ಬರಹಗಾರರಿಗೂ, ಓದುಗರಿಗೂ ಸ್ನೇಹ-ಸೇತು ಅಗತ್ಯ

ಬರಹಗಾರರಿಗೂ, ಓದುಗರಿಗೂ ಸ್ನೇಹ-ಸೇತು ಅಗತ್ಯ

ಸೂರಿ ಎಂಬ ಲೇಖಕನ ಕತೆಗಳನ್ನು ಓದುವುದೆಂದರೆ ಬಿಂಬನಿಗೆ ಪಂಚಪ್ರಾಣ. ಕಳೆದ ಒಂದು ದಶಕದಿಂದ ಸೂರಿ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಬಿಂಬ ಓದುತ್ತಲೇ ಇದ್ದಾನೆ. ಸೂರಿಯ ಯಾವ ಪುಸ್ತಕದಲ್ಲೂ ಅವರ ಭಾವಚಿತ್ರವಾಗಲೀ, ಅವರ ಬಗ್ಗೆ ಅಧಿಕ ಮಾಹಿತಿಯಾಗಲೀ ಇಲ್ಲ. ಬಿಂಬನಿಗೆ ತನ್ನ ಪ್ರೀತಿಯ ಕಥೆಗಾರನನ್ನು ನೋಡಬೇಕೆಂಬ ತವಕ. ಆದರೆ ಸೂರಿಯಿರುವುದು ಬೆಂಗಳೂರಿನಲ್ಲಿ. ಬಿಂಬನಿರುವುದು ಉಡುಪಿಯ ಯಾವುದೋ ಮೂಲೆಯ ಒಂದು ಹಳ್ಳಿಯಲ್ಲಿ. ಹೀಗಾಗಿ ಅವರ ಭೇಟಿ ಸಾಧ್ಯವೇ ಆಗುತ್ತಿಲ್ಲ. ಇದೊಂದು ಕಾಲ್ಪನಿಕ ಕಥನ. ಆದರೂ ನಿಜ ಜೀವನದಲ್ಲಿ ಬರಹಗಾರನಿಗೆ ಹಾಗೂ ಓದುಗನಿಗೆ ಭೇಟಿಯಾಗುವುದು ಕಷ್ಟ ಸಾಧ್ಯವೇ. ಬರಹಗಾರ ಖ್ಯಾತನಾಮರೋ, ಉತ್ತಮ ವಾಗ್ಮಿಯೋ ಆಗಿದ್ದರೆ ಯಾರಾದರೂ, ಯಾವತ್ತಾದರೂ ಕಾರ್ಯಕ್ರಮಗಳಿಗೆ ಕರೆದಾರು. ಆದರೆ ಹೆಚ್ಚಿನ ಬರಹಗಾರರು ಅಂತರ್ಮುಖಿಗಳು. ಅವರಿಗೂ ತಮ್ಮ ಅಭಿಮಾನಿ ಓದುಗರ ಜೊತೆ ಮಾತನಾಡಲು ಆಸಕ್ತಿ ಇರುವುದಿಲ್ಲವೇ? ಗೊತ್ತಿಲ್ಲ.

ನನ್ನ ಅನಿಸಿಕೆಯ ಪ್ರಕಾರ ಪ್ರತಿಯೊಬ್ಬ ಬರಹಗಾರನು ತಮ್ಮ ಓದುಗರ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳ ಬೇಕು. ಈಗಂತೂ ಸಾಮಾಜಿಕ ಜಾಲತಾಣಗಳಿಂದ  ಬಹಳ ದೂರದವರೂ ಬಹಳ ಹತ್ತಿರವಾಗಿದ್ದಾರೆ. ವಾಟ್ಸಪ್, ಫೇಸ್ ಬುಕ್, ಟ್ವೀಟರ್, ಇನ್ಸ್ಟಗ್ರಾಂ ಮೊದಲಾದ ಸಾಮಾಜಿಕ ತಾಣಗಳನ್ನು ಯಾವುದೋ ಕಾಡು ಹರಟೆ ಮಾಡುವುದಕ್ಕೆ ಮತ್ತು ಹಂಚುವುದಕ್ಕೆ ಬಳಸುವುದಕ್ಕಿಂತಲೂ ಈ ರೀತಿಯ ಭಾಂಧ್ಯವ್ಯಗಳನ್ನು ಬೆಳೆಸುವುದಕ್ಕೆ ಬಳಸಬಹುದು. ನಾನು ಓದಲು ಖರೀದಿಸಿದ ಯಾವುದೇ ಪುಸ್ತಕವಿರಲಿ ಅದನ್ನು ಓದಿದ ಬಳಿಕ ಅದರ ಲೇಖಕರ ಸಂಪರ್ಕ ಸಂಖ್ಯೆಯಿದ್ದರೆ ಅವರಿಗೊಂದು ಅಭಿನಂದನೆ ಜೊತೆಗೆ ಅಭಿಪ್ರಾಯ ತಿಳಿಸಿಬಿಡುವೆ. ಸಂಪರ್ಕ ಸಂಖ್ಯೆ ಇಲ್ಲದೇ ಹೋದರೆ ಜಾಲತಾಣದಲ್ಲಿ ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಳ್ಳುವೆ. ಇದರಿಂದ ಬರಹಗಾರರಿಗೆ ಒಂದು ಪ್ರೋತ್ಸಾಹ ದೊರೆತಂತಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ತಮ್ಮ ಬರವಣಿಗೆಯನ್ನು ಅವರು ಮುಂದುವರೆಸುತ್ತಾರೆ. 

ಪುಸ್ತಕಗಳಿಗೆ ಓದುಗರು ಕಮ್ಮಿ ಆಗಿದ್ದಾರೆ ಎಂಬುದು ಈಗಿನ ಎಲ್ಲಾ ಲೇಖಕರ ಸಹಜ ಮಾತು. ಈ ಮಾತು ಒಂದಷ್ಟು ನಿಜವೂ ಕೂಡಾ. ಆದರೆ ಹಲವಾರು ಲೇಖಕರು ಇನ್ನೂ ಬರೆದೇ ಬದುಕುತ್ತಿದ್ದಾರೆ. ಎಸ್.ಎಲ್. ಭೈರಪ್ಪನವರ ಯಾವುದೇ ಪುಸ್ತಕ ಮಾರುಕಟ್ಟೆಗೆ ಬಂದ ವಾರದೊಳಗೆ ಮರು ಮುದ್ರಣಕ್ಕೆ ಹೋಗುತ್ತದೆ. ಜನರ ನಾಡಿ ಮಿಡಿತ ಅರಿತು ಬರೆಯುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ನನ್ನ ಅನಿಸಿಕೆಯಂತೆ ಪ್ರತಿಯೊಬ್ಬ ಲೇಖಕ ಓದುಗರ ನಡುವೆ ಇರಬೇಕು. ಓದುಗರಿಗೂ ತಾವು ಯಾವ ಲೇಖಕರ ಕೃತಿಯನ್ನು ಮೆಚ್ಚಿಕೊಂಡಿದ್ದೇವೋ, ಅವನ ಬಗ್ಗೆ ತಿಳಿದು ಕೊಳ್ಳಬೇಕು. ಇಲ್ಲಿ ವೈಯಕ್ತಿಕ ವಿಷಯಗಳಿಗೆ ಆದ್ಯತೆ ಕೊಡಬೇಕಾಗಿರುವುದಿಲ್ಲ. ಬರಹದಲ್ಲಿ ಏಕಪತ್ನಿಯನ್ನು ಸಮರ್ಥಿಸಿಕೊಂಡ ಲೇಖಕ ನಿಜ ಜೀವನದಲ್ಲಿ ಎರಡು ಹೆಂಡತಿಯರ ಮುದ್ದಿನ ಗಂಡನಾಗಿದ್ದುದೂ ಇದೆ.

ವಿದೇಶಗಳಲ್ಲಿ ಲೇಖಕರಿಗೆ ಬರೆಯುವುದರ ಜೊತೆಗೆ ಹೇಗೆ ತಮ್ಮ ಬರವಣಿಗೆಯನ್ನು ಮಾರ್ಕೆಟಿಂಗ್ ಮಾಡ ಬೇಕೆಂದು ಗೊತ್ತಿರುತ್ತದೆ. ತಾವು ಕಾದಂಬರಿ ಬರೆಯಲು ಶ್ರೀಕಾರ ಹಾಕಿದ ಕೂಡಲೇ ಪ್ರಚಾರವನ್ನು ಪ್ರಾರಂಭಿಸುತ್ತಾರೆ. ಇದು ದಿನಗಟ್ಟಲೆ, ಕೆಲವೊಮ್ಮೆ ವರ್ಷಗಳೂ ಕಳೆದು ಬಿಡುತ್ತವೆ. ಓದುಗರೂ ಅವರ ಪುಸ್ತಕಕ್ಕಾಗಿ ಕಾದು ಕುಳಿತಿರುತ್ತಾರೆ. ಜರ್ಮನಿಯ ಫ್ರಾಂಕ್ ಫರ್ಟ್ ಎಂಬಲ್ಲಿ ಪ್ರತೀ ವರ್ಷ ಪುಸ್ತಕ ಮೇಳ ನಡೆಯುತ್ತದೆ. ಅಲ್ಲಿ ನೂರಾರು ವಿದೇಶೀ ಲೇಖಕರು ಬರುತ್ತಾರೆ. ಓದುಗರೂ ಬರುತ್ತಾರೆ. ಇವರಿಗೆ ಮಾತುಕತೆ ನಡೆಸಲು ವೇದಿಕೆಯೂ ದೊರೆಯುತ್ತದೆ. ಆ ಸಮಯದಲ್ಲಿ ಓದುಗರು ತಮ್ಮ ಮೆಚ್ಚಿನ ಲೇಖಕರ ಜೊತೆ ಹಸ್ತಾಕ್ಷರ ತೆಗೆದು ಕೊಳ್ಳಬಹುದು, ಕಾಫಿ ಕುಡಿಯಲೂ ಬಹುದು ಕೊನೆಗೆ ಸೆಲ್ಫೀ ಸಹಾ ತೆಗೆದುಕೊಳ್ಳಬಹುದು. ಲೇಖಕರ ನಿರ್ದಿಷ್ಟ ಪುಸ್ತಕದ ಬಗ್ಗೆ ಇರುವ ಸಂದೇಹವನ್ನು ಬಗೆಹರಿಸಿಕೊಳ್ಳಲೂ ಬಹುದು. ಇಂತಹ ಸೌಲಭ್ಯಗಳು ನಮ್ಮ ದೇಶದಲ್ಲಿ ಕಮ್ಮಿ ಎಂದು ಹೇಳಬಹುದು. ನಾವು ನಮ್ಮ ನಡುವೆಯೇ ಬದುಕುವ ಹಲವಾರು ಲೇಖಕರನ್ನು ಇನ್ನೂ ಸಹ ಗುರುತಿಸಿಯೇ ಇಲ್ಲ. ಯಾರು ಪ್ರಚಾರದಲ್ಲಿರುತ್ತಾರೋ, ಯಾರಿಗೆ ದೊಡ್ಡ ದೊಡ್ದವರ ಕೃಪಾಕಟಾಕ್ಷಗಳು ಇರುತ್ತದೆಯೋ ಅವರಿಗೆಲ್ಲಾ ಪ್ರಶಸ್ತಿಗಳು ಹುಡುಕಿಕೊಂಡು (??!) ಬರುತ್ತವೆ. 

ನಮ್ಮ ಕರ್ನಾಟಕದಲ್ಲೂ ಕೆಲವು ಲೇಖಕರು ತಮ್ಮ ಪುಸ್ತಕ ಬಿಡುಗಡೆಯ ದಿನದಂದು ಓದುಗರನ್ನು ಸೇರಿಸಿ, ಅವರ ಜೊತೆ ತಮ್ಮ ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡದ್ದು ಇದೆ. ಮೊದಲೆಲ್ಲಾ ರವಿ ಬೆಳಗೆರೆಯವರು ತಮ್ಮ ಪುಸ್ತಕ ಬಿಡುಗಡೆ ಮಾಡುವಾಗ ದೊಡ್ಡದಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದರು. ಕಳೆದ ಎರಡು ವರ್ಷ ಮಂಗಳೂರಿನಲ್ಲಿ ಲಿಟ್ ಫೆಸ್ಟ್ ನಡೆದ ಸಂದರ್ಭದಲ್ಲಿ ಹಲವಾರು ಲೇಖಕರನ್ನು ನಾನು ವೇದಿಕೆಯಲ್ಲಿ ನೋಡಿದ್ದು ಇದೆ. ಎಸ್.ಎಲ್. ಭೈರಪ್ಪ, ವಸುಧೇಂದ್ರ, ಗೋಪಾಲಕೃಷ್ಣ ಪೈ, ರೋಹಿತ್ ಚಕ್ರತೀರ್ಥ ಹೀಗೆ ಹತ್ತು ಹಲವಾರು ಹಿರಿ ಕಿರಿ ಲೇಖಕರ ಸಮ್ಮಿಲನವಾಗಿತ್ತು. ಆದರೆ ಒಬ್ಬ ಲೇಖಕ ತಾನು ಬರೆದ ಪುಸ್ತಕವನ್ನು ಅಥವಾ ಪುಸ್ತಕದ ಆಯ್ದ ಬರಹಗಳನ್ನು ಅವನ ಮಾತಿನಲ್ಲೇ ಕೇಳಿ ಅದರ ಬಗ್ಗೆ ಅಥವಾ ಆ ಸಂಗತಿ ಬರೆಯುವಾಗ ಆ ಲೇಖಕನಿಗೆ ಕಾಡುತ್ತಿದ್ದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ವೇದಿಕೆ ದೊರೆತಿರುವುದು ಕಮ್ಮಿ. ವಸುಧೇಂದ್ರ ಅವರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಳಿಗೆಯನ್ನು ಹಾಕಿ ಮಾರಾಟ ಮಾಡಿದ್ದೂ ನಾನು ನೋಡಿರುವೆ. ಇದರಿಂದ ಅವರು ಓದುಗರಿಗೆ ಇನ್ನಷ್ಟು ಹತ್ತಿರವಾದರು ಎಂದು ನನ್ನ ಅನಿಸಿಕೆ. ಹೊಸ ಲೇಖಕರು ಈ ಪ್ರಯೋಗವನ್ನೂ ಮಾಡಿನೋಡಬಹುದು. 

