ಬರೆದಂತೆ ಬದುಕಿದ ಕವಿ- ಬ.ಗಿ.ಯಲ್ಲಟ್ಟಿ

ಬರೆದಂತೆ ಬದುಕಿದ ಕವಿ- ಬ.ಗಿ.ಯಲ್ಲಟ್ಟಿ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ಬ.ಗಿ.ಯಲ್ಲಟ್ಟಿಯವರ ಕವನವನ್ನು ಪ್ರಕಟಿಸಲು ಆಯ್ದುಕೊಂಡು ಯಲ್ಲಟ್ಟಿಯವರ ಬಗ್ಗೆ ಅಧಿಕ ಮಾಹಿತಿಗಾಗಿ ಹುಡುಕಾಡುತ್ತಿರುವಾಗ ಅವರ ಜೀವನದಲ್ಲಿ ನಡೆದ ಪ್ರಸಂಗವೊಂದು ನನ್ನ ಗಮನಕ್ಕೆ ಬಂತು. ಈ ಪ್ರಸಂಗವನ್ನು ಹಂಚಿಕೊಂಡವರು ಸಾಹಿತಿ ಬನಹಟ್ಟಿಯ ಶ್ರೀ ಜಯವಂತ ಕಾಡದೇವರ ಇವರು. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಆ ಪ್ರಸಂಗವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. 

ಬ.ಗಿ.ಯಲ್ಲಟ್ಟಿಯವರು ತಮ್ಮ ಕೌಟುಂಬಿಕ ಕಾರಣಗಳಿಂದ ಹೆಚ್ಚು ಕಲಿಯುವ ಆಸೆಯಿದ್ದರೂ ಅದರಿಂದ ವಂಚಿತರಾಗುತ್ತಾರೆ. ಬರೀ ಇಂಟರ್ ಮೀಡಿಯೆಟ್ ಪಾಸಾಗಿದ್ದ ಅವರಿಗೆ ಎಸ್.ಎಂ. ಅಂಗಡಿ ಎಂಬ ಸಹೃದಯ ಮುಖ್ಯೋಪಾಧ್ಯಾಯರು ರಬಕವಿಯ ಪ್ರೌಢ ಶಾಲೆಯಲ್ಲಿ ಕೆಲಸ ಕೊಡುತ್ತಾರೆ. ನಂತರದ ದಿನಗಳಲ್ಲಿ ಅವರು ವೆಲ್ಲಿಂಗ್ಟನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಅಕ್ಕಲ ಕೋಟೆಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದರು. ಅದಕ್ಕೆ ಅರ್ಜಿ ಹಾಕಿದ ಇವರಿಗೆ ಸಂದರ್ಶನದ ಕರೆ ಬಂತು. ಆದರೆ ಅನಿವಾರ್ಯ ತೊಂದರೆಗಳಿಗೆ ಸಿಲುಕಿ ಯಲಟ್ಟಿಯವರು ಸಂದರ್ಶನಕ್ಕೆ ತಲುಪುವಾಗ ತಡವಾಗಿ ಹೋಗಿತ್ತು. ಆಯ್ಕೆ ಪ್ರಕ್ರಿಯೆಗಳು ಮುಗಿದು ಹೋಗಿ ಬೇರೊಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದರು. 

