ಬರುತ್ತಿದ್ದಾನೆ ಡಾ.ವಾಟ್ಸನ್!
ಬರುತ್ತಿದ್ದಾನೆ ಡಾ.ವಾಟ್ಸನ್!
ಐ ಬಿ ಎಮ್ ಕಂಪೆನಿ ವಾಟ್ಸನ್ ಎನ್ನುವ ಯೋಜನೆಯಡಿ ತೊಂಭತ್ತು ಸರ್ವರುಗಳು,2880ನಷ್ಟು ಸಂಸ್ಕಾರಕಗಳ ಜತೆ ಆನ್ಲೈನಿನಲ್ಲಿ ಸಿಗುವ ಸರ್ವರ್.ಇದು ಜನರ ಜತೆ ವ್ಯವಹರಿಸಿ,ಅವರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.ಇದು ಸಿದ್ಧವಾದಾಗ,ಜನರು ತಮ್ಮ ಕಾಯಿಲೆ-ಕಸಾಲೆಗಳ ವಿವರಗಳನ್ನು ವಿವರಿಸಿದರೆ,ಈ ಸರ್ವರ್ ವೈದ್ಯರಂತೆ ಅದಕ್ಕೆ ಯಾವ ರೋಗ ಕಾರಣ,ಚಿಕಿತ್ಸೆ ಏನು ಎಂದು ಸಲಹೆ ನೀಡಬಲ್ಲುದು.ಮುಂದೆ ಕಾನೂನು ಮತ್ತು ಜನ ಸಾಮಾನ್ಯರ ಇತರ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದು ಸಮರ್ಥವಾಗುವಂತೆ ಮಾಡುವ ಗುರಿ ಸಂಶೋಧಕರದ್ದು.ಕೊಲಂಬಿಯಾ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳ ಸಂಶೋಧಕರ ಅಧ್ಯಯನದ ಫಲವಿದು.ಐ ಬಿ ಎಂ ಮತ್ತು ನ್ಯುಅನ್ಸ್ ಕಮ್ಯುನಿಕೇಶನ್ಗಳ ಜಂಟಿ ಯೋಜನೆಯಿದು.ಈ ನಡುವೆ,ಐಬಿಎಂ ವಾಟ್ಸನ್ ಅನ್ನು ಜನರ ಗ್ರಾಹಕ ಸಲಹೆಗಳನ್ನು ನೀಡಿ,ಅವರಿಗೆ ಖರೀದಿ ಸಲಹೆಗಳನ್ನೂ ನೀಡುವಂತೆ ಅಭಿವೃದ್ಧಿ ಪಡಿಸುವಂತೆ ಇಲೆಕ್ಟ್ರಾನಿಕ್ಸ್ ಕಂಪೆನಿಯೊಂದಕ್ಕೆ ಕೇಳಿದೆ ಎಂದು ಸುದ್ದಿಯಿದೆ.
--------------------------------
ಆಟ್ರಿಕ್ಸ್ 4ಜಿ ಫೋನ್
ಮೊಟೊರೊಲಾ ಆಟ್ರಿಕ್ಸ್ ಎನ್ನುವ ಮೊಬೈಲ್ ಫೋನನ್ನು ಮಾರ್ಚಿನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.ಮೊದಲ್ ನೋಟಕ್ಕೆ ಇದು ಆಂಡ್ರಾಯಿಡ್ ಫೋನಿನ ಹಾಗೆ ಕಾಣುತ್ತದೆ.ಆದರಿದರಲ್ಲಿ ಕೆಲವು ವಿಶೇಷತೆಗಳಿವೆ.ಇದರಲ್ಲಿ ಬೆರಳಚ್ಚಿನ ಮೂಲಕ ಮೊಬೈಲನ್ನು ಲಾಕ್ ಮಾಡುವ ಸವಲತ್ತಿದೆ.ಮೊಟೊರೊಲಾದ ಡಾಕ್ ಜತೆಗಿದನ್ನು ಬಳಸಿದರೆ,ಲ್ಯಾಪ್ಟಾಪ್ ಸಾಧನವನ್ನು ಇದರ ಜತೆ ಬಳಸಬಹುದು.ಕರೆಗಳನ್ನು ಲ್ಯಾಪ್ಟಾಪಿನ ಮೂಲಕವೇ ಮಾಡಲು ಅವಕಾಶವಿದೆ.