ಬರದಿಂದ ಬಚಾವ್ ತಂತ್ರ – ಕೊಳವೆಬಾವಿಯಿಂದ ಜಲಮರುಪೂರಣ

ಬರದಿಂದ ಬಚಾವ್ ತಂತ್ರ – ಕೊಳವೆಬಾವಿಯಿಂದ ಜಲಮರುಪೂರಣ

ಎಚ್.ಕೆ. ಆನಂದಪ್ಪ ಅವರ ಎರಡು ಹೆಕ್ಟೇರ್ ಜಮೀನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದೆ. ೫೮ ವರುಷ ವಯಸ್ಸಿನ ಅವರು ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಸಂಖ್ಯೆ ಹನ್ನೊಂದು.
ಅವುಗಳ ಗತಿ ಏನಾಯಿತು? ಕೆಲವು ಕೊಳವೆಬಾವಿಗಳಲ್ಲಿ ನೀರೇ ಸಿಗಲಿಲ್ಲ. ಇನ್ನುಳಿದ ಕೊಳವೆಬಾವಿಗಳು ಒಂದೆರಡು ವರುಷ ನೀರು ಒದಗಿಸಿದ ನಂತರ ಬತ್ತಿ ಹೋದವು. ಈ ಬೆಂಬಿಡದ ಸೋಲಿನಿಂದಾಗಿ ಹತಾಶರಾದ ಆನಂದಪ್ಪ ಅದೊಮ್ಮೆ ಆತ್ಮಹತ್ಯೆ ಮಾಡಬೇಕೆಂದು ಯೋಚಿಸಿದ್ದರು. “೨೦೦೮ರಲ್ಲಿ ನನ್ನ ಸಾಲದ ಹೊರೆ ತಾಳಿಕೊಳ್ಳುವಂತಿರಲಿಲ್ಲ” ಎಂದು ಅಂದಿನ ಶೋಚನೀಯ ಪರಿಸ್ಥಿತಿಯನ್ನು ನೆನೆಯುತ್ತಾರೆ ಅವರು..
ಆ ಹೊತ್ತಿನಲ್ಲಿ, ೨೦೧೨ರಲ್ಲಿ, ಅಕಸ್ಮಾತ್ತಾಗಿ ಅವರಿಗೆ ಪರಿಚಯವಾದವರು ಮಲ್ಲೇಶಪ್ಪ ಎಂಬ ರೈತರು. ಕೊಳವೆಬಾವಿಗಳಿಂದ ನೀರೆತ್ತಬಹುದು. ಜೊತೆಗೆ, ನೆಲದಾಳಕ್ಕೆ ಜಲಮರುಪೂರಣ ಮಾಡಲಿಕ್ಕೂ ಅವನ್ನು ಬಳಸಬಹುದು ಎಂದು ಮಲ್ಲೇಶಪ್ಪರಿಂದ ಆನಂದಪ್ಪ ತಿಳಿದುಕೊಂಡರು. ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಹಳ್ಳಿಯ ತನ್ನ ಮೂರು ಎಕ್ರೆ ಜಮೀನಿನಲ್ಲಿ ೯ ಕೊಳವೆಬಾವಿ ಕೊರೆಸಿ ಹತಾಶರಾಗಿದ್ದ ಮಲ್ಲೇಶಪ್ಪ, ಅನಂತರ ಈ ತಂತ್ರದಿಂದ ಜಲಮರುಪೂರಣ ಮಾಡಿ ಯಶಸ್ವಿಯಾಗಿದ್ದರು. ಇದನ್ನು ಅವರಿಗೆ ತಿಳಿಸಿಕೊಟ್ಟವರು ಚಿತ್ರದುರ್ಗದ ಜಲಭೂವಿಜ್ನಾನ ತಜ್ನ ಮತ್ತು ಮಳೆಕೊಯ್ಲಿನ ಪರಿಣತರಾದ ಎನ್.ಜೆ. ದೇವರಾಜ ರೆಡ್ಡಿ.
