ಬರೀ ಸುಳ್ಳು ೩

ಬರೀ ಸುಳ್ಳು ೩

ಬರಹ

ನಮ್ಮೂರಿನ ಜಗತ್ಪ್ರಸಿದ್ಧ ‘ಪಂಚು’ವೊಬ್ಬನ ಸಾಹಸಗಾಥೆಯಿದು,...........

ಅದು ಅವತ್ತಿನ ಕಾಲ, ನೀವೆಲ್ಲ ಇನ್ನೂ ಹುಟ್ಟಿರ್ಲಿಲ್ಲ ಬಿಡಿ. ಅವಾಗೆಲ್ಲ ನಮ್ಗೆ ಬ್ಯಾಟೆಗೆ ಹೋಗೋ ಚಟ. ಅದೂ ಎಂಥ ಬ್ಯಾಟೆ, ಕರಿಕಾನಲ್ಲಿ ರಾತ್ರಿ ಪೂರ್ತಿ ಶಿಕಾರಿ - ನೆಲಗುದ್ದಿ ನೀರು ತೆಗೆಯೊ ಪ್ರಾಯ. ಮೇಲಿನಮನೆ ಯಂಕಣ್ಣ, ತುದಿಮನೆ ಗೋಪಾಲ, ಶೇಡಿಕೊಡ್ಲು ರಾಮಣ್ಣ, ನಾನು, ಹಿಂಗೆ ಏಳೆಂಟು ಜನ ಸೇರ್ಕಂಡು ಒಂದಿವಸ ಬ್ಯಾಟೆಗೆ ಹೋಗಿದ್ದಾಗ,....
ಒಂದು ದೊಡ್ಡ ಹಂದಿ ಹಿಂಡು ಕಣ್ಣಿಗೆ ಬಿತ್ತು. ನಾನು ರಾಮಣ್ಣ ಕೋವಿ ಹಿಡ್ಕಂಡು ಅರ್ಧ ಫರ್ಲಾಂಗು ಅಂತರದಲ್ಲಿ ನಿಲ್ಲೋದು, ಉಳಿದವರು ಹಂದಿಗಳನ್ನು ನಾವಿದ್ದಲ್ಲಿಗೆ ಅಟ್ಟಿಕೊಂಡು ಬರೋದು ಅಂತ ಪ್ಲಾನು. ಸರಿ, ನಾನು ಕೋವಿ ಹಿಡಿದೂ ರೆಡಿ. ಹೈ, ಹಚ, ಡುರ್ರ್ ಅಂತ ಹಂದಿ ಅಟ್ಟೊ ಶಬ್ದ. ಸರ್ರ್ ಭರ್ರ್ ಅಂಥ ಹಂದಿ ಓಡೊ ಸಪ್ಪಳ. ಆ ಶಬ್ದ ಹತ್ತಿರಾಗ್ತಾ ಇದ್ದಂಗೆ ಗುರಿ ಹಿಡಿದು ಗುಂಡು ಹಾರಿಸೋಕೆ ನಾನು ತಯಾರಾಗಿ ನಿಂತಿದ್ದೆ.
‘ಏಯ್, ನಿನ್ನ ಹಿಂದೆ ಬಂತು’ ಅಂತ ಯಾರೊ ಕೂಗಿದಂಗಾಯ್ತು. ಹಿಂದೆ ತಿರುಗಿದ್ರೆ ಎಮ್ಮೆ ಗಾತ್ರದ ಕಾಡುಹಂದಿ, ಓಡಿ ಬರ್ತಾ ಇತ್ತು, ನನ್ಗೂ ಅದಕ್ಕೂ ಒಂದೇ ಮಾರು ಅಂತರ, ಕೋವಿ ಗುರಿ ಮಾಡೋದಿಕ್ಕು ಟೈಮಿಲ್ಲ. ಏನು ಮಾಡ್ಲಿ, ಐಡಿಯಾ.... ಲುಂಗಿ ಎತ್ತಿಕಟ್ಟಿದ್ದೆನಲ್ಲಾ, ಸರ್ರನೆ ಕಾಲು ಕಿಸಿದು ನಿಂತುಬಿಟ್ಟೆ. ಬಂದ ಹಂದಿ ನನ್ನ ಕಾಲಡಿ ನುಸುಳಿ ಓಡಿತು. ಅದರ ಹಿಂದೇ ಇನ್ನೊಂದು, ಮತ್ತೊಂದು. ಸುಂಯ್ ಸೊಂಯ್ ಅಂತ, ಒಂದಲ್ಲ, ಎರಡಲ್ಲ, ಮೂರಲ್ಲ, ಬರೊಬ್ಬರಿ ಹದಿನೆಂಟು ಹಂದಿ ಸಾಲಾಗಿ ಕಾಲ ಕೆಳಗೆ ನುಸುಳಿ ಪಾರಾಗಿ ಬಿಟ್ಟವು.
ಅವತ್ತು ನನ್ನ ಕೈಲೇನಾದ್ರು ಕೋವಿ ಬದಲಿಗೆ ಒಂದು ಕತ್ತಿ ಇದ್ದಿದ್ದರೆ ಕಚ ಕಚ ಕಚ ಅಂತ ಹದಿನೆಂಟು ಹಂದೀದೂ ರುಂಡ ಕಡಿದು ಮಲಗಿಸಿಬಿಡುತ್ತಿದ್ದೆ.