ಬರಲಿದೆ ಫೋಟೋಶಾಪ್... ಅಂತರ್ಜಾಲದಲ್ಲಿ - ನೇರ ಬಳಸಲು!

ಬರಲಿದೆ ಫೋಟೋಶಾಪ್... ಅಂತರ್ಜಾಲದಲ್ಲಿ - ನೇರ ಬಳಸಲು!

ಬರಹ

ಇತ್ತೀಚೆಗೆ ಎತ್ತ ನೋಡಿದರೂ ಅಂತರ್ಜಾಲ, ಅಂತರ್ಜಾಲದಲ್ಲಿ ಸಿಗುವ ಸವಲತ್ತುಗಳು, ಅಂತರ್ಜಾಲದಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆಯೇ ಮಾತು. ಸದೃಡವಾಗಿ ಬೇರೂರಿದ್ದ ಜಗತ್ತಿನ ಅತಿ ಶ್ರೀಮಂತನಿರುವ ಮೈಕ್ರೊಸಾಫ್ಟಿನಂತಹ ಕಂಪೆನಿಗೆ ಭೀತಿ ಹುಟ್ಟಿಸಿದ್ದು ಕೂಡ ಅಂತರ್ಜಾಲವನ್ನೇ ನೆಲೆಯಾಗಿಟ್ಟುಕೊಂಡು ಬೆಳೆದ ಗೂಗಲ್ ಕಂಪೆನಿ. ಹೀಗೆ ಹೋಲಿಕೆಯಲ್ಲಿ ಅಲ್ಪ ಸಮಯದಲ್ಲೇ ದೈತ್ಯವಾಗಿ ಬೆಳೆದ ಕಂಪೆನಿಯೊಂದು ಮೈಕ್ರೊಸಾಫ್ಟಿನ ಪ್ರಬಲ ಹಿಡಿತವಾದ ಕಛೇರಿ ನಿರ್ವಹಣಾ ತಂತ್ರಾಂಶಗಳನ್ನು (Office software) ಅತಿ ಸುಲಭವಾಗಿ ಹಾಗೂ ಮುಫತ್ತಾಗಿ ಅಂತರ್ಜಾಲದಲ್ಲೇ ಸಿಗುವಂತೆ ಮಾಡಿದಾಗ ಎಲ್ಲರೂ ಎಚ್ಚೆತ್ತು ಕಣ್ತೆರೆದು ನೋಡುವಂತಾಯಿತು. ಹೆಚ್ಚಿನ ಆಘಾತವಾಗಿದ್ದು ಮೈಕ್ರೊಸಾಫ್ಟಿಗೇ ಎಂದು ಹಲವರ ಅಂಬೋಣ.

ಹಾಗೆಯೇ ಮುಂದುವರೆದು ಈಗ ಅಂತರ್ಜಾಲದಲ್ಲಿ ಮಾಡಲಾಗದು ಏನೂ ಇಲ್ಲ ಎಂಬಂತಹ ವಾತಾವರಣ. ಮೈಕ್ರೊಸಾಫ್ಟಿನವರು ಅವರಿಗಾದ ಆಘಾತದಿಂದ ಚೇತರಿಸಿಕೊಂಡರಷ್ಟೆ, ಅವರ ಆಫೀಸ್ ತಂತ್ರಾಂಶಗಳನ್ನು "ವಿಂಡೋಸ್ ಲೈವ್!" ಎಂಬ ಹೊಸತೊಂದು ಸವಲತ್ತನ್ನು ತಮ್ಮ ಆಫೀಸ್ ತಂತ್ರಾಂಶಗಳೊಂದಿಗೆ "ಪ್ಯಾಕೇಜ್ ಡೀಲ್" ಎಂಬಂತೆ ತಮ್ಮ ಗ್ರಾಹಕರ ಮುಂದೆ ತರುವಲ್ಲಿ ಯಶಸ್ವಿಯೂ ಆದರು. ಆದರೂ ಗೂಗಲ್ ಮಟ್ಟಕ್ಕೆ ಅದು ಬಂದಂತಿಲ್ಲ. ಈಗಲೂ ಮೈಕ್ರೊಸಾಫ್ಟಿನ ಈ ಸವಲತ್ತನ್ನು ಹೊಗಳುವವರು (ಅಥವ ಹೊಗಳಿಕೊಳ್ಳುವವರು) ಮೈಕ್ರೊಸಾಫ್ಟಿಗರೆ ಅಥವ ಮೈಕ್ರೊಸಾಫ್ಟಿನೊಂದಿಗೆ ಹಾಗೂ ಹೀಗೂ ಜೀವನದ ನಂಟುಳ್ಳವರೆ ಕೆಲವರು!
Google Spreadsheet

