ಬರಿದಾದ 'ಮಿಕ್ಚರ್' ನೆನಪು
ಆಂದು ಬೇಸಿಗೆ ಕಾಲ. ಬೇಸಿಗೆ ಕಳೆದು ಇನ್ನೇನು ಮಳೆಗಾಲ ಆರಂಭವಾಗುವುದರಲ್ಲಿತ್ತು.
ನಾನು 'ಬೆಳಗ್ಗಿನ ಚಹಾ' ದ ತಿಂಡಿಗಾಗಿ ನಮ್ಮೂರಿನ ಬೇಕರಿಗೆ ಹೋಗಿದ್ದೆ. ಬೇಕರಿಯಿಂದ
12 ರೂಪಾಯಿ ಕೊಟ್ಟು ಒಂದು ಪ್ಯಾಕ್ 'ಮಿಕ್ಚರ್' (Mixture) ಕೊಂಡುಕೊಂಡೆ. ಆಗ ಸಮಯ
ಸಂಜೆ ಏಳರ ಸಮೀಪಿಸುತ್ತಿತ್ತು. ಅಲ್ಲಿಂದ ಮನೆಗೆ ತೆರಲುವಾಗ ರಭಸವಾಗಿ ಗಾಳಿ ಬೀಸಲಾರಂಬಿಸಿತು.
ಅಲ್ಲಿದ್ದ ಜನರೆಲ್ಲ ಹಲವು ಕಡೆಗಳಲ್ಲಿ ಹರಿಹಂಚಾದರು. ನಾನು ಮನೆಗೆ ಹೊರಡುವ ತವಕದಲ್ಲಿದ್ದೆ.
ಅಷ್ತರಲ್ಲಿಯೇ ಮೋಡ ಪೂರ್ಣವಾಗಿ ಕತ್ತಲಾರಂಬಿಸಿತು. ಮೋಡ ತನ್ನ ರೂಪವನ್ನು ಬದಲಿಸಿಕೊಂಡು
ಮಳೆರಾಯನಿಗೆ ಆಹ್ವಾನವನ್ನು ನೀಡುತ್ತಿದೆ ಎಂಬುವುದು ಆಗಲೇ ಮನದಟ್ಟಾಯಿತು.
ಒಂದು ಭಯಂಕರ ಶಬ್ದದೊಂದಿಗೆ ಗುಡುಗು ನನ್ನ ತಲೆಗೇ ಬಡಿದಂತಾಯಿತು.
ಭಯದಿಂದ ಹತ್ತಿರವಿದ್ದ ಅಂಗಡಿಯ ಬಳಿಗೆ ತೆರಳಿದೆ. ಅಷ್ಟರಲ್ಲಿಯೇ ಮಿಂಚು ನನ್ನ ಮುಖವನ್ನು ಹಾದು ಹೋಯಿತು.
ತಟ್ಟನೇ ವಿದ್ಯುತ್ ಕಂಬದ ದೀಪವೆಲ್ಲಾ ಆರಿ ಹೋಯಿತು. ವಿದ್ಯುತ್ ಅಧಿಕಾರಿಯ ನೈಪುಣ್ಯವನ್ನು ನಾನು ಮನದಲ್ಲೇ
ಅರಿತುಕೊಂಡೆ. ಅಷ್ಟೊತ್ತಿಗಾಗಲೇ ಗಾಳಿಯೊಂದಿಗೆ ಮಳೆಯು ಬೀಸಲಾರಂಭಿಸಿತು. ಅದರ ಪ್ರಾರಂಭದೊಂದಿಗೆ
ಮೋಡವು ಕತ್ತಲೆಯ ಮರೆಯಲ್ಲಿ ಸ್ಥಾನ ಪಡೆಯಿತು. ಮಳೆಯು ಎಷ್ಟು ಭಯಂಕರವಾಗಿತ್ತೆಂದರೆ ಅಂಗಡಿಯ
ಒಂದು ಮೂಳೆಯಲ್ಲಿ ನಿಂತ ನನ್ನ ಪ್ಯಾಂಟನ್ನು ಐದೇ ನಿಮಿಷದಲ್ಲಿ ಪೂರ್ತಿಯಾಗಿ ಒದ್ದೆ ಮಾಡಿತ್ತು.
