ಬಲವಂತದ ಸಮೀಕರಣ ಅಗತ್ಯವೆ?

ಬಲವಂತದ ಸಮೀಕರಣ ಅಗತ್ಯವೆ?

ವೈಜ್ಞಾನಿಕ ಕ್ಷೇತ್ರವು ಕಳೆದ ವಾರ ಮಹತ್ತರ ಮೈಲುಗಲ್ಲನ್ನು ದಾಟಿತು. ಸಾವಿರಾರು ವಿಜ್ಞಾನಿಗಳ ಸುಮಾರು ಮೂವತ್ತು ವರ್ಷಗಳ ಅಹೋರಾತ್ರಿ ಪ್ರಯತ್ನದ ಫಲವಾಗಿ 'ದೇವ ಕಣ' ಎಂದು ಕರೆಯಲಾಗುವ ಹಿಗ್ಸ್‌-ಬೋಸನ್‌ ಸಂಶೋಧನೆ ಸಾಧ್ಯವಾಯಿತು. ಈ ಉಪ ಪರಮಾಣುವಿಗೆ ಅತೀ ಹೆಚ್ಚು ಜಪ್ರೀಯತೆಯನ್ನು ತರಲು ಹಾಗೂ ಈ ಶೋಧನೆ ಜನ ಸಾಮಾನ್ಯರಿಗೆ ಹತ್ತಿರವಾಗಲೂ ದೇವ ಕಣ ಎಂಬ ಹೆಸರು ಸಹಕಾರವಾಯಿತಾದರೂ ನಾವು ಈ ಕಣವನ್ನು  ಇನ್ನು ಮುಂದೆ ಹಿಗ್ಸ್‌-ಬೋಸನ್‌ ಎಂದೇ ಸಂಭೋದಿಸೋಣ.

ಈ ಯೋಜನೆಯ  ತಳಪಾಯವೆಂದರೆ  20ನೇ ಶತಮಾನದ  ಮಹಾನ್‌ ವಿಜ್ಞಾನಿ, ಸತ್ಯೇಂದ್ರ ನಾಥ  ಬೋಸ್‌ ಅವರ ಸಂಶೋಧನೆ ಯಾದ ಬೋಸಾನ್‌ಗಳು, ಇದಲ್ಲದೇ ಈ ಯೋಜನೆಗಾಗಿ ನೂರಾರು ಭಾರತೀಯ ವಿಜ್ಞಾನಿಗಳು ಪ್ರತ್ಯಕ್ಷ  ಹಾಗೂ ಪರೋಕ್ಷವಾಗಿ  ಕೆಲಸಮಾಡಿದ್ದಾರೆ.  ಈ ಎಲ್ಲ ಕಾರಣಗಳಿಂದಾಗಿ  ಜಿನೆವಾದಲ್ಲಿ  ಕಾರ್ಯನಿರ್ವಹಿಸುವ  ಯುರೋಪಿಯನ್‌ ಆರ್ಗನೈಜೇಶನ್‌ ಫಾರ್‌ ನ್ಯುಕ್ಲಿಯರ್‌ ರಿಸರ್ಚ(ಸರ್ನ್‌) ಕೇಂದ್ರದ ವಕ್ತಾರ ಪೌಲೋ ಗಿಬೆಲ್ಲಿನೋ ಅವರು 'ಭಾರತವು ಈ ಯೋಜನೆಯ ಐತಿಹಾಸಿಕ ತಂದೆ ಇದ್ದಂತೆ'  ಎಂಬ ಮಾತನ್ನು ಹೇಳುವುದರ ಮುಖಾಂತರ ಈ ಯೋಜನೆಯಲ್ಲಿ ಭಾರತೀಯರ ಪಾತ್ರದ ಹಿರಿಮೆಯನ್ನು ಸಾರಿದ್ದಾರೆ. ಅದರೊಂದಿಗೆ  ಗಮನಸೆಳೆದ  ಹಾಗೂ ಚರ್ಚೆಯನ್ನು  ಹುಟ್ಟು ಹಾಕಿರುವ ಇನ್ನೂ ಒಂದು ಪ್ರಮುಖ ಸಂಗತಿಯೆಂದರೆ 'ನಟರಾಜ ರೂಪಕ',  ಫ್ರಿಡ್ಜಾಫ್‌ ಕಾಪ್ರಾ ಅವರ ಮಾತಿನಲ್ಲಿ  ಹೇಳುವುದಾದರೆ  'ಕಾಸ್ಮಿ ಕ್‌ ಡ್ಯಾನ್ಸ್‌ ಆಫ್‌ ಶಿವ'  !