ಮೈಕ್ರೊಸಾಫ್ಟು ಮತ್ತು ಗೂಗಲ್ ಹೀಗಾದ್ರೆ ಬೇರೆಯವರೇನೂ ಹಿಂದೆ ಬಿದ್ದಿಲ್ಲ. ಗೂಗಲ್ ಹೊಸತೊಂದು ಇ-ಮೇಯ್ಲ್ ಸವಲತ್ತು ಹೊತ್ತು ತಂದ ಕೆಲವೇ ದಿನಗಳಲ್ಲಿ ಜಗತ್ತಿನ ಎಲ್ಲೆಡೆ ಈ ರೀತಿಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ ಹಲವು ಪ್ರಾಜೆಕ್ಟುಗಳು ಹುಟ್ಟಿಕೊಂಡವು, ಬೆಳೆದು ಬಂದವು. ಅಂತಹ ಒಂದು ಪ್ರಾಜೆಕ್ಟ್ [:http://roundcube.net/
|ರೌಂಡ್ ಕ್ಯೂಬ್ ]. ಇದು ಇಂತಹ ಒಂದು ಪ್ರಾಜೆಕ್ಟ್ ಅಷ್ಟೆ. ಈ ರೀತಿಯ ಪ್ರಾಜೆಕ್ಟುಗಳ ಮಹಾಪೂರವೇ ಹರಿದವು. ಸಾಕಷ್ಟು ಜನಪ್ರಿಯವಾಗಿದ್ದ ಯಾಹೂ ಮೇಯ್ಲ್ ಕೂಡ ಭೀತಿವಶವಾಗಿ ಹೊಸತೊಂದು ಜಿ-ಮೇಯ್ಲ್ ರೀತಿಯ ಸವಲತ್ತನ್ನು ತನ್ನ ಗ್ರಾಹಕರ ಮುಂದಿರಿಸಿತು. ಅದು ಹೇಗೆ ಸ್ವೀಕೃತವಾಯಿತು ಎಂಬುದು ಪ್ರತ್ಯೇಕ ಚರ್ಚೆಯೇ ಸರಿ.

ಈಗ ಪ್ರಕಟಣೆ, ಡಿಸೈನ್ ಹಾಗೂ ಇಮೇಜಿಂಗ್ ಮಾರುಕಟ್ಟೆಯಲ್ಲಿ ಮಂಚೂಣಿಯಲ್ಲಿರುವ ಅಡೋಬೆ (ಅಥವ ಅಡೋಬ್ - Adobe) ತನ್ನ ಅದ್ವಿತೀಯ ಪ್ರಾಡಕ್ಟ್ ಆಗಿರುವ ಫೋಟೋಶಾಪ್ ತಂತ್ರಾಂಶವನ್ನು [:http://news.com.com/Adobe+to+take+Photoshop+online/2100-7345-6163015.html|ಅಂತರ್ಜಾಲದಲ್ಲಿಯೇ ನೇರ ಬಳಸಲು ಲಭ್ಯವಾಗುವ ಹಾಗೆ] ಮಾಡಲಿದೆಯಂತೆ. ಅಂತರ್ಜಾಲದಲ್ಲೇ ಎಲ್ಲ ಅಫೀಶಿಯಲ್ ಕೆಲಸ ಮಾಡಿಕೊಳ್ಳುವಂತಹ ದಿನಗಳ ಕಾಲದಲ್ಲಿ ಯಾರೂ ಹಿಂದುಳಿದಿರಬಾರದು ನೋಡಿ... ಹಲವರು ಈಗಾಗಲೇ ತಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಳ್ಳಬೇಕಾದ ತಂತ್ರಾಂಶಕ್ಕಿಂತ ನೇರ ಆನ್ಲೈನ್ ಬಳಸಲು ಲಭ್ಯವಿರುವ, ಸುಲಭವಾಗಿರುವ ಸರ್ವೀಸುಗಳತ್ತ ಒಲವು ತೋರಿಸುತ್ತಿದ್ದಾರೆ. ಹಿಂದುಳಿದರೆ ಆಯಾ ಕಂಪೆನಿಯ ಮೂಲ ಪ್ರಾಡಕ್ಟು ಕೆಲಮಟ್ಟಿಗೆ ತೊಂದರೆಗೆ ಸಿಲುಕಿದಂತೆಯೇ!