ಇಂತಹ ಏರು_ಪೇರುಗಳು ನಡೆಯುತಿದ್ದಂತೆ ನನ್ನ ಮನಸ್ಸಿಗೆ ಆಗಲೇ ನೋಡಿ ಬಂದ ಟಿ.ವಿ ವಾರ್ತೆಯ ನೆನಪಾಯಿತು.
ವಾರ್ತೆಯಲ್ಲಿ ಹೇಳಿದ ಹವಾಮಾನ ವರದಿಯೇ ಬೇರೆ, ಈಗ ನಡೆಯುತ್ತಿರುವ ಹವಾಮಾನವೇ ಬೇರೆ ಎಂದು ಹವಾಮಾನ
ಮಂಡಳಿಯನ್ನು ಮನಸ್ಸಿನಲ್ಲಿಯೇ ನಿಂದಿಸಿದೆ. ನನ್ನ ಮನದ ಭಾವನೆಗೆ ಸಿಡಿಲು, ಮಿಂಚುಗಳೂ ದ್ವನಿಗೂಡಿಸಿದವು.
ಹವಾಮಾನ ಮಂಡಳಿಯು ತನ್ನ ಕಾರ್ಯ_ವ್ಯವಸ್ಥೆಯ ಬಗ್ಗೆ ಸರಿಯಾಗಿ ಮುತುವರ್ಜಿ ವಹಿಸದೇ ಇದ್ದುದು ನನಗೇಕೋ
ಸರಿಕಾಣಲಿಲ್ಲ.
ಸ್ವಲ್ಪ ಹೊತ್ತಿಗಾಗಲೇ ಇಡೀ ಜನರಿಂದ ಆವ್ರತಗೊಂಡ ಆ ಪ್ರದೇಶ ಪೂರ್ತಿಯಾಗಿ ಖಾಲಿಯಾಗಿತ್ತು. ಒಬ್ಬ ಮನುಷ್ಯನ
ಸುಲಿವೂ ಅಲ್ಲಿರಲಿಲ್ಲ. ಮಳೆರಾಯನು ನಿರ್ಭೀತಿಯಿಂದ ಧಾಳಿ ಮಾಡುತ್ತಲೇ ಇದ್ದನು. ಸಮಯ ತನ್ನ ರೂಡಿಯನ್ನು
ಬಿಟ್ಟು ಕೊಡದೇ ತನ್ನ ಕಾರ್ಯವನ್ನು ಪ್ರಬುದ್ದವಾಗಿ ಮಾಡುತ್ತಾ ಮುಂದೆ ಸಾಗುತ್ತಲೇ ಇತ್ತು. ನನ್ನ ಕೈಯಿಂದ
'ಮಿಕ್ಚರ್ ' ಪ್ಯಾಕ್ ಒಡೆದುಕೊಂಡು ಖಾಲಿಯಾಗುತ್ತಲೇ ಇತ್ತು. ಎದುರಿನ ಅಂಗಡಿಯಲ್ಲಿ ಹೊತ್ತುಕೊಂಡಿದ್ದ
ಕ್ಯಾಂಡಲಿನ ಬೆಳಕಿನಿಂದಾಗಿ ಅಂಗಡಿಯ ಮಾಲೀಕ ಚಿನ್ನದ ಬೊಂಬೆಯಂತೆ ಗೋಚರಿಸುತ್ತಿದ್ದ. ಹಾಗೇ ಕಣ್ಣಾಡಿಸುತ್ತಾ
ನನ್ನ ಕಣ್ಣು ಅಂಗಡಿಯ ಮುಂದೆ ಇದ್ದ ರಸ್ತೆಗೆ ಬಂದು ಬಿತ್ತು. ಆಗ ಆ ರಸ್ತೆಯ ಅವಸ್ತೆ ನೋಡಿ ನಾನು ಅವಕ್ಕಾದೆ..