ಶಿವ ತಾಂಡವದಲ್ಲಡಗಿದೆ ಸೃಷ್ಠಿ ರಹಸ್ಯ?

ಹೌದು ಇದು ಆಶ್ಚರ್ಯವಾದರೂ ಸತ್ಯ! ಈಗ ತಾನೆ ದೇವ ಕಣವನ್ನು ಕಂಡು ಹಿಡಿದು,  ವಿಶ್ವದ ರಹಸ್ಯವನ್ನು ಭೇದಿಸಲು ಬಹುದೂರ ಸಾಗಿ ಬಂದಿರುವ  ಜಿನಿವಾದಲ್ಲಿರುವ 'ಸರ್ನ್‌, ಈಗ ಎಲ್ಲರ ಕುತೂಹಲವನ್ನು ತನ್ನೆಡೆಗೆ ಸೆಳೆದಿರುವ ವೈಜ್ಞಾನಿಕ ಸಂಸ್ಥೆ.  ಅಷ್ಟೇ ಅಲ್ಲ ಜಗತ್ತಿನ ಸರಿಸುಮಾರು  10-15 ಸಾವಿರ ಮಹಾನ್‌ ಪರಮಾಣು ಭೌತ ವಿಜ್ಞಾನಿಗಳು ಸಂಶೋಧನೆಯಲ್ಲಿ  ತೊಡಗಿರುವ ಹಿರಿಮೆ ಇದರದ್ದು. ಆದರೆ ಆಶ್ಚರ್ಯದ ಸಂಗತಿ ಎಂದರೆ ಸೃಷ್ಠಿ ರಹಸ್ಯವನ್ನು  ಭೇದಿಸಲು ಹೊರಟಿರುವಂತಹ ವೈಜ್ಞಾನಿಕ ಸಂಸ್ಥೆಯ ಪ್ರವೇಶ ದ್ವಾರದ ಬಳಿಯಲ್ಲಿ ಎರಡು ಮೀಟರ್‌ ಉದ್ದದ ನಟರಾಜನ ವಿಗ್ರಹವನ್ನು ಸ್ಥಾಪಿಸಲಾಗಿದೆ.  ಅದರ ಅಡಿಯಲ್ಲಿ '`ನೂರಾರು ವರ್ಷಗಳ ಹಿಂದೆ, ಭಾರತೀಯ ಕಲಾವಿದರು  ಅತ್ಯಂತ ಸುಂದರವಾದ ಮಹಾದೇವ ನಟರಾಜನ ನಾಟ್ಯ ವೈಭವವನ್ನು  ಕಂಚಿನ ಪ್ರತಿಮೆಗಳಲ್ಲಿ ಸೆರೆ ಹಿಡಿದರು. ನಮ್ಮ ಕಾಲದಲ್ಲಿ, ವಿಜ್ಞಾನಿಗಳು ಅತ್ಯಾಧುನಿಕ ಸಲಕರಣೆಗಳ ಮುಖಾಂತರ ಕಾಸ್ಮಿಕ್‌  ನೃತ್ಯದ ವಿವಿಧ ಪ್ರಕಾರಗಳನ್ನು ಬಿಂಬಿಸಿಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕಾರವಾಗಿ ಕಾಸ್ಮಿಕ್‌ ನೃತ್ಯದ ರೂಪಕವು ಪುರಾಣಗಳನ್ನು, ಧಾರ್ಮಿಕ ಕಲೆಯನ್ನು ಹಾಗೂ ಆಧುನಿಕ ಭೌತ ವಿಜ್ಞಾನವನ್ನು  ಐಕ್ಯಗೊಳಿಸುತ್ತದೆ' ಎಂಬ  ಅಡಿಬರಹವಿದೆ. ಅಂದರೆ ಏನಿದರ ಅರ್ಥ? ವೈಜ್ಞಾನಿಕ ಸಂಸ್ಥೆಯಲ್ಲಿ  ಪುರಾಣದಲ್ಲಿ ಬರುವ ನಟರಾಜನ ವಿಗ್ರಹವನ್ನು ಏಕೆ ಸ್ಥಾಪಿಸಲಾಗಿದೆ? ದೇವಕಣಕ್ಕೂ ನಟರಾಜನ ನೃತ್ಯಕ್ಕೂ ಏನಾದರು ಸಂಬಂಧವಿದೆಯಾ? ಹಾಗಾದರೆ ನಟರಾಜ ಏನನ್ನು ಸೂಚಿಸುತ್ತಾನೆ?

