ಬಯಾಪ್ಸಿ ಬಗ್ಗೆ ಭಯ ಬೇಡ

ಬಯಾಪ್ಸಿ ಬಗ್ಗೆ ಭಯ ಬೇಡ

ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರುವ ಸಂಶೋಧನೆಗಳು ಹಲವಾರು. ಈ ಕಾರಣದಿಂದಲೇ ನಾವಿಂದು ಏನೇ ಕಾಯಿಲೆಗಳು ಬಂದರೂ ಗುಣಮುಖರಾಗುತ್ತಿರುವುದು. ಸದ್ಯಕ್ಕೆ ಬಂದಿರುವ ಕೊರೋನಾ ಮಹಾಮಾರಿಯ ಬಗ್ಗೆ ನಮ್ಮ ವೈದ್ಯಕೀಯ ಲೋಕದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಆ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಲಸಿಕೆಯನ್ನು ಸದ್ಯದಲ್ಲೇ ಕಂಡು ಹಿಡಿಯುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. 

ಒಂದು ಸಮಯವಿತ್ತು ಬಯಾಪ್ಸಿ ಎಂದರೆ ‘ಭಯಾಸ್ಪಿ’ ಎನ್ನುವಷ್ಟು ಜನರು ಹೆದರುತ್ತಿದ್ದರು. ಆದರೆ ಕಾಲ ಕಳೆದಂತೆ ಈಗ ವೈದ್ಯರೇನಾದರೂ ಬಯಾಪ್ಸಿ ಮಾಡಿಸಬೇಕೆಂದರೆ ಜನರಲ್ಲಿ ಅಷ್ಟಾಗಿ ಹೆದರಿಕೆ ಕಂಡುಬರುತ್ತಿಲ್ಲ. ಏಕೆಂದರೆ ಬಯಾಪ್ಸಿಯಿಂದ ಏನೇ ರೋಗದ ಫಲಿತಾಂಶ ಬಂದರೂ ಅದನ್ನು ಸಂಪೂರ್ಣ ಗುಣಪಡಿಸುವಷ್ಟು ವೈದ್ಯಕೀಯ ಕ್ಷೇತ್ರ ಮುಂದುವರೆದಿದೆ. ಆದರೆ ನಮಗೆ ಬಯಾಪ್ಸಿ ಎಂದರೆ ಏನೆಂದು ಗೊತ್ತಾ? ಆ ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ ತಿಳಿದಿದೆಯೇ? ಬನ್ನಿ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ದೇಹದ ಒಂದು ಭಾಗದ ಅಂಗಾಂಶದ ತುಣುಕನ್ನು ತುಂಡರಿಸಿ ತೆಗೆದು ಅದನ್ನು ಪರಿಷ್ಕರಿಸಿ ಸೂಕ್ಷ್ಮ ದರ್ಶಕದ ಮೂಲಕ ರೋಗದಿಂದ ಆ ಭಾಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಪರೀಕ್ಷಿಸುವ ಪ್ರಕ್ರಿಯೆಗೆ ಬಯಾಪ್ಸಿ ಎನ್ನುತ್ತಾರೆ. ಅಂದರೆ ನಿಮ್ಮ ಯಾವುದಾದರೂ ಭಾಗದಲ್ಲಿ ಒಂದು ಗಡ್ಡೆ ಅಥವಾ ಹುಣ್ಣು ಆಗಿದೆ ಎಂದು ಅಂದುಕೊಂಡರೆ, ಆ ಗಡ್ಡೆಯ ಒಂದು ಸಣ್ಣ ತುಣುಕನ್ನು ಕತ್ತರಿಸಿ ತೆಗೆದು ಅದನ್ನು ಪರೀಕ್ಷೆ ಮಾಡಿ ಕಾಯಿಲೆ ಯಾವುದು? ಯಾವ ಹಂತದಲ್ಲಿದೆ? ಮದ್ದು ಕೊಡುವುದರ ಮೂಲಕ ಗುಣಪಡಿಸಬಹುದೇ ಅಥವಾ ಶಸ್ತ್ರಚಿಕಿತ್ಸೆ ಅನಿವಾರ್ಯವೇ? ಎಂಬುದನ್ನು ತಿಳಿಸುತ್ತದೆ ಈ ಬಯಾಪ್ಸಿ ಎಂಬ ಪರೀಕ್ಷಾ ವಿಧಾನ. ರೋಗಗ್ರಸ್ಥ ಭಾಗದ ಒಂದು ತುಂಡನ್ನು ಕತ್ತರಿಸಿ ಅದರ ಅಂಗಾಂಶಗಳ ಪರೀಕ್ಷೆ ಮಾಡಿಸುವುದೇ ಬಯಾಪ್ಸಿ ಎಂದು ಸರಳವಾಗಿ ಹೇಳಬಹುದು. ಈ ಬಯಾಪ್ಸಿ ಎಂಬ ಶಬ್ದ ಗ್ರೀಕ್ ಮೂಲದಿಂದ ಬಂದದ್ದು. ಜೀವ ಮತ್ತು ನೋಟ ಎಂಬುದು ಇದರ ಅರ್ಥ.

ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಎಡಿನ್ ಬರೋದಲ್ಲಿನ ವೈದ್ಯಶಾಸ್ತ್ರದ ಪ್ರಾಧ್ಯಾಪಕ ಜಾನ್ ಹ್ಯೂಸ್ ಬೆನೆಟ್ ಮತ್ತು ಸ್ಕಾಟ್ಲೆಂಡಿನ ರೋಗ ನಿರ್ಣಯ ತಜ್ಞ ರಾಬರ್ಟ್ ಡೋನಾಲ್ಡ್ ಸನ್ ಈ ಹೊಸ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿ, ಊತಕ ಲೇಪನಗಳು ನೀಡುವ ಪ್ರಮುಖ ಪರಿಣಾಮಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ೧೮೪೫ರಲ್ಲಿ ಜಾನ್ ಹ್ಯೂಸ್ ಬೆನೆಟ್ ಈ ರೀತಿಯ ಊತಕ ಪರೀಕ್ಷೆ ಮಾಡಿ ಮಹಿಳೆಯೊಬ್ಬಳ ಸ್ತನದಲ್ಲಿ ಬೆಳೆದಿದ್ದ ಹುಣ್ಣು ಮಾರಕವಲ್ಲ ಮತ್ತು ಅದಕ್ಕೆ ಶಸ್ತ್ರ ಚಿಕಿತ್ಸೆ ಬೇಕಾಗಿಲ್ಲ ಎಂಬುವುದನ್ನು ಈ ಮೂಲಕ ತೋರಿಸಿದ. ರಾಬರ್ಟ್ ಡೋನಾಲ್ಡ್ ಸನ್ ಈ ಹುಣ್ಣಿನ ಮೇಲ್ಮೈ ಮೇಲಿನ ತುಣುಕುಗಳನ್ನು ಕತ್ತರಿಸಿ ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಬಳಸಿದ. ಇವುಗಳ ಪರೀಕ್ಷೆಗೆ ಸೂಕ್ಷ್ಮದರ್ಶಕಗಳ ಅಗತ್ಯವಿದೆ. 

ನಂತರದ ದಿನಗಳಲ್ಲಿ ಹಲವಾರು ಮಂದಿ ತಜ್ಞರು ಈ ಪರೀಕ್ಷೆಯ ಪ್ರಯೋಗವನ್ನು ಮಾಡಲು ಪ್ರಾರಂಭಿಸಿದರು. ೧೮೭೯ರಲ್ಲಿ ಬರ್ಲಿನ್ ನಗರದ ಸ್ತ್ರೀರೋಗ ತಜ್ಞರಾದ ಕಾರ್ಲೆರೋಜ್ ಅವರು ಗರ್ಭಕಂಠ ಹಾಗೂ ಗರ್ಭಕೋಶದ ಒಳಪದರಿನ ಮಾದರಿಯನ್ನು ಪಡೆದು ಬಯಾಪ್ಸಿ ತಂತ್ರಜ್ಞಾನದ ಮೂಲಕ ಅಲ್ಲಿಯ ಬೆಳವಣಿಗೆಯನ್ನು ಪರೀಕ್ಷಿಸಿದರು. ೧೮೮೦ರಲ್ಲಿ ವಿಲಿಯಂ ಹೆನ್ರಿ ವೇಲ್ಸ್ ಎಂಬ ಶಸ್ತ್ರಚಿಕಿತ್ಸಾ ತಜ್ಞರು ಇದರ ಬಗ್ಗೆ ಹೆಚ್ಚಿನ ಪ್ರಯೋಗಗಳನ್ನು ಮಾಡಿ ಶಸ್ತ್ರ ಕ್ರಿಯೆ ಮಾಡಿದ ಸ್ಥಳಕ್ಕೆ ಮಾರಕವೋ ಅಥವಾ ನಿರಪಯಕಾರಿಯೋ ಎಂದು ತಿಳಿಸಿದರು. ಶಸ್ತ್ರ ಚಿಕಿತ್ಸೆಯ ಬಳಿಕವೂ ಆ ಜಾಗದಲ್ಲಿ ಮತ್ತೆ ರೋಗ ಉಲ್ಬಣವಾದೀತೋ ಎಂಬ ಅಂಶವನ್ನು ಈ ಬಯಾಪ್ಸಿ ವಿಧಾನದಿಂದ ತಿಳಿಯಲು ಅವರಿಗೆ ಅನುಕೂಲವಾಯಿತು. ಒಂದೊಮ್ಮೆ ಆ ಜಾಗದಲ್ಲಿದ್ದ ಗಡ್ಡೆ ಅಥವಾ ವೃಣವು ಅಪಾಯಕಾರಿ ಎಂದು ಗೊತ್ತಾದಲ್ಲಿ ಅದನ್ನು ತಕ್ಷಣ ಶಸ್ತ್ರಕ್ರಿಯೆ ನಡೆಸಿ ಕತ್ತರಿಸಿಹಾಕಲು ಅವಕಾಶವೂ ದೊರೆಯಿತು.