ಅಂತೂ ೨೦೧೨ರಲ್ಲಿ ತನ್ನ ಜಮೀನಿನಲ್ಲಿ ೧೨ನೆಯ ಕೊಳವೆಬಾವಿ ಕೊರೆಸಿದರು ಆನಂದಪ್ಪ. ಜಮೀನಿನ ಪಕ್ಕದಲ್ಲಿದ್ದ ಮಳೆಗಾಲದ ತೊರೆಯ ನೀರನ್ನು ನೆಲದಾಳಕ್ಕೆ ಮರುಪೂರಣ ಮಾಡಲು ಈ ಕೊಳವೆಬಾವಿ ಬಳಸಿಕೊಂಡರು. ಇದರಿಂದಾಗಿ ಅವರ ನೀರಿನ ಸಮಸ್ಯೆ ಪರಿಹಾರವಾಗಿದೆ. ಈಗ ವರುಷವಿಡೀ ತನ್ನ ಈ ಕೊಳವೆಬಾವಿಯಿಂದ ನೀರು ತೆಗೆಯುತ್ತಾರೆ ಆನಂದಪ್ಪ.
ದೇವರಾಜ ರೆಡ್ಡಿ ಈ ತಂತ್ರವನ್ನು ವಿವರಿಸುವುದು ಹೀಗೆ: ನೆಲದಲ್ಲಿ ಕೊರೆದ ಆಳವಾದ ತೂತಿನ ಮೂಲಕ ನೆಲದ ಮೇಲಿನ ನೀರನ್ನು ನೆಲದಾಳದ ಜಲಕುಹರಗಳಿಗೆ ನುಗ್ಗಿಸುವುದೇ ಈ ತಂತ್ರ. ಇದು ಸರಳ ತಂತ್ರವಾದರೂ, ಜಲಮರುಪೂರಣ ಮಾಡಲಿಕ್ಕಾಗಿ ಸರಿಯಾದ ಜಾಗವನ್ನು ಗುರುತಿಸಿದರೆ ಮಾತ್ರ ಫಲಿತಾಂಶ ಸಿಗುತ್ತದೆ. ಯಾಕೆಂದರೆ, ಕೃಷಿಜಮೀನಿನಲ್ಲಿ ಹೀಗೆ ಜಲಮರುಪೂರಣ ಮಾಡಲು ೨೦ ವಿಧಾನಗಳಿವೆ. ಆಯಾ ಪ್ರದೇಶಕ್ಕೆ ಸೂಕ್ತವಾದ ವಿಧಾನ ಅನುಸರಿಸಬೇಕು. ಈ ವಿಧಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹಲವಾರು ತರಬೇತಿ ಶಿಬಿರಗಳನ್ನೂ ಕಾರ್ಯಾಗಾರಗಳನ್ನೂ ನಡೆಸಿದ್ದಾರೆ ದೇವರಾಜ ರೆಡ್ಡಿ. ಕೃಷಿಕರಿಗೂ, ಸರಕಾರಿ ಅಧಿಕಾರಿಗಳಿಗೂ, ಲಾಭರಹಿತ ಸಂಸ್ಥೆಗಳ ಪ್ರತಿನಿಧಿಗಳಿಗೂ ಮಾಹಿತಿ ನೀಡುವ ಮೂಲಕ, ಕೊಳವೆಬಾವಿ ಕೊರೆಸಿ ಕೊರೆಸಿ, ನೀರು ಸಿಗದೆ ಕೈಚೆಲ್ಲಿದ ಹಲವಾರು ರೈತರ ಜಮೀನಿನಲ್ಲಿ ಹಲವು ಬೆಳೆ ಬೆಳೆದು, ಫಸಲು ಕೈಸೇರಲು ದಾರಿ ತೋರಿದ್ದಾರೆ.
ಈ ತಂತ್ರ ಬಳಸಿದ್ದರಿಂದಾಗಿ ಆನಂದಪ್ಪ ಅವರ ಆದಾಯದಲ್ಲಿ ಆಗಿರುವ ಹೆಚ್ಚಳ ಎಂಟು ಪಟ್ಟು. ಇದನ್ನು ಅನುಸರಿಸುವ ಮುನ್ನ ತೆಂಗು ಮತ್ತು ನೆಲಗಡಲೆ ಬೇಸಾಯದಿಂದ ಅವರು ಗಳಿಸುತ್ತಿದ್ದ ವಾರ್ಷಿಕ ಆದಾಯ ಕೇವಲ ರೂಪಾಯಿ ಒಂದು ಲಕ್ಷ. ಅದೀಗ ವಾರ್ಷಿಕ ರೂಪಾಯಿ ಎಂಟು ಲಕ್ಷ ಆಗಿದೆ! “ಮುಂಚೆ ತೆಂಗಿನ ಒಂದು ಕೊಯ್ಲಿನಲ್ಲಿ ೨೦೦ ತೆಂಗಿನಕಾಯಿ ಸಿಗುತ್ತಿದ್ದರೆ ಈಗ ೨,೦೦೦ ತೆಂಗಿನಕಾಯಿ ಸಿಗುತ್ತಿದೆ” ಎನ್ನುತ್ತಾರ ಆನಂದಪ್ಪ. ೧೨ನೆಯ ಕೊಳವೆಬಾವಿಯಿಂದಾಗಿ ಅವರಿಗೆ ಹೆಚ್ಚುವರಿ ಜಮೀನಿಗೆ ನೀರಾವರಿ ಒದಗಿಸಲು, ವಿವಿಧ ಬೆಳೆಗಳನ್ನು ಬೆಳೆಯಲು ಮತ್ತು ಸಾಲ ತೀರಿಸಲು ಸಾಧ್ಯವಾಗಿದೆ.
ಜಲಮರುಪೂರಣದ ಈ ವಿಧಾನವು ನಮ್ಮ ರಾಜ್ಯಕ್ಕೆ ಸೂಕ್ತ. ಯಾಕೆಂದರೆ ಇತ್ತೀಚೆಗಿನ ವರುಷಗಳಲ್ಲಿ ಕರ್ನಾಟಕದ ಹೆಚ್ಚೆಚ್ಚು ತಾಲೂಕುಗಳು ಬರಪೀಡಿತವಾಗುತ್ತಿವೆ. ನಬಾರ್ಡಿನ ೨೦೧೪-೧೫ರ ವರದಿಯ ಪ್ರಕಾರ, ಭಾರತದಲ್ಲಿ ರಾಜಸ್ಥಾನದ ನಂತರ ಅತ್ಯಂತ ಜಾಸ್ತಿ ಬರಪೀಡಿತ ಪ್ರದೇಶ ಇರುವುದು ನಮ್ಮ ರಾಜ್ಯದಲ್ಲಿ; ಇಲ್ಲಿನ ಒಟ್ಟು ಭೂಪ್ರದೇಶದ ಶೇಕಡಾ ೬೩ರಿಂದ ೭೨ ಬರಪೀಡಿತ ಪ್ರದೇಶ. ಮತ್ತೆಮತ್ತೆ ವಕ್ಕರಿಸಿದ ಬರದ ಆಘಾತ ತಾಳಲಾಗದೆ ೨೦೧೫ನೇ ವರುಷವೊಂದರಲ್ಲೇ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೩೩೭.
ಅಂತರ್ಜಲದ ಮರುಪೂರಣ ಮಳೆಯಾಧಾರಿತ ಮತ್ತು ನೀರಿನ ಕೊರತೆಯ ಪ್ರದೇಶಗಳಲ್ಲಿ ನೀರಿನ ಭದ್ರತೆ ಮತ್ತು ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ. ಆದರೆ ಹೆಚ್ಚೆಚ್ಚು ರೈತರು ಈ ತಂತ್ರಜ್ನಾನ ಅಳವಡಿಸಿಕೊಳ್ಳಲು ಅಡ್ಡಿಯಾಗುತ್ತಿರುವುದು ಇದರ ವೆಚ್ಚ. “ಅಂತರ್ಜಲ ಮರುಪೂರಣದ ವ್ಯವಸ್ಥೆಯ ವೆಚ್ಚ ಹೇಗೆ ಭರಿಸಬೇಕೆಂಬುದೇ ಪ್ರಶ್ನೆ. ಮೂಲಭೂತ ಸಂರಚನೆಗಳನ್ನು ೩೦,೦೦೦ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಸಾಧ್ಯ. ಆದರೆ ಸಾಮಾನ್ಯ ರೈತರಿಗೆ ಈ ವೆಚ್ಚವೇ ದೊಡ್ಡ ಹೊರೆ” ಎನ್ನುತ್ತಾರೆ ದೇವರಾಜ ರೆಡ್ಡಿ.
ಕೆರೆಗಳು, ಕಾಲುವೆಗಳು, ಕಿಂಡಿಅಣೆಕಟ್ಟುಗಳು ಇಂತಹ ಸಮುದಾಯ ಜಲಸಂಬಂಧಿ ಸಂರಚನೆಗಳನ್ನು ನಿರ್ಮಿಸಲು ಸರಕಾರದ ಯೋಜನೆಗಳಿವೆ; ಅನುದಾನವೂ ಲಭ್ಯವಿದೆ. ಆದರೆ ರೈತರ ಜಮೀನಿನಲ್ಲಿ ಜಲಮರುಪೂರಣ ಸಂರಚನೆಗಳ ನಿರ್ಮಾಣಕ್ಕೆ ಸಬ್ಸಿಡಿ ಲಭ್ಯವಿಲ್ಲ. ಚಿತ್ರದುರ್ಗದ ಗ್ರಾಮೀಣ ಬ್ಯಾಂಕ್ ಇಂತಹ ಜಲಮರುಪೂರಣ ಸಂರಚನೆಗಳ ನಿರ್ಮಾಣಕ್ಕೆ ಸಾಲ ನೀಡುತ್ತಿರುವುದು ವಿಶೇಷ. ಈ ಸಾಲ ಪಡೆದ ೨,೦೦೦ ರೈತರಲ್ಲಿ ಸುಮಾರು ೧,೫೦೦ ರೈತರು ಸಾಲ ಮರುಪಾವತಿಸಿದ್ದು ಗಮನಾರ್ಹ.
ಕರ್ನಾಟಕದ ಹಲವು ತಾಲೂಕುಗಳು ಬರದ ಬೇಗೆಯಲ್ಲಿ ಬೇಯುತ್ತಿವೆ. ಅಲ್ಲೆಲ್ಲ ಕೃಷಿ ನೆಲಕಚ್ಚಿದೆ. ನಮ್ಮ ಊಟದ ಬಟ್ಟಲಿನಲ್ಲಿ ನಾವೆಲ್ಲರೂ ಊಟ ಉಣ್ಣಬೇಕಾದರೆ ಅನ್ನದಾತರು ಆಹಾರಧಾನ್ಯ ಮತ್ತು ತರಕಾರಿ ಬೆಳೆಯಲೇ ಬೇಕು. ಅದಕ್ಕೆ ನೀರು ಬೇಕೇ ಬೇಕು. ಅದಕ್ಕಾಗಿಯಾದರೂ, ಎಲ್ಲ ಬ್ಯಾಂಕುಗಳು ಜಲಮರುಪೂರಣ ಸಂರಚನೆಗಳ ನಿರ್ಮಾಣಕ್ಕಾಗಿ ಕಡಿಮೆ ಬಡ್ಡಿಯ ದೀರ್ಘಾವಧಿ ಕೃಷಿಸಾಲಗಳನ್ನು ರೈತರಿಗೆ ನೀಡಲು ಮುಂದಾಗಲಿ.