ಆಟ್ರಿಕ್ಸ್ ಫೋನ್ ಅತ್ಯಂತ ವೇಗದ ಬಳಕೆಗೆ ಅನುವು ಮಾಡುತ್ತದೆ.ಇದರಲ್ಲಿ ತಂತ್ರಾಂಶಗಳನ್ನು ತೆರೆಯಲು ಅತ್ಯಂತ ಕಡಿಮೆ ಸಮಯ ಸಾಕು.ಕರೆಗಳನ್ನು ಡೆಸ್ಕ್ಟಾಪಿನ ಮೂಲಕವೂ ಮಾಡಬಹುದು.ಇದರ ವೀಡಿಯೋ ವೀಕ್ಷಣೆ ಅತ್ಯಂತ ಸ್ಪಷ್ಟತೆಯುಳ್ಳದ್ದು.ಟಿವಿಯ ಜತೆ ಮೊಬೈಲನ್ನು ಬಳಸಲು ಹೈಡೆಫಿನಿಶನ್ ಡಾಕ್ ಲಭ್ಯವಿದೆ.ಇದರ ಮೇಲೆ ಮೊಬೈಲ್ ಇರಿಸಿದರೆ,ಟಿವಿಯಲ್ಲಿ ಮೊಬೈಲ್ ಫೋನಿನಲ್ಲಿರುವ ವೀಡಿಯೋಗಳನ್ನು ವೀಕ್ಷಿಸಬಹುದು.ಇದರ ಬೆಲೆ ಇನ್ನೂರು ಡಾಲರುಗಳು.ಡಾಕ್ ಲಂಗರು ಸಾಧನದ ಜತೆ ಇದರ ಬೆಲೆ ನಾಲ್ಕುನೂರು ಡಾಲರುಗಳು.
--------------------------
ಮೊಬೈಲ್ ಸಂಕೇತ ಶಕ್ತಿಯುತವಾಗಿದೆಯೇ?
ಒಂದು ಜಾಗದಲ್ಲಿ ಮೊಬೈಲ್ ಟವರ್ ಇದ್ದ ಮಾತ್ರಕ್ಕೆ ಸುತ್ತಮುತ್ತಲೂ ಶಕ್ತಿಯುತ ಸಂಕೇತಗಳು ಸಿಗುತ್ತವೆಂದಿಲ್ಲ.ಕೆಲವೊಮ್ಮೆ ಬೃಹತ್ ಕಟ್ಟಡಗಳೋ,ಗುಡ್ಡಗಳ ಕಾರಣ ಕೆಲವೆಡೆ ಸಂಕೇತ ಅಲಭ್ಯವಾಗಬಹುದು.ಆದರೆ ಸಾಮಾನ್ಯವಾಗಿ ಕವರೇಜ್ ಜಾಗವನ್ನು ಮೊಬೈಲ್ ಟವರುಗಳನ್ನು ಬಳಸಿಯೇ ಮಾಡುವುದು ಸಾಮಾನ್ಯ.ಈಗ ರೂಟ್ಮ್ಯಾಟ್ರಿಕ್ಸ್ ಎನ್ನುವ ಕಂಪೆನಿಯು,ಇದಕ್ಕೊಂದು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.ಇದನ್ನು ಮೊಬೈಲಿನಲ್ಲಿ ಅನುಸ್ಥಾಪಿಸಿದರೆ,ಮೊಬೈಲ್ ಇರುವ ಸ್ಥಳದ ಸಂಕೇತದ ಮಟ್ಟದ ಬಗ್ಗೆ
ರೂಟ್ಮ್ಯಾಟ್ರಿಕ್ಸ್ ಕಂಪೆನಿಗೆ ಮಾಹಿತಿ ಸಿಗುತ್ತಿರುತ್ತದೆ.ಹೀಗೆ ಬಳಕೆದಾರರಿಂದ ಬರುವ ಮಾಹಿತಿಗಳನ್ನು ಕಲೆ ಹಾಕಿ,ಬೇರೆ ಬೇರೆ ಸೇವೆ ನೀಡುವ ಕಂಪೆನಿಗಳ ಸಂಕೇತದ ಗುಣಮಟ್ಟ,ವಿವಿಧ ಸ್ಥಳಗಳಲ್ಲಿ ಹೇಗಿದೆ ಎಂದು ತನ್ನ ಅಂತರ್ಜಾಲ ತಾಣದಲ್ಲಿ ತೋರಿಸಲು ಸಾಧ್ಯವಾಗುತ್ತದೆ.ಇದು ಜನರ ಮೊಬೈಲ್ ಫೋನುಗಳಿಂದ ಬಂದ ಮಾಹಿತಿಯಿಂದಲೇ ಕಲೆ ಹಾಕಿದ ಮಾಹಿತಿಯಾದ್ದರಿಂದ ಅತ್ಯಂತ ನಿಖರ ಮಾಹಿತಿಯಾಗಿರುತ್ತದೆ.ಇದರಲ್ಲಿ ಯಾವುದೇ ಉತ್ಪೇಕ್ಷೆ ಇರದು.
