ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಬರಹ

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................

ಸುಡು ಬೇಸಿಗೆ, ರಣ ಬಿಸಿಲು. ಭಾಳ ದೊಡ್ಡ ಗದ್ದೆ ಬಯಲು. ನೆಲ ಎಲ್ಲ ಒಡಕು, ಕಾಲಿಟ್ಟಲ್ಲೆಲ್ಲ ಚುಚ್ಚುವ ಕೋಳೆ (ಭತ್ತ ಕೊಯ್ದಾದ ನಂತರ ಉಳಿಯುವ ಬುಡ). ಮಧ್ಯಾಹ್ನದ ಬಿಸಿಯಲ್ಲಿ ಗದ್ದೆ ಬಯಲಿನಲ್ಲಿ ನಡೆದು ಹೊರಟಿದ್ದೆ. ಸೆಖೆಯನ್ನ ಶಪಿಸುತ್ತ ಹೊರಟವನಿಗೆ ಇದ್ದಕ್ಕಿದ್ದಂತೆ ವಾತಾವರಣವೆಲ್ಲ ತಣ್ಣಗಾದಂತೆ ಅನ್ನಿಸಿತು. ಸಡನ್ನಾಗಿ ತಲೆ ಮೇಲೆ ಕರಿಮೋಡ ಕಟ್ಟಿದಂತೆ ಭಾಸ. ಹಿಂತಿರುಗಿ ನೋಡುತ್ತೇನೆ...................
ಎಪ್ಪತ್ತೇಳು ಹೆಡೆಗಳ ಆದಿಶೇಷ. ಅದರ ಬಿಚ್ಚಿದ ಹೆಡೆಯ ನೆರಳು ಪರ್ಲಾಂಗುಗಟ್ಟಲೆ ಅಗಲ ಹರಡಿತ್ತು. ಜೀವ ಅರ್ಧ ಹೋಗಿತ್ತು, ಧೈರ್ಯ ತಗೊಂಡೆ. ಕೈಮುಗಿದು ನಿಂತು ಭಕ್ತಿಯಿಂದ ಹೇಳಿಕೊಂಡೆ “ನಾಗರಾಜಾ, ನಾನೂ ಸುಬ್ರಹ್ಮಣ್ಯಕ್ಕೆ ನಡೆದುಕೊಳ್ಳುವವನೆ. ನನಗೇನೂ ಮಾಡಬೇಡ, ಬಿಟ್ಟುಬಿಡು” ಎಂದೆ.
ಮರುಕ್ಷಣವೇ ಆದಿಶೇಷ ಹೆಡೆ ಮಡಚಿತ್ತು (ಹಿಟಾಚಿ ಕೈ ಮಡಚಿದಂತೆ ಎಂಬ ಅಭಿನಯಪೂರ್ವಕ ವಿವರಣೆಯೊಂದಿಗೆ). ಬಂದಷ್ಟೇ ವೇಗದಲ್ಲಿ ಮರೆಯಾಗಿಹೋಗಿತ್ತು.
ನಿಮ್ಗೆ ಇದೆಲ್ಲ ಸುಳ್ಳು ಅಂತ ಕಾಣ್ಬಹುದು. ನನ್ಜೊತೆಗೆ ಗದ್ದೆ ಬಯಲಿಗೆ ಬಂದ್ರೆ ತೋರಿಸ್ತೇನೆ. ಇಷ್ಟು ವರ್ಷದ ನಂತರವೂ ಆದಿ ಶೇಷ ಹರಿದು ಹೋದ ಜಾಗ ಸುಮಾರು ೮-೧೦ ಫೂಟು ಅಗಲದ ಕಾಲಿಗೆಯಂತಾಗಿದೆ. ನೀವೇ ಬಂದು ನೋಡಿ.
..................................................................................