ನಟರಾಜನ  ಪ್ರತಿಮೆ

1975ರಲ್ಲಿ ಪ್ರಕಟವಾಗಿ ಇಂದಿಗೆ ಸುಮಾರು 40 ಬಾರಿ ಪುನರ್‌ ಮುದ್ರಣಗೊಂಡ ಅತೀ ಹೆಚ್ಚು ಮಾರಾಟವಾದ  'ದ ತಾವೋಸ್‌ ಆಫ್‌ ಫಿಸಿಕ್ಸ್‌' ಎಂಬ ಪುಸ್ತಕದಲ್ಲಿ  ಭೌತ ವಿಜ್ಞಾನಿ ಹಾಗೂ ಲೇಖಕ ಫ್ರಿಟ್ಜಾಫ್‌ ಕಾಪ್ರಾ ಶಿವತಾಂಡವ ಹಾಗೂ ಉಪ ಪರಮಾಣುಗಳ ನಾಟ್ಯಕ್ಕೂ ಇರುವ  ಸಾಮ್ಯತೆಯನ್ನು  ಪ್ರಪ್ರಥಮವಾಗಿ ಆಧುನಿಕ ಭೌತ ವಿಜ್ಞಾನದ ನೆಲೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿದರು.

ಅವರು ತಿಳಿಸಿದಂತೆ, ಶಿವತಾಂಡವವು ಸೃಷ್ಠಿ, ಸ್ಥಿತಿ, ಲಯ, ತಿರೋಭಾವ ಮತ್ತು ಅನುಗ್ರಹ ಎಂಬ ಐದು ಸಂಗತಿಗಳನ್ನು ಸೂಚಿಸುತ್ತದೆ. ಇದರಂತೆ ಉಪ ಪರಮಾಣುಗಳು ರುದ್ರತಾಂಡವದಂತೆ ಭೀಕರವಾಗಿ ಚಲನೆಯಾಗುತ್ತ ಒಂದಕ್ಕೊಂದು ಘರ್ಷಣೆಗೆ ಒಳಗಾಗಿ ನಾಶವಾಗುತ್ತಾ ಹಾಗೂ ರೂಪಗೊಳ್ಳುತ್ತಾ ಇರುತ್ತವೆ. ಅನಂತರ ಒಂದು ಸ್ಥಿತ್ಯಂತರದಲ್ಲಿ ವಿಶ್ವವು ಶಾಂತವಾಗುತ್ತದೆ  ತದನಂತರ ಈ ಉಪ ಪರಮಾಣುಗಳು ಆಕರ್ಷಣೆಗೆ ಒಳಗಾಗಿ ಬಂಧಿಸಿಕೊಂಡು ನ್ಯೂಕ್ಲಿಐ ಆಗಿ ರೂಪಗೊಳ್ಳುತ್ತವೆ ಹಾಗೂ ಮುಂದೆ ಅಣುಗಳಾಗಿ ಮತ್ತು ಇತರೆ ಎಲ್ಲ ಸಂಗತಿಗಳಾಗಿ  ವಿಶ್ವವು ವಿಕಸಿತಗೊಳ್ಳುತ್ತಿರುತ್ತದೆ ಹಾಗೂ ನಾಶವಾಗುತ್ತಿರುತ್ತದೆ ಮತ್ತು ಇದು ನಿರಂತರವಾಗಿರುತ್ತದೆ. ಅಷ್ಟೇ ಅಲ್ಲ  ಶಿವ  ನೃತ್ಯವು ಕೇವಲ ಕಾಸ್ಮಿಕ್‌ ಕ್ರೀಯೆಯು ರೂಪಗೊಳ್ಳುವ ಹಾಗೂ ನಾಶವಾಗುವ ನಿರಂತರ ಚಕ್ರವನ್ನು ಮಾತ್ರ ಸೂಚಿಸುವುದಿಲ್ಲ, ಅದು ಹುಟ್ಟು ಹಾಗೂ ಸಾವಿನ ಲಯವನ್ನೂ ಸೂಚಿಸುತ್ತದೆ.