---------------------------------
ಡಯಸ್ಪೋರಾ:ಸುಧಾರಿತ ಫೇಸ್ಬುಕ್
ನಿಮ್ಮ ಖಾಸಗಿತನವನ್ನು ಗೌರವಿಸುವ ಪೇಸ್ಬುಕ್ನ್ನು ಹೋಲುವ ಸಾಮಾಜಿಕ ಜಾಲತಾಣದ ಅವತಾರವೇ ಡಯಸ್ಪೋರಾ.ಇದರಲ್ಲಿ ನಿಮ್ಮ ಜತೆ ಸಂಬಂಧವಿರಿಸಿಕೊಂಡವರನ್ನು ಆಸ್ಪೆಕ್ಟ್ ಎಂದು ಕರೆಯಲಾಗುತ್ತದೆ.ಕೆಲಸದ ಸ್ಥಳ,ಕುಟುಂಬ,ಗೆಳೆಯರು ಮತ್ತು ಅಂತರ್ಜಾಲದ ಮೂಲಕ ಪರಿಚಯವಾದರು ಎಂದು ಪರಿಚಯಸ್ಥರನ್ನು ವಿಭಾಗಿಸಿರುವುದು ಡಯಸ್ಪೋರಾದ ವಿಶೇಷತೆ.ಯಾವ ಗುಂಪಿನ ಜತೆ ಏನನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿಗದಿ ಪಡಿಸಲು ಸಾಧ್ಯವಾಗುವುದು ಈ ತಾಣದ ವಿಶೇಷತೆ.ವ್ಯಕ್ತಿಯ ಖಾಸಗಿತನಕ್ಕೆ ಮರ್ಯಾದೆ ನೀಡುವುದು ಇಲ್ಲಿನ ಹೆಗ್ಗಳಿಕೆ.ಉಳಿದಂತೆ ಪೇಸ್ಬುಕ್ ತಾಣದ ಹಾಗೆ ಈ ತಾಣವನ್ನು ಬಳಸಬಹುದು.
----------------------------------
ಗೂಗಲ್ ಕ್ರೋಮಿನ ಬ್ರೌಸರ್ ಬೀಟಾ ಆವೃತ್ತಿ
ಗೂಗಲ್ ಕ್ರೋಮಿನ ಬ್ರೌಸರ್ ಬೀಟಾ ಆವೃತ್ತಿ ಇದೀಗ ಲಭ್ಯವಾಗಿದೆ.ಇದು ಹತ್ತನೇ ಆವೃತ್ತಿಯ ಪರೀಕ್ಷಾರ್ಥ ಬಿಡುಗಡೆಯಾಗಿದೆ.ಜಾವಾ ಸ್ಕ್ರಿಪ್ಟನ್ನು ಹಿಂದಿನ ಆವೃತ್ತಿಗಳಲ್ಲಿ ಸಾಧ್ಯವಾಗುವುದಕ್ಕಿಂತ ಶೇಕಡಾ ಅರುವತ್ತರಷ್ಟು ವೇಗದಲ್ಲಿ ಗೂಗಲ್ ಕ್ರೋಮ್ ನಿಭಾಯಿಸಬಲ್ಲುದು.ಗೂಗಲ್ ಅಪ್ಲಿಕೇಶನ್ ಸ್ಟೋರುಗಳಿಗೆ ಗೂಗಲ್ ಕ್ರೋಂ ಬಳಕೆದಾರರಿಗೆ ಮಾತ್ರಾ ಪ್ರವೇಶಾಧಿಕಾರ ಸಿಗುತ್ತದೆ.ವಿಂಡೋಸ್,ಲೀನಕ್ಸ್ ಮತ್ತು ಮ್ಯಾಕ್ ಆಪರೇಟಿಂಗ್ ವ್ಯವಸ್ಥೆಗಳ ಆವೃತ್ತಿಗಳೂ ಲಭ್ಯವಾಗಿವೆ.ವಿಡಿಯೋಗಳನ್ನು ತೋರಿಸುವಾಗ,ಕಡಿಮೆ ಬ್ಯಾಟರಿ ಬಳಕೆ ಮತ್ತು ದಕ್ಷ ಸಂಸ್ಕಾರಕ ಬಳಕೆ ಇವು ಗೂಗಲ್ ಕ್ರೋಮಿನ ಹೆಗ್ಗಳಿಕೆ ಎನ್ನಲಾಗಿದೆ.ಉಳಿದ ಬ್ರೌಸರುಗಳಿಗೆ ಹೋಲಿಸಿ,ಪ್ರಯೋಗಗಳಿಗೊಡ್ಡಿ ಇದನ್ನು ಪುಷ್ಟೀಕರಿಸ ಬೇಕಿದೆ.ಹೊಸ ಎಚ್ ಟಿ ಎಂ ಎಲ್ 5 ಮಾನಕಕ್ಕೆ ಕ್ರೋಂ ಹೆಚ್ಚು ಸರಿ ಹೊಂದುವ ಬ್ರೌಸರ್ ಎನ್ನುವುದು ಶ್ರುತ ಪಟ್ಟಿದೆ.
