ಬಲ ಭೀಮಸೇನ
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಎರಡನೇ ಪುಸ್ತಕ ‘ಬಲ ಭೀಮಸೇನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಮನಸೇನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ.
ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ.
'ಬಲ ಭೀಮಸೇನ' ಕೃತಿಯು ಭೀಮನ ಜನನ ಮತ್ತು ಬಾಲ್ಯದಿಂದ ಪ್ರಾರಂಭವಾಗುತ್ತದೆ. ನಂತರ ಬೆಳೆಯುತ್ತಾ ಬೆಳೆಯುತ್ತಾ ಹಿಡಿಂಬೆಯೊಂದಿಗೆ ವಿವಾಹ, ಬಕಾಸುರ ವಧೆ, ಜರಾಸಂಧನ ಸಂಹಾರ ಪ್ರಸಂಗಗಳನ್ನು ಬಹಳ ಸೊಗಸಾಗಿ ನಿರೂಪಿಸಲಾಗಿದೆ. ದೃತರಾಷ್ಟ್ರನ ರಾಜ ಸಭೆಯಲ್ಲಿ ಭೀಮ ಮಾಡಿದ ಘೋರ ಪ್ರತಿಜ್ಞೆ, ಭೀಮ ಮತ್ತು ಹನುಮಂತನ ನಡುವಿನ ಹಣಾಹಣಿ, ಕೀಚಕ ವಧೆ, ಕುರುಕ್ಷೇತ್ರ ಯುದ್ಧದಲ್ಲಿ ಭೀಮನ ಪರಾಕ್ರಮ, ಯುದ್ಧದ ಕೊನೆಯಲ್ಲಿ ದುರ್ಯೋಧನನ ಜೊತೆ ಗದಾಯುದ್ಧ ಮುಂತಾದ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಸರಳ ಭಾಷೆಯಲ್ಲಿ ನಿರೂಪಿಸಲಾಗಿದೆ.
ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ಬಲಭೀಮನ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ಬಲ ಭೀಮಸೇನ' ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.