ಬಲೆಯಿಂದ ತರಕಾರಿ ಚಪ್ಪರದ ತಯಾರಿಕೆ!

ಬಲೆಯಿಂದ ತರಕಾರಿ ಚಪ್ಪರದ ತಯಾರಿಕೆ!

ತರಕಾರಿ ಬೆಳೆಸುವುದು ಒಂದು ನಿರ್ಧಾರಿತ ಸಮಯದಲ್ಲಿ ನಿಗದಿತ ಆದಾಯ ಸಿಗುವ ವಿಧಾನ. ನಿಮಗಿರುವ ಸ್ಥಳಾವಕಾಶದಲ್ಲಿ ತರಕಾರಿಯನ್ನು ಬೆಳೆದರೆ ಮನೆಯ ಉಪಯೋಗಕ್ಕೂ ಆಯಿತು, ಹೆಚ್ಚಾದರೆ ಮಾರುವುದಕ್ಕೂ ಆಯಿತು. ಈಗ ಸಾವಯವ ವಿಧಾನಗಳಿಗೆ ಬಹಳಷ್ಟು ಮಂದಿ ಒತ್ತುಕೊಡುವುದರಿಂದ ಸ್ಥಳೀಯವಾಗಿ ಮನೆಯಲ್ಲೇ ಬೆಳೆದ ತರಕಾರಿಗೆ ಅಧಿಕ ಬೆಲೆ ಇದೆ. ಈ ಕಾರಣದಿಂದ ತರಕಾರಿ ಬೆಳೆದು ಒಂದು ಹಂತದವರೆಗಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. 

ಬೇಸಿಗೆಯಲ್ಲಿ ತರಕಾರಿ ಬೆಳೆಸಿದರೆ ನಿಜಕ್ಕೂ ಲಾಭವಿದೆ. ಈ ಸಮಯದಲ್ಲಿ ಮದುವೆ, ಗ್ರಹಪ್ರವೇಶ, ಜಾತ್ರೆ ಮುಂತಾದ ಕಾರ್ಯಕ್ರಮಗಳು ಅಧಿಕ. ಅದಲ್ಲದೆ ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಇಳುವರಿಯೂ ಹೆಚ್ಚು ಬರುತ್ತದೆ. ಸ್ವಲ್ಪ ದರ ಕಡಿಮೆಯಾದರೂ, ಇಳುವರಿ  ಹೆಚ್ಚು ಬರುವ ಕಾರಣ ತರಕಾರಿ ಬೆಳೆಯಿಂದ ಲಾಭವಾಗುತ್ತದೆ. ಬೇಸಿಗೆಯಲ್ಲಿ ಬೆಳೆಯಲಾಗುವ  ಪ್ರಮುಖ ತರಕಾರಿಗಳಲ್ಲಿ ಅಲಸಂಡೆ, ಹೀರೆಕಾಯಿ, ಹಾಗಲಕಾಯಿ, ಪಡುವಲಕಾಯಿ, ಸೋರೆಕಾಯಿ,  ತೊಂಡೆಕಾಯಿ ಮುಖ್ಯವಾದುದು. ಈ ಎಲ್ಲಾ ತರಕಾರಿಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಆದರೆ ಒಂದೇ ಒಂದು ಕಷ್ಟ ಅಂದರೆ, ಚಪ್ಪರ ಹಾಕುವ ಮಜೂರಿ ಮತ್ತು ಚಪ್ಪರಕ್ಕಾಗಿ ಬೇಕಾಗುವ ಮರಮಟ್ಟುಗಳ ಒಟ್ಟುಗೂಡಿಸುವಿಕೆ. ಸಾಂಪ್ರದಾಯಿಕ ವಿಧಾನದಲ್ಲಿ ಈ ತರಕಾರಿಗಳನ್ನು ಮರಮಟ್ಟಿನ ಚಪ್ಪರ ಮಾಡಿಯೇ ಬೆಳೆಸುತ್ತಿದ್ದರು. ಒಂದು ತೊಂಡೆ ಚಪ್ಪರಕ್ಕೆ ಏನಿಲ್ಲವೆಂದರೂ ಮರ ಒಟ್ಟುಗೂಡಿಸಲು ಒಂದು ದಿನದ ಮಜೂರಿ ಬೇಕಾದೀತು. ಮರ ಕೊಂಡು ತರುವುದಾದರೆ ಸಾವಿರಾರು ರೂ. ಬೇಕಾದೀತು. ಈ ಕಾರಣಕ್ಕಾಗಿಯೇ ಬಹಳಷ್ಟು ಮನೆಗಳಲ್ಲಿ ತರಕಾರಿ ಬೆಳೆಸುವ ಗೋಜಿಗೇ ಹೋಗುವುದಿಲ್ಲ. ವಾಣಿಜ್ಯಿಕ ತರಕಾರಿ ಬೆಳೆಸುವವರೂ ಸಹ ಚಪ್ಪರಕ್ಕೆ ಬೇಕಾಗುವ ಮರಮಟ್ಟುಗಳನ್ನು ಎಲ್ಲಿಂದ ತರಲಿ ಎಂದು ತರಕಾರಿ ಬೆಳೆಸುವುದನ್ನೇ ಕಡಿಮೆ  ಮಾಡುತ್ತಿದ್ದಾರೆ.

