ಬರೆದು ಕಲಿಯುವುದು ಒಳ್ಳೆಯದು !

ಬರೆದು ಕಲಿಯುವುದು ಒಳ್ಳೆಯದು !

“ಕೆಟ್ಟ ಅಕ್ಷರದ ಬರವಣಿಗೆ ಅಪಕ್ಷ ಹಾಗೂ ಅಪೂರ್ಣ ಶಿಕ್ಷಣದ ಚಿಹ್ನೆ. ಇದನ್ನು ಸರಿಪಡಿಸಲು ಪ್ರಯತ್ನಿಸುವುದು ಈಗಾಗಲೇ ರಚನೆಯಾಗಿರುವ ಮಣ್ಣಿನ ಮಡಕೆಯೊಂದಕ್ಕೆ ಹಸಿ ಕೆಸರು ಮೆತ್ತಿದಂತೆ" -ಮಹಾತ್ಮ ಗಾಂಧೀಜಿ

ಮಹಾತ್ಮರ ಈ ಮಾತು ಅಕ್ಷರಶಃ ಸತ್ಯ. ನನ್ನ ಜೀವನದಲ್ಲಿ ನಡೆದ ಒಂದು ಘಟನೆ ಹೇಳಿ, ಬರಹ ಮುಂದುವರೆಸುವೆ. ನಾನು ಹತ್ತನೇ ತರಗತಿಯವರೆಗೆ ಯಾವ ಪರೀಕ್ಷೆಗೂ ಬರೆದು ಕಲಿತವನೇ ಅಲ್ಲ. ಬರೆಯುವುದು ಏನಿದ್ದರೂ ಶಾಲೆಯಲ್ಲಿ ನೋಟ್ಸ್ ಕೊಡುವಾಗ ಮಾತ್ರ ಎನ್ನುವುದು ನನ್ನ ಧೋರಣೆಯಾಗಿತ್ತು. ಆಗೆಲ್ಲಾ ಟೀಚರ್ ಗಣಿತ ವಿಷಯವನ್ನು ಬರೆದು ಕಲಿಯ ಬೇಕೆಂದು ಆಗಾಗ ನಮಗೆ ಜ್ಞಾಪಿಸುತ್ತಿದ್ದರು. ಕೂಡಿಸು, ಕಳೆ ಅಂತಹ ಲೆಕ್ಕಾಚಾರಗಳನ್ನು ಬರೆದು ಮಾಡಿದಾಗ ಅದರಲ್ಲಿ ತಪ್ಪಾಗುವ ಸಾಧ್ಯತೆ ಕಡಿಮೆ. ಗಣಿತ ವಿಷಯಕ್ಕೆ ಮಾತ್ರ ಆಗ (೯೦ರ ದಶಕದಲ್ಲಿ) ಪೂರ್ತಿ ಅಂಕಗಳನ್ನು ಕೊಡುತ್ತಿದ್ದರು. ಈಗ ಹಾಗಲ್ಲ, ಕನ್ನಡ, ಇಂಗ್ಲಿಷ್ ವಿಷಯಕ್ಕೂ ಪೂರ್ತಿ ಅಂಕಗಳು ದೊರೆಯುತ್ತವೆ. ಬಹುತೇಕ ವಿದ್ಯಾರ್ಥಿಗಳ ಅಂಕಗಳು ೯೦ ಶೇಕಡಕ್ಕೂ ಮಿಕ್ಕಿಯೇ ಇರುತ್ತದೆ. 

