ಬರಡಾದ ಮಣ್ಣಿಗೆ ಸತ್ವ ತುಂಬಿದ ಸಾವಯವ ಕೃಷಿ
ವರುಷದ ಯಾವುದೇ ದಿನ ನೀವು ಸುಭಾಷ್ ಶರ್ಮರ ಜಮೀನಿಗೆ ಕಾಲಿಟ್ಟರೂ ಅಲ್ಲಿ ತುಂಬಿರುತ್ತದೆ - ಹಸುರೆಲೆಗಳ ನಲಿವು ಮತ್ತು ಗಿಡಗಳ ತಂಪು. ಇದಕ್ಕೆ ಕಾರಣ ಅವರ ಜಮೀನಿನಲ್ಲಿ ನಳನಳಿಸುತ್ತಿರುವ ವಿವಿಧ ಬೆಳೆಗಳು.
ಇದರಲ್ಲೇನು ವಿಶೇಷ ಅಂತೀರಾ? ಇದಕ್ಕೂ ಕಾರಣವಿದೆ. ಅವರ ಜಮೀನು ಇರೋದು ಮಹಾರಾಷ್ಟ್ರದ ಯವತ್‌ಮಾಲ್ ಜಿಲ್ಲೆಯಲ್ಲಿ. ಅದು ರೈತರ ಆತ್ಮಹತ್ಯೆಗಳಿಂದ ತಲ್ಲಣಗೊಂಡಿರುವ ಜಿಲ್ಲೆ. ಮುಂಗಾರು ಹಂಗಾಮಿನಲ್ಲಿ ಯವತ್‌ಮಾಲ್ ಜಿಲ್ಲೆಯಲ್ಲೆಲ್ಲ ರೈತರು ಸಣ್ಣಜೋಳ, ತೊಗರಿ ಅಥವಾ ರೊಕ್ಕದ ಬೆಳೆ ಹತ್ತಿಯ ಗಿಡಗಳನ್ನು ನೆಡುವುದು ವಾಡಿಕೆ. ಆದರೆ ಆಗ ಸುಭಾಷ್ ಶರ್ಮ ಅವನ್ನು ನೆಡುವುದಿಲ್ಲ. ಅವರು ತಮ್ಮ ಜಮೀನಿನಲ್ಲಿ ನೆಡುವುದು ಬೇರೆಬೇರೆ ದ್ವಿದಳಧಾನ್ಯಗಳ ಮತ್ತು ಸಾಂಬಾರ ಬೆಳೆಗಳ ಸಸಿಗಳನ್ನು.
ಹಿಂಗಾರು ಬೆಳೆಗಳಾಗಿ ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಸುತ್ತಾರೆ ಶರ್ಮ - ಗೋಧಿ ಮತ್ತು ವಿಭಿನ್ನ ದ್ವಿದಳಧಾನ್ಯ ಬೆಳೆಗಳನ್ನು. ಸುಡುಬೇಸಗೆಯಲ್ಲಿ (ಎಪ್ರಿಲ್ ತಿಂಗಳಿನಲ್ಲಿ) ಯವತ್‌ಮಾಲ್‌ನಲ್ಲಿ ರಣಬಿಸಿಲು. ಸುತ್ತಲಿನ ನೆಲವೆಲ್ಲ ಒಣಗಿರುವ ಆ ಸಮಯದಲ್ಲಿ, ತನ್ನ ಜಮೀನಿನಲ್ಲಿ ಶರ್ಮ ಜೋಳ ಮತ್ತು ಸಣ್ಣಜೋಳ ಬೆಳೆಸುತ್ತಾರೆ! ಇವೆಲ್ಲದರ ಜೊತೆಗೆ, ಅವರ ಜಮೀನಿನಲ್ಲಿ ವರ್ಷದುದ್ದಕ್ಕೂ ವಿವಿಧ ತರಕಾರಿ ಬೆಳೆಗಳ ನಳನಳಿಸುವ ಹಸುರು.