ಬಳ್ಳಿ ತರಕಾರಿಗಳಾದ ತೊಂಡೆ, ಹಾಗಲ, ಹೀರೆ, ಪಡುವಲ, ಮುಳ್ಳು ಸೌತೆ ಮುಂತಾದವುಗಳನ್ನು ನೆಲದ ಮೇಲೆ ಹಬ್ಬಿಸಿ ಬೆಳೆಸಲಿಕ್ಕಾಗುವುದಿಲ್ಲ. ಬೆಳೆಸಿದರೂ ಅದರ ಫಸಲಿಗೆ ಬರುವ ಕಾಯಿಗಳು ಓರೆ ಕೋರೆಯಾಗಿ ಬೆಳೆದು ಅಂದಗೆಡುತ್ತದೆ. ಕಾಯಿಗಳು ನೆಲಮುಖವಾಗಿ ಬೆಳೆದಾಗ ಮಾತ್ರ ಅದು ನೇರವಾಗಿ ನೋಟ ಉತ್ತಮವಾಗಿ ಇರುತ್ತದೆ. ಇದಲ್ಲದೆ  ಮಣ್ಣು ಜನ್ಯ ರೋಗ ರುಜಿನಗಳೂ ಸಹ ಬರುವುದಿಲ್ಲ. ಅದಕ್ಕಾಗಿಯೇ  ಬಳ್ಳಿ ತರಕಾರಿಗಳನ್ನು  ಚಪ್ಪರಕ್ಕೆ  ಬಿಟ್ಟು ಬೆಳೆಸುವುದು ವಾಡಿಕೆ.

ಚಪ್ಪರಕೆ ಬೇಕಾಗುವ ಸಾಮಾನು ಸರಂಜಾಮುಗಳಿಗೆ ಮರ ಕಡಿಯಲು ಹೊರಟರೆ ಕಾಡು ಬೇಕಲ್ಲವೇ? ಕೆಲವು ವರ್ಷಗಳ ಹಿಂದೆ ಚಪ್ಪರಕ್ಕೆ ಬಿದಿರಾದರೂ ಲಭ್ಯವಿತ್ತು. ಕೆಲವು ವರ್ಷಗಳ ಹಿಂದೆ ಅದೂ ಹೂ ಬಿಟ್ಟ ಕಾರಣ ಬಿದಿರ ಮೆಳೆಗಳು ಕಡಿಮೆಯಾಗಿವೆ. ಸ್ವಂತ ಸ್ಥಳದ ಮರಮಟ್ಟುಗಳನ್ನು ಕಡಿದು ಕೃಷಿ ಮಾಡಲಾಗಿದೆ. ಆದಕಾರಣ ಎಲ್ಲೆಲ್ಲೂ  ಚಪ್ಪರಕ್ಕೆ ಬೇಕಾದ ಮರಮಟ್ಟುಗಳು ಲಭ್ಯವಿಲ್ಲ.