'ನಟರಾಜನ ಭಾವ ಭಂಗಿಗಳು ಪ್ರಖರ ಹಾಗೂ ಕರುಣೆಯಿಂದ ಕೂಡಿವೆ ಮತ್ತು ಬ್ರಹ್ಮಾಂಡದ ಮಾಯೆಯನ್ನು ತೋರಿಸುತ್ತವೆ. ಅವನ ಕುಣಿದಾಡುವ ಕೈಕಾಲುಗಳು ಹಾಗೂ ದೇಹವೇ ವಿಶ್ವದ ನಿರಂತರ ರೂಪಗೊಳ್ಳುವ ಹಾಗು ನಾಶವಾಗುವ ಬ್ರಹ್ಮಾಂಡವನ್ನು, ಹುಟ್ಟು ಹಾಗೂ ಸಾವಿನ ನಡುವಿನ ಸಮತೋಲನತೆಯನ್ನು ಸೂಚಿಸುತ್ತದೆ ಎಂಬುವ ವಿವರಣೆಯನ್ನು ನೀಡುತ್ತಾರೆ, ಜರ್ಮನಿಯ ಅತ್ಯಂತ ಪ್ರಮುಖ ಫಿಲಾಲಜಿಸ್ಟ್‌ ಆದ ಹೆನ್ರಿಚ್‌ ಜಿಮ್ಮರ್‌.

ಪಾಶ್ಚ್ಯಾತ್ಯ  ವಿಜ್ಞಾನಿಗಳನ್ನು ಹಾಗೂ ಚಿಂತಕರನ್ನು ಆಕರ್ಷಿಸಿದ ಈ ನಟರಾಜ ಒಂದು ಮೆಟಾಫರ್‌ ಎನ್ನ ಬಹುದು. 

ಏಕೆಂದರೆ, ಫ್ರಿಟ್ಜಾಫ್‌ ಕಾಪ್ರಾ ಅವರೇ ವಿವರಿಸುವಂತೆ ನಟರಾಜನ ಭಂಗಿಯಲ್ಲಿರುವ ಶಿವನ ಭರದಿಂದ ಚಲನೆಯಾಗುತ್ತಿರುವ ನಾಲ್ಕು ಕೈಗಳು ಲಯ ಹಾಗೂ ಜೀವದ ಏಕತೆಯನ್ನು ಸೂಚಿಸುತ್ತದೆ. ಅವನ  ಮೇಲಿನ ಬಲಗೈಯಲ್ಲಿ ಇರುವ ಢಮರು ಸೃಷ್ಠಿಯಾರಂಭದ ಶಬ್ದವನ್ನು , ಮೇಲಿನ ಎಡಗೈಯಲ್ಲಿರುವ ಅಗ್ನಿಯು ಸೃಷ್ಠಿ ನಾಶವನ್ನು, ಈ ಎರಡೂ ಕೈಗಳ ಸಮತೋಲನವು ಸೃಷ್ಠಿ  ಹಾಗೂ ವಿನಾಶಗಳ ನಡುವಿನ ಸಮತೋಲನವನ್ನು, ಕೆಳ ಬಲಗೈ ಅಭಯ ಹಸ್ತವು ನಿರ್ವಹಣೆ,ರಕ್ಷಣೆ ಹಾಗೂ ಶಾಂತಿಯನ್ನೂ, ಪದದೆಡೆಗೆ ಮುಖ ಮಾಡಿರುವ ಕೆಳ ಎಡಗೈ ಮಾಯೆಯಿಂದ ಬಿಡುಗಡೆಯನ್ನು ಸೂಚಿಸುತ್ತದೆ.  ನಟರಾಜನನ್ನು  ರಾಕ್ಷಸನ ಮೇಲೆ ಕುಣಿಯುತ್ತರುವಂತೆ ಚಿತ್ರಿಸಲಾಗಿದೆ, ಇದು ಮಾಯೆಯಿಂದ ಬಿಡುಗಡೆಯಾಗಲು ಅಜ್ಞಾನವನ್ನು ಮನುಷ್ಯರು ಜಯಿಸಬೇಕು ಎಂಬುದನ್ನು ತಿಳಿಸುತ್ತದೆ; ಇದಲ್ಲದೇ ನಟರಾಜನ ಸುತ್ತ ಇರುವ ಬೆಂಕಿಯ ಚಕ್ರವು ಬ್ರಹ್ಮಾಂಡದ ರಚನೆಯನ್ನು ಸೂಚಿಸುತ್ತದೆ.