ರಸ್ತೆ ಪೂರ್ತಿಯಾಗಿ ನೀರಿನಿಂದ ತುಂಬಿಕೊಂಡಿತ್ತು. ಇದು ರಸ್ತೆಯೋ, ಈಜು_ಕೊಳವೋ ಎಂದು ಮನದಲ್ಲೇ
ಪ್ರಶ್ನಿಸಿದೆ. ನಂತರ ಆಚೆಗಿರುವ ಚರಂಡಿಯ ಸುತ್ತ ಕಣ್ಣಾಡಿಸಿದೆ. ಆಗ ಒಂದು ರೀತಿಯ ಆಶ್ಚರ್ಯ, ನಿಸ್ಸಾರ ತುಂಬಿದ
ಮೂದಲಿಸುವ ನಗು ನನಗರಿವಿಲ್ಲದಂತೆ ನನ್ನಲ್ಲಿ ಬಂದಿತು. ಚರಂಡಿಯು ಪೂರ್ತಿಯಾಗಿ ಕಸ_ಮಣ್ಣುಗಳಿಂದ
ಆವ್ರತಗೊಂಡು ನೀರನ್ನೆಲ್ಲಾ ರಸ್ತೆಗೆ ಬಿಟ್ಟು ಅಪಮಾನ ಮಾಡುತ್ತಿತ್ತು. ಊರಿನ ಜವಾಬ್ದಾರಿಯುತ ಅಧಿಕಾರಿಗಳಿಗೆ
ಆ ಚರಂಡಿ ಪ್ರಶ್ನಾರ್ಥಕವಾಗಿ ಮೂಡಿ ನಿಂತಿತ್ತು. ರಸ್ತೆಯೀಗ ನೀರಿನ ಹರಿವಿನಿಂದಾಗಿ ಈಜು_ಕೊಳದ ಹಾಗೆ
ತೋರಿ ಬರುತ್ತಿತ್ತು.
ಎದುರಿಗಿದ್ದ ದೊಡ್ಡ ಮನೆಯ ವಿದ್ಯುತ್ ಬೆಳಕಿನಿಂದಾಗಿ ನನಗೆ ಆ ಚರಂಡಿಯು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ನಿಜವಾಗಿ ಆ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ರಭಸವಾಗಿ ಹರಿಯುತ್ತಿತ್ತು. ಚರಂಡಿಯು
ರಸ್ತೆಗೆ ಮಾಡುತ್ತಿರುವ ಅಪಮಾನದ ಬಗ್ಗೆ ಒಂದು ರೀತಿಯ ದೂಷಣೆಯ ಭಾವ ನನ್ನಲ್ಲಿ ಮೂಡಿತು. ನಂತರ
ಆ ಚರಂಡಿಯನ್ನು ಕಟ್ಟಿಸಿದ 'ಕಾರ್ಪರೇಟರ್' ನನ್ನ ಮನಸ್ಸಿನಲ್ಲಿ ಮೂಡಿದರು. ನಾವೇ ಆ ಊರಿನ ಕಾರ್ಪರೇಟರ್ ಅನ್ನು
ಹೊಮ್ಮತದಿಂದ ಆಯ್ಕೆಮಾಡಿದ್ದೆವು. ಅದಕ್ಕೆ ಮುಂಚಿತವಾಗಿ ಹಲವಿದ ಸೌಕರ್ಯಗಳ ಭರವಸೆಯೂ ಅವರಿಂದ ಬಂದಿತ್ತು.
ಅದರ ಉಡುಗೊರೆಯಾಗಿ ಆ ಚರಂಡಿಯನ್ನು ನಿರ್ಮಿಸಿಕೊಟ್ಟಿದ್ದರು. ಅದನ್ನು ನಿರ್ಮಾಣಮಾಡಿ ಹಲವು ತಿಂಗಳುಗಳು
ಕಳೆದಿರಬಹುದು. ಈ ವರೆಗೂ ಅದರ ಕಸಗಳನ್ನು ತೆಗೆಸಲಿಲ್ಲ. ಅದು ಹಾಗೆಯೇ ಕಸಗಳಿಂದ, ಮಣ್ಣಿನಿಂದ, ಹುಲ್ಲುಗಳಿಂದ
ತುಂಬಿಕೊಂಡು ಹೋಯಿತು.ಈಗ ಅದರಲ್ಲಿ ನೀರೇ ಹರಿಯದಂತಹ ಸ್ಥಿತಿಗೆ ಮುಟ್ಟಿತ್ತು. ಈ ವರೆಗೂ ಆ ಕಾರ್ಪರೇಟರ್
ಆ ಚರಂಡಿಯ ಸುತ್ತ ಕಣ್ಣೆತ್ತಿ ನೋಡಲಿಲ್ಲ. ಚರಂಡಿಗೆ ಸೇರಬೇಕಾದ ನೀರು ರಸ್ತೆಯಲ್ಲಿ ಜಾಗಕ್ಕಾಗಿ ತವಕಾಡುತ್ತಿತ್ತು.
