ಬಲ್ಲವರು ಬಲ್ಲಂತೆ ಭೈರಪ್ಪ
ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಬೆನ್ನುಡಿಯಲ್ಲಿ “ಇಂದು ಡಾ। ಎಸ್.ಎಲ್.ಭೈರಪ್ಪನವರು ಬರಿಯ ಕನ್ನಡದ ಮಣ್ಣಿಗಲ್ಲದೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲೀಷಿಗೂ ಆಪ್ತರಾದ ಲೇಖಕರೆನಿಸಿಕೊಂಡಿದ್ದಾರೆ. ಪ್ರಸ್ತುತ ಇವರು ತಮ್ಮ ಸಾಹಿತ್ಯ ವ್ಯಕ್ತಿತ್ವಗಳ ಸತ್ವದ ಮೂಲಕ ವಿಶ್ವ ಮೌಲ್ಯವನ್ನು ಎಂದೋ ಮೈದುಂಬಿಸಿಕೊಂಡಿದ್ದಾರೆ. ಇದು ವಿಶೇಷತಃ ಕನ್ನಡಿಗರಾದ ನಮಗೆಲ್ಲರಿಗೆ ಹೆಮ್ಮೆಯ ಸಂಗತಿ.
ಇಂಥ ಸಾರಸ್ವತಮೂರ್ತಿಯನ್ನು ಬಹುಕಾಲದಿಂದ ಆಪ್ತವಾಗಿ ಬಲ್ಲ ಅನೇಕರ ಅನುಭವಗಳೂ ಆತ್ಮೀಯತೆಗಳೂ ಆಸಕ್ತರಿಗೆ ಮುಟ್ಟಿಲ್ಲವೆಂಬ ಕೊರತೆಯನ್ನು ಕಳೆಯುವ ನಿಟ್ಟಿನಲ್ಲಿ ಸದ್ಯದ ಗ್ರಂಥ ‘ಬಲ್ಲವರು ಬಲ್ಲಂತೆ ಭೈರಪ್ಪ' ಮಹತ್ವದೆನಿಸಿದೆ.
ಇಲ್ಲಿ ಭೈರಪ್ಪನವರನ್ನು ಹಲವು ಮಜಲುಗಳಲ್ಲಿ ನೋಡಿ, ಒಡನಾಡಿ, ಮಾತನಾಡಿ, ಸ್ನೇಹಾದರಗಳನ್ನು ತುಂಬಿಕೊಂಡ ಸಾಹಿತ್ಯಸಾಧಕರ, ಸಂವೇದನಶೀಲ ಸಹೃದಯರ ಅನಿಸಿಕೆ -ಅಭಿಪ್ರಾಯಗಳು ಬೆಚ್ಚಗಿನ ಪ್ರೀತಿ-ವಿಶ್ವಾಸಗಳ ತೆಕ್ಕೆಯಲ್ಲಿ ರೂಪುಗೊಂಡಿವೆ. ಹಾಗೆಂದ ಮಾತ್ರಕ್ಕೆ ಇಲ್ಲಿರುವುದು ಬರಿಯ ಅಂಧ ಆರಾಧನೆಯಲ್ಲ. ಮುಗ್ಧವಾದ ಮೆಚ್ಚುಗೆಯಲ್ಲ. ಇದು ಅಕ್ಕರೆ ಬಾಧ್ಯತೆಯುಳ್ಳ ಎಚ್ಚರದ ಅಕ್ಷರಾಭಿವ್ಯಕ್ತಿಯೂ ಹೌದು.
ಈವರೆಗೆ ಅಷ್ಟಾಗಿ ತಿಳಿದಿರದ-ಆದರೆ ತಿಳಿಯಲು ಬಯಸುವ ಭೈರಪ್ಪನವರ ಆರ್ದ್ರವೂ ಆತ್ಮೀಯವೂ ಆದ ಸಾಹಿತ್ಯೇತರ ಮುಖಗಳನ್ನು ಪರಿಚಯ ಮಾಡಿಕೊಳ್ಳುವ ಸುಸಂದರ್ಭ ಒದಗಿದೆ. ಹೀಗಾಗಿ ಸದ್ಯದ ಕೃತಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ದಕ್ಕಿದೆ. ಜೊತೆಗೆ ಅಕ್ಷರಲೋಕದಲ್ಲಿ ಮಾತ್ರವಲ್ಲದೆ ಆತ್ಮೀಯತೆಯ ವಿಶ್ವದಲ್ಲಿ ಕೂಡ ಭೈರಪ್ಪನವರು ಅಸಾಮಾನ್ಯರೆಂಬ ಸುಂದರವಾದ ಸತ್ಯ ಕೂಡ ಇಲ್ಲಿ ಅನಾವರಣಗೊಂಡಿದೆ.”