ಈ ವರ್ಷದ ಪ್ರಾರಂಭದಲ್ಲಿ ಲೇಖಕ, ಕಾದಂಬರಿಕಾರ ವಸುಧೇಂದ್ರ ಇವರು ತಮ್ಮ ಹೊಸ ಕಾದಂಬರಿ ‘ತೇಜೋ-ತುಂಗಭದ್ರಾ’ ಬಿಡುಗಡೆ ಸಂದರ್ಭದಲ್ಲಿ ರಾಜ್ಯದ ಆಯ್ದ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಕಾದಂಬರಿಯನ್ನು ಅಲ್ಲಿ ನೆರೆದಿದ್ದ ಓದುಗರಿಗೆ ಪರಿಚಯಿಸಿದ್ದು ನನಗಿನ್ನೂ ನೆನಪಿದೆ. ಮಂಗಳೂರು ನವಕರ್ನಾಟಕ ಪುಸ್ತಕ ಮಳಿಗೆಯ ವ್ಯವಸ್ಥಾಪಕರಾದ ಹರೀಶ್ ಅವರ ಒತ್ತಾಸೆಗೆ ನಾನು ಆ ಕಾರ್ಯಕ್ರಮದಲ್ಲಿ ಓದುಗನಾಗಿ ಭಾಗವಹಿಸಿದ್ದೆ. ವಸುಧೇಂದ್ರ ಅವರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಪ್ರತಿಯೊಬ್ಬ ಓದುಗರ ಬಳಿ ಮಾತನಾಡಿ ತಮ್ಮ ಹೊಸ ಪುಸ್ತಕದ ಬಗ್ಗೆ ವಿವರವಾಗಿ ವಿಚಾರ ವಿಮರ್ಶೆ ಮಾಡಿದ್ದರು. ತಾವು ಈ ಕಾದಂಬರಿ ಬರೆಯುವಾಗ ಮಾಡಿಕೊಂಡ ಸಿದ್ಧತೆಗಳು, ತಿರುಗಾಡಿದ ಸ್ಥಳಗಳು ಎಲ್ಲದರ ಬಗ್ಗೆ ಮಾಹಿತಿ ನೀಡಿದ್ದರು. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದರು. ಈ ಸಾಹಸವನ್ನು ಎಲ್ಲಾ ಲೇಖಕರು ಮಾಡಬೇಕು ಎನ್ನುವುದೇ ನನ್ನ ಆಶಯ. ಏಕೆಂದರೆ ಇದರಿಂದ ಲೇಖಕ-ಓದುಗರ ನಡುವೆ ಸ್ನೇಹ ಸೇತು ಬೆಳೆಯುತ್ತದೆ. ಆ ದಿನದ ಪರಿಚಯದ ನಂತರ ವಸುಧೇಂದ್ರ ಅವರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಬಹಳ ಹಿಂದೆ ವಸುಧೇಂದ್ರ ಅವರ ‘ನನ್ನಮ್ಮ ಅಂದ್ರೆ ನನಗಿಷ್ಟ' ಪುಸ್ತಕವನ್ನು ಓದಿ ಬಹಳವಾಗಿ ಮೆಚ್ಚಿಕೊಂಡಿದ್ದೆ. ಆದರೆ ಆ ಮೆಚ್ಚುಗೆಯನ್ನು ಅವರಿಗೆ ತಿಳಿಸಲೂ ನನಗೆ ಆಗಿರಲಿಲ್ಲ. ಆದರೆ ಈಗಿನ ಆಧುನಿಕ ವ್ಯವಸ್ಥೆಯ ಜಗತ್ತಿನಲ್ಲಿ ಕೇವಲ ಒಂದು ವಾಟ್ಸಾಪ್ ಮಾಹಿತಿ ಬಹಳಷ್ಟನ್ನು ತಿಳಿಸಿಬಿಡುತ್ತದೆ. ಹೀಗೆ ಹತ್ತು ಹಲವಾರು ಲೇಖಕರ ಜೊತೆ ನಾನು ಈಗ ಸ್ನೇಹದಲ್ಲಿರುವೆ. ಸುಮ್ಮನೇ ಬೆಳಿಗ್ಗೆ, ರಾತ್ರಿಯ ಶುಭಾಶಯಗಳ ಮೆಸೇಜ್ ಮಾಡಲು ಈ ಸ್ನೇಹ ಸೇತುವನ್ನು ಬಳಸಲೇಬಾರದು. ಎಲ್ಲರಿಗೂ ಅವರವರ ವೈಯಕ್ತಿಕ ಕೆಲಸಗಳು ಇದ್ದೇ ಇರುತ್ತವೆ. ಅವರಿಂದ ಏನಾದರೂ ಮಾಹಿತಿ ಬೇಕಾದರೆ ಪಡೆಯಲು, ನಮ್ಮಲ್ಲಿ ಏನಾದರೂ ಮಾಹಿತಿ ಇದ್ದರೆ ಹಂಚಲು ಈ ವೇದಿಕೆಯನ್ನು ಬಳಸಿಕೊಳ್ಳ ಬಹುದು.

