ಬಲೆಯಿದೆ ಎಚ್ಚರ

ಬಲೆಯಿದೆ ಎಚ್ಚರ

ಕವನ

*ಬಲೆಯಿದೆ ಎಚ್ಚರ* (ಲಲಿತ ರಗಳೆ)

ಗಂಧವತಿ ಮೇಲೊಂದು ಜೀವಿ ಕುಳಿತಿದೆಯಲ್ಲ
ಚಂದದಿಂದಲಿ ಸುತ್ತ ಗಮನಿಸುತಲಿದೆಯಲ್ಲ
ಬೇಟೆಯನ್ನರಸುತ್ತ ಬಂದು ಸೇರಿದೆ ಬುವಿಗೆ
ನೋಟವನು ಹಾಯಿಸುತ ಕರೆಯುತಿದೆಯೇ ಬಳಿಗೆ

ಬಲೆಯ ಬೀಸುತ ಕೈಯ ಚಳಕವನು ತೋರುತಿದೆ
ತಲೆಯೊಳಗೆ ಯೋಚನೆಯು ಹಳಿತಪ್ಪಿ ಸಾಗುತಿದೆ
ಅರಿಯದೆಯೆ ಬೀಳುವುವು ಮುಗ್ಧ ಹುಳುಗಳು ಕೆಲವು
ಮರೆಯಲ್ಲಿ ನಿಂತ ಜೇಡಕೆ ತಾನೆ ನಿಜ ಗೆಲುವು

ಹಿಂದಿನಿಂದಲಿ ಬಂದು ಬೆನ್ನನಿರಿಯುವ ಜನರು
ಮುಂದೆ ನಿಲ್ಲುತ ಹೊಗಳಿಯಟ್ಟಕೇರಿಸುವವರು
ಗೊಂದಲವ ಮೂಡಿಸುತ ಹತ್ತಿರಕೆ ಕರೆವವರು
ಸಂದೇಹವೇ ಬೇಡ ಮೋಸದೊಳ ಕೆಡಹುವರು

ಮನುಜ ಜೀವಿಗಳಲ್ಲಿ ಸಂಚು ಹೂಡುವರಿಹರು
ಮನಕೆ ಘಾಸಿಯ ಮಾಡಿ ನಗುವ ಬೀರುವರಿಹರು
ಹೋಲಿಕೆಯ ಮಾಡಿದರೆ ನೆನಪಾಗುವುದು ಜೇಡ
ಸಾಲಾಗಿ ಕುಳಿತವರು ತೊಟ್ಟಿರುವ ಮುಖವಾಡ

ಅನ್ಯರನು ಜರಿಯದೆಯೆ ಸುಮ್ಮನಾಗಲು ನಮಗೆ 
ಧನ್ಯತೆಯ ಭಾವವದು ಸಿಗಬಹುದು ಮನದೊಳಗೆ
ಕೆಟ್ಟ ಯೋಚನೆಯನ್ನು ಮಾಡದೆಯೆ ಬದುಕಿನಲಿ
ದಿಟ್ಟ ಹೆಜ್ಜೆಯನಿಟ್ಟು ಸಾಗೋಣ ಹರುಷದಲಿ

✍️ಲತಾ ಬನಾರಿ
೧೨-೦೮-೨೦೨೦

ಚಿತ್ರ್