ಬರಪೀಡಿತ ಜಿಲ್ಲೆ ಹಸುರಾಗಿಸಲು ಮಳೆಕೊಯ್ಲು – ಜಲ ಸಂರಕ್ಷಣೆ
ಸಂಭಾಜಿ ನೆಹರ್ಕರ್ ಅವರ ಜಮೀನು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿದೆ. ಬರಗಾಲದಿಂದಾಗಿ ಅವರು ಬವಣೆ ಪಟ್ಟಿದ್ದ ವರುಷಗಳು ಹಲವು. ಯಾಕೆಂದರೆ, ಅಲ್ಲಿನ ಸರಾಸರಿ ವಾರ್ಷಿಕ ಮಳೆ ಕೇವಲ ೬೬೬ ಮಿಮೀ. ೨೦೧೪-೧೫ರಲ್ಲಿ ಮರಾಠವಾಡ ಪ್ರದೇಶದಲ್ಲಿ ದಿನನಿತ್ಯದ ಬಳಕೆಗೂ ನೀರಿನ ತತ್ವಾರ ಆಗಿತ್ತು; ಕೃಷಿಗೆ ನೀರಿಲ್ಲವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ರೈತರು ಊರು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ೨೦೧೮ರಲ್ಲಿಯೂ ಇಂತಹದೇ ಪರಿಸ್ಥಿತಿ ಬೀಡ್ನಲ್ಲಿ ಎದುರಾಗಿತ್ತು. ಆದರೆ ಈ ವರುಷ ಹಾಗಾಗಿಲ್ಲ. ಅಲ್ಲಿನ ಬಾವಿಗಳು, ರೈತರ ಬೆಳೆಗಳು ಒಣಗಿಲ್ಲ.
ಇದು ಹೇಗಾಯಿತು? ೨೦೧೪-೧೫ರ ತೀವ್ರ ಬರಗಾಲದ ನಂತರ, ನೀರಿನ ಕೊರತೆ ನಿವಾರಣೆಗಾಗಿ ಪರಿಣಾಮಕಾರಿ ಕ್ರಮಗಳನ್ನೇ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದರು. ಅಂತಹ ಒಂದು ಕಾರ್ಯಕ್ರಮ ಎಲ್. ಆಂಡ್ ಟಿ. ಫೈನಾನ್ಸಿಯಲ್ ಸರ್ವಿಸಸ್ (ಎಲ್ಟಿಎಫ್ಎಸ್) “ಜಲವೈಭವ” ಯೋಜನೆ.
ಈ ಯೋಜನೆಯ ಉದ್ದೇಶ: ಸುಸ್ಥಿರ ಜಲಸಂರಕ್ಷಣಾ ಕೆಲಸಗಳ ಮೂಲಕ ಅತ್ಯಂತ ಕಡಿಮೆ ಮಳೆಯಾಗುವ ವರುಷದಲ್ಲಿಯೂ ರೈತರ ಬೆಳೆ ನಾಶವಾಗದಂತೆ ರಕ್ಷಿಸುವುದು. ನಾಲ್ಕು ವರುಷಗಳ ಮುಂಚೆ ಶುರುವಾದ ಯೋಜನೆ ಬೀಡ್ ಜಿಲ್ಲೆಯ ೩೨ ಹಳ್ಳಿಗಳ ೧೫,೦೦೦ ರೈತರಿಗೆ ನೆರವಾಗಿದೆ. ಆರಂಭದಲ್ಲಿ ೧೨ ಗ್ರಾಮಗಳಲ್ಲಿ ಜ್ಯಾರಿಯಾದ ಯೋಜನೆಯನ್ನು ೨೦೧೬-೧೭ರಲ್ಲಿ ಇನ್ನೂ ೨೦ ಗ್ರಾಮಗಳಿಗೆ ವಿಸ್ತರಿಸಲಾಯಿತು.
“ಜಲವೈಭವ” ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಯೋಜನೆ. ಮಳೆಕೊಯ್ಲು ಮತ್ತು ನೀರಿನ ಸಂಗ್ರಹ ಹಾಗೂ ಬೆಳೆಗಳ ಉಳಿವಿಗಾಗಿ ಮಣ್ಣಿನ ತೇವಾಂಶ ರಕ್ಷಣೆ –ಇವೆರಡೂ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. ಎಲ್ಟಿಎಫ್ಎಸ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ತಂಡವು “ಮಾನವಲೋಕ” ಮತ್ತು “ದಿಲಾಸಾ ಪ್ರತಿಷ್ಠಾನ” ಎಂಬ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಯೋಜನಾ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿತು – ಆ ಹಳ್ಳಿಗಳ ನೀರಿನ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ತಿಳಿದುಕೊಳ್ಳಲಿಕ್ಕಾಗಿ. ಆ ಮಾಹಿತಿಯ ಆಧಾರದಿಂದ ಯೋಜನೆ ಅಂತಿಮಗೊಳಿಸಲಾಯಿತು.
“ಜಲವೈಭವ ಯೋಜನೆಯ ಒಂದು ಮುಖ್ಯ ಉದ್ದೇಶ ಫಲವತ್ತಾದ ಮಣ್ಣಿನ ಸವಕಳಿ ತಡೆಯುವುದು. ಆ ಮೂಲಕ ಮಣ್ಣಿನ ತೇವಾಂಶ ಉಳಿಸಿಕೊಂಡು, ಬೇರೆಲ್ಲಿಂದಲೋ ನೀರು ತಾರದೆ, ಕಡಿಮೆ ನೀರಿನ ಬಳಕೆ ಮಾಡಿ ಬೆಳೆ ಬೆಳೆಸುವುದು” ಎಂದು ಮಾಹಿತಿ ನೀಡುತ್ತಾರೆ “ಮಾನವಲೋಕ”ದ ಯೋಜನಾಧಿಕಾರಿ ಸಮೀರ್. ಅದರಂತೆ ಯೋಜನೆಯ ಅನುಸಾರ ಅಂಕಣ-ಒಡ್ಡುಗಳು, ಆಳವಾದ ಅವಿಚ್ಚಿನ್ನ ಸಮೋನ್ನತ ಕಂದಕಗಳು (ಡೀಪ್ ಕನ್ಟಿನುಯಸ್ ಕಾಂಟೂರ್ ಟ್ರೆಂಚ್) (ಚಿತ್ರ ೧) ಮತ್ತು ದೋಹಾಗಳ ನಿರ್ಮಾಣ ಮಾಡಲಾಯಿತು. ಜೊತೆಗೆ ಆ ಪ್ರದೇಶದ ಕಣಿವೆಗಳ ಹೂಳೆತ್ತಲಾಯಿತು.
“ದೋಹಾ” ಎಂದರೆ ನೀರಿನ ತೊರೆಯ ಪಾತ್ರದಲ್ಲೇ ನಿರ್ಮಿಸಲಾದ ಮಳೆಕೊಯ್ಲು ಮತ್ತು ನೀರು ಸಂಗ್ರಹ ಹೊಂಡಗಳ ಸರಣಿ (ಚಿತ್ರ ೨). ಇದರ ನಿರ್ಮಾಣಕ್ಕಾಗಿ ಯಾರದೇ ಜಮೀನಿನ ಅಗತ್ಯವಿಲ್ಲ ಎಂಬುದೇ ಇದರ ವಿಶೇಷತೆ. ಇವನ್ನು ಸಮರ್ಪಕವಾಗಿ ನಿರ್ಮಿಸಿ, ನಿರ್ವಹಣೆ ಮಾಡಿದರೆ ಒಂದು ಕೋಟಿ ಲೀಟರ್ ಮಳೆನೀರು ಸಂಗ್ರಹಿಸಲು ಸಾಧ್ಯ. ಮಳೆಯಿಲ್ಲದ ತಿಂಗಳುಗಳಲ್ಲಿ ಈ ನೀರನ್ನು ಕೃಷಿಗಾಗಿ ಬಳಸಿ, ರೈತರು ಬೆಳೆಗಳನ್ನು ಉಳಿಸಿಕೊಳ್ಳಬಹುದು.
ಕಡಿಮೆ ಮಳೆ ಮತ್ತು ಅಧಿಕ ಮಣ್ಣಿನ ಸವಕಳಿ ಬೀಡ್ ಜಿಲ್ಲೆಯ ದೊಡ್ಡ ಸಮಸ್ಯೆಯಾಗಿತ್ತು. “ಜಲವೈಭವ” ಈ ಎರಡೂ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿತು. “ಈಗ ಮಳೆ ಬಂದಾಗೆಲ್ಲ ಮಳೆಕೊಯ್ಲಿನಿಂದಾಗಿ ಜಾಸ್ತಿ ಮಳೆನೀರು ಸಂಗ್ರಹವಾಗುತ್ತಿದೆ. ಈ ನೀರು ಮಣ್ಣಿನಾಳಕ್ಕಿಳಿದು ಬಾವಿಗಳು ಮತ್ತು ಕೊಳವೆಬಾವಿಗಳ ನೀರಿನ ಮಟ್ಟ ಏರುತ್ತಿದೆ” ಎಂದು ತಿಳಿಸುತ್ತಾರೆ ದಿಲಾಸಾ ಪ್ರತಿಷ್ಠಾನದ ತಾಂತ್ರಿಕಾಧಿಕಾರಿ ಅಂಕುಶ್.
ಈ ಯೋಜನೆಯನ್ನು ಆರಂಭಿಸುವ ಮುಂಚೆಯೇ ಎಲ್ಟಿಎಫ್ಎಸ್ ಪ್ರತಿನಿಧಿಗಳು ಹಳ್ಳಿಗಳಿಗೆ ಭೇಟಿ ನೀಡಿ, ರೈತರೊಂದಿಗೆ ನಡೆಸಿದ ಸಂವಾದ ಇದರಲ್ಲಿ ರೈತರ ಸಹಭಾಗಿತ್ವಕ್ಕೆ ಬಾಗಿಲು ತೆರೆಯಿತು. ಯೋಜನೆಯ ಅಂಗವಾಗಿ, ಹಳ್ಳಿಗಳಲ್ಲಿ ಜಾನುವಾರುಗಳಿಗಾಗಿ ನೀರಿನ ಟ್ಯಾಂಕುಗಳನ್ನು ಒದಗಿಸಲಾಗಿದೆ.
ಯೋಜನೆಯ ಪರಿಣಾಮದ ಬಗ್ಗೆ ಸಂಭಾಜಿ ಹೀಗೆನ್ನುತ್ತಾರೆ: “ಈ ವರುಷ ಮಳೆ ಕಡಿಮೆ. ಆದರೂ ನನ್ನ ಹತ್ತಿ ಬೆಳೆ ಚೆನ್ನಾಗಿದೆ. ಮುಂಚೆ ಇಷ್ಟು ಕಡಿಮೆ ಮಳೆ ಬಂದದ್ದಾದರೆ, ಈ ಹೊತ್ತಿಗೆ ಹತ್ತಿ ಗಿಡಗಳನ್ನೆಲ್ಲ ಕತ್ತರಿಸಿ ಮಣ್ಣಿಗೆ ಹಾಕ ಬೇಕಾಗುತ್ತಿತ್ತು. ಯಾಕೆಂದರೆ ಫಸಲು ಇರುತ್ತಿರಲಿಲ್ಲ. ಈ ವರುಷ ಮಳೆಕೊಯ್ಲು ಮಾಡಿದ್ದರಿಂದಾಗಿ ಹತ್ತಿ ಬೆಳೆಗೆ ನೀರಿನ ಕೊರತೆ ಆಗಲಿಲ್ಲ. ಜೊತೆಗೆ, ಯೋಜನಾಧಿಕಾರಿ ಸೂಚಿಸಿದ ಹತ್ತಿ ಬೀಜ ಬಿತ್ತನೆ ಮಾಡಿದ್ದು ಬೆಳೆ ಚೆನ್ನಾಗಿದೆ. ಆರಂಭದಿಂದಲೂ ಈ ಯೋಜನಾಧಿಕಾರಿಗಳ ಜೊತೆ ಕೆಲಸ ಮಾಡಿದ್ದೇನೆ – ಈ ಯೋಜನೆ ಏನೆಂದು ರೈತರಿಗೆ ತಿಳಿಸಲಿಕ್ಕಾಗಿ. ಇದರಿಂದಾದ ಪ್ರಯೋಜನಗಳಿಂದಾಗಿ ರೈತರಿಗೆಲ್ಲ ಖುಷಿಯಾಗಿದೆ.” ಜಯರಾಜ್ ಮುಂಡಿ ಎಂಬ ಇನ್ನೊಬ್ಬ ರೈತರದೂ ಇದೇ ಅನುಭವ. ಅವರದು ಎರಡೆಕ್ರೆ ಜಮೀನು; ಒಂದೆಕ್ರೆಯಲ್ಲಿ ಹತ್ತಿ ಬೆಳೆದಿದ್ದಾರೆ.
ಅಂತೂ ಕಳೆದ ನಾಲ್ಕು ವರುಷಗಳಿಂದ ಬೀಡ್ ಜಿಲ್ಲೆಯ “ಜಲವೈಭವ” ಯೋಜನೆಯ ಫಲಾನುಭವಿಗಳು ತಮ್ಮ ಬೆಳೆ ಉಳಿಸಲಿಕ್ಕಾಗಿ ಮುಂಚಿನಂತೆ ಟ್ಯಾಂಕರುಗಳಿಗೆ ಹಣ ತೆತ್ತು ನೀರು ತರಿಸಿಲ್ಲ. ಯಾಕೆಂದರೆ ಅವರ ಜಮೀನುಗಳಲ್ಲಿ ಅಂತರ್ಜಲದ ಮಟ್ಟ ಏರಿದೆ. ಮಾತ್ರವಲ್ಲ, ಮಣ್ಣಿನ ಸವಕಳಿ ಇಲ್ಲವಾದ ಕಾರಣ ಮಣ್ಣಿನ ಫಲವತ್ತತೆ ಉಳಿಯುತ್ತಿದೆ.
ಮಳೆಕೊಯ್ಲು ಮತ್ತು ಜಲಸಂರಕ್ಷಣಾ ಯೋಜನೆಗಳ ಮೂಲಕ, ಹಳ್ಳಿಗಳ ನೀರಿನ ಕೊರತೆಯ ಸಮಸ್ಯೆ ಪರಿಹರಿಸಿ, ಕುಟುಂಬಗಳ ಆದಾಯ ಹೆಚ್ಚಿಸಬಹುದೆಂದು “ಜಲವೈಭವ” ತೋರಿಸಿಕೊಟ್ಟಿದೆ. ರೈತರ ಸಹಭಾಗಿತ್ವದಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಇದು ಇನ್ನೊಂದು ನಿದರ್ಶನ.