ಬರೆಯದೇ ಉಳಿದ ಸಾಲುಗಳು

ಮುಳುಗುವನಿಗೆ ಹುಲ್ಲು ಕಡ್ಡಿ ಅದೆಂತು ಆಸರೆಯೋ ಗೊತ್ತಿಲ್ಲ- ಆದರೆ ಒಬ್ಬ ಬರಹಗಾರನಿಗೆ ಬರೆಯದೆ ಉಳಿದಿರುವ ಮುಂದಿನ ಸಾಲುಗಳೇ ಆಸರೆ!
ಮಳೆಗಾಲದ ದಿನಗಳು: ಹೊರಗೆ ಸುರಿಯೋ ಜಿಟಿಜಿಟಿ ಮಳೆ ಹನಿಗಳ ಸದ್ದೊಂದಿಗೆ, ಹಾಳೆಯೊಡನೆ ಮಾತನಾಡುತ್ತಾ ಒಂದೆರಡು ಪುಟ ಗೀಚಿಬಿಡುತ್ತಿದ್ದೆ. ಆದ್ರೆ ಈಗ, ದಸರಾ ಸಮಯದಲ್ಲಿ ಮಳೆಯ ಜತೆಯಲ್ಲೇ ಸಣ್ಣಗೆ ಚಳಿ ಶುರುವಾಗಿದೆ. ಮುಖದಿಂದ ಬೆಡ್ ಶೀಟ್ ಸರಿಸೋಕೆ ಮನಸ್ಸೇ ಬರಲ್ಲ. ಇನ್ನೂ ಮುಂಜಾನೆ ಎದ್ದು ಪೆನ್ನು ಹಿಡಿಯೋದಂತೂ ಒಂದು ಮಟ್ಟಿಗೆ ಕಷ್ಟನೇ. ಹೀಗೇ ಬರೆಯಬೇಕೆಂದುಕೊಂಡಿದ್ದರೂ, ಬರೆಯದೇ ಸುಮಾರು ದಿನಗಳೇ ಕಳೆದಿತ್ತು. ಮನಸ್ಸಿಗನಿಸಿದ್ದನ್ನ ಹಾಳೆಗಿಳಿಸಿ. ಅದೇನಾದ್ರೂ ಆಗ್ಲಿ, ನಾಳೆ ಒಂದೆರಡು ಪುಟ ಬರೆದೇ ಬರೆಯುತ್ತೇನೆ ಅಂತ ಅನ್ನೊಂಡು ರಾತ್ರೆ ಆ ಯೋಚನೆಯನ್ನ ದಿಂಬಿನ ಕೆಳಗಿಟ್ಟು ನಿದ್ರೆಗೆ ಜಾರಿದೆ.
ರಾತ್ರಿ ಕನಸುಗಳ ವಿಚಾರ ಬೇಡ ಬಿಡಿ, ಗೊತ್ತೇ ಇದೆಯಲ್ಲ, ಯುವಜನರ ಕನಸುಗೆಲ್ಲಾ. ಅದೆಲ್ಲ ಖಾಸಗಿ. ಇನ್ನೂ ಬೆಳಗಾಗಿರ್ಲಿಲ್ಲ. ರಾತ್ರಿನೇ ಬೆಳಗ್ಗೆದ್ದು ಬರಿಬೇಕು ಅಂತ ಯೋಚನೆ ಮಾಡಿದ್ರಿಂದ ಬೇಗ ಎಚ್ಚರ ಆಯ್ತು ಅನ್ಸುತ್ತೆ. ಮುಖದಿಂದ ಮೆಲ್ಲನೆ ಬೆಡ್ ಶೀಟ್ ಸರಿಸಿ. ತಲೆಯೆತ್ತಿ ಗಡಿಯಾರ ನೋಡಿದೆ. ಸಮಯ ನಾಲ್ಕೂ ಕಾಲಾಗಿತ್ತು. 