ಬರಹ8.0

ಬರಹ8.0

ಬರಹ

ಬರಹ8.0
ಶೇಷಾದ್ರಿ
ವಾಸು ಅವರು ಅಭಿವೃದ್ಧಿ ಪಡಿಸಿದ ಬರಹ ತಂತ್ರಾಂಶವು ಕನ್ನಡಿಗರೆಲ್ಲಾ
ಪರಿಚಿತ.ಕಂಪ್ಯೂಟರ್ ಬಳಸುವವರಿಗೆ ಕನ್ನಡದಲ್ಲಿ ಟೈಪಿಸುವಾಗಲೆಲ್ಲಾ ಬರಹ ತಂತ್ರಾಂಶವೇ
ಮೊದಲಿಗೆ ನೆನಪಿಗೆ ಬರುವುದು. ಈಗ ಈ ತಂತ್ರಾಂಶದ ಎಂಟನೇ ಆವೃತ್ತಿ ಬಿಡುಗಡೆಯಾಯಿತು.
ಇದರಲ್ಲಿ ಬರಹಪ್ಯಾಡ್ ಎನ್ನುವ ತಂತ್ರಾಂಸವೂ ಇದ್ದು, ಯುನಿಕೋಡಿನಲ್ಲಿ ಟೈಪಿಸಲು
ಉಪಯುಕ್ತ.ಬರಹ ಡೈರೆಕ್ಟ್ ತಂತ್ರಾಂಶವನ್ನು ಚಾಲೂ ಇಟ್ಟರೆ, ಮೈಕ್ರೋಸಾಫ್ಟ್ ಆಫೀಸು
ತಂತ್ರಾಂಶದಲ್ಲೂ ಕನ್ನಡ ಲಿಪಿಯಲ್ಲಿ ಟೈಪಿಸಬಹುದು. ಹೊಸ ಆವೃತ್ತಿಯಲ್ಲಿ
ಹಳೆಯದರಲ್ಲಿದ್ದ ತೊಡುಕುಗಳನ್ನು ಸರಿಪಡಿಸಲಾಗಿದೆ.ಬರಹದ ಫಾಂಟುಗಳು ಈಗ ಮುಕ್ತವಾಗಿ
ಲಭ್ಯ ಎನ್ನುವುದು ಇನ್ನೊಂದು ವಿಶೇಷ.
--------------------------------------------------
ಗೂಗಲ್ ಮಿಂಚಂಚೆಗೀಗ ಐದು ವರ್ಷ:ಕನ್ನಡ ಸೌಲಭ್ಯ

ಐದು
ವರ್ಷದ ಸಂಭ್ರಮಾಚರಣೆಗೋ ಎನ್ನುವಂತೆ ಜಿಮೇಲ್ ಮಿಂಚಂಚೆ ಸೇವೆಯಲ್ಲಿ ಭಾರತೀಯ
ಭಾಷೆಗಳಲ್ಲಿ ಟೈಪಿಂಗ್ ಮಾಡಲು ಅನುವು ಮಾಡಿಕೊಡಲಾಗಿದೆ. ಕನ್ನಡ,ಹಿಂದಿಯೂ ಈ
ಭಾಷೆಗಳಲ್ಲಿ ಸೇರಿವೆ.ಹೊಸ ಮಿಂಚಂಚೆ ರಚಿಸಲು ಹೊಸ ಪುಟ ತೆರೆದಾಗ ಭಾರತೀಯ ಭಾಷೆಯ ಅಕ್ಷರ
ಕಾಣಿಸುತ್ತದೆ. ಅದರ ಪಕ್ಕ ಕ್ಲಿಕಿಸಿದರೆ, ಭಾಷೆಗಳ ಪಟ್ಟಿಯು ಕಾಣಿಸಿಕೊಳ್ಳುತ್ತದೆ.