ಶರ್ಮರು ಕೃಷಿಯಿಂದ ಗಳಿಸುವ ಆದಾಯ ಕಡಿಮೆಯೇನಲ್ಲ. ತನ್ನ 32 ಎಕ್ರೆ ಜಮೀನಿನಿಂದ ಅವರು ಪಡೆಯುವ ವಾರ್ಷಿಕ ಲಾಭ (2007ರಲ್ಲಿ) ರೂ.8ರಿಂದ 9 ಲಕ್ಷ! ಲಾಭದ ದೃಷ್ಟಿಯಿಂದ ಶರ್ಮರು ಯಶಸ್ವಿ ಕೃಷಿಕ. ಆದರೆ ಲಾಭಕ್ಕಾಗಿ ಬಹುಪಾಲು ರೈತರು ಅನುಸರಿಸುವ ಎರಡು ವಿಧಾನಗಳನ್ನು ಅವರು ಅನುಸರಿಸಿಲ್ಲ: ಆ ಪ್ರದೇಶದ ಮುಖ್ಯ ರೊಕ್ಕದ ಬೆಳೆ ಹತ್ತಿ ಬೆಳೆಯುವುದು ಮತ್ತು ಕೃಷಿಯನ್ನು ವಾಣಿಜ್ಯ ಚಟುವಟಿಕೆಯೆಂದು ಪರಿಗಣಿಸುವುದು. ಇವೆರಡೂ ಶರ್ಮರಿಗೆ ನಿಷಿದ್ಧ.
ಈ ಭೂಮಿಕೆಯನ್ನು ತಲಪುವ ಮುಂಚೆ ಬದುಕಿನಲ್ಲಿ ಬಹಳ ಏಳುಬೀಳು ಕಂಡವರು ಸುಭಾಷ್ ಶರ್ಮ. “ಹಸುರುಕ್ರಾಂತಿ"ಯ ಕಾಲದಲ್ಲಿ 1970ರ ದಶಕದಲ್ಲಿ ಕೃಷಿಗೆ ಕಾಲಿಟ್ಟವರು ಶರ್ಮ. ಆಗ ತನ್ನ 32 ಎಕ್ರೆ ಜಮೀನಿನಿಂದ 400 ಟನ್ ಇಳುವರಿ ಪಡೆದು ದಾಖಲೆ ಸ್ಥಾಪಿಸಿದವರು ಶರ್ಮ. ಆದರೆ ಅದಕ್ಕೆ ಕಾರಣ ರಾಸಾಯನಿಕ ಗೊಬ್ಬರಗಳು ಮತ್ತು ವಿಷಭರಿತ ಪೀಡೆನಾಶಕಗಳ ಬಳಕೆ.
ಅದೇ ವಿಧಾನದ ಕೃಷಿ ಮುಂದುವರಿಸಿದರು ಶರ್ಮ. ಇಪ್ಪತ್ತು ವರುಷಗಳ ನಂತರ ಅವರಿಗೆ ಉಳಿದದ್ದು ಲಕ್ಷಗಟ್ಟಲೆ ರೂಪಾಯಿಗಳ ಸಾಲದ ಹೊರೆ. ಯಾಕೆಂದರೆ ಅವರ ಜಮೀನಿನ ಇಳುವರಿ 50 ಟನ್‌ಗೆ ಕುಸಿದಿತ್ತು! ಜೊತೆಗೆ ಕೃಷಿಯ ವೆಚ್ಚ ಏರಿತ್ತು. ಜಮೀನಂತೂ ರಾಸಾಯನಿಕಗಳ ಅತಿ ಬಳಕೆಯಿಂದಾಗಿ ಸೊರಗಿತ್ತು.
“1994ರಲ್ಲಿ ನಾನು ಕೃಷಿಯನ್ನೇ ಬಿಟ್ಟು ಬಿಡೋಣ ಅಂತಿದ್ದೆ. ಆಗ ಸಾವಯವ ಕೃಷಿಯ ಸಂಗತಿ ತಿಳೀತು. ಏನೇ ಆಗಲಿ, ಇದನ್ನೂ ಒಂದು ಕೈ ನೋಡೇ ಬಿಡೋಣ ಅಂತ ನಿರ್ಧರಿಸಿದೆ" ಎನ್ನುತ್ತಾರೆ ಶರ್ಮ. ಈಗ, 13 ವರುಷಗಳ ನಂತರ ಅವರ ಇಳುವರಿ (ಅದೇ 32 ಎಕ್ರೆ ಜಮೀನಿನಿಂದ) 450 ಟನ್‌ಗಳಿಗೆ ಜಿಗಿದಿದೆ.
