ಬಯಲು

ಬಯಲು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರವೀಣ್ ಕುಮಾರ್ ಜಿ.
ಪ್ರಕಾಶಕರು
ಒಲವು ಬರೆಹ ಪ್ರಕಾಶನ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಸಿನೆಮಾ ಚಿತ್ರ ಕಥಾ ಬರಹಗಾರ ಪ್ರವೀಣ್ ಕುಮಾರ್ ಅವರು ಬರೆದ ಕಥಾ ಸಂಕಲನ ‘ಬಯಲು’. ಈ ಕಥಾ ಸಂಕಲನದ ಬಗ್ಗೆ ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಜಯಲಕ್ಷ್ಮಿ ಪಾಟೀಲ್. ಅವರು ಬರೆದ ಅನಿಸಿಕೆಗಳ ಆಯ್ದ ಭಾಗ…

“ಸರಳತೆ ಮತ್ತು ತುಂಬಾ ಕಮ್ಮಿ ಆಕೃತಿಗಳ ಬಳಕೆಯಿಂದ ಬಯಲು ಮುಖಪುಟವೇ ಬಹಳ ಸೆಳೆಯುತ್ತದೆ. ಪ್ರವೀಣ್‌ ಅವರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಬಯಲು ಕತೆಗಳಿಗೆ ಸಿನಿಮಾ ಆಗುವ ಗುಣ ಸಹಜವಾಗಿ ಬಂದಿದೆ. ಇಲ್ಲಿ ಬೇರೆ ಬೇರೆ ಬಗೆಯ ಜಾನರ್‌ನ ಕತೆಗಳಿವೆ. ಆಕ್ಶನ್‌, ಥ್ರಿಲ್ಲರ್‌, ಕಾಮಿಡಿ, ರೋಮಾನ್ಸ್ ಹೀಗೆ ಇನ್ನೂ ಹಲವು. ನಾನು ಹೇಳುತ್ತಿರುವುದು ಅತಿಶಯೋಕ್ತಿಯಾಗಿ ಅಲ್ಲ ಏನೆಂದರೆ, ಇಲ್ಲಿನ ಜಾರುಬಂಡೆ ಕತೆಯು ಸಿನಿಮಾ ಆಗಿ ಬಂದರೆ, ಅದಕ್ಕೆ ಇಲ್ಲಿ ಈಗ ಕತೆಯಲ್ಲಿರುವಷ್ಟೇ ಆಪ್ತತೆ ಮತ್ತು ಆಳ ಬಂದರೆ ಆ ಸಿನಿಮಾಕ್ಕೆ ಆಸ್ಕರ್‌ ಪ್ರಶಸ್ತಿ ಬರಬಹುದು. ನಾನಿದನ್ನು ಆಸ್ಕರ್‌ ಪ್ರಶಸ್ತಿ ಪಡೆದ ಎಷ್ಟೋ ಸಿನಿಮಾಗಳನ್ನು ನೋಡಿ ಗೊತ್ತಿರುವುದರಿಂದ ಹೇಳುತ್ತಿದ್ದೇನೆ.

ಇಲ್ಲಿನ ಕತೆಗಳನ್ನು ಓದಿದ ಮೇಲೆ ಬಳ್ಳಾರಿ ಸೀಮೆಯಲ್ಲಿ ನಾನೂ ಒಂದಷ್ಟು ದಿವಸ ಇದ್ದು ಬರಬೇಕು ಎಂದು ಅನಿಸುತ್ತಿದೆ. ಆ ಸೀಮೆಯು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಇವತ್ತಿನ ಬಯಲು ಕತೆಗಳ ಪ್ರವೀಣ್‌ ಇರಬಹುದು, ಹಿರಿಯರಾದ ಕುಂವೀ, ಕೇಶವ ಮಳಗಿ, ವಸುಧೇಂದ್ರ, ಶಿವಲಿಂಗಪ್ಪ ಹಂದ್ಯಾಳ್‌,‌ ಸುಧಾ ಚಿದಾನಂದಗೌಡ, ಜಾಜಿ ದೇವೇಂದ್ರಪ್ಪ, ಛಾಯಾ ಭಗವತಿ, ದಾದಾಪೀರ್‌ ಜೈಮನ್‌, ವೀರೇಂದ್ರ ರಾವಿಹಾಳ್‌, ದಸ್ತಗಿರಿ ದಿನ್ನಿ, ವಿಶಾಲ್‌ ಮ್ಯಾಸರ್ ಇನ್ನೂ ಹಲವು ಬರಹಗಾರರ ಜೊತೆಗೆ ಪುಸ್ತಕ ಪ್ರಕಾಶನದಲ್ಲಿ ದೊಡ್ಡ ಹೆಸರಾದ ಲೋಹಿಯಾ ಪ್ರಕಾಶನವೂ ಬಳ್ಳಾರಿ ನೆಲದಲ್ಲಿ ಇದೆ. ಇದು ನನಗೆ ಗೊತ್ತಿರುವವರ ಸಣ್ಣ ಪಟ್ಟಿ ಅಶ್ಟೇ. ಬಳ್ಳಾರಿ ನೆಲ ಅಥವಾ ನೀರಿನಲ್ಲಿ ಏನಿದೆ ಎಂದು ಯಾರಾದರೂ ರಿಸರ್ಚ್‌ ಮಾಡಬೇಕಿದೆ, ಯಾಕೆಂದರೆ ಅಲ್ಲಿನ ಸೀಮೆಯ ನಾನು ಹೆಸರಿಸಿರುವ ಅಷ್ಟೂ ಜನ ತುಂಬಾ ಸತ್ವಯುತವಾಗಿ ಬರೆಯುತ್ತಿದ್ದಾರೆ.

ಇಂಜಿನಿಯರಿಂಗ್‌ ಓದಿ ಸಿನಿಮಾವನ್ನು ಅನ್ನ, ಉಸಿರು ಮತ್ತು ಒಲವು ಮಾಡಿಕೊಂಡಿರುವ ಪ್ರವೀಣ್‌ ಅವರ ಇಲ್ಲಿನ ಬಹಳ ಕತೆಗಳ ಭಾಷೆ, ಬಳ್ಳಾರಿ ಭಾಷೆ. ಅದನ್ನು ಸೊಗಸಾಗಿ, ಓದುಗರಿಗೆ ತೊಡಕಾಗದಂತೆ ತುಂಬಾ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕನ್ನಡದೆಡೆಗೆ ಅವರ ಒಲವು ತುಸು ಹೆಚ್ಚು. ಹಾಗಾಗಿ ಅವರ ಇತ್ತೀಚಿನ ಕತೆಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಪದಗಳು ಕಾಣುತ್ತಿವೆ. ಅದರಿಂದ ಹೊಸ ಹೊಸ ಕನ್ನಡದ್ದೇ ಪದಗಳನ್ನು ಓದುಗಳಾಗಿ ನಾನು ತಿಳಿಯುತ್ತಿರುವುದು ನನಗಂತೂ ಖುಶಿ.

ಪ್ರವೀಣ್‌ ಅವರ ಮೊದಲ ಕತಾಸಂಕಲನ ಎಡೆ. ಅಲ್ಲಿನ ಎಡೆ ಕತೆಯ ಸಶ್ಮಾನ ಕಾಯುವ ಬಸಜ್ಜ, ನನ್ನನ್ನು ಆಗಾಗ ಕಾಡುತ್ತಲೇ ಇರುವ ಪಾತ್ರ. ಅಲ್ಲಿನ ಇನ್ನೊಂದು ಕತೆ ರೊಟ್ಟಿ ಬೆಂಡೆಕಾಯಿ ಚಟ್ನಿ. ಅಜ್ಜ ಅಜ್ಜಿ ಮತ್ತು ಮೊಮ್ಮಗನ ನಂಟಿನ ಕತೆ ಅದು. ಪ್ರವೀಣ್‌ ಅವರಿಗೆ ಅಡುಗೆಯಲ್ಲಿ ಜೋಳದ ರೊಟ್ಟಿ ಕೂಡ ಮಾಡಲು ಬರುತ್ತದೆ ಎನ್ನುವುದು ನನಗೆ ಗೊತ್ತು. ರೊಟ್ಟಿ ಮಾಡಲು ಕಾಳು ಗಟ್ಟಿಯಾಗಿರಬೇಕು. ಜೋಳ ಗಟ್ಟಿಯಾಗಿರಬೇಕು. ಜೋಳವನ್ನು ಆರಿಸಿಕೊಳ್ಳುವಾಗ ಜೊಳ್ಳು ತೆಗೆದು ಹಾಕಬೇಕು. ಚೆನ್ನಾಗಿ ಸಣ್ಣದಾಗಿ ಬೀಸಿಕೊಂಡು ಬರಬೇಕು. ರೊಟ್ಟಿ ಮಾಡುವಾಗ ನೀರು ಸುರಿದುಕೊಂಡು ಜಿಗಿ ಸರಿ ಮಾಡಿಕೊಳ್ಳಬೇಕು. ಕಲೆಸಿಕೊಂಡ ಹಿಟ್ಟನ್ನು ಸರಿಯಾಗಿ ನಾದುವುದು, ಬಡಿಯುವುದು ಮತ್ತು ಅದನ್ನು ಸರಿಯಾಗಿ ಬೇಯಿಸುವುದು ಚೆನ್ನಾಗಿ ತಿಳಿದಿದ್ದರೆ ಮಾತ್ರ ರೊಟ್ಟಿಯ ಸವಿ ಹೆಚ್ಚಾಗುವುದು. ಈ ರೊಟ್ಟಿ ಮಾಡುವ ಬಗೆಯನ್ನು ಪ್ರವೀಣ್‌ ಅವವರ ಕತೆಗಾರಿಕೆಗೆ ಹೋಲಿಸಿಕೊಂಡಾಗ ಇಲ್ಲಿನ ರೊಟ್ಟಿಗಳೆಲ್ಲಾ ಚೆನ್ನಾಗಿವೆ, ರುಚಿ ರುಚಿಯಾಗಿವೆ. ಬೆಳದಿಂಗಳ ತುಂಬು ಚಂದಿರನಂತಿರುವ, ಅಂಚುಗಳು ಮುಕ್ಕಾಗದ ರೊಟ್ಟಿ ಮಾಡುವುದನ್ನು ಪ್ರವೀಣ್ ಬಲ್ಲರು.