ಅಭ್ಯರ್ಥಿ ಆಯ್ಕೆಯಾಗಿದ್ದರೂ ಇನ್ನೂ ಕೆಲಸದ ಆದೇಶ ಕೊಡದೇ ಇದ್ದ ಕಾರಣವನ್ನು ತಿಳಿದು ಯಲ್ಲಟ್ಟಿಯವರ ಬಗ್ಗೆ ಕೆಲವರು ಆಡಳಿತ ಮಂಡಳಿಯವರಿಗೆ ತಿಳಿಸುತ್ತಾರೆ. ಆ ಸಮಯ ಯಲ್ಲಟ್ಟಿಯವರಿಗೆ ೫೦ ವರ್ಷ ಪ್ರಾಯವಾಗಿದ್ದ ಕಾರಣ (ಅಂದಿನ ಕಾಲದಲ್ಲಿ ಕೆಲಸಕ್ಕೆ ಸೇರಲು ಗರಿಷ್ಟ ಪ್ರಾಯವಿರಲಿಲ್ಲ) ಅವರ ಮೇಲೆ ಕರುಣೆ ಬಂದು ಆಡಳಿತ ಮಂಡಳಿ ಆ ನೌಕರಿಯನ್ನು ಯಲ್ಲಟ್ಟಿಯವರಿಗೇ ನೀಡುವುದಾಗಿ ತೀರ್ಮಾನಿಸುತ್ತಾರೆ. ಮೊದಲು ಆಯ್ಕೆಗೊಂಡ ಅಭ್ಯರ್ಥಿಯನ್ನು ಬದಲಾಯಿಸಿ ಯಲ್ಲಟ್ಟಿಯವರನ್ನು ನೇಮಕ ಮಾಡುವಂತೆ ಆದೇಶ ನೀಡುತ್ತಾರೆ. ಇದನ್ನು ಅರಿತ ಯಲ್ಲಟ್ಟಿಯವರು ಆಡಳಿತ ಮಂಡಳಿಯವರನ್ನು ಕಂಡು ‘ಮತ್ತೊಬ್ಬರ ಹೊಟ್ಟೆಯ ಮೇಲೆ ಕಲ್ಲು ಹಾಕಿ ನಾನು ಬದುಕು ಕಂಡುಕೊಳ್ಳುವುದು ತಪ್ಪು. ನಾನು ಈಗಾಗಲೇ ಒಂದು ಶಾಲೆಯಲ್ಲಿ ನೌಕರಿ ಮಾಡುತ್ತಿದ್ದೇನೆ. ಈಗಾಗಲೇ ಆಯ್ಕೆಯಾದ ಅಭ್ಯರ್ಥಿಯನ್ನೇ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಿರಿ” ಎನ್ನುತ್ತಾರೆ.

ಅವರ ಸಮಜಾಯಿಷಿಯಿಂದ ಆಡಳಿತ ಮಂಡಳಿ ದಂಗಾಗಿ ಹೋಗುತ್ತದೆ. ಒಂದು ಕೆಲಸಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಲು ತಯಾರಿರುವ ಈ ಕಾಲದಲ್ಲಿ, ಸಿಗುತ್ತಿದ್ದ ಕೆಲಸವನ್ನು ಬೇರೆಯವರ ಮೇಲಿನ ಕರುಣೆಯಿಂದ ಬಿಟ್ಟು ಹೋಗುತ್ತಿರುವುದು ಅವರಿಗೆಲ್ಲಾ ಅಚ್ಚರಿಯಾಗಿ ತೋರುತ್ತದೆ. 

ಆದರೆ ಯಲ್ಲಟ್ಟಿಯವರ ಈ ಪ್ರಾಮಾಣಿಕತೆ ವ್ಯರ್ಥವಾಗುವುದಿಲ್ಲ. ಅಕ್ಕಲ ಕೋಟೆ ಕಾಲೇಜಿನ ಪ್ರಾಂಶುಪಾಲರು ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನ ಪ್ರಾಂಶುಪಾಲರಿಗೆ ಯಲ್ಲಟ್ಟಿಯವರ ಬಗ್ಗೆ ಶಿಫಾರಸು ಮಾಡಿ ಪತ್ರ ಬರೆಯುತ್ತಾರೆ. ಕೆಲವೇ ದಿನಗಳಲ್ಲಿ ಯಲ್ಲಟ್ಟಿಯವರಿಗೆ ಆ ಕಾಲೇಜಿನಿಂದ ಪ್ರಾಧ್ಯಾಪಕರಾಗಲು ಆಹ್ವಾನ ಬಂತು. 

‘ದೇವನ ಮನೆಯಿದು ಈ ಜಗವೆಲ್ಲ, ಬಾಡಿಗೆದಾರರು ಜೀವಿಗಳೆಲ್ಲಾ’ ಹಾಡನ್ನು ಬರೆದು ಖ್ಯಾತಿ ಪಡೆದ ಕವಿ ಬ.ಗಿ.ಯಲ್ಲಟ್ಟಿಯವರು ತಮ್ಮ ಬರಹದಂತೆಯೇ ಜೀವನವನ್ನೂ ನಡೆಸಿದ್ದರು.

ಚಿತ್ರ ಕೃಪೆ: ಅಂತರ್ಜಾಲ ತಾಣ