ಬೇಕಾದ ಭಾಷೆಯನ್ನು ಆಯ್ದುಕೊಂಡು ಟೈಪಿಸದರಾಯಿತು.ಮೊದಲಿಗೆ ಇಂಗ್ಲೀಷಿನಲ್ಲೇ ಅಕ್ಷರಗಳು
ಮೂಡುತ್ತವೆ. ಸ್ಪೇಸ್ ಬಾರ್ ಕೀಲಿಯನ್ನು ಅದುಮಿದಾಗ, ಟೈಪಿಸಿದ ಪದಕ್ಕೆ ಅನುಗುಣವಾದ
ಕನ್ನಡ ಪದ ಮೂಡುತ್ತದೆ. ಕನ್ನಡವನ್ನು ಇಂಗ್ಲಿಷಿನಲ್ಲಿ ಬರೆದಾಗ ಟೈಪಿಸುವಂತೆ
ಟೈಪಿಸಿದರಾಯಿತು. ಮೊದಲಿಗೆ ಬಂದ ಪದ ನೀವೆಣಿಸಿದ್ದಲ್ಲವಾದರೆ, ಪದದ ಮೇಲೆ
ಕ್ಲಿಕ್ಕಿಸಿದರೆ,ಇನ್ನಿತರ ಆಯ್ಕೆಗಳು ಪ್ರತ್ಯಕ್ಷವಾಗುತ್ತವೆ.ಅವುಗಳಲ್ಲಿಯೂ ನಿಮ್ಮ ಪದ
ಇಲ್ಲವಾದರೆ, ತಿದ್ದುವ ಆಯ್ಕೆಯ ಮೇಲೆ ಕ್ಲಿಕ್ಕಿಸಿ,ಕಾಗುಣಿತ ಆಯ್ಕೆಗಳಿಂದ ನಿಮಗೆ
ಬೇಕಾದ ಪದವನ್ನು ಮೂಡಿಸಿ.
ಜಿಮೇಲ್ ಆರಂಭವಾದ ದಿನಗಳಲ್ಲಿ ಅಂತರ್ಜಾಲ ಮಿಂಚಂಚೆ
ಸೇವೆಗಳಲ್ಲಿ ಬಹು ಕಡಿಮೆ ಸ್ಥಳಾವಕಾಶ ಇತ್ತು.ಪ್ರತಿದಿನ ಮಿಂಚಂಚೆ ನೋಡದಿದ್ದರೆ,ಕೆಲವೇ
ದಿನಗಳಲ್ಲಿ ಮಿಂಚಂಚೆಯ ಇನ್‌ಬಾಕ್ಸ್ ತುಂಬಿ ಬಿಡುತ್ತಿತ್ತು.ಈಗ ಮಿಂಚಂಚೆಯಲ್ಲಿ
ಸೇರಿಸಬಹುದಾದ ಕಡತಗಳ ಗಾತ್ರವೇ ಇಪ್ಪತ್ತು ಎಂಬಿಯಷ್ಟು!
---------------------------------------------------------
ಟ್ವಿಟರ್ ಮಾರಾಟ?
ಟ್ವಿಟರನ್ನು
ಗೂಗಲ್ ಕಂಪೆನಿ ಖರೀದಿಸಲಿದೆ ಎನ್ನುವ ಸುದ್ದಿ ಈಗ ಚಲಾವಣೆಯಲ್ಲಿದೆ.ಐನೂರು ಮಿಲಿಯನ್
ಡಾಲರ್‌ಗಿಂತ ಕಡಿಮೆ ಬೆಲೆಯಲ್ಲಿ ಟ್ವಿಟರ್ ಖರೀದಿಸುವ ಪ್ರಸ್ತಾವವನ್ನು ಗೂಗಲ್ ಮಾಡಿದೆ
ಎನ್ನುವ ವದಂತಿಯಿದೆ.ಬಿಸಿ ಬಿಸಿ ಸುದ್ದಿಯು ಮೈಕ್ರೋ ಬ್ಲಾಗರ್ ತಾಣ ಟ್ವಿಟರ್ ಮೂಲಕ
ಪ್ರಚಾರವಾಗುತ್ತಿರುತ್ತದೆ. ಆದ್ದರಿಂದ ಅಂತರ್ಜಾಲ ಶೋಧ ಕಾರ್ಯದಲ್ಲಿ ಟ್ವಿಟರ್ ಹೆಚ್ಚು