ಚರಂಡಿಯ ಆಚೆಗಿರುವ ದೊಡ್ಡ ಮನೆಯ ದ್ರಶ್ಯ ನನ್ನ ಕಣ್ಣಿಗೆ ಬಿತ್ತು. ಊರಿಡೀ ದೀಪ ಆರಿ ಹೋದರೂ ಆ ಮನೆಯಲ್ಲಿ ಮಾತ್ರ
ದೀಪ ಹೊತ್ತುತ್ತಿತ್ತು. ಬಹುಷ ಅಲ್ಲಿ ಜನರೇಟರ್ ವ್ಯವಸ್ಥೆ ಇರಬೇಕು. ಇದರಿಂದಾಗಿ ಮನೆಯ ಸುತ್ತಿಲಿನ ಪ್ರದೇಶ ಸ್ಪಷ್ಟವಾಗಿ
ಗೋಚರಿಸುತ್ತಿತ್ತು. ಊರಿನ ಕೆಲ ಶ್ರೀಮಂತರಿಗೆ ಮಾತ್ರ ಅವರ ಪರಿಚಯವಿತ್ತು. ಕೇವಲ ಮೂರೇ ಜನರು ಆ ವಿಶಾಲ
ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯಿಂದಲೂ ಕೊಳಚೆ ನೀರು ರಸ್ತೆಗೆ ಹರಿಯುತ್ತಿತ್ತು. ಅವರು ಚರಂಡಿಯ ಬಗೆಗೆ
ಗಮನ ಕೊಡದೇ ಹಾಯಾಗಿ ನಿದ್ರಿಸುತ್ತಿರಬೇಕೆಂದು ಅವರ ಪ್ರಕ್ರತಿ ಪರಿಜ್ಣಾನದ ಬಗ್ಗೆ ನಾನು ಅರಿತುಕೊಂಡೆ.
ಆ ಸಂದರ್ಭ ಒಂದು ಭಯಂಕರವಾದ ಗುಡುಗು ಕೇಳಿ ನಾನು ನಡುಗಿದೆ. ಆ ಸಿಡಿಲಿಗೆ ಆಚೆ ಮನೆಯ ಹಲಸಿನ
ಮರವೊಂದು ರಸ್ತೆಗೆ ಮುಖ ಮಾಡುತ್ತಾ ದೊಪ್ಪನೆ ಬಿದ್ದು ಬಿಟ್ಟಿತು. ಮಳೆಯು ತನ್ನ ಶೌರ್ಯವನ್ನು ಬಿಟ್ಟು ಕೊಡದೇ
ಇನ್ನೂ ರಭಸವಾಗಿ ಬೀಸುತ್ತುಲೇ ಇತ್ತು. ಅದರ ಶೌರ್ಯ ಹೆಚ್ಚಾದಂತೆ ನನ್ನ ಹಟವೂ ಹೆಚ್ಚುತ್ತಿತ್ತು. ಆಗಲೇ ಒಂದು
ಬಸ್ಸು ನನ್ನ ಕಾಲ ಬುಡದಲ್ಲೇ ಕೆಸರು ನೀರನ್ನು ಹಾರಿಸಿತು. ಹತ್ತಿರದ ಮನೆಯಿಂದ ಹುಡುಗನೊಬ್ಬ ಟಾರ್ಚ್ ಹಿಡಿದು
ಮನೆಯ ಹಂಚುಗಳನ್ನು ಸರಿಪಡಿಸುತ್ತಿದ್ದ. ಅವನು ಕೊಡೆ ಹಿಡಿದಿದ್ದರೂ ಸಂಪೂರ್ಣ ಒದ್ದೆಯಾಗಿ ಹೋಗಿದ್ದ.