ಕ್ವಾಂಟಮ್‌ ಕ್ಷೇತ್ರ ಸಿದ್ಧಾಂತವು ಎಲ್ಲ ಜಡದ್ರವ್ಯದ (ಮ್ಯಾಟರ್‌) ಗಳ ನಡುವಿನ ಇನಟರ್‌ ಆ್ಯಕ್ಷನ್‌, ನಡೆಯುವುದು ಸಂಪಂಧ ಪಟ್ಟ ಪರಮಾಣುಗಳ ಹೊರ ಸೂಸುವಿಕೆ ಮತ್ತು ಹೀರಿಕೆಗಳ ಮುಖಾಂತರ ನಡೆಯುತ್ತದೆ ಎನ್ನುತ್ತದೆ, ಮ್ಯಾಟರ್‌ನ ಎಲ್ಲ  ಪರಮಾಣುಗಳು ಸ್ವತಃ  ತಮ್ಮೊಂದಿಗೆ ಕಾರ್ಯತಃ ಹೀರಿಕೆ ಹಾಗೂ ಹೊರ ಸೂಸುವಿಕೆ ಮುಖಾಂತರ ಒಡನಾಡುವುದರಿಂದ ಪ್ರತಿ ಯೊಂದು ಮ್ಯಾಟರ್‌ನ ಅಸ್ತಿತ್ವಕ್ಕೂ ಸೃಷ್ಠಿ ಹಾಗೂ ಲಯದ ಚಲನೆ  ಪ್ರಮುಖವಾಗಿದೆ. ಹೀಗೆ ಆಧುನಿಕ ವಿಜ್ಞಾನವು ಪ್ರತಿಯೊಂದು ಉಪ ಪರಮಾಣುಗಳು ಶಕ್ತಿ ನೃತ್ಯವನ್ನು ಮಾಡುತ್ತವೆ ಮತ್ತು ಶಕ್ತಿ ನೃತ್ಯವೇ ತಾವಾಗಿವೆ ಈ ಮುಖಾಂತರ ನಿರಂತರ ಸೃಷ್ಠಿ ಹಾಗೂ ವಿನಾಶ ಕ್ರೀಯೆಯಲ್ಲಿ  ಪಾಲ್ಗೊಳ್ಳುತ್ತವೆ  ಎಂಬ ರಹಸ್ಯವನ್ನು ಬಿಚ್ಚಿಡುತ್ತದೆ ಎನ್ನುತ್ತಾರೆ ಕಾಪ್ರಾ.


ಆಧುನಿಕ ಸಂಶೋಧನೆ ಮತ್ತು ಪುರಾತನ ಭಾರತೀಯ ವೈಚಾರಿಕತೆ.

ಖಂಡಿತವಾಗಿಯೂ ಈ ಮೇಲಿನ ಮಾತು ಆಶ್ಚರ್ಯವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ , ಆಧುನಿಕ ವಿಜ್ಞಾನ ಹಾಗೂ ಪುರಾತನ ಭಾರತೀಯ ತತ್ವಜ್ಞಾನ ಒಂದೇ ದಿಕ್ಕಿನೆಡೆಗೆ ಪ್ರಯಾಣಿಸುತ್ತದೆಯಾ ಎಂಬ ಕುತೂಹಲವನ್ನೂ ಮೂಡಿಸುತ್ತದೆ.