ಪ್ರಸ್ತುತ. ಶೋಧ ಸೇವೆಯಲ್ಲಿ ಅಗ್ರಗಣ್ಯ ಕಂಪೆನಿಯಾಗಿರುವ ಗೂಗಲ್, ಟ್ವಿಟರ್ ಮೇಲೆ
ಕಣ್ಣು ಹಾಕಿರುವುದರ ಹಿನ್ನೆಲೆಯಿದು ಎನ್ನುವುದು ಸ್ಪಷ್ಟ.ಟ್ವಿಟರ್ ಕಂಪೆನಿಯ ಇನ್ನೊಂದು
ಅಂಗವಾಗಿದ್ದ ಬ್ಲಾಗಿಂಗ್ ಸೇವೆ ಬ್ಲಾಗರ್ ಕೂಡಾ ಗೂಗಲ್ ಖರೀದಿಸಿ ಈಗಾಗಲೇ ಹಲವು
ವರ್ಷಗಳುರುಳಿವೆ. ಅರ್ಧಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟರ್,ಜನರನ್ನು
ಸೂಜಿಗಲ್ಲಿನಂತೆ ಆಕರ್ಷಿಸಿದರೂ ಕೂಡ,ತಾಣದಲ್ಲಿ ಜಾಹೀರಾತುಗಳುಗಳಿಲ್ಲದೆ ಆದಾಯ ಮೂಲ
ಹೆಚ್ಚುತ್ತಿಲ್ಲವೆನ್ನುವುದು,ಕಂಪೆನಿಯ ಒಡೆತನ ಹೊಂದಿದವರಿಗೆ ತಲೆನೋವು ತಂದಿದೆ.
--------------------------------------------------------------------
"ಪತ್ರ ಬರೆದು ಶೋಧ ಸೇವೆ ಕೇಳಿ"
ಗೂಗಲ್
ಎಪ್ರಿಲ್ ತಿಂಗಳಿನಿಂದ ಹೊಸ ಸೇವೆ ಆರಂಭಿಸಿದೆ. ನಿಮಗೆ ಯಾವುದೇ ಪದವನ್ನು
ಆಧರಿಸಿ,ಅಂತರ್ಜಾಲ ಪುಟಗಳ ಶೋಧ ಕಾರ್ಯ ಕೈಗೊಳ್ಳಬೇಕಾದರೆ,ನೀವು ಕಂಪ್ಯೂಟರ್
ಬಳಸಬೇಕಿಲ್ಲ.ಗೂಗಲ್ ಕಂಪೆನಿಗೆ ಅಂಚೆಕಾರ್ಡ್ ಬರೆದು ಕೇಳಿದರೂ,ಶೋಧ ಫಲಿತಾಂಶವನ್ನು
ತಲುಪಿಸಲಾಗುತ್ತದೆ.
ಹೀಗೆ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾದಾಗ ಅದನ್ನು ನಂಬದಿರಲು
ಕಾರಣವಿಲ್ಲವಷ್ಟೇ. ಯಾಕೆಂದರೆ ಗೂಗಲ್ ಕಂಪೆನಿಯು ದಿನವೂ ಹೊಸ ಹೊಸ ಸುದ್ದಿಗಳನ್ನು
ನೀಡುತ್ತಿದೆ.ಆದರಿದು ಎಪ್ರಿಲ್ ಪೂಲ್ ಸುದ್ದಿ.
-------------------------------------
ಮಂಗಳ ಗ್ರಹ ಯಾತ್ರೆಗೆ ರಿಹರ್ಸಲ್!