ನಾನು ಬಯಸುವುದೇನೆಂದರೆ ಕರ್ನಾಟಕ ರಾಜ್ಯದ ಪ್ರತಿಯೊಂದು ಪುಸ್ತಕ ಮಳಿಗೆಗಳಲ್ಲಿ ಒಂದು ಸಣ್ಣ ವೇದಿಕೆಯನ್ನು ಮಾಡಿಕೊಳ್ಳಬೇಕು. ಯಾವುದೇ ಲೇಖಕರ ಪುಸ್ತಕ ಬಿಡುಗಡೆಯಾದರೆ ಆ ಲೇಖಕರನ್ನು ಆ ಮಳಿಗೆಗೆ ಕರೆದು, ಆಯ್ದ ಆಸಕ್ತ ಓದುಗರನ್ನು ಬರ ಹೇಳಿ, ಲೇಖಕರಿಂದಲೇ ಅವರ ಪುಸ್ತಕದ ಪರಿಚಯ ಮಾಡಿಕೊಡಲು ಹೇಳಬೇಕು. ಇದರಿಂದ ಸಣ್ಣ ಸಣ್ಣ ಲೇಖಕರಿಗೂ ಒಂದು ವೇದಿಕೆ ದೊರೆಯುತ್ತದೆ. ಓದುಗರು ದೊರೆಯುತ್ತಾರೆ. ಪ್ರತಿಯೊಬ್ಬ ಲೇಖಕನಿಗೂ ಅವನದ್ದೇ ಆದ ಓದುಗ ಬಳಗ ಇದ್ದೇ ಇರುತ್ತದೆ. ಯಾರ ಬರಹವೂ ಕಳಪೆಯಲ್ಲ. ನನಗೆ ಕವನಗಳು ಅರ್ಥವಾಗುವುದಿಲ್ಲ ಎಂದಾಕ್ಷಣ ಎಲ್ಲಾ ಕವನಗಳು ಅಪ್ರಯೋಜಕ ಎನ್ನುವಂತಿಲ್ಲ. ಅವುಗಳಿಗೆ ಅದರದ್ದೇ ಆದ ಸೊಗಡು ಇದ್ದೇ ಇರುತ್ತದೆ. ನನಗೆ ಪೂರ್ಣಚಂದ್ರ ತೇಜಸ್ವಿಯವರು ಅರ್ಥವಾದಷ್ಟು ಕುವೆಂಪು ಅವರು ಆಗುವುದಿಲ್ಲ. ಆದರೆ ಕುವೆಂಪು ಅವರ ಬರಹಗಳಿಗೆ ಅದರದ್ದೇ ಆದ ಗೌರವ, ಮನ್ನಣೆ ಇದ್ದೇ ಇದೆ. ಇದು ಓದುಗ ದೊರೆಯ ಮನದಾಳದ ಮಾತು ಅಷ್ಟೇ. 