ಟೀಚರ್ ಹೇಳಿದ ಬರೆದು ಕಲಿಯುವ ವಿಷಯವನ್ನು ನಾನಂತೂ ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಹತ್ತನೇ ತರಗತಿಯ ಗಣಿತ ಪರೀಕ್ಷೆಗೂ ಕೇವಲ ಓದಿ (?!) ಹೋಗಿ ಬರೆದು ಫಸ್ಟ್ ಕ್ಲಾಸ್ ಅಂಕಗಳನ್ನು ಪಡೆದು ಕೊಂಡು ಬಂದೆ. ನಿಜಕ್ಕೂ ಸಮಸ್ಯೆ ಶುರುವಾದದ್ದು ನಾನು ಪಿಯುಸಿ ಸೇರಿದ ಮೇಲೆಯೇ. ಹುಡುಗ ಬುದ್ಧಿವಂತನಿದ್ದಾನೆ ಅಂತ ಮನೆಯವರು ವಿಜ್ಞಾನ ವಿಭಾಗಕ್ಕೆ ಸೇರಿಸಿಯೇ ಬಿಟ್ಟರು. ಆಗ ನನಗಿದ್ದ ವಿಷಯಗಳು, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವ ಶಾಸ್ತ್ರ. ನನಗಂತೂ ಬರೆದು ಕಲಿಯುವ ಅಭ್ಯಾಸವೇ ಇರಲಿಲ್ಲ. ಪಿಯುಸಿಯ ಗಣಿತ ಮತ್ತು ಭೌತಶಾಸ್ತ್ರದ ವಿಷಯಗಳನ್ನು ಬರೆಯದೇ ಕಲಿಯುವುದು ನನ್ನಿಂದ ಸಾಧ್ಯವೇ ಆಗಲಿಲ್ಲ. ಆಗ ನನಗೆ ಶಾಲಾ ಟೀಚರ್ ಹೇಳಿದ ಮಾತುಗಳು ನೆನಪಿಗೆ ಬಂದವು. ಆದರೆ ಸಮಯ ಮಿಂಚಿ ಹೋಗಿತ್ತು. ದ್ವಿತೀಯ ಪಿಯುಸಿಯಲ್ಲಿ ಫೈಲ್ ಆದೆ. ನಂತರ ಸಮಸ್ಯೆಗಳನ್ನು ಬರೆದು, ಪರಿಹರಿಸಿ ಉತ್ತರ ಕಂಡುಕೊಳ್ಳುವುದನ್ನು ರೂಢಿ ಮಾಡಿಕೊಂಡೆ. ಪದವಿಯ ಸಮಯದಲ್ಲಿ ಈ ಅಭ್ಯಾಸ ನನಗೆ ಬಹಳ ಉಪಯೋಗಕ್ಕೆ ಬಂತು. ಇದು ಬರೆದು ಕಲಿಯುವ ಬಗ್ಗೆ ನನ್ನ ಸ್ವ ಅನುಭವ. 

ಯಾವುದೇ ವಿಷಯವನ್ನು ಬರೆದುಕೊಳ್ಳುವ ಅಭ್ಯಾಸ ಮಾಡಿದಾಗ ಅದು ನಮ್ಮ ನೆನಪಿನಲ್ಲಿಯೂ ಉಳಿದು ಬಿಡುತ್ತದೆ. ಅಕ್ಷರಗಳೂ ಸ್ಫುಟವಾಗಿ, ಮುದ್ದಾಗಿರುತ್ತವೆ. ನಮಗೆಲ್ಲಾ ಪ್ರಾಥಮಿಕ ತರಗತಿಗಳಲ್ಲಿ ಕಲಿಯುವಾಗ ಕಾಪಿ ಬರೆಯುವಂತೆ ಟೀಚರ್ ಒತ್ತಾಯ ಮಾಡುತ್ತಿದ್ದರು. ಕನ್ನಡಕ್ಕೆ, ಇಂಗ್ಲೀಷ್ ಗೆ, ಹಿಂದಿ ಭಾಷೆಗೆ ಬೇರೆ ಬೇರೆ ಸಂಖ್ಯೆಯ ಗೆರೆಗಳ ಕಾಪಿ ಪುಸ್ತಕವಿರುತ್ತಿತ್ತು. ಅದರಲ್ಲಿ ಬರೆಯುವಾಗ ಅಕ್ಷರಗಳು ದುಂಡಗೆಯೂ, ಸ್ಪಷ್ಟವಾಗಿಯೂ ಇರುತ್ತಿದ್ದವು. ಆಗೆಲ್ಲಾ ಶಾಯಿ ಪೆನ್ ಗಳನ್ನು ಮಾತ್ರ ಬಳಸ ಬೇಕಾಗುತ್ತಿತ್ತು. ಈ ಕಾರಣದಿಂದ ವೇಗವಾಗಿ ಬರೆದು ಅಕ್ಷರ ಹಾಳಾಗುತ್ತಿರಲಿಲ್ಲ. ಈಗ ಶಾಯಿ ಪೆನ್ ನಲ್ಲಿ ಬರೆಯುವವರ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ. ‘ನಿಬ್' ಹೊಂದಿರುವ ಪೆನ್ ಗಳೂ ಸಿಗುವುದಿಲ್ಲ. ಬಾಲ್ ಪೆನ್ ಎಂಬ ವ್ಯವಸ್ಥೆ ಬಂದ ಬಳಿಕ ಅಕ್ಷರಗಳು ‘ಕಾಗೆ ಕಾಲು’ ಆಗಿ ಹೋಗಿವೆ. ಆದರೂ ಬರವಣಿಗೆಯನ್ನು ಶಿಸ್ತಿನಿಂದ ಅಭ್ಯಾಸ ಮಾಡಿದರೆ ಅದು ಒಲಿಯುತ್ತದೆ. 