[:http://picasaweb.google.com/|ಗೂಗಲ್ ನ ಪಿಕಾಸ] ಈಗಾಗಲೆ ಹಲವು ಇಮೇಜ್ ಎಡಿಟಿಂಗ್ ಸವಲತ್ತುಗಳನ್ನು ಆನ್ಲೈನ್ ಲಭ್ಯವಾಗಿಸಿದೆ. ಅಡೋಬೆಯವರು ಯಾವ ರೀತಿಯ ಸವಲತ್ತನ್ನು ತಮ್ಮ ಗ್ರಾಹಕರ ಮುಂದಿಡುತ್ತಾರೆ ಎಂಬುದನ್ನು ಕಾದು ನೋಡಬೇಕು.

********

ಸೈಡ್-ಕಿಕ್

ಇತ್ತೀಚೆಗೆ ಹೀಗೆ ನೇರ ಅಂತರ್ಜಾಲದಲ್ಲಿಯೇ ಬಳಸಬಲ್ಲಂತ ತಂತ್ರಾಂಶಗಳ ಸರ್ವೀಸು (ತಂತ್ರಾಂಶ ನಿಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿ ಉಪಯೋಗಿಸಬೇಕಿಲ್ಲ) ಹೆಚ್ಚಾದಂತೆ ಹೊಸ mainstream ಬ್ರೌಸರುಗಳು ಬರುವುದು ಕಡಿಮೆಯಾಗಿರುವುದು ಹೆಚ್ಚಿನ ಕಂಪ್ಯೂಟರ್ ಜಗತ್ತಿನವರ ಗಮನಕ್ಕೆ ಬಾರದೇ ಇರುವುದಿಲ್ಲ. ಕಾರಣ ಏನು? ಹೀಗೆ ಬ್ರೌಸರಿನಲ್ಲಿಯೇ ಇಂತಹ ತಂತ್ರಾಂಶಗಳು ತೊಂದರೆಯಿಲ್ಲದಂತೆ ಕೆಲಸ ಮಾಡಬೇಕೆಂದರೆ ಬ್ರೌಸರ್ ಅತಿ ಮುಖ್ಯ! ಮೈಕ್ರೊಸಾಫ್ಟಿನವರು ತಮ್ಮ ಬ್ರೌಸರಾದ ಇಂಟರ್ನೆಟ್ ಎಕ್ಸ್ ಪ್ಲೋರರ್ ನಲ್ಲಿ ಎಲ್ಲೆಡೆಯೂ "ವಿಂಡೋಸ್ ಲೈವ್"ಗೆ ಲಿಂಕುಗಳನ್ನು ತುಂಬಿಕೊಂಡು ಬಿತ್ತರಿಸಿದ ಸುದ್ದಿ 'ಬ್ರೌಸರ್ ಮುಖ್ಯ' ಎಂಬ ವಿಷಯಕ್ಕೆ ಪುರಾವೆ ಒದಗಿಸಿದಂತೆ. ಹೀಗಿರುವಾಗ ಒಮ್ಮೊಮ್ಮೆ ಹೊಸತೊಂದು, ಕಾರ್ಯಕ್ಷಮತೆಯುಳ್ಳ ಚೊಕ್ಕವಾದ ಚಿಕ್ಕದಾದ ಬ್ರೌಸರು ಬೇಕು ಎಂದನಿಸುವ ಸಮಯ ಸಮಾಧಾನ ಮಾಡಿಕೊಳ್ಳುವುದೊಂದೇ ದಾರಿ.