ಬಲೆಗೆ ಬಿದ್ದ ಹಾರುವ ಮೀನು
ಮಂಗಳೂರಿನ ಬಂದರಿನಲ್ಲಿ ಹಾರುವ ಮೀನು ಸಿಕ್ಕಿದೆಯಂತೆ, ಅದಕ್ಕೆ ಹಕ್ಕಿಗಳಂತೆ ರೆಕ್ಕೆಗಳಿವೆಯಂತೆ ಎಂಬ ಅಂತೆ ಕಂತೆ ಸುದ್ದಿಗಳು ಕಳೆದ ವಾರ ಎಲ್ಲೆಡೆ ಹರಿದಾಡುತ್ತಿದ್ದವು. ನಿಜಕ್ಕೂ ಹಾರುವ ಮೀನು ಎಂಬ ಪ್ರಭೇಧ ಇದೆಯೇ? ಅವುಗಳು ನಿಜಕ್ಕೂ ಹಕ್ಕಿಯಂತೆ ಹಾರುತ್ತವೆಯೇ? ಹಾಗೆ ಹಾರುವುದಾದರೆ ಅವುಗಳನ್ನು ಹಕ್ಕಿಗಳೆಂದು ಕರೆಯದೇ ಮೀನು ಎಂದು ಏಕೆ ಕರೆಯುತ್ತಾರೆ? ಮೀನು ನೀರಿನಿಂದ ಹೊರ ಬಂದು ಹಾರುವಾಗ ಉಸಿರಾಟ ಸಾಧ್ಯವಾಗದೇ ಪ್ರಾಣ ಕಳೆದುಕೊಳ್ಳಲಾರದೇ? ಎಂಬೆಲ್ಲಾ ಸಂಶಯಗಳು ಎಲ್ಲರ ಮನಸ್ಸಿನಲ್ಲಿರಬಹುದಲ್ವೇ?
ಕೆಲವು ದಿನಗಳ ಹಿಂದೆ ಮಂಗಳೂರಿನ ದಕ್ಕೆಗೆ (ಬಂದರು) ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿದ್ದವು. ಆಂಗ್ಲ ಭಾಷೆಯಲ್ಲಿ ಫ್ಲಯಿಂಗ್ ಫಿಶ್ (Flying Fish) ಹಾಗೂ ತುಳು ಭಾಷೆಯಲ್ಲಿ ಪಕ್ಕಿ ಮೀನ್ (ಹಕ್ಕಿ ಮೀನು) ಎಂದು ಇವನ್ನು ಕರೆಯುತ್ತಾರೆ. ಹಾರುವ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಹಾರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ.
15ರಿಂದ 45 ಸೆಂ.ಮೀ.ವರೆಗೆ ಉದ್ದವಾಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ. ಆದರೆ, ಅದನ್ನೇ ಹಿಡಿಯುವ ಕ್ರಮ ಇಲ್ಲಿಯ ಕರಾವಳಿ ಭಾಗದಲ್ಲಿ ಕಡಿಮೆ ಎನ್ನುತ್ತಾರೆ ಮೀನುಗಾರ ಲೋಕೇಶ್ ಬೆಂಗ್ರೆ.
ಆಳ ಸಮುದ್ರದಲ್ಲಿ ವಾಸಿಸುವ ಈ ಹಾರುವ ಮೀನುಗಳಲ್ಲಿ ಸುಮಾರು ೫೦ ವಿಧಗಳಿವೆ. ತಮಗಿರುವ ರೆಕ್ಕೆಗಳಂತಹ ರಚನೆಯಿಂದ ಇವುಗಳು ಸಮುದ್ರದ ಮೇಲೆ ಸುಮಾರು ೫೦ ಮೀಟರ್ ಗಳವರೆಗೆ ಸುಲಭವಾಗಿ ಹಾರಾಡಬಲ್ಲುವು. ಉತ್ತಮ ಗಾಳಿ ಹಾಗೂ ಪೂರಕ ವಾತಾವರಣವಿದ್ದರೆ ೪೦೦ ಮೀಟರುಗಳಷ್ಟು ದೂರ ಹಾರಬಲ್ಲುದು. ಜಪಾನ್ ದೇಶದಲ್ಲಿ ೪೫ ಸೆಕೆಂಡ್ ಗಳ ತನಕ ಹಾರಿದ ಮೀನುಗಳೂ ಇವೆಯಂತೆ. ಇವುಗಳು ಹೀಗೆ ಹಾರಲು ಪ್ರಮುಖ ಕಾರಣ ಸಮುದ್ರದ ಒಳಗಿನ ಶತ್ರುಗಳು. ಗರಗಸ ಮೀನು , ಟ್ಯೂನಾ ಮೀನುಗಳು ಇವುಗಳ ಮುಖ್ಯ ಶತ್ರುಗಳು. ಇವುಗಳು ತಿನ್ನಲು ಬಂದಾಗ ಈ ಮೀನುಗಳು ನೀರಿನಿಂದ ಹೊರಗಡೆ ಹಾರುತ್ತವೆ. ಸಮುದ್ರದಲ್ಲಿರುವ ಶತ್ರುವಿನಿಂದ ಪಾರಾದರೂ ಮೇಲೆ ಹಾರಾಡುತ್ತಿರುವ ಹಕ್ಕಿಗಳಿಗೆ ಇವುಗಳು ಸುಲಭದ ತುತ್ತಾಗುತ್ತವೆ. ಹೀಗೆ ಇವುಗಳ ಪರಿಸ್ಥಿತಿ 'ಅತ್ತ ದರಿ, ಇತ್ತ ಪುಲಿ' ಎಂಬಂತಾಗುತ್ತದೆ.
ಬಾರ್ಬಡೋಸ್ ದೇಶ ‘ಹಾರಾಡುವ ಮೀನಿನ ನೆಲ' ಎಂಬ ಖ್ಯಾತಿಯನ್ನು ಪಡೆದಿದೆ. ಹಾರುವ ಮೀನುಗಳನ್ನು ವಾಣಿಜ್ಯಕ ಉದ್ದೇಶಗಳಿಗಾಗಿ ಜಪಾನ್, ವಿಯಟ್ನಾಂ ಹಾಗೂ ಚೀನಾ ದೇಶಗಳಲ್ಲಿ ಉಪಯೋಗಿಸಲಾಗುತ್ತಿದೆ. ಮಂಗಳೂರಿಗರಿಗೆ ಅಪರೂಪವಾದ ಈ ಮೀನು ಇಲ್ಲಿಯ ಮೀನು ಹಿಡಿಯುವ ಬೋಟ್ ಗೆ ಬಿದ್ದದ್ದು ಅಚ್ಚರಿಯ ಸಂಗತಿಯೇ…
ಚಿತ್ರ ಕೃಪೆ: ವಾರ್ತಾಭಾರತಿ ಜಾಲ ತಾಣ