ಇಲ್ಲಿನ ಎಲ್ಲಾ ಹತ್ತು ಕತೆಗಳು ಇವತ್ತಿನ ಕಾಲವನ್ನು ಪ್ರತಿನಿಧಿಸುತ್ತವೆ. ಬಂಗಾರ ಕತೆಯು ಹಳ್ಳಿಯೊಂದರ ಸಾಮಾನ್ಯ ಕತೆಯಂತೆ ಶುರುವಾಗಿ ಸಾಗುತ್ತಾ ಹೋದಂತೆ ಅದು ಕಾಡುತ್ತಾ ಹೋಗುವ ಬಗೆಗೆ ಬೆರಗಾದೆ. ಅದು ಓದಿದ ಮೇಲೆ ಮತ್ತೊಂದು ಕತೆಯನ್ನು ಓದಿದ್ದು ಎರಡು ದಿನಗಳ ನಂತರವೇ. ಬಂಗಾರದ ಕಾಡುವಿಕೆ ಅಷ್ಟಿದೆ. ಇಲ್ಲಿನ ಏರಿಳಿ ಕತೆಯು ತಂತ್ರಜ್ಞಾನ ಜಾಗತೀಕರಣಗಳ ಹೊತ್ತಿನಲ್ಲಿ ನಡೆಯುತ್ತಿರುವ ಸಂಗತಿಗಳನ್ನು ತಿಳಿಸುತ್ತದೆ. ವಧು ಪರೀಕ್ಷೆ ಕತೆಯು ಒಂದು ಫ್ಯಾಮಿಲಿಯ ಕತೆಯನ್ನು ಹೇಳುತ್ತದೆ. ಹೀಗೆ ಇಲ್ಲಿನ ಹತ್ತು ಕತೆಗಳಲ್ಲಿ ಬಗೆ ಬಗೆಯ ವಿಷಯಗಳಿವೆ.

ಹೆಣ್ಣುತನದ ಮೃದು, ದಯಾಮಯಿತನದ ಜೊತೆ ಜೊತೆಗೆ ಬಹಳ ಮಂದಿ ಹೆಣ್ಣು ಮಕ್ಕಳಿಗೆ ಬೇಡವೆನಿಸುವ, ಹೆಣ್ಣು ಹೀಗಿರುವುದಿಲ್ಲ ಎನಿಸಬಹುದಾದ ಆದರೆ ದಿಟವಾಗಿಯೂ ಇರಬಲ್ಲ ಹೆಣ್ಣುಗಳ ಇನ್ನೊಂದು ಮುಖವನ್ನು ಪ್ರವೀಣ್‌ ತಮ್ಮ ಕತೆಗಳಲ್ಲಿ ಕಾಣಿಸುತ್ತಿದ್ದಾರೆ. ಪ್ರವೀಣ್‌ ಅವರ ಕಡೆಯಿಂದ ಇನ್ನಷ್ಟು ಒಳ್ಳೊಳ್ಳೆಯ ಕತೆಗಳು ಮತ್ತು ಅವಕ್ಕೂ ಹೆಚ್ಚಾಗಿ ಇನ್ನಷ್ಟು ಸಿನಿಮಾಗಳು ಮೂಡಿ ಬರಲಿ ಎಂದು ಹಾರೈಸುವೆ.”