ನಾನು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಕಚೇರಿಯಲ್ಲಿ ಒಬ್ಬರು ಲೆಕ್ಕಿಗ (ಅಕೌಂಟೆಂಟ್) ಇದ್ದರು. ಆಗಲೇ ಅವರಿಗೆ ೭೦ ವರ್ಷ ದಾಟಿತ್ತು. ಅವರೆಲ್ಲಾ ಕಂಪ್ಯೂಟರ್ ಬಳಕೆ ಮಾಡದ ಕಾಲದವರು. ನಾನು ಆ ಸಮಯ ಕಚೇರಿಯಲ್ಲಿ ಎಲ್ಲಾ ಕೆಲಸ ಮಾಡುತ್ತಿದ್ದೆ. ಸೀಮಿತ ಸಿಬ್ಬಂದಿಗಳು ಇದ್ದಕಾರಣ ಮತ್ತೆ ಕಂಪ್ಯೂಟರ್ ತಿಳಿದಿದ್ದ ಇಬ್ಬರೇ ಜನರಲ್ಲಿ ನಾನೊಬ್ಬನಾದುದರಿಂದ ಅವರು ಪುಸ್ತಕದಲ್ಲಿ ಬರೆದುಕೊಟ್ಟ ಮಾಹಿತಿಗಳನ್ನು ‘ಟ್ಯಾಲಿ' ಗೆ ವರ್ಗಾಯಿಸುತ್ತಿದ್ದೆ. ಅವರು ತಮ್ಮ ಬರವಣಿಗೆಯಲ್ಲಿ ತೋರಿಸುತ್ತಿದ್ದ ಶಿಸ್ತು ಅಪಾರ. ಅದು ನನಗೆ ಬಹಳ ಮೆಚ್ಚುಗೆಯಾಗುತ್ತಿದ್ದ ಸಂಗತಿ. ಬೇರೆ ಬೇರೆ ವರ್ಣದ ಪೆನ್ ಬಳಸಿ, ಅಕ್ಷರಗಳನ್ನು ಮುತ್ತಿನಂತೆ ಪೋಣಿಸಿ ಬರೆಯುತ್ತಿದ್ದ ಅವರ ಬರವಣಿಕೆಯ ಶೈಲಿಯನ್ನು ಬಹಳಷ್ಟು ಸಲ ನಾನು ನಕಲು ಮಾಡಲು ಹೋಗಿ ಸೋತದ್ದಿದೆ. ಆ ಇಳಿ ವಯಸ್ಸಿನಲ್ಲೂ ಅವರ ಬರವಣಿಗೆಯ ಶಿಸ್ತು ನನಗೆ ಅಚ್ಚರಿ ತರುತ್ತಿತ್ತು. ನಂತರದ ದಿನಗಳಲ್ಲಿ ನೇರವಾಗಿ ಕಂಪ್ಯೂಟರ್ ಗೆ ವರ್ಗಾಯಿಸುವ ಕ್ರಮ ಬಂದ ಬಳಿಕ ಅವರು ರೆಕಾರ್ಡ್ ಪುಸ್ತಕಗಳನ್ನು ಬರೆಯುವುದನ್ನು ನಿಲ್ಲಿಸಿದರು. ಈಗಲೂ ನನಗೆ ಅವರು ಬರೆಯುತ್ತಿದ್ದ ಇಂಗ್ಲಿಷ್ ಅಕ್ಷರಗಳ ವಿನ್ಯಾಸ ಕಣ್ಣಿಗೆ ಕಟ್ಟಿದಂತೆ ಇದೆ. ಇಷ್ಟಕ್ಕೂ ಅವರು ಕಲಿತದ್ದು ಹತ್ತನೇ ತರಗತಿಯವರೆಗೆ ಮಾತ್ರ. ಆದರೆ ಒಂದೇ ಒಂದು ತಪ್ಪಿಲ್ಲದೇ ಬರೆಯುತ್ತಿದ್ದ ಅವರ ಶಿಸ್ತಿನ ಬರವಣಿಗೆಯ ಶೈಲಿಯನ್ನು ನಾನು ಎಂದೂ ಮರೆಯಲಾರೆ.