----------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಪ್ಲಾನೆಟೇರಿಯಂ ಅನ್ನು ಕಂಪ್ಯೂಟರಿನಲ್ಲೇ ದರ್ಶನ ಮಾಡಿಸುವ ತಂತ್ರಾಂಶ ಯಾವುದು?
*ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಿದರೆ ಆಗುವ ಲಾಭಗಳೇನು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS19 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಶಾಲಾ ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ಲೀನಕ್ಸ್ ವಿತರಣೆ ಸ್ಕೋಓಲ್ ಓಎಸ್(http://schoolos.org) ನೋಡಿ.
*ಶಿಕ್ಷಣಕ್ಕೆ ಸಂಬಂಧಿಸಿದ ಪದಕ್ಕೆ ತಳಕು ಹಾಕಿರುವ ಲೀನಕ್ಸ್ ವಿತರಣೆ ಎಜ್ಯುಬುಂಟು.ಬಹುಮಾನ ಗೆದ್ದವರು ಸಾತ್ವಿಕ್,ಬೆಂಗಳೂರು.ಅಭಿನಂದನೆಗಳು.
-------------------------------------------------
ಟ್ವಿಟರ್ ಚಿಲಿಪಿಲಿ
*ರಾಜಾರನ್ನು ಪೆಟ್ರೋಲಿಯಂ ಮಂತ್ರಿ ಮಾಡಿದ್ದರೆ,2001ರ ಬೆಲೆಯಲ್ಲಿ ಪೆಟ್ರೋಲ್ ಪಡೆವ ಅದೃಷ್ಟ ಸಿಗುತ್ತಿತ್ತೋ ಏನೋ.
*ಮ್ಯಜೀಷಿಯನ್ ಮತ್ತು ರಾಜಕಾರಣಿ,ಈರ್ವರೂ ಜನರ ಗಮನವನ್ನು ತಾವು ಮಾಡುತ್ತಿರುವುದರಿಂದ ಅತ್ತ ಸರಿಸಬೇಕು.
*ಮೊಬೈಲ್ ಸರ್ವವ್ಯಾಪಿ,ಸರ್ವವ್ಯಾಧಿಯೂ ಹೌದು...
*ರಾಜಾಜಿ ಬಗ್ಗೆ ಗೊತ್ತಿಲ್ಲ..ರಾಜಾ.ಜಿ ಬಗ್ಗೆ ಗೊತ್ತು..
*ಇಸ್ರೋದವರು ಚಂದ್ರನ ಮೇಲೆ ನೀರು ಮತ್ತು ಐಸ್ ಇದೆ ಅಂತ ಪತ್ತೆ ಹಚ್ಚಿದ್ದಾರೆ..ಚಿಪ್ಸು,ವಿಸ್ಕಿ ಇಲ್ಲಿಂದ ಒಯ್ದರಾಯಿತು.