ಆಗ ಸಮಯ ಹತ್ತು ಕಳೆಯುತ್ತಿತ್ತು. ನಾನು ನಿಂತಿದ್ದ ಅಂಗಡಿಯವನೂ, ಎದುರಿನ ಅಂಗಡಿಯವನೂ
ಅಂಗಡಿ ಬಂದ್ ಮಾಡಿ ಬಸ್ ಹತ್ತಿ ಹೋದರು. ಈಗ ನನ್ನನ್ನು ಬಿಟ್ಟು ಆ ಪ್ರದೇಶ 'ದೆವ್ವದ ತಾಣ'ದಂತೆ
ಗೋಚರಿಸುತ್ತಿತ್ತು. ಸಿಡಿಲು ನನ್ನೊಂದಿಗೆ ಏನೋ ಕಿವಿಮಾತು ಹೇಳುತ್ತಾ ಗುಡಿಗಿದಂತೆ ಭಾಸವಾಗುತ್ತಿತ್ತು.
ವಿದ್ಯುತ್ ಕಂಬಗಳು ಹಾಗೆಯೇ ವಿದ್ಯುತ್ ಅನ್ನು ಕಾಣದೇ ಪರಿತಪಿಸುತ್ತಿತ್ತು. ಎದುರಿಗಿದ್ದ ದೊಡ್ದ ಮನೆಯ ಬೆಳಕೂ
ಆರಿ ಹೋಯಿತು. ಮಳೆರಾಯನೊಂದಿಗೆ ನನ್ನ ಹಟ ವ್ಯರ್ಥವೆಂದು ಅರಿತುಕೊಂಡೆ. ಅ ಹಟದಲ್ಲಿ ನನ್ನ ಕೈ ಹಿಡಿತದಲ್ಲಿದ್ದ
'ಮಿಕ್ಚರ್' ಖಾಲಿಯಾಗುತ್ತಲೇ ಇತ್ತು.
ಮೂರು ತಾಸು ಕಳೆದರೂ ಮಳೆ ಕಡಿಮೆಯಾಗದೇ ಇದ್ದಾಗ ನಿಶ್ಯಕ್ತನಾಗಿ ನನ್ನ ಹಟವನ್ನು ಬಿಡಬೇಕಾಯಿತು.
ನನ್ನ ಕೈಲಿದ್ದ ಮಿಕ್ಚರ್ ಈಗ ಪೂರ್ತಿಯಾಗಿ ಖಾಲಿಯಾಗಿತ್ತು. ಮಳೆಯಲ್ಲಿಯೇ ಮನೆಗೆ ಓಡಲು ಹೆಜ್ಜೆ ಹಾಕಿದೆ.
ಮೊದಲ ಹೆಜ್ಜೆಯೇ ಒಂದು ಹೊಂಡಕ್ಕೆ ಶರಣಾಗಿ ಕೆಸರನ್ನೆಲ್ಲಾ ಮೆತ್ತಿಕೊಂಡಿತು. ಮನೆಗೆ ತಲುಪುವಷ್ಟರಲ್ಲಿ
ನನ್ನ ಬಟ್ಟೆಗಳು ಸಂಪೂರ್ಣವಾಗಿ ನೀರಿನಿಂದ ತೊಯ್ದು ಹೋಗಿತ್ತು. ತಾಯಿ ನನ್ನ ಅವಸ್ಥಗೆ ಪರಿತಪಿಸಿದಳು.
'ಮಿಕ್ಚರ್' ಬಗ್ಗೆ ಕೇಳಿದಾಗ ನಾನು ಹೇಳಿದ ಕಥೆಗೆ ಪುಟ್ಟ ಮಗುವಿನಂತೆ ಕಣ್ಣಾಡಿಸುತ್ತಾ ಕೇಳುತ್ತಾ ಆಶ್ಚರ್ಯಗೊಂಡಳು.