ಬಳೆಗಾರ
ಭಾಗ್ಯದ ಬಳೆಗಾರ ಬಾರಯ್ಯ
ಬಣ್ಣದ ಬಳೆಗಳ ತಾರಯ್ಯ
ನನ್ನ ಮನ ಒಪ್ಪುವ ಬಳೆ
ನನ್ನ ತನುವ ತಣಿಸುವ ಬಳೆ
ಬಂಧುಗಳು ಮೆಚ್ಚುವ ಬಳೆ
ಹೆಚ್ಚಿಸುವುದು ನನ್ನ ಕೈಗಳ ಕಳೆ
!!ಭಾಗ್ಯದ ಬಳೆಗಾರ ಬಾರಯ್ಯ!!
ಗಾಜಿನ ಬಳೆಗಳ ನಾದ
ನೀಡುವುದು ಎಲ್ಲರ ಮನಸ್ಸಿಗೆ ಮುದ
ಕಪ್ಪು ಕಂಕಣದ ಬಳೆ ಕಳೆಯುವುದು ದೃಷ್ಟಿ
ಒಪ್ಪು ಹಸುರಿನ ಬಳೆ ತರಿಸುವುದು ಪುಷ್ಟಿ
!!ಭಾಗ್ಯದ ಬಳೆಗಾರ ಬಾರಯ್ಯ!!
ಬೆಳ್ಳಿಯ ಬಳೆಯಲ್ಲಿದೆ ಒಳ್ಳೆಯ ಆರೋಗ್ಯ
ಚಿನ್ನದ ಬಳೆಗಳು ಅಂದಕ್ಕೆ ಯೋಗ್ಯ
ಮಣ್ಣಿನ ಬಳೆಗಳಿಂದ ಆನಂದದ ಭಾಗ್ಯ
ಗಾಜಿನ ಬಳೆಗಳ ಮೋಜು ಹೇಳಲು ಅಸಾಧ್ಯ
!!ಭಾಗ್ಯದ ಬಳೆಗಾರ ಬಾರಯ್ಯ!!
ಗೌರಿ ಹಬ್ಬಕ್ಕೆ ತೌರಿಂದ ಬಂದ ಬಳೆ
ಬಾಗೀನದ ಜೊತೆಯಲ್ಲಿ ಬಂದ ಬಳೆ
ಮುತ್ತೈದೆ ಪೂಜೆಯಲ್ಲಿ ನೀಡಿದ ಬಳೆ
ಮುತ್ತೈದೆ ಭಾಗ್ಯ ನೀಡುವ ಬಳೆ
!!ಭಾಗ್ಯದ ಬಳೆಗಾರ ಬಾರಯ್ಯ!!
ಹೆತ್ತಮ್ಮ ಕೊಡಿಸಿದ ಹತ್ತು ತರಹದ ಬಳೆ
ಅಪ್ಪನು ಕೊಡಿಸಿದ ಕೈಗಳಿಗೆ ಒಪ್ಪುವ ಬಳೆ
ಅಣ್ಣನು ಕೊಡಿಸಿದ ಬಣ್ಣಬಣ್ಣದ ಬಳೆ
ಅಕ್ಕಳು ಕೊಡಿಸಿದ ಪಕ್ಕಾ ಚೊಕ್ಕವಾದ ಬಳೆ
!!ಭಾಗ್ಯದ ಬಳೆಗಾರ ಬಾರಯ್ಯ!!
-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ ಕೃಪೆ: ಇಂಟರ್ನೆಟ್ ತಾಣ