡಿಕೆ ತೋಟ ಉಳಿಸಲಿಕ್ಕಾಗಿ ಹೀಗೆ ಟ್ಯಾಂಕರಿನಲ್ಲಿ ನೀರು ತರಿಸಿ, ಅಡಿಕೆ ಸಸಿಗಳಿಗೆ ಸುರಿಯುತ್ತಿದ್ದಾರೆ. ಹಾಗಾಗಿ, ಚನ್ನಗಿರಿ ತಾಲೂಕಿನ ಹಂಚಿನ ಸಿದ್ಧಾಪುರ, ನಲ್ಲೂರು ಮತ್ತು ಸಂತೆಬೆನ್ನೂರು ಗ್ರಾಮಗಳಲ್ಲಿ ಭದ್ರಾ ಕಾಲುವೆಯಿಂದ ೪೦ರಿಂದ ೫೦ ಟ್ಯಾಂಕರುಗಳು ನೀರು ಎತ್ತುತ್ತಿರುವುದನ್ನು ಯಾವಾಗಲೂ ಕಾಣಬಹುದು (ಇದು ಅಧಿಕಾರಿಗಳ ಸಮ್ಮತಿಯಿಲ್ಲದ ಚಟುವಟಿಕೆ ಎಂಬುದು ಬೇರೆಯೇ ಸಂಗತಿ). ಇದರಿಂದಾಗಿ ಆ ಪ್ರದೇಶಗಳಲ್ಲಿ ಆಗಾಗ ವಾಹನ ದಟ್ಟಣೆಯ ಸಮಸ್ಯೆ. ೪೦ರಿಂದ ೫೦ ಕಿಮೀ ದೂರದಿಂದ ಟ್ಯಾಂಕರಿನಲ್ಲಿ ನೀರು ತರಿಸುತ್ತಿರುವ ರೈತರೂ ಇದ್ದಾರೆ.
“ಮುಂದಿನ ವರುಷ ಅಡಿಕೆ ಮಾರಾಟ ಮಾಡಿದರೆ ಸಿಗುವ ಆದಾಯ, ಈ ವರುಷ ಟ್ಯಾಂಕರಿನಲ್ಲಿ ನೀರು ತರಿಸೋದಕ್ಕೆ ಮಾಡಿದ ವೆಚ್ಚಕ್ಕಿಂತ ಕಡಿಮೆ ಆಗಲಿದೆ. ಆದರೆ ಈಗ ನನಗೆ ಅಡಿಕೆ ಗಿಡಗಳನ್ನು ಉಳಿಸೋದೇ ಚಿಂತೆ. ಮುಂದಿನ ಮಳೆಗಾಲದಲ್ಲಾದರೂ ಒಳ್ಳೇ ಮಳೆಯಾದೀತೆಂದು ನಿರೀಕ್ಷೆ” ಎನ್ನುತ್ತಾರೆ ರಾಜು ಸ್ವಾಮಿ.
ದಾವಣಗೆರೆ ಜಿಲ್ಲೆಯಲ್ಲಿ ಅಂದೊಮ್ಮೆ ಲಾಭದಾಯಕ ಎನಿಸಿದ್ದ ಅಡಿಕೆ ಕೃಷಿ ಈಗ ಅಲ್ಲಿನ ರೈತರಿಗೆ ನಷ್ಟದ ಬಾಬತ್ತಾಗಿದೆ. ಇದಕ್ಕೆ ಮುಖ್ಯ ಕಾರಣ ಹಲವು ವರುಷಗಳ ಸತತ ಬರಗಾಲ ಮತ್ತು ಮುಂಗಾರಿನ ಮುಂಚಿನ ಮಳೆ ಕೈಕೊಟ್ಟಿರುವುದು.
ಈ ವರುಷ ಜನವರಿ ೧ರಿಂದ ಮೇ ೧೫ರ ವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆ ಕೇವಲ ೨೪ ಮಿಮೀ. ಈ ಅವಧಿಯಲ್ಲಿ ಸಾಮಾನ್ಯವಾಗಿ ಅಲ್ಲಿ ಸುರಿಯುವ ಮಳೆ ೭೦ ಮಿಮೀ. ಅಂತೂ ಮುಂಗಾರಿನ ಮುಂಚಿನ ಮಳೆಯ ಕೊರತೆ ಶೇಕಡಾ ೬೬. ಜನವರಿ ೨೦೧೯ರಿಂದೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ನೀರಿಲ್ಲದೆ ಒಣಗಿ ಹೋಗಿರುವ ಅಡಿಕೆ ತೋಟಗಳ ವಿಸ್ತೀರ್ಣ ಸುಮಾರು ೭,೦೦೦ ಎಕ್ರೆ.
ಇತ್ತೀಚೆಗಿನ ವರುಷಗಳಲ್ಲಿ ದಾವಣಗೆರೆ ಜಿಲ್ಲೆಯ ಹಲವು ರೈತರು ತಮ್ಮ ಪಾರಂಪರಿಕ ಬೆಳೆಗಳಾದ ರಾಗಿ, ಸೂರ್ಯಕಾಂತಿ ಮತ್ತು ಈರುಳ್ಳಿ ಕೈಬಿಟ್ಟರು. ಬದಲಾಗಿ, ಅಡಿಕೆ ತೋಟಗಳನ್ನು ವಿಸ್ತಾರ ಪ್ರದೇಶದಲ್ಲಿ ಎಬ್ಬಿಸಿದರು. ೨೦೦೦ -೨೦೦೧ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ೨೪,೦೦೦ ಹೆಕ್ಟೇರಿನಲ್ಲಿ ಅಡಿಕೆ ತೋಟಗಳಿದ್ದರೆ, ಈಗ ೪೬,೦೦೦ ಹೆಕ್ಟೇರಿನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ಕೇವಲ ೨೦ ವರುಷಗಳಲ್ಲಿ ಅಡಿಕೆ ಕೃಷಿ ಪ್ರದೇಶ ಇಮ್ಮಡಿಯಾಗಿದೆ.
ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯೊಳಗೆ ಇರುವುದು ಅಡಿಕೆ ಬೆಳೆಯುವ ೧೫,೦೦೦ ಹೆಕ್ಟೇರ್ ಮಾತ್ರ. ಇನ್ನುಳಿದ ೩೧,೦೦೦ ಹೆಕ್ಟೇರ್ ಅಡಿಕೆ ತೋಟಗಳು ನೀರಾವರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿವೆ. ಈ ತೋಟಗಳೇ ಇತ್ತೀಚೆಗಿನ ವರುಷಗಳಲ್ಲಿ ಬರಗಾಲದಿಂದ ಉಂಟಾದ ನೀರಿನ ಕೊರತೆಯಿಂದ ತತ್ತರಿಸಿ, ಫಸಲು ನಷ್ಟಕ್ಕೆ ಒಳಗಾಗಿವೆ.
“ಬಯಲು ಸೀಮೆಯ ರೈತರನ್ನು ಅಡಿಕೆ ಬೆಳೆಯತ್ತ ಸೆಳೆದದ್ದು ೨೦೦೪ – ೨೦೦೫ರಲ್ಲಿ ಅಡಿಕೆಯ ಬೆಲೆ ಏರಿದ್ದು ಮತ್ತು ಆಗಸ್ಟ್ ೨೦೧೪ರಲ್ಲಿ ಅಡಿಕೆಯ ಬೆಲೆ ಕ್ವಿಂಟಾಲಿಗೆ ಒಂದು ಲಕ್ಷ ರೂಪಾಯಿ ಆದದ್ದು. ಸಿಕ್ಕಸಿಕ್ಕಲ್ಲಿ ಅಡಿಕೆ ಗಿಡ ನೆಟ್ಟು, ನೀರು ಹಾಕಲಿಕ್ಕಾಗಿ ಸಾವಿರಾರು ಬೋರುವೆಲ್ ಕೊರೆಸಿದರು. ಅಂತರ್ಜಲದ ವಿವೇಚನಾರಹಿತ ಬಳಕೆ ಮತ್ತು ವರ್ಷಾನುಗಟ್ಟಲೆ ಬರಗಾಲಗಳಿಂದಾಗಿ ಈಗ ಬೋರುವೆಲ್ಲುಗಳು ಒಣಗಿವೆ” ಎನ್ನುತ್ತಾರೆ ಲಕ್ಷ್ಮೀಕಾಂತ ಬೊಮ್ಮನವರ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ.
“ಒಣಪ್ರದೇಶವಾದ ದಾವಣಗೆರೆಯಲ್ಲಿ ಜಾಸ್ತಿ ನೀರು ಬೇಕಾಗುವ ಅಡಿಕೆ ಬೆಳೆಯುವುದು ಸೂಕ್ತವಲ್ಲ. ನಮ್ಮ ಇಲಾಖೆ ಕಡಿಮೆ ನೀರು ಬೇಕಾಗುವ ಮಾವು, ಗೇರು ಇಂತಹ ಬೆಳೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರೂ ಬಹುಪಾಲು ರೈತರಿಗೆ ಇದರಲ್ಲಿ ಆಸಕ್ತಿಯಿಲ್ಲ” ಎಂದು ಅವರು ತಿಳಿಸುತ್ತಾರೆ.
