ಬರುವಳು..ಬರುವಳು..ಬರುವಳು…

ಬರುವಳು..ಬರುವಳು..ಬರುವಳು…

ಪುಸ್ತಕದ ಲೇಖಕ/ಕವಿಯ ಹೆಸರು
ಸ್ಟ್ಯಾನಿ ಲೋಪಿಸ್, ಕಾರ್ಗಲ್
ಪ್ರಕಾಶಕರು
ಅಪ್ಸರ ಪ್ರಕಾಶನ, ರಾಮಾನುಜನ್ ರಸ್ತೆ, ಮೈಸೂರು-೫೭೦೦೦೪
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

ಸ್ಟ್ಯಾನಿ ಲೋಪಿಸ್ ಅವರು ತಮ್ಮ ನೂತನ ಕಾದಂಬರಿ “ಬರುವಳು...ಬರುವಳು...ಬರುವಳು..." ಇದರಲ್ಲಿ ದುಬೈನ ಶಿಕ್ಷಣ ವ್ಯವಸ್ಥೆ, ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು ಹೆಣ್ಣನ್ನು ಸ್ವಾಗತಿಸಲು ಕಾಯುವುದು, ಇತ್ಯಾದಿ ಅಂಶಗಳನ್ನ ಸುಂದರವಾಗಿ ಚಿತ್ರಿಸುತ್ತಾರೆ. ಈ ಕೃತಿಗೆ ಖ್ಯಾತ ಲೇಖಕ ನಾ. ಡಿಸೋಜ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಬರಹದ ಆಯ್ದ ಭಾಗ ನಿಮ್ಮ ಓದಿಗಾಗಿ...

“ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ದುಬೈ ಅನ್ನುವುದು ಎಲ್ಲರಿಗೂ ತಿಳಿದಿರುವ ದೇಶ. ಇಲ್ಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವ ಸುಧಾಳ ಕತೆ ಇದು. ಸುಧಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಕೊಂಡವಳು ಭಾರತ ತೊರೆದು ಅಲ್ಲಿಗೆ ಹೋಗಿ ನೆಲಸಿದ ನಂತರ ಅವಳ ಬದುಕು ಎಲ್ಲರ ಬದುಕಿನಂತೆ ಸಾಗುವಾಗ ಇಡೀ ವಿಶ್ವವನ್ನ ಕಾಡಲು ಬಂದ ಕೆಟ್ಟ ಕಾಯಿಲೆ ಇವಳನ್ನ, ಇವಳ ಹತ್ತಿರದ ಸಂಬಂಧಿಕರನ್ನು ಕಾಡಲು ಆಗಮಿಸುತ್ತದೆ. ಆ ಹೊತ್ತಿಗೆ ಕಥಾ ನಾಯಕಿ ಸುಧಾ ಗರ್ಭವತಿಯಾಗಿ ದೇಶಕ್ಕೆ ತಿರುಗಿ ಬಂದಿರುತ್ತಾಳೆ. ಸುಧಾ ಹಾಗೂ ಅವಳ ಸಂಬಂಧಿಕರು ಇಡೀ ವಿಶ್ವವನ್ನ ಆಕ್ರಮಿಸುತ್ತಿರುವ ಕರೋನ ರೋಗದ ಭೀತಿ ಎಲ್ಲರನ್ನು ಆಕ್ರಮಿಸಿಕೊಳ್ಳುತ್ತದೆ.

ದುಬೈನ ವೈದ್ಯರು ಸುಧಾಳ ಹೊಟ್ಟೆಯಲ್ಲಿ ಜನ್ಮತಾಳಲಿರುವುದು ಹೆಣ್ಣು ಎಂಬ ವಿಷಯವನ್ನು ಪ್ರಕಟಿಸಿದಾಗ ಸುಧಾಳ ಬಳಗ ತಲ್ಲಣಕ್ಕೆ ಒಳಗಾಗುತ್ತದೆ. ಭಾರತದ ವೈದ್ಯಕೀಯ ನಿಯಮ ಹೀಗೆ ಹುಟ್ಟುವ ಮಗು ಹೆಣ್ಣೋ ಗಂಡೋ ಎಂಬುದನ್ನ ಗುಟ್ಟಾಗಿ ಇಟ್ಟರೆ ದುಬೈನ ಆಸ್ಪತ್ರೆಗಳು ಈ ಅಂಶವನ್ನು ಎಲ್ಲರಿಗೂ ತಿಳಿಸುವುದು ಸುಧಾಳ ಕುಟುಂಬಕ್ಕೆ ಒಂದು ಆತಂಕದ ವಿಷಯವಾಗುತ್ತದೆ. ಬರಲಿರುವವರು ಹೆಣ್ಣು ಎಂಬುದು ಸುಧಾನ ಕುಟುಂಬಕ್ಕೆ ಒಂದು ಆತಂಕದ ವಿಷಯವಾದಾಗ ಸುಧಾಳ ಮಗಳು ಬರುತ್ತಾಳೆ... ಬರುತ್ತಾಳೆ.... ಬರುತ್ತಾಳೆ.... ಎಂದು ಮಗುವಿಗಾಗಿ ಕಾಯುತ್ತಾಳೆ.

ಸ್ಟ್ಯಾನಿ ಲೋಪಿಸ್ ಇಲ್ಲಿಯ ದುಬೈನ ಶಿಕ್ಷಣ ವ್ಯವಸ್ಥೆ , ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು ಹೆಣ್ಣನ್ನು ಸ್ವಾಗತಿಸಲು ಕಾಯುವುದು, ಇತ್ಯಾದಿ ಅಂಶಗಳನ್ನ ಸುಂದರವಾಗಿ ಚಿತ್ರಿಸುತ್ತಾರೆ. ಇನ್ನೇನು ಹುಟ್ಟಲಿರುವ ಮಗು ಹೆಣ್ಣು ಎಂದು ಗೊತ್ತಿದ್ದೂ ಆಕೆಗಾಗಿ ಕಾಯುವ ಈ ಬದಲಾದ ಮನೋಭಾವವನ್ನ ಲೇಖಕರು ಸಹಜವಾಗಿ ತರುತ್ತಾರೆ. ಇದಕ್ಕಾಗಿ ನಾನು ಲೇಖಕರನ್ನ ಅಭಿನಂದಿಸುತ್ತೇನೆ.”

೮೮ ಪುಟಗಳ ಪುಟ್ಟ ಕಾದಂಬರಿಯು ವಿದೇಶದಲ್ಲಿನ ವೈದ್ಯಕೀಯ ಪದ್ಧತಿ, ಅಲ್ಲಿ ಗರ್ಭದಲ್ಲಿರುವ ಶಿಶುವಿನ ಲಿಂಗವನ್ನು ತಿಳಿಸುವ ವ್ಯವಸ್ಥೆ, ಗರ್ಭಿಣಿಯಾಗಿರುವಾಗಲೇ ತನಗೆ ಹುಟ್ಟುವ ಮಗು ಯಾವುದು ಎಂದು ತಿಳಿದ ನಂತರ ತಾಯಿ ಹಾಗೂ ಮನೆಯವರ ಮನಸ್ಥಿತಿಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.