ಆದರೆ  ತಿಳಿಯಬೇಕಿರುವ ಒಂದು ಸಂಗತಿಯೆಂದರೆ   ನಮ್ಮ ಭಾರತೀಯ ತತ್ವಜ್ಞಾನದ ಗುರಿ  ತನ್ನೊಳಗೆ ಹುಡುಕುವುದಾಗಿದ್ದರೆ , ಆಧುನಿಕ ವಿಜ್ಞಾನವು  ಸಿದ್ಧಾಂತ ಹಾಗೂ ಪ್ರಾತ್ಯಕ್ಷಿಕತೆಯ ಮೂಲಕ  ಹೊರಗಿನದನ್ನು ಹುಡುಕುವುದಾಗಿದೆ.

ವಿಜ್ಞಾನ ಹಾಗೂ ಪುರಾತನ ತತ್ವಗಳ ನಡುವೆ ಕೆಲವು ಸಾಮ್ಯತೆಗಳೂ, ಸಮಾನಾಂತರಗಳೂ ಹಾಗೂ ಮೆಟಾಫರ್‌ಗಳೂ ಇರುತ್ತವೆ. ಅಂದ ಮಾತ್ರಕ್ಕೆ ಪ್ರಾಯೋಗಾತ್ಮಕವಾಗಿ ಸಂಶೋಧನೆಗೆ ಹಾಗೂ ವಿಷ್ಲೇಶಣೆಗೆ ಒಳಪಡಿಸಿ ಗಣಿತೀಯ ಸೂತ್ರಗಳ ಮುಖಾಂತರ ಸಿದ್ಧಪಡಿಸಿದಂತಹ ಆಧುನಿಕ ವಿಜ್ಞಾನದ ಎಲ್ಲ ಸಂಗತಿಗಳೂ ನಮ್ಮ ಗ್ರಂಥಗಳಲ್ಲಿ ಸಿದ್ಧವಾಗಿವೆ ಎಂಬುವುದು ಸಮಂಜಸವಲ್ಲ. ಹೀಗೆಂದಾಕ್ಷಣ ನಮ್ಮ   ವೈಚಾರಿಕ ಹಾಗೂ ಆಧ್ಯಾತ್ಮಿಕ ಗ್ರಂಥಗಳು ಕಡಿಮೆ ಎಂದು ವಿಷ್ಲೇಶಿಸಬೇಕಿಲ್ಲ. ಏಕೆಂದರೆ,  ನಮ್ಮ ವೇದಾಂತದ ಗುರಿ ಜಡ ಪ್ರಪಂಚದ ಸಾಧನೆ ಅಲ್ಲ  ಅದರ ಗುರಿಯೇ ಭಯ, ಶೋಕ ಹಾಗೂ ಮೋಹಗಳನ್ನು ಮೀರುವುದು ಆಗಿದೆ ಎನ್ನುತ್ತಾರೆ ಶತಾವಧಾನಿ ಗಣೇಶ್‌. 

ಪುರಾತನ ಭಾರತವು ಕೇವಲ ವಿಜ್ಞಾನವೊಂದೇ ಅಲ್ಲ  ಶಿಲ್ಪ ಕಲೆ, ಸಾಹಿತ್ಯ, ಸಂಗೀತ, ಔಷಧಿ, ಗಣಿತ, ಖಗೋಳ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು  ಮಾಡಿತ್ತು. ಅವುಗಳಲ್ಲಿ ಕೆಲವು ಆಯಾಕಾಲಘಟ್ಟದಲ್ಲಿ  ಅತ್ಯದ್ಭುತ ಸಾಧನೆಗಳು ಎನಿಸಿದ್ದವು. ಅಲ್ಲದೇ ಅವುಗಳಲ್ಲಿ ಕೆಲವು ಇಂದಿಗೂ ತಮ್ಮ ಹಿರಿಮೆಯನ್ನು ಉಳಿಸಿಕೊಂಡಿವೆ. ಉದಾಹರಣೆಗೆ ಆಯುರ್ವೇದದಲ್ಲಿ  ಬಳಕೆಯಲ್ಲಿರುವ ಕೆಲವು ಔಷಧಗಳು, ಅವುಗಳ ಕಾಂಪೊನೆಂಟಗಳ ಮಿಶ್ರಣದ ಪ್ರಮಾಣ ಇಂದಿಗೂ ಅಂದರೆ ಸುಮಾರು 3 ಸಾವಿರ ವರ್ಷಗಳ ನಂತರವೂ ಅದೇ ಪ್ರಮಾಣದಲ್ಲಿ ಇವೆ ಮತ್ತು ಪರಿಣಾಮಕಾರಿಯಾಗಿಯೂ ಇವೆ. ಇವು ನಮ್ಮ ಹಿರಿಮೆಗೆ ಕಾರಣವಾಗಬೇಕೇ ಹೊರತು  ಇವೇ ಎಲ್ಲ ರೋಗಗಳಿಗೂ ಪರಿಹಾರ ಎಂಬಂತಹ ಭಾವನೆಯನ್ನು ಮೂಡಿಸಿಕೊಳ್ಳಬಾರದು.