ಬೆರಗು ಹುಟ್ಟಿಸುವ ಈ ಬದಲಾವಣೆ ಹೇಗೆ ಸಾಧ್ಯವಾಯಿತು? ಕೃಷಿವಿಜ್ನಾನದ ಎರಡು ಮುಖಗಳ ಆಳವಾದ ಅರಿವಿನಿಂದಲೇ ಇದು ಸಾಧ್ಯವಾಯಿತು ಎಂಬುದು ಶರ್ಮರ ನೇರ ಮಾತು. "ನಾನು ಮುಂಚೆ ಅನುಸರಿಸುತ್ತಿದ್ದ ರಾಸಾಯನಿಕ ಕೃಷಿಪದ್ಧತಿ ವಿನಾಶಕಾರಿ. ಅದು ಪ್ರಕೃತಿಯ ಜೀವಸತ್ವ ಮತ್ತು ಇಕಾಲಜಿಯನ್ನು ಲಾಭಕ್ಕಾಗಿ ಧ್ವಂಸ ಮಾಡುತ್ತದೆ. ಅದಕ್ಕೆ ಹೋಲಿಸಿದಾಗ, ಈಗ ನಾನು ಅನುಸರಿಸುತ್ತಿರುವ ಸಾವಯವ ಕೃಷಿಪದ್ಧತಿ ಸೃಷ್ಟಿ ಕ್ರಿಯೆ. ಇದು ಪ್ರಕೃತಿಯೊಂದಿಗೆ ಸಮತೋಲನ ಸಾಧಿಸುತ್ತದೆ. ನಮಗೆ ಅತ್ಯಗತ್ಯವಾದದ್ದನ್ನು ಪ್ರಕೃತಿಯಿಂದ ತೆಗೆಯುತ್ತಲೇ ಈ ವಿಧಾನದಲ್ಲಿ ಪ್ರಕೃತಿಗೆ ಬೇಕಾದ್ದನ್ನು ಕೊಡುತ್ತಿದ್ದೇನೆ” ಎಂದು ವಿವರಿಸುತ್ತಾರೆ ಶರ್ಮ.
ಇವತ್ತು ವರುಷ ರಾಸಾಯನಿಕಗಳನ್ನು ತನ್ನ ಜಮೀನಿಗೆ ಸುರಿದದ್ದರಿಂದಾಗಿ ಮಣ್ಣಿನ ಸೂಕ್ಷ್ಮ ಜೀವಿಗಳಲ್ಲೆಲ್ಲ ಸತ್ತು ಹೋಗಿದ್ದವು. ನೀರಿನ ಸೆಳೆತದಿಂದಾಗಿ ಮೇಲ್ಮಣ್ಣು ಕಳೆದು ಹೋಗಿತ್ತು. “ಮರಗಳು, ಹಕ್ಕಿಗಳು, ಎರೆಹುಳಗಳು, ಇರುವೆಗಳು, ಗೆದ್ದಲು ಮತ್ತು ಬೆಳೆಗಳು - ಇವನ್ನೆಲ್ಲ ಒಳಗೊಂಡ ನೆಲದ ಇಕಾಲಜಿಯೇ ಧ್ವಂಸವಾಗಿತ್ತು” ಎಂದು ಬೊಟ್ಟು ಮಾಡುತ್ತಾರೆ ಶರ್ಮ. ಮಣ್ಣಿನ ಸೂಕ್ಷ್ಮ ಜೈವಿಕಜಾಲವನ್ನು ಪುನರ್ ಸೃಷ್ಟಿ ಮಾಡಲಿಕ್ಕಾಗಿ ಶರ್ಮ ಎರಡು ಕೆಲಸಗಳನ್ನು ಕೈಗೆತ್ತಿಕೊಂಡರು: ನೀರಿನ ನಿರ್ವಹಣೆ ಮತ್ತು ಸಾವಯವ ಗೊಬ್ಬರ ಬಳಕೆ.
ಯವತ್‌ಮಾಲ್ ಗುಡ್ಡಗಳ ಜಿಲ್ಲೆ. ಅಲ್ಲಿ ಮಳೆನೀರಿನ ರಭಸದ ಹರಿವಿನಿಂದಾಗಿ ಬೇಸಗೆಯಲ್ಲಿ ನೀರಿನ ಅಭಾವ ಮತ್ತು ಮಣ್ಣಿನ ಗುಣಮಟ್ಟ ನಷ್ಟ. ಮಳೆನೀರು ಇಂಗಿಸಲು ಶರ್ಮ ಅನುಸರಿಸಿದ್ದು ಸರಳ ವಿಧಾನ: ಸಮೋನ್ನತ ರೇಖೆಯ (ಒಂದೇ ಎತ್ತರದ ನೆಲದ ಬಿಂದುಗಳನ್ನು ಜೋಡಿಸುವ ರೇಖೆ) ಉದ್ದಕ್ಕೂ ಗಿಡಗಳನ್ನು ನೆಟ್ಟು ಬೆಳೆಸಿದ್ದು. ಇದರಿಂದಾಗಿ ಅವರ ಜಮೀನಿನಲ್ಲಿ ಮರಗಳು ನೇರಸಾಲುಗಳಲ್ಲಿ ಬೆಳೆದಿಲ್ಲ. ಆದರೆ ಎಲ್ಲ ಮರಗಳೂ ಸಮಾನ ಎತ್ತರಕ್ಕೆ ಬೆಳೆದು ನಿಂತಿವೆ. ಹಾಗಾಗಿ, ಮರಗಳ ಪ್ರತೀ ಸಾಲು ಮಳೆನೀರನ್ನು ಹಿಡಿದಿಡುವ ಚೆಕ್-ಡ್ಯಾಮಿನಂತೆ ಕೆಲಸ ಮಾಡುತ್ತದೆ. ಮಳೆ ಬಂದಾಗ ಮರಗಳ ಸಾಲುಗಳ ನಡುವೆ ತಗ್ಗಿನಲ್ಲಿ ಮಳೆನೀರು ಸಂಗ್ರಹ. ಈ ನೈಸರ್ಗಿಕ ತಡೆಯನ್ನು ಮೀರಿ ಹರಿಯುವ ಮಳೆನೀರು, ಎಕ್ರೆಗೊಂದರಂತೆ ತೋಡಿರುವ ಮಳೆನೀರಿನ ಹೊಂಡದಲ್ಲಿ ಸಂಗ್ರಹವಾಗುತ್ತದೆ.
“ಇದರಿಂದಾಗಿ ನನ್ನ ಜಮೀನಿಗೆ ಬೀಳುವ ಪ್ರತಿಯೊಂದು ಮಳೆ ಹನಿ ಮತ್ತು ನನ್ನ ಜಮೀನಿನ ಪ್ರತಿಯೊಂದು ಮಣ್ಣಿನ ಕಣ ಅಲ್ಲೇ ಉಳಿಯುತ್ತದೆ” ಎಂದು ತನ್ನ ಕೃಷಿಯ ಯಶಸ್ಸಿನ ಗುಟ್ಟು ತಿಳಿಸುತ್ತಾರೆ ಸುಭಾಷ್ ಶರ್ಮ. ಇದರ ಪರಿಣಾಮವಾಗಿ ಅವರ ಜಮೀನಿನ ಅಂತರ್ಜಲ ಮಟ್ಟ ಏರಿದೆ. ಯವತ್‌ಮಾಲ್ ಜಿಲ್ಲೆಯ ಇತರ ಕೃಷಿಕರು ವರುಷದಲ್ಲಿ ಒಂದು ಬೆಳೆ ಬೆಳೆಯಲು ಪರದಾಡುತ್ತಾರೆ. ಆದರೆ ಶರ್ಮ ಮೂರು ಬೆಳೆ ಬೆಳೆಯುತ್ತಿದ್ದಾರೆ. ಇದುವೇ ಅವರ ಯಶಸ್ಸಿನ ಪುರಾವೆ. ಇತರ ಕೃಷಿಕರೂ ಈ ಸರಳ ಸೂತ್ರ ಅನುಸರಿಸಿ, ತಮ್ಮ ಜಮೀನಿನ ಕೃಷಿ ಕಾಯಕದಲ್ಲಿ ಯಶಸ್ಸು ಸಾಧಿಸಬಹುದು, ಅಲ್ಲವೇ?
(10 ಮೇ 2019ರಂದು ಸುಭಾಷ್ ಶರ್ಮರಿಗೆ ಸಕಾಲ್ ಮೀಡಿಯಾ ಗ್ರೂಪಿನ ಅಗ್ರೋವೋನ್ ಮಹಾರಾಷ್ಟ್ರ ಸ್ಮಾರ್ಟ್ ಫಾರ್ಮರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.)
ಫೋಟೋ 1 ಮತ್ತು 2: ಸುಭಾಷ್ ಶರ್ಮ ….. ಕೃಪೆ: (1) ಇಂಡಿಯಾ ವಾಟರ್ ಪೋರ್ಟಲ್.ಆರ್ಗ್ ಮತ್ತು
(2) ಫೇಸ್ ಬುಕ್.ಕಾಮ್