ಮಕ್ಕಳ ಕಥೆಗಳ ಮಾಯಾಜಾಲವನ್ನೇ ಸೃಷ್ಟಿಸಿದ ‘ಹ್ಯಾರಿ ಪಾಟರ್' ಸರಣಿಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಜೆ.ಕೆ.ರಾಲಿಂಗ್ ಎಂದರೆ ಒಂದು ಸಮಯದಲ್ಲಿ ಯಾರಿಗೂ ಗೊತ್ತಿರಲಿಲ್ಲ ಮತ್ತು ಇದು ಹ್ಯಾರಿ ಪಾಟರ್ ಪುಸ್ತಕ ಬರೆದ ಮಹಿಳೆಯ ನಿಜವಾದ ಹೆಸರೂ ಆಗಿರಲಿಲ್ಲ. ಆ ಮಹಿಳೆಯ ನಿಜವಾದ ಹೆಸರು ಜೋಆನ್. ಮೊದಲು ತನ್ನದೇ ಹೆಸರು ಹಾಕಲು ಸಂಕೋಚ ಪಟ್ಟುಕೊಂಡಿದ್ದ ಮಹಿಳೆ ನಂತರದ ದಿನಗಳಲ್ಲಿ ಕೇವಲ ಮಕ್ಕಳ ಪುಸ್ತಕಗಳನ್ನೇ ಬರೆದು ಕೋಟಿಗಟ್ಟಲೆ ಹಣ ಮತ್ತು ಪ್ರಸಿದ್ಧಿಯನ್ನು ಪಡೆದಳು. ಜನ ಮನ್ನಣೆಯೂ ದೊರೆಯಿತು. ನಿಮ್ಮ ಯಾವ ಬರಹ ನಿಮ್ಮನ್ನು ಪ್ರಸಿದ್ಧರನ್ನಾಗಿಸುತ್ತದೆ ಯಾರಿಗೆ ಗೊತ್ತು? ಬರೆಯುವಾಗ ಮೌಲ್ಯಯುತವಾದದನ್ನೇ ಬರೆಯಬೇಕೆಂದಿಲ್ಲ ಆದರೆ ಪ್ರಾಮಾಣಿಕವಾಗಿ ಬರೆಯಿರಿ. ಕೆಲವು ಸಲ ನಿಮ್ಮ ಬಾಲಿಶ ಬರಹಗಳನ್ನೇ ಪ್ರೀತಿಸುವ ಒಂದು ಓದುಗ ವರ್ಗವೇ ಇರುತ್ತದೆ. ಈ ಬಗ್ಗೆ ನನ್ನದೇ ಆದ ಒಂದು ಅನುಭವವನ್ನು ಹೇಳಿ ಈ ಲೇಖನ ಮುಗಿಸುವೆ.

ಅದು ೧೯೯೫ರ ಸಮಯವಿರಬೇಕು. ಆಗ ನಾನು ಬರವಣಿಕೆಯನ್ನು ಸರಿಯಾಗಿ ಪ್ರಾರಂಭಿಸಿರಲಿಲ್ಲ. ನನ್ನ ಆತ್ಮೀಯ ಗೆಳೆಯ ಶ್ರೀರಾಮ ದಿವಾಣ ಆಗ ‘ಹೊಸ ಸಂಜೆ’ ಎಂಬ ಮಂಗಳೂರಿನ ಸಂಜೆ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು. ಅವರ ಪ್ರೋತ್ಸಾಹದಿಂದ ಏನೋ ಸ್ವಲ್ಪ ಗೀಚುತ್ತಿದ್ದೆ. ಅವರದನ್ನು ಸೂಕ್ತ ಬದಲಾವಣೆ ಮಾಡಿ ಪ್ರಕಟಿಸುತ್ತಿದ್ದರು. ಒಮ್ಮೆ ಅವರು ನನ್ನ ಮನೆಗೆ ಬಂದಾಗ ನಾನೊಂದು ಕಾಲ್ಪನಿಕ ‘ಹೋಟೇಲ್ ಸಂದರ್ಶನ' ಬರೆದಿದ್ದೆ. ಅದನ್ನು ಅವರು ನೋಡಿ ನನ್ನಿಂದ ಪಡೆದುಕೊಂಡಿದ್ದರು. ನಾನು ಆ ವಿಷಯವನ್ನು ಮರೆತೇ ಬಿಟ್ಟಿದ್ದೆ. ಮುಂದಿನ ದಿನಗಳಲ್ಲಿ ಕಾರಣಾಂತರದಿಂದ ನಾನು ಆರು ತಿಂಗಳ ಮಟ್ಟಿಗೆ ಗುಜರಾತ್ ಹೋಗಬೇಕಾಯಿತು. ಒಂದು ದಿನ ಶ್ರೀರಾಮ ದಿವಾಣರು ಹೊಸ ಸಂಜೆ ಪತ್ರಿಕೆಯನ್ನು ನನ್ನ ಗುಜರಾತ್ ವಿಳಾಸಕ್ಕೆ ಕಳಿಸಿದ್ದರು. ಅದರಲ್ಲಿ ನನ್ನ ‘ಹೋಟೇಲ್ ಸಂದರ್ಶನ'ವು ಹಾಸ್ಯ ಲೇಖನವೆಂದು ಪ್ರಕಟವಾಗಿತ್ತು. ನಾನು ಶ್ರೀರಾಮರಿಗೆ ಪತ್ರ ಬರೆದು (ಆಗ ದೂರವಾಣಿ ತುಂಬಾನೇ ದುಬಾರಿ)‘ಅದನ್ನು ಯಾಕೆ ಸುಮ್ಮನೇ ಪ್ರಕಟಿಸಲು ಹೋದಿರಿ? ಅದು ತೀರಾ ಬಾಲಿಶವಾಗಿದೆ. ಮೌಲ್ಯಯುತವಾಗಿಯೂ ಇಲ್ಲ’ ಎಂದೆ. ಅದಕ್ಕೆ ಅವರು ಬರೆದ ಪತ್ರದ ಸಾಲುಗಳು ಇನ್ನೂ ನೆನಪಿದೆ. ‘ ನಾನು ಇದನ್ನು ಪ್ರಕಟಿಸುವ ಮೊದಲು ನನ್ನ ಕಚೇರಿಯ ೨-೩ ಜನ ಸಹೋದ್ಯೋಗಿಗಳಿಗೆ ಓದಲು ನೀಡಿದ್ದೆ. ಅವರು ಹೊಟ್ಟೆ ತುಂಬಾ ನಕ್ಕರು. ನಗೆ ಬರಹವಾಗಲು ಇನ್ನೇನು ಬೇಕು? ಎಂದು ಪ್ರಕಟಿಸಿದೆ. ಓದಿದವರೂ ನಕ್ಕರು’. ಇದು ನನಗೆ ಸ್ವಲ್ಪ ಧೈರ್ಯ ತಂದಿತು. ಮುಂದಿನ ದಿನಗಳಲ್ಲಿ ನಾನು ಲೇಖಕನಾಗಲು ಈ ಘಟನೆ ತುಂಬಾ ಸಹಕಾರ ನೀಡಿತು. ಗೆಳೆಯ ಶ್ರೀರಾಮರ ಸಹಕಾರ ನಾನೆಂದೂ ಮರೆಯಲಾಗದು.

ಓದುಗನಿಲ್ಲದೇ ಲೇಖಕ ಅನಾಥ. ಆದುದರಿಂದ ಲೇಖಕ ಓದುಗರ ನಡುವೆ ಒಂದು ಸ್ನೇಹ ಸೇತು ಅಗತ್ಯವಿದೆ. ಈ ಸೇತುವೆಯನ್ನು ಪುಸ್ತಕ ಪ್ರಕಾಶನದವರು, ಪುಸ್ತಕ ಮಾರಾಟಗಾರು ನಿರ್ಮಿಸಬಹುದು. ಪ್ರತಿಯೊಬ್ಬ ಲೇಖಕನಿಗೆ ನಾವು ನೀಡುವ ಪ್ರೋತ್ಸಾಹದಾಯಕ ವೇದಿಕೆ ಅವರ ನೈಜ ಸಾಮರ್ಥ್ಯವನ್ನು ಹೊರತರಬಲ್ಲುದು. ಯೋಚನೆ ಮಾಡುವಿರಲ್ಲವೇ? 

ಚಿತ್ರ ವಿವರ: ಮಂಗಳೂರಿನ ನವಕರ್ನಾಟಕ ಪಬ್ಲಿಕೇಷನ್ಸ್ ಪುಸ್ತಕ ಮಳಿಗೆಯಲ್ಲಿ ಲೇಖಕ ವಸುಧೇಂದ್ರ ಅವರು ತಮ್ಮ ‘ತೇಜೋ-ತುಂಗಭದ್ರಾ’ ಪುಸ್ತಕದ ಬಗ್ಗೆ ಓದುಗರ ಜೊತೆ ಸಂವಾದ ಮಾಡುತ್ತಿರುವ ಸಂದರ್ಭ.