೨೦ನೇ ಶತಮಾನದ ಸಮಯದಲ್ಲಿ ಈ ಬಯಾಪ್ಸಿ ತಂತ್ರಜ್ಞಾನದಲ್ಲಿ ಗಮನಾರ್ಹ ಸುಧಾರಣೆಗಳಾದವು. ಪ್ರಪಂಚದ ಎಲ್ಲಾ ಭಾಗಗಳಿಗೆ ಈ ತಂತ್ರಜ್ಞಾನವು ಹರಡಿತು. ೧೯೧೮ರಲ್ಲಿ ಅಮೇರಿಕಾದ ಕಾಲೇಜ್ ಆಫ್ ಸರ್ಜನ್ಸ್, ಬಯಾಪ್ಸಿ ಒಂದು ಪ್ರಮುಖ ರೋಗ ನಿರ್ಧಾರಕ ಕ್ರಮವೆಂದು ಎಲ್ಲೆಡೆ ಅಳವಡಿಕೆಗೆ ಪುರಸ್ಕರಿಸಿತು. ೧೯೩೦ರ ದಶಕದಲ್ಲಿ ಬಯಾಪ್ಸಿಗಾಗಿ ಮಾದರಿಗಳನ್ನು ಊತಕದೊಳಗೆ ಸೂಜಿ ಸೇರಿಸಿ, ಅದರೊಳಗಿನ ಅಂಶಗಳನ್ನು ಹೀರಿ ತೆಗೆದು ಪ್ರಯೋಗಕ್ಕೆ ಬಳಸುವ ಹೊಸ ಕ್ರಮ ಜಾರಿಗೆ ಬಂದಿತು. ಹೀಗೆ ಬಯಾಪ್ಸಿ ರೋಗ ಲಕ್ಷಣಗಳನ್ನು ಅವಲೋಕಿಸಿ ರೋಗವನ್ನು ಧೃಡೀಕರಿಸುವ ಪ್ರಮುಖ ವಿಧಾನವಾಗಿ ಈಗಲೂ ೨೧ನೇ ಶತಮಾನದಲ್ಲೂ ಬಳಕೆಯಾಗುತ್ತಿದೆ. ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ಕಂಡು ಹಿಡಿಯಲು ಬಯಾಪ್ಸಿ ಪರಿಣಾಮಕಾರಿಯಾದ ವಿಧಾನವಾಗಿದೆ.  ಇಂದು ಹೊಸ ತಂತ್ರಜ್ಞಾನದ ಉಪಕರಣ ಹಾಗೂ ಆಧುನಿಕ ವಿಧಾನಗಳಿಂದ ಪ್ರಯೋಗ ಮಾಡುತ್ತಿದ್ದರೂ ಅಂದಿನ ಬಯಾಪ್ಸಿ ತಂತ್ರಜ್ಞಾನವನ್ನು ಕಂಡು ಹಿಡಿದ ತಜ್ಞರ ಸಾಧನೆ ಮೆಚ್ಚಬೇಕಾದದ್ದೇ. ಆದುದರಿಂದ ಇನ್ನು ಮುಂದಕ್ಕೆ ಬಯಾಪ್ಸಿ ಮಾಡಿಸಬೇಕೆಂದು ವೈದ್ಯರು ಹೇಳಿದರೆ, ಭಯ ಪಡದೇ ಅಗತ್ಯವಾಗಿ ಮಾಡಿಸಿ. ಇದರಿಂದ ನಿಮ್ಮ ರೋಗಕ್ಕೆ ನಿಖರವಾದ ಪರಿಹಾರ ಸಾಧ್ಯವಾಗುತ್ತದೆ.      

ಚಿತ್ರ ಕೃಪೆ: ಅಂತರ್ಜಾಲ ತಾಣ