ಚನ್ನಗಿರಿ ತಾಲೂಕಿನ ಮಡಾಲು ಗ್ರಾಮದ ಭಾನಪ್ಪ ತನ್ನ ಎರಡು ಹೆಕ್ಟೇರ್ ಅಡಿಕೆ ತೋಟ ಉಳಿಸಲು ನಲ್ಲೂರಿನ ಭದ್ರಾ ಕಾಲುವೆಯಿಂದ ಟ್ಯಾಂಕರಿನಲ್ಲಿ ನೀರು ತರಿಸಲಿಕ್ಕಾಗಿ ಈ ವರುಷ ಮಾಡಿರುವ ಖರ್ಚು ರೂ.೪ ಲಕ್ಷ. “ಅಡಿಕೆ ಗಿಡಗಳನ್ನು ಉಳಿಸಲಿಕ್ಕಾಗಿ ಈಗಾಗಲೇ ೩.೫ ಲಕ್ಷ ರೂಪಾಯಿ ಸಾಲವಾಗಿದೆ. ಇನ್ನು ಟ್ಯಾಂಕರ್ ನೀರು ಖರೀದಿ ನನ್ನಿಂದ ಸಾಧ್ಯವಿಲ್ಲ. ಅಡಿಕೆ ತೋಟದ ಗಿಡಗಳು ಒಣಗಿದರೆ ರಾಗಿ ಬೆಳೆಸೋದೇ ಗತಿ” ಎನ್ನುತ್ತಾರೆ ಭಾನಪ್ಪ.
ಚನ್ನಗಿರಿ ತಾಲೂಕಿನಲ್ಲೇ ಸುಮಾರು ೬೦೦ ಟ್ಯಾಂಕರುಗಳು ಭದ್ರಾ ಕಾಲುವೆಯಿಂದ ರೈತರ ಅಡಿಕೆ ತೋಟಗಳಿಗೆ ದಿನವಿಡೀ ನೀರು ಹೊತ್ತು ತರುತ್ತಿವೆ. ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಿಂದ ಹೊರಗಿನ ಜಮೀನುಗಳ ವಾಣಿಜ್ಯ ಬೆಳೆಗಳಿಗಾಗಿ ಭದ್ರಾ ಕಾಲುವೆಯಿಂದ ನೀರೆತ್ತಬಾರದೆಂದು ಆಗಾಗ ಎಚ್ಚರಿಸುತ್ತಿದ್ದರೂ ನೀರಿಗಾಗಿ ಕಂಗಾಲಾಗಿರುವ ರೈತರು ಕಿವಿಗೊಡುತ್ತಿಲ್ಲ.
ಕಳೆದ ಐದು ವರುಷಗಳಲ್ಲಿ ಕರ್ನಾಟಕದ ಒಟ್ಟು ೧೭೬ ತಾಲೂಕುಗಳ ಪೈಕಿ ೧೦೦ ತಾಲೂಕುಗಳಲ್ಲಿ ಅಂತರ್ಜಲ ಸ್ಥಿರಮಟ್ಟ ಕುಸಿದಿದೆ ಎಂದು ಮೇ ೨೦೧೯ರಲ್ಲಿ ಅಂತರ್ಜಲ ನಿರ್ದೇಶನಾಲಯ ಎಚ್ಚರಿಸಿದೆ. ಹಾಗಿರುವಾಗ, ಭರ್ಜರಿ (ವಾರ್ಷಿಕ ಸರಾಸರಿ ೩,೪೯೫ ಮಿಮೀ) ಮಳೆ ಬೀಳುವ ಕರಾವಳಿಗೆ ಸೂಕ್ತವಾದ ಅಡಿಕೆ ಬೆಳೆಯನ್ನು ತೀರಾ ಕಡಿಮೆ ಮಳೆ ಬೀಳುವ ಬಯಲುಸೀಮೆಯಲ್ಲಿ ಬೆಳೆದರೆ ಏನಾದೀತು ಎಂಬುದು ಎಲ್ಲ ರೈತರಿಗೂ ಗೊತ್ತಿದೆ. ಅಡಿಕೆಗೆ ಮಾರುಕಟ್ಟೆ ಬೇಡಿಕೆ ಹೆಚ್ಚುತ್ತಿಲ್ಲ ಎಂಬುದೂ ರೈತರಿಗೆ ಗೊತ್ತಿದೆ. ಹಾಗಿದ್ದರೂ, ತಾವು ಸೃಷ್ಠಿಸಲಾಗದ ನೀರು ಹೇಗೋ ಸಿಕ್ಕೀತೆಂಬ ಭ್ರಮೆಯಲ್ಲಿ, ಅಡಿಕೆ ಬೆಳೆಯಬಾರದ ಬಯಲುಸೀಮೆಯಲ್ಲಿ ಅದನ್ನು ಸಾವಿರಾರು ಹೆಕ್ಟೇರಿನಲ್ಲಿ ಬೆಳೆದದ್ದು ಜೂಜಿನಾಟವಲ್ಲವೇ?