ಸುಮ್ಮನೆ ನಮ್ಮ ಮೂಗಿನ ನೇರದಲ್ಲಿಯೇ ಪ್ರತಿಯೊಂದನ್ನೂ ನಿರ್ಧರಿಸಿಸುವ ಬದಲು,  ಪುರಾತನ ಗ್ರಂಥಗಳಲ್ಲಿರುವ ಯಾವುದಾದರೂ ಸಂಗತಿಗಳು ಇಂದಿನ ವೈಜ್ಞಾನಿಕ  ಸ್ತರವನ್ನು ಮೇಲ್ಮಟ್ಟಕ್ಕೇರಿಸುವಂತಿದ್ದರೆ  ಅಥವ ನಮ್ಮ ಬೆಳವಣಿಗೆಗೆ ಸಹಕಾರವಾಗಿರುವಂತಿದ್ದರೆ  ಅದನ್ನು  ಪ್ರಾಯೋಗಾತ್ಮಕ ಫಲಿತಾಂಶ ಮತ್ತು ಗಣಿತೀಯ ಸಿದ್ಧಾಂತಗಳ ಆಧಾರದಲ್ಲಿ ಸಂಶೋಧಿಸಿ ವೈಜ್ಞಾನಿಕ ಸಮುದಾಯದ ಮುಂದೆ ಪ್ರಚುರ ಪಡಿಸಬೇಕು.

ಸಂಶೋಧನಾ ಸಾಕ್ಷಿ ಮತ್ತು ಸಿದ್ಧಾಂತದ ತಳಪಾಯವಿರದ ಹೊರತು ಪ್ರತಿಯೊಂದು  ಪೌರಾಣಿಕ ಹಾಗೂ ಶಾಸ್ತ್ರೀಯ ಸಂಗತಿಗಳನ್ನು ವಿಜ್ಞಾನದೊಂದಿಗೆ ಬಲವಂತ ಪೂರ್ವಕವಾಗಿ ಸಮೀಕರಿಸಿ ವಿವರಿಸಲು ಪ್ರಯತ್ನಿಸುವುದು ಇಲ್ಲವೇ  ಅಂದಿನ ಶಾಸ್ತ್ರಗಳಲ್ಲಿ ಇಂದಿನ ವೈಜ್ಞಾನಿಕ ಸಿದ್ಧಾತಗಳನ್ನು ಸೇರಿಸುವುದಕ್ಕೇ ಪ್ರಯತ್ನಿಸುವುದು ನಮ್ಮ  ಶ್ರೀಮಂತ ಹಾಗೂ ಮಹಾನ್‌ ಸಂಸ್ಕೃತಿಗೆ ಒಂದು ರೀತಿಯಲ್ಲಿ ಅವಮಾನವನ್ನು ಮಾಡಿದಂತೆ, ಏಕೆಂದರೆ ಭಾರತವು ಉನ್ನತ ಆಧ್ಯಾತ್ಮಿಕ ಮೌಲ್ಯಗಳನ್ನು  ಪ್ರತಿಪಾದಿಸುವ  ಜೀವಂತ ಸಂಸ್ಕೃತಿಯಾಗಿವೆ. - ರಾಘವೇಂದ್ರ ಗುಡಿ

http://hrudayantarala.blogspot.in/2012/07/blog-post_5933.html