ಈಗಿನ ಬಹಳಷ್ಟು ಮಕ್ಕಳು ಬರವಣಿಗೆಯನ್ನು ಒಂದು ಅಭ್ಯಾಸವಾಗಿ ಪರಿಗಣಿಸಿಲ್ಲ. ಅದೇ ರೀತಿ ಶಾಲಾ ಶಿಕ್ಷಕರೂ ಕೆಟ್ಟ ಶೈಲಿಯ ಬರಹವನ್ನು ತಿದ್ದಲೂ ಮನಸ್ಸು ಮಾಡುತ್ತಿಲ್ಲ. ಹೆತ್ತವರೇ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಕಾಪಿ ಬರೆಸುವುದರ ಮೂಲಕ ಅಥವಾ ನಿಧಾನವಾಗಿ ತಿಳಿಹೇಳಿ ಅಕ್ಷರ ಚೆನ್ನಾಗಿದ್ದಾರೆ ಹೆಚ್ಚು ಅಂಕಗಳು ಸಿಗುತ್ತವೆ ಎಂದು ಹೇಳಿ ಅವರನ್ನು ತಿದ್ದಬೇಕು. ಇದರಿಂದ ನಿಧಾನವಾಗಿ ಅವರ ಕೈಬರಹ ಸುಧಾರಣೆ ಕಾಣುತ್ತದೆ. ಕೈಬರಹ ಚೆನ್ನಾಗಿಲ್ಲವೆಂದು ಪದೇ ಪದೇ ದೂಷಿಸಬೇಡಿ. ಅತ್ಯಂತ ಕೆಟ್ಟ ಕೈಬರಹ ಹೊಂದಿದವರೂ ಅತ್ಯಂತ ದೊಡ್ದ ಹುದ್ದೆಗೆ ಹೋಗಿದ್ದಾರೆ. ಆದರೆ ನಮ್ಮ ಬರಹ ಚೆನ್ನಾಗಿದ್ದರೆ ನಾವು ಏನು ಹೇಳ ಹೊರಟಿದ್ದೇವೆ ಎನ್ನುವ ಸಂಗತಿ ಸ್ಪಷ್ಟವಾಗಿ ತಿಳಿಯುತ್ತದೆ. ಈಗ ಮೊಬೈಲ್, ಕಂಪ್ಯೂಟರ್ ಬಹಳವಾಗಿ ಬಳಕೆಯಲ್ಲಿರುವುದರಿಂದ ಪೆನ್ ಹಿಡಿದು ಪೇಪರ್ ನಲ್ಲಿ ಬರೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಸುಂದರ ಕೈಬರಹ ಮನಸ್ಸಿನ ದರ್ಪಣವೇ ಸರಿ. ಅಲ್ಲವೇ?

ರೂಪದರ್ಶಿ: ಹವೀಕ್ಷ್ ಎಲ್ ಕೆ, ಕುಂಪಲ