ಬಲ್ಲಾಳ ದುರ್ಗದ ಭೀಕರ ಕಮರಿ
ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ ರೋಚಕತೆಯನ್ನು ಒಳಗೊಂಡಿದೆ.
ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವಂತೆ “ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೇ ಇಲ್ಲಿನ ಜನರ ಬದುಕೂ ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು! ಪ್ರತಿಯೊಂದು ಕೃತಿಯಲ್ಲೂ ಕತೆ, ಘಟನೆಗಳ ಜೊತೆಗೆ ಪ್ರಕೃತಿ ಹಾಗೂ ಬದುಕಿನ ನೈಜ ಚಿತ್ರಣ ನೀಡಲು ಯತ್ನಿಸಿದ್ದೇನೆ, ಹಾಗಾಗಿ ಇದರಲ್ಲಿ ಮಲೆನಾಡಿನ ರೋಚಕ ಕತೆಗಳ ಜೊತೆಗೇ ಕಳೆದೆರಡು ವರ್ಷಗಳಲ್ಲಿ ಮಲೆನಾಡಿನ ಭಾಗಗಳಲ್ಲಾದ ಪ್ರವಾಹ ಮತ್ತು ಭೂಕುಸಿತದ ಅನಾಹುತಗಳ ಚಿತ್ರಣವೂ ಇದೆ. ಮುನ್ನುಡಿಯಲ್ಲಿ ಅಂತಹಾ ಅನಾಹುತಕ್ಕೆ ಕಾರಣವಾಗುವ ಅಂಶಗಳನ್ನೂ ಪ್ರಸ್ತಾಪಿಸಿದ್ದೇನೆ. ಆ ಸಮಯದಲ್ಲಿ ಏನೇನಾಯಿತು ಎನ್ನುವುದು ಟಿ.ವಿ.ನೋಡಿದ ಎಲ್ಲರಿಗೂ ಗೊತ್ತು. ನಂತರ ಗಂಜಿ ಕೇಂದ್ರಗಳಲ್ಲಿ ಅವರು ಕಳೆದ ದುಃಸ್ಥಿತಿಯ ಬಗೆಯೂ ನಿಮಗೆ ತಿಳಿದಿದೆ. ಆದರೆ ಗಂಜಿ ಕೇಂದ್ರ ಸೇರುವುದಕ್ಕೂ ಹಿಂದಿನ ಬದುಕಿನ ಬವಣೆಯ ಚಿತ್ರಣ ಎಲ್ಲರಿಗೂ ತಿಳಿಯದು. ಇಲ್ಲಿ ಅಂತಹಾ ಕೆಲವು ಘಟನೆಗಳಿಗೆ ಪರ್ಯಾಯ ಘಟನೆ ಹೆಣೆದಿದ್ದೇನೆ. ವೈವಿಧ್ಯವಿರಲಿ ಎಂಬ ದೃಷ್ಟಿಯಿಂದ ಇದನ್ನು ಸಣ್ಣ ಕತೆಗಳ ಕೃತಿಯನ್ನಾಗಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮೆಲ್ಲರ ಅಭೂತ ಪೂರ್ವ ಸಹಕಾರದಿಂದಾಗಿ ಇದು ‘ಮಲೆನಾಡಿನ ರೋಚಕ ಕತೆ’ಗಳ ಸರಣಿಗೆ ಹನ್ನೊಂದನೆಯ ಭಾಗವಾಗಿ ಸೇರ್ಪಡೆಯಾಗುತ್ತಿದೆ" ಎಂದಿದ್ದಾರೆ.
ಈ ಪುಸ್ತಕದಲ್ಲಿ ೧೩ ಕತೆಗಳಿವೆ. ಬಾಂಧವ್ಯ, ಕಾಟಿ ಕಾಟ, ಶಿಕಾರಿ, ಕತ್ತಲು, ದುರಂತ, ಬಲ್ಲಾಳ ದುರ್ಗದ ಭೀಕರ ಕಮರಿ, ವಂಚನೆಯ ಸುಳಿ, ಕಾಡುಬೆಕ್ಕಿನ ಸಾಕ್ಷ್ಯ, ಮುಗುದೆ, ತಪ್ಪಿದ ಲೆಕ್ಕ, ನಂಬಿಕೆ ದ್ರೋಹ, ಸುಲಿಗೆ, ದೇವಮೃಗ ಮೊದಲಾದ ಕಥೆಗಳು ಓದುತ್ತಾ ಓದುತ್ತಾ ನಮ್ಮನ್ನು ಒಂದು ಅದ್ಬುತ ಪರಿಸರಕ್ಕೆ ಕರೆದುಕೊಂಡು ಹೋಗುತ್ತದೆ. ಮೊದಲ ಕತೆ ‘ಬಾಂಧವ್ಯ’ದಲ್ಲಿ ನೆರೆಯ ಹಾವಳಿಯಿಂದ ಹೊಳೆಯಲ್ಲಿ ನೀರು ತುಂಬಿ, ಅದನ್ನು ದಾಟಲಾರದೆ ನೀರು ಪಾಲಾದವರ, ಉಳಿದವರ ಕತೆ-ವ್ಯಥೆ ಇದೆ. ಕತೆಯ ಅಂತ್ಯಕ್ಕೆ ಅನಿರೀಕ್ಷಿತ ತಿರುವೂ ಇದೆ. ಎರಡನೇ ಕತೆ 'ಕಾಟಿ ಕಾಟ' ದಲ್ಲಿ ತನ್ನ ಅಮ್ಮನಿಂದ ಬೇರೆಯಾದ ಕಾಡೆಮ್ಮೆಯ ಕರುವಿನ ಕತೆ ಇದೆ. ಹೀಗೆ ಪ್ರತಿಯೊಂದು ಕತೆಯೂ ಓದುತ್ತಾ ಓದುತ್ತಾ ಹೊಸ ಅನುಭವವನ್ನು ನೀಡುತ್ತದೆ. ಸುಮಾರು ೧೯೦ ಪುಟಗಳ ಈ ಕೃತಿಯ ಮುಖಪುಟ ಬಹಳ ಆಕರ್ಷಕವಾಗಿದೆ.