'ಸರಿ ಗುರು, ಎಚ್ಚರ ಏನೋ ಆಯ್ತು! ಆದ್ರೆ ಏನ್ ಬರಿಲೀ?' ಅಂತ ಮನಸ್ಸಲ್ಲಿ ಅಂದುಕೊಳ್ಳುತ್ತಲೇ ಬೆಡ್ ಶೀಟನ್ನ ಮೈಗೆ ಸುತ್ತಿಕೊಂಡು ಟೇಬಲ್ ಮೇಲೆ ನಾಲೈದು ದಿನಗಳ ಹಿಂದೆ ಹಾಳೆಗಳನ್ನು ಸಿಕ್ಕಿಸಿದ್ದ ರೈಟಿಂಗ್ ಬೋರ್ಡ್ ಮತ್ತು ಪೆನ್ನನ್ನ ಎತ್ತಿಕೊಂಡು ಗೋಡೆಗೊರಗಿ ಕುಳಿತೆ. ಹೊರಗೆ ಮಳೆ ಮತ್ತು ಚಳಿಯ ಸುಳಿಗಾಳಿ. ಗಗನಕ್ಕೂ ಭೂಮಿಗೂ ನಡುವೆ ಪ್ರೀತಿಯಾದಾಗ ಮಳೆ ಬರುತ್ತೆ ಅನ್ಸುತ್ತೆ. ತುಂಟ ಮಾತೊಂದ ಗಗನ ನುಡಿಯುವಾಗ ಧರೆ ನಾಚಿ ಮೇಘಗಳಿಂದ ಮುಖ ಮುಚ್ಚಿಕೊಂಡಾಗ. ಆ ಮೇಘಗಳು ಇಳೆಯ ನಗುಮುಖವ ಕಂಡು ಕರಗಿ ನೀರ ಹನಿಗಳಾಗಿ ಧರೆಯ ಸ್ಪರ್ಶ ಪಡೆಯಲು ಆಗಸದಿಂದ ಇಳೆಗಿಳಿಯುತ್ತವೆ ಎಂದನಿಸುತ್ತದೆ. ಹಾಗೆ ಬರೀತಾ ಬರೀತಾ, ಹಾಳೆಗಳು ತಿರುವಿದ್ದು ಗೊತ್ತೇ ಆಗಿಲ್ಲ. ಅಷ್ಟರಲ್ಲೇ ಬೆಳಗಾಗಿತ್ತು. ಏನೇ ಅಂದ್ರು ಈಗಿನ ದಿನಗಳಲ್ಲಿ, ದಸರಾ ಮುಗಿತಿದ್ದಂತೆ, ಮಳೆಯ ಜತೆಯಲ್ಲೇ ಚಳಿಯೂ ಬಂದರೆ, ಬಿಸಿ ಬಿಸಿ ಕಾಫಿ ಜೊತೆ ಚಾ ಬೆರಸಿ ಕೂಡಿದ ಹಾಗೆ ಇರುತ್ತೆ! ಚಳಿ ಹಾಗೂ ಮಳೆಯೇ ಹಾಗೆ ಯಾವುದೋ ಮೂಲೆಯಲ್ಲಿ ಅಡಗಿರುವ ನೆನಪು ಗಳನ್ನ ಮಧುರವಾಗಿ ಮೀಟಿ ಎಚ್ಚರಿಸುತ್ತೆ. ಮುಂದೆ ಇಂಥ ಸಮಯ ಬರುತ್ತೋ ಇಲ್ಲೋ ಯಾರಿಗೊತ್ತು. ಇವಾಗ್ಲೆ ನೆನಪಿನ ಬುಟ್ಟಿಯಲ್ಲಿ ಸಿಹಿ ನೆನಪುಗಳನ್ನು ಜೋಪಾನ ಮಾಡಿ ಇಟ್ಟುಕೊಳ್ಳುವುದನ್ನು ಕಲಿಯಬೇಕು.
-ದರ್ಶನ್ ಕುಮಾರ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