ಮಾಸ್ಕೋದ
ಬಾಹ್ಯಾಕಾಶ ಕೇಂದ್ರದಲ್ಲಿ ನಾಲ್ವರು ಮಂಗಳ ಗ್ರಹ ಯಾತ್ರೆಯ ಸವಾಲುಗಳನ್ನು ಅರಿಯಲು
ನೂರೈದು ದಿನಗಳ ಪರೀಕ್ಷೆ ಕೊಟಡಿ ಪ್ರವೇಶಿಸಿದರು. ಭೂಮಿಯಿಂದ ಮಂಗಳ ಗ್ರಹದ ಅನ್ವೇಷಣೆಗೆ
ಮಾನವ ಸಹಿತ ಯಾತ್ರೆ ನಿಜವಾಗಲೂ ಇನ್ನೂ ಇಪ್ಪತ್ತು ವರ್ಷಗಳಾದರೂ ಬೇಕಾದೀತು. ಈಗಿನ
ತಂತ್ರಜ್ಞಾನ ಅನುವು ಮಾಡುವ ವೇಗದಲ್ಲಿ ಪ್ರವಾಸ ಕೈಗೊಂಡರೆ ಯಾತ್ರೆ ಪೂರ್ಣವಾಗಲು ಒಂದು
ಸಾವಿರ ದಿನಗಳಾದರೂ ಬೇಕು. ಅದಕ್ಕೆ ಬರುವ ಖರ್ಚು ಊಹಾನಾತೀತ.ಮಂಗಳ ಗ್ರಹದತ್ತ ಯಾತ್ರೆ
ಕೈಗೊಳ್ಳುವವರಿಗೆ ವಿಕಿರಣದ ಕಾಟ, ಏಕಾಂತದ ಹಿಂಸೆ ಅನುಭವಿಸಬೇಕಾದೀತು.ಅಂತಹ
ಪ್ರವಾಸಕ್ಕೆ ಮನುಷ್ಯ ದೇಹ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಅಭ್ಯಸಿಸಲು
ಮಾಸ್ಕೋದಲ್ಲಿ ಈಗ ನೂರೈದು ದಿನಗಳ ತರಬೇತಿ ನಡೆಯುತ್ತಿದೆ.ಈ ವರ್ಷದ ಕೊನೆಯೊಳಗೆ ಐನೂರು
ದಿನಗಳ ಇನ್ನೊಂದು ಶಿಬಿರವನ್ನು ನಡೆಸುವ ಉದ್ದೇಶವೂ ಬಾಹ್ಯಾಕಾಶ ವಿಜ್ಞಾನಿಗಳಿಗೆ
ಇದೆ.ಓರ್ವ ಜರ್ಮನ್,ಇನ್ನೋರ್ವ ಪ್ರೆಂಚ್ ಮತ್ತೀರ್ವರು ರಶ್ಯನ್‌ರು ಈ ತರಬೇತಿ
ಪಡೆಯುತ್ತಿದ್ದಾರೆ.ತರಬೇತಿಯ ಅವಧಿಯಲ್ಲಿ ತುರ್ತು ಪರಿಸ್ಥಿತಿಗಳನ್ನು
ಏರ್ಪಡಿಸಿ,ಅದನ್ನು ಶಿಬಿರಾರ್ಥಿಗಳು ಎದುರಿಸಲು ಸಮರ್ಥರಾಗುತ್ತಾರೋ ಎನ್ನುವುದನ್ನು
ಪರೀಕ್ಷಿಸಲಾಗುವುದು.
-----------------------------------------------
ಅಮಿತಾಬ್ ಬ್ಲಾಗಿಗೆ ಒಂದು ವರ್ಷ
ತನ್ನ
ಅಭಿಮಾನಿಗಳ ಜತೆ ನೇರ ಸಂವಹನ ಸಾಧ್ಯವಾಗಿಸಲು ಅಮಿತಾಭ್ ಬಚ್ಚನ್ ಬ್ಲಾಗ್ ಬರೆಯಲು
ಆರಂಭಿಸಿ ಈಗ ಒಂದು ವರ್ಷ ಆಗಿದೆ.ಆದರೆ ಪತ್ರಿಕಾ ಅಂಕಣ ಬರೆಯುವ ಯಾವ ಯೋಚನೆಯೂ
ಅವರಿಗಿಲ್ಲ. ತನ್ನ ಬರವಣಿಗೆ ಉನ್ನತ ಮಟ್ಟದ್ದಲ್ಲ-ಅದೇನಿದ್ದರೂ ಬ್ಲಾಗ್ ಬರವಣಿಗೆಗೆ
ಸಾಕು-ಪತ್ರಿಕಾ ಬರವಣಿಗೆಗಲ್ಲ ಎನ್ನುವುದು ಅವರ
ವಿವರಣೆ.http://bigb.bigadda.com/ವಿಳಾಸದಲ್ಲಿ ಈ ಬ್ಲಾಗ್ ಲಭ್ಯ.
udayavani

*ಅಶೋಕ್‌ಕುಮಾರ್ ಎ