ಬರಗಾಲ: ಭಾರತದ ಬೆಂಬಿಡದ ಭೂತ

ಬರಗಾಲ: ಭಾರತದ ಬೆಂಬಿಡದ ಭೂತ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ ಕಂಗೆಟ್ಟ ಗ್ರಾಮಗಳು ೨,೫೫,೦೦೦. ಇವುಗಳಲ್ಲಿ ಎರಡು ಲಕ್ಷ ಗ್ರಾಮಗಳಲ್ಲಿ ಆಯಾ ಗ್ರಾಮಗಳ ಗಡಿಯೊಳಗೆ ನೀರೇ ಇಲ್ಲ. ೧೯೮೭ರ ಬರಗಾಲದಿಂದ ಬವಣೆ ಪಟ್ಟ ಜನರು ೮.೫ ಕೋಟಿ ಆಗಿದ್ದರೆ, ೨೦೧೬ರ ಬರಗಾಲದಿಂದ ಸಂಕಟ ಪಡುತ್ತಿರುವ ಜನರು ೩೩ ಕೋಟಿ!
ಈ ಅಂಕೆಸಂಖ್ಯೆಗಳು ನಮ್ಮ ಮನಕಲಕದಿದ್ದರೆ, ಬರಗಾಲದಿಂದ ಬೆಂದು ಬೆಂಡಾದ ಹಳ್ಳಿಗಳ ವಾಸ್ತವ ಚಿತ್ರಣ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ನದಿ ಮತ್ತು ದೊಡ್ದ ಕೆರೆಗಳ ಒಣಗಿದ ತಳದಲ್ಲಿರುವ ನೀರಿನ ಹೊಂಡಗಳನ್ನು ರಕ್ಷಿಸಲಿಕ್ಕಾಗಿ ಪೊಲೀಸರನ್ನು ನೇಮಿಸಲಾಗಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ; ಅಮ್ಮನ ಜೊತೆ ನೀರು ಹುಡುಕುತ್ತಾ ಸುತ್ತಾಡುತ್ತಾರೆ. ಆ ರಾಜ್ಯದ ಹಲವು ಹಳ್ಳಿಗಳ ದಾರುಣ ಸ್ಥಿತಿಯ ಸೂಚಕ: ದೂರದ ಕೊಳವೆಬಾವಿಗಳಿಂದ ನೀರು ತಂದು ಒಣ ಬಾವಿಗಳಿಗೆ ತುಂಬಿಸುತ್ತಿರುವುದು. ಅಲ್ಲಿನ ಧಾರ್ ಜಿಲ್ಲೆಯ ಚಾಂದ್ವಾಟ್ ಹಳ್ಳಿಗೆ ನೀರಿನಾಸರೆಯಾಗಿದ್ದ ೫ ಕಿಮೀ ದೂರದ ನೀರಿನ ಹೊಂಡ ಬತ್ತಿದೆ. ಆ ಹಳ್ಳಿಯ ನಿವಾಸಿ ಹೇಳುವ ಕಣ್ಣೀರ ಕತೆ: “ಈಗ ನಾವು ನೀರಿನ ಭಿಕ್ಷೆ ಬೇಡಲಿಕ್ಕಾಗಿ ದೂರದೂರದ ಹಳ್ಳಿಗಳಿಗೆ ಬಾಟಲಿ ಹಿಡಿದುಕೊಂಡು ಹೋಗುತ್ತಿದ್ದೇವೆ.”
ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದಲ್ಲಿ ಮಹಿಳೆಯರು ದಿನದಿನವೂ ಅರ್ಧ ದಿನ ಹೈರಾಣಾಗುತ್ತಿದ್ದಾರೆ – ೯ ಕಿಮೀ ದೂರದಿಂದ ಎರಡು ಬಕೆಟ್ ನೀರು ತರಲಿಕ್ಕಾಗಿ. ನೀರಿನ ಕೊರತೆಯಿಂದಾಗಿ ಸುದ್ದಿ ಮಾಡಿರುವ ಲಾತುರ್ನಲ್ಲಿ ನೀರಿನಾಸರೆಗಳ ಸುತ್ತಲೂ ಸೆಕ್ಷನ್ ೧೪೪ ಜ್ಯಾರಿ ಮಾಡಲಾಗಿದೆ ಎಂದರೆ ನಂಬುತ್ತೀರಾ? ಥಾನಾದಲ್ಲಿ ತಳ ಕಾಣುವ ಬಾವಿಯಿಂದ ನೀರೆತ್ತಲು ೬೦–೭೦ ಜನರು ಹಗ್ಗದಿಂದ ಕೊಡವಿಳಿಸಿ ಕೊಸರಾಡುವ ಚಿತ್ರ ಮತ್ತೆಮತ್ತೆ ಕಾಡುತ್ತದೆ.
ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿಲ್ಲ. ಉತ್ತರ ಕರ್ನಾಟಕದ ಕೆಲವೆಡೆ ಮುಂಜಾನೆ ಮಹಿಳೆಯರ ಹುಡುಕಾಟ ಶುರು - ಒಂದು ಕೊಡ ನೀರಿಗಾಗಿ; ಕೆಲವೊಮ್ಮೆ ಒಣಗಿ ಬಣಗುಡುವ ನದಿಯ ತಳದಲ್ಲಿ ಒಂದು ಮೀಟರ್ ಆಳಕ್ಕೆ ಮಣ್ಣನ್ನು ಅಗೆದು ತೆಗೆದು, ಅಲ್ಲೇ ಗಂಟೆಗಟ್ಟಲೆ ಕಾದು ಕೂರುತ್ತಾರೆ – ನೆಲದಾಳದಿಂದ ಜಿನುಗುವ ಕೆಲವು ಬೊಗಸೆ ನೀರಿಗಾಗಿ. ಕರ್ನಾಟಕದ ಸುಮಾರು ಒಂದು ಸಾವಿರ ಹಳ್ಳಿಗಳಿಗೆ ಈಗ ಟ್ಯಾಂಕರುಗಳಲ್ಲಿ ನೀರು ಸರಬರಾಜು. ಹೊಲ ಉಳಬೇಕಾಗಿದ್ದ ಟ್ರಾಕ್ಟರುಗಳು ಟ್ಯಾಂಕರ್ ನೀರು ಸಾಗಿಸುತ್ತಿವೆ. ಟ್ಯಾಂಕರುಗಳಲ್ಲಿ ನೀರು ಬಂದಾಗ ನುಗ್ಗಿ ಬರುವ ಜನರ ಜಗಳ. ಅದಕ್ಕಾಗಿ ಟ್ಯಾಂಕರ್ ನೀರನ್ನು ಬತ್ತಿದ ಬಾವಿಗಳಿಗೆ ಸುರಿಯುತ್ತಾರೆ. ಮತ್ತೆ ಬಾವಿಗೆ ಕೊಡವಿಳಿಸಿ ನೀರೆತ್ತಿಕೊಳ್ಳಲು ಪರದಾಡುವ ಜನರು.
ಯಾಕೆ ಹೀಗಾಯಿತು? ಮಳೆ ಕಡಿಮೆಯಾದ ಕಾರಣ ಎಂದು ಸುಲಭವಾಗಿ ಹೇಳಿ ಬಿಡಬಹುದು. ಆದರೆ, ಸಪ್ಟಂಬರ್ ತಿಂಗಳಿನಲ್ಲಿಯೇ “ಈ ವರುಷ ಬಿದ್ದ ಮಳೆ ಕಡಿಮೆ” ಎಂದು ಎಲ್ಲರಿಗೂ ತಿಳಿದಿರುತ್ತದೆ. ಅನಂತರ ಮುಂದಿನ ಎಪ್ರಿಲ್ ತಿಂಗಳ ವರೆಗೆ, ಬರದ ಆಘಾತ ಅಪ್ಪಳಿಸುವ ವರೆಗೆ, ಬರಗಾಲ ಎದುರಿಸಲಿಕ್ಕಾಗಿ ನಾವೇನು ಮಾಡಿದ್ದೇವೆ?
ಬರಗಾಲ ನಮ್ಮ ದೇಶಕ್ಕೇನೂ ಹೊಸದಾಗಿ ಬಂದ ಮಾರಿಯಲ್ಲ. ೧೮೭೧ರಿಂದ ೨೦೧೫ರ ವರೆಗೆ ಭಾರತ ೨೩ ಮಹಾ ಬರಗಾಲಗಳನ್ನು ಎದುರಿಸಿದೆ. ಅಂದರೆ, ಬರಗಾಲದ ನಿರ್ವಹಣೆಯಲ್ಲಿ ನಮ್ಮ ದೇಶಕ್ಕೆ ೧೫೦ ವರುಷಗಳ ಅನುಭವವಿದೆ. ಒಂದರ್ಥದಲ್ಲಿ ಪ್ರತಿ ವರುಷವೂ ನಮ್ಮ ದೇಶದಲ್ಲಿ ಬರಗಾಲ! ಯಾಕೆಂದರೆ, ಪ್ರತಿ ವರುಷವೂ ಬೀಜ ಬಿತ್ತಿದ ಪ್ರದೇಶದಲ್ಲಿ ಶೇ.೬೮ ಬರಗಾಲಕ್ಕೆ ತುತ್ತು. ಪ್ರತಿ ವರುಷವೂ ನಮ್ಮ ದೇಶದ ೫೦ ಕೋಟಿ ಜನರು ಬರಗಾಲದಿಂದ ತತ್ತರ. ಕಳೆದ ದಶಕದಲ್ಲಿ ನಮ್ಮ ದೇಶದ ೨೨೦ ಜಿಲ್ಲೆಗಳು ನಾಲ್ಕಕ್ಕಿಂತ ಹೆಚ್ಚು ಬರಗಾಲಗಳಿಗೆ ಬಲಿಯಾಗಿವೆ. ಸರಕಾರದ ಅಂಕೆಸಂಖ್ಯೆಗಳ ಅನುಸಾರ, ೧೯೯೭ರಿಂದೀಚೆಗೆ ಬರಪೀಡಿತ ಪ್ರದೇಶದ ವಿಸ್ತೀರ್ಣದಲ್ಲಿ ಶೇ.೫೭ ಹೆಚ್ಚಳವಾಗಿದೆ.
ಇವೆಲ್ಲ ಮಾಹಿತಿ ಏನನ್ನು ತಿಳಿಸುತ್ತದೆ? ಬರಗಾಲ ಭಾರತದ ಬೆಂಬಿಡದ ಭೂತ ಎಂಬುದನ್ನು. ಹಾಗಾಗಿ, ಅದನ್ನು ವರುಷವರುಷವೂ ಎದುರಿಸಲು ಪ್ರತಿಯೊಬ್ಬ ಪ್ರಜೆ ಸಜ್ಜಾಗಬೇಕು; ಸರಕಾರವೂ ತಯಾರಾಗಬೇಕು.
ಪ್ರತಿಯೊಬ್ಬರೂ ದಿನದಿನದ ನೀರಿನ ಬಳಕೆ ಶೇ.೨೫ ಕಡಿಮೆ ಮಾಡಬೇಕು. ರೈತರು ಯಾವುದೇ ಬೆಳೆ ಬೆಳೆಸುವಾಗಲೂ ನೀರಿನ ಬಳಕೆ ಶೇ.೨೫ ಕಡಿಮೆ ಮಾಡಬೇಕು. ಹತ್ತಾರು ವರುಷಗಳಿಂದ ಬೆಳೆಸಿದ ಬೆಳೆಯನ್ನೇ ಮುಂದಿನ ವರುಷವೂ ಬೆಳೆಸುವ ಬದಲಾಗಿ ಆಯಾ ಪ್ರದೇಶದಲ್ಲಿ ಸುರಿದ ಮಳೆಗೆ ಅನುಗುಣವಾದ ಬೆಳೆ ಬೆಳೆಸಬೇಕು. ಕೈಗಾರಿಕೆಗಳೂ ನೂತನ ತಂತ್ರಜ್ನಾನ ಅಳವಡಿಸಿ, ನೀರಿನ ಬಳಕೆ ಕನಿಷ್ಠ ಶೇ.೨೫ ಕಡಿಮೆ ಮಾಡಬೇಕು.
ಇವೆಲ್ಲ ಸಾಧ್ಯ. ಯಾಕೆಂದರೆ, ಅತ್ಯಂತ ಕಡಿಮೆ ಮಳೆ ಬೀಳುವ ರಾಜಸ್ಥಾನದಲ್ಲಿ ಜನರು ಬೇಸಗೆಯಲ್ಲಿ ನೀರಿಗಾಗಿ ಪರದಾಡುವುದಿಲ್ಲ. ಮರುಭೂಮಿಯಾದ ಇಸ್ರೇಲಿನಲ್ಲಿ ಹನಿ ನೀರಾವರಿಯ ಸಮರ್ಥ ಬಳಕೆಯಿಂದ ರೈತರು ಸಮೃದ್ಧವಾಗಿ ಹಣ್ಣುತರಕಾರಿ ಬೆಳೆದು, ರಫ್ತು ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಯುಎಸ್ಎ ದೇಶದ ಕ್ಯಾಲಿಫೋರ್ನಿಯಾದಲ್ಲಿ ವರುಷಗಟ್ಟಲೆ ನೀರಿನ ಕೊರತೆಯಿದ್ದರೂ, ಅದನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಆದರೆ ನಾವೇನು ಮಾಡಿದ್ದೇವೆ? ಕೇವಲ ೫೦ ವರುಷಗಳಲ್ಲಿ ಲಕ್ಷಗಟ್ಟಲೆ ಕೊಳವೆಬಾವಿ ಕೊರೆದಿದ್ದೇವೆ. ಹೊಸ ಕೊಳವೆಬಾವಿಗಳಲ್ಲಿ ಶೇ.೫೦ಕ್ಕಿಂತ ಹೆಚ್ಚಿನದರಲ್ಲಿ ನೀರೇ ಸಿಕ್ಕುವುದಿಲ್ಲ. ಇನ್ನುಳಿದ ಕೊಳವೆಬಾವಿಗಳು ೨-೩ ವರುಷಗಳಲ್ಲೇ ಬತ್ತಿ ಬರಿದಾಗುತ್ತವೆ. ಇದು ಗೊತ್ತಿದ್ದರೂ ಮತ್ತೆಮತ್ತೆ ಕೊಳವೆಬಾವಿ ಕೊರೆಸುತ್ತಿದ್ದೇವೆ – ೧,೦೦೦ ಅಡಿ, ೧,೫೦೦ ಅಡಿ, ಇನ್ನೂ ಆಳಕ್ಕೆ. ಅಂದರೆ, ನಮ್ಮ ಮುಂದಿನ ತಲೆಮಾರುಗಳ ಸೊತ್ತಾದ ಜೀವಜಲದ ಕೊಳ್ಳೆ!
ನಮ್ಮ ಮುಂದಿನ ತಲೆಮಾರುಗಳಿಗೆ ಕುಡಿಯಲಿಕ್ಕೂ ನೀರಿಲ್ಲದ ಸ್ಥಿತಿ ಬರುವ ಮುನ್ನ ಪಾಠ ಕಲಿಯೋಣ. ಹನಿಹನಿ ನೀರನ್ನೂ ಉಳಿಸಿ, ಕಟ್ಟೆಚ್ಚರದಿಂದ ಬಳಸಿ, ಮುಂದಿನ ಬರದಿಂದ ಬಚಾವಾಗಲು ತಯಾರಾಗೋಣ.