ಇದಕ್ಕೆ ಪರಿಹಾರ ನೈಲಾನ್ ಬಲೆಗಳು ಮತ್ತು  ನೈಲನ್ ಪ್ಯಾಕಿಂಗ್ ಹಗ್ಗಗಳು. ಚಪ್ಪರಕ್ಕಾಗಿಯೇ ವಿಶೇಷವಾಗಿ ತಯರಿಸಲ್ಪಟ್ಟ ಪಾಲಿಮರ್ ಹಗ್ಗಗಳೂ ಈಗ ಲಭ್ಯವಿದೆ. ನೈಲಾನ್ ಬಲೆಗಳೆಂದರೆ ಮೀನು ಹಿಡಿಯಲು ಬಳಕೆ ಮಾಡುವ ಬಲೆ. ಸಣ್ಣ ತೂತು ಉಳ್ಳ ಬಲೆ ಚಪ್ಪರಕ್ಕೆ ಹೊಂದಾಣಿಕೆಯಾಗುವುದಿಲ್ಲ. ಸುಮಾರು ಅರ್ಧ/ಮುಕ್ಕಾಲು ಅಡಿ ಚೌಕದ ತೂತು ಉಳ್ಳ ಬಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದು ದೊಡ್ಡ ಮೀನುಗಳನ್ನು ಹಿಡಿಯುವ ಬಲೆಯಾಗಿದೆ. ಹೊಸ ಬಲೆಯಾಗಿಯೂ ಖರೀದಿ ಮಾಡಬಹುದು. ಉಪಯೋಗಿಸಿದ ಬಲೆಯನ್ನಾದರೂ ಖರೀದಿ ಮಾಡಬಹುದು. ಕೆಲವು ವ್ಯಾಪಾರಿಗಳು ಉಪಯೋಗಿಸಿದ ಬಲೆಗಳನ್ನು ಮಾರಾಟ ಮಾಡುತ್ತಾರೆ. ಅವರಿಂದ ಖರೀದಿಸಿದರೆ ಉತ್ತಮ ಚಪ್ಪರ ಮಾಡಬಹುದಾಗಿದೆ. ಈ ಬಲೆಗಳನ್ನು ಪರಸ್ಪರ ಜೋಡಿಸಿ ಕೆಲವೇ ಕೆಲವು ಗೂಟಗಳ ಆಧಾರದಲ್ಲಿ ಚಪ್ಪರ ಸಿದ್ದಪಡಿಸಿಕೊಳ್ಳಬಹುದು. ಇದು  ಕಿಲೋ ಲೆಕ್ಕದಲ್ಲಿ ಲಭ್ಯವಿರುತ್ತದೆ. ಹೊಸತಕ್ಕೆ ಕಿಲೋಗೆ ೪೦೦-೫೦೦ ರೂ ತನಕವೂ ಹಳೆಯದಕ್ಕೆ ೧೦೦-೧೫೦ ರೂ ತನಕವೂ ಇರುತ್ತದೆ. ಹೊಸ ಬಲೆಯನ್ನು ನಮಗೆ ಬೇಕಾದಷ್ಟೇ ಉದ್ದಗಲಕ್ಕೆ  ಮಾಡಿಸಿಕೊಳ್ಳಬಹುದು. ಹಳೆಯದಾದರೆ ಪರಸ್ಪರ ಜೋಡಿಸಿಕೊಳ್ಳಬೇಕು.

ಈ ಬಲೆಗಳು ಕರಾವಳಿಯ ಮಂಗಳೂರು, ಮಲ್ಪೆ,  ಉಡುಪಿ, ಕುಂದಾಪುರ, ಹೊನ್ನಾವರ ಮುಂತಾದ ಕಡೆ ಲಭ್ಯವಿದ್ದು, ಅಲ್ಲೆಲ್ಲಾ ಬಲೆ ಹೆಣೆಯುವವರೂ ಸಹ ಇದ್ದಾರೆ. ಹಳೆ ಬಲೆ ಮಾರಾಟ ಮಡುವವರೂ ಇದ್ದಾರೆ. ಈ ಬಲೆಗಳು ಸುಮಾರಾಗಿ ೩-೪ ವರ್ಷ ತನಕ ಹಾಳಾಗಲಾರದು. ಗೂಟಕ್ಕೂ ಸಹ ಮರವನ್ನೇ ಆಶ್ರಯಿಸಬೇಕಾಗಿಲ್ಲ. ಕಲ್ಲು ಕಂಬ ಹಾಕಿದರೆ ಅದನ್ನು  ಶಾಶ್ವತವಾಗಿ ಬಳಕೆ ಮಾಡಬಹುದು. ಮರವಾದರೆ ಮುಂದಿನ ಸೀಸನ್‌ಗೆ ಅದು ಹಾಳಾಗುತ್ತದೆ.

ಮೀನು ಹಿಡಿಯುವ ಬಲೆ ಅಲ್ಲದೆ ಪ್ಯಾಕಿಂಗ್ ರೋಪು ಬಳಸಿಯೂ ಚಪ್ಪರ ಮಾಡಿಕೊಳ್ಳಬಹುದು. ಆವರವರೇ  ಹೆಣೆಯುವುದಾದರೆ ಇದು ಸುಲಭ. ಮೀನು ಹಿಡಿಯುವ ಬಲೆಯಾದರೆ ಹೆಣೆಯುವ ಕೆಲಸ ಇಲ್ಲ. ಮೀನು ಹಿಡಿಯುವ ಬಲೆಯಾದರೆ ೨-೩ ಜನ ಸೇರಿ ಒಂದು ದಿನದಲ್ಲಿ ಅರ್ಧ ಎಕ್ರೆ ಚಪ್ಪರ ಮಾಡಬಹುದು.

ಬಳ್ಳಿಯನ್ನು ಚಪ್ಪರದವರೆಗೆ  ಹಬ್ಬಿಸಲಿಕ್ಕೂ ಮರಮಟ್ಟುಗಳನ್ನು ಆಶ್ರಯಿಸಬೇಕಾಗಿಲ್ಲ. ಅದಕ್ಕೂ ಬಲೆಯನ್ನು ಹೆಣೆದರೆ ಸಾಕಾಗುತ್ತದೆ. ಬಲೆ ಜೋತು ಬೀಳದಂತೆ ಹಳದಿ ಬಿದಿರು, ಸತ್ತ ಅಡಿಕೆ ಮರ ಮುಂತಾದವುಗಳನ್ನು  ಆಧಾರವನ್ನು ಕೊಡಬೇಕಾಗುತ್ತದೆ. ಹಳದಿ ಬಿದಿರು ಬೇಗ ಸುರಿ ಬೀಳುವಂತದ್ದಾಗಿದ್ದು, ಇದನ್ನು ಈ ಉದ್ದೇಶಕ್ಕೆ ಬಳಕೆ ಮಾಡಬಹುದು. ಈಗ ಮರುಕಟ್ಟೆಯಲ್ಲಿ ಯು ವಿ ನಿರೋಧಕ ಶಕ್ತಿ ಹೊಂದಿದ ಪಾಲಿಮರ್ ಚಪ್ಪರದ ಹಗ್ಗಗಳು ಲಭ್ಯವಿದೆ. ಮೀನು ಹಿಡಿಯುವ ಬಲೆ ಅಥವಾ ಪ್ಲಾಸ್ಟಿಕ್ ಪ್ಯಾಕಿಂಗ್ ಹಗ್ಗಕ್ಕಿಂತ ಇದು ಸ್ವಲ್ಪ ದುಬಾರಿ.  

ಚಪ್ಪರಕ್ಕೆ ಮರದ ಬದಲಿಗೆ  ಮೀನು ಹಿಡಿಯುವ ಬಲೆ ,ಇಲ್ಲವೇ ಪ್ಲಾಸ್ಟಿಕ್ ಪ್ಯಾಕಿಂಗ್ ಹಗ್ಗ ಬಳಕೆ ಮಾಡುವುದರಿಂದ ಚಪ್ಪರಕ್ಕಾಗಿ ಮರ ಕಡಿಯುವುದು ಕಡಿಮೆಯಾಗುತ್ತದೆ. ಪರಿಸರ ಉಳಿಯುತ್ತದೆ. ಈ ನೈಲಾನ್ ಹಗ್ಗಗಳು ಕರಗದೇ ಮಣ್ಣಿಗೆ ಸೇರುವುದರಿಂದ ತೊಂದರೆಯಲ್ಲವೇ ಎಂದು ತರ್ಕ ಮಾಡುವವರಿರಬಹುದು. ಆದರೆ ಈ ವಸ್ತುಗಳು ಮೂರು ನಾಲ್ಕು ಸೀಸನ್ ಬಳಕೆ ಮಾಡಲ್ಪಟ್ಟ ನಂತರ ಬಿಸಿಲಿಗೆ ಕರಗಿ ಹುಡಿಯಾಗುತ್ತದೆ. ಮಣ್ಣಿನಲ್ಲೂ ಕರಗಿ ಹೋಗುತ್ತದೆ